ಮನೆಯೊಳಗೆ ಮಕ್ಕಳ ಸದ್ದಿಲ್ಲವೆಂದರೆ ಅದಕ್ಕೆ ಕಾರಣ ಅವರ ಕೈಯಲ್ಲಿ ಮೊಬೈಲ್ ಆಡುತ್ತಿದೆ ಎಂದರ್ಥ. ಇತ್ತೀಚಿನ ದಿನಗಳಲ್ಲಿ ಅಂಬೆಗಾಲಿಡುವ ಕಂದಮ್ಮಗಳಿಂದ ಹಿಡಿದು ಆಫೀಸಿನಿಂದ ಸುಸ್ತಾಗಿ ಬರುವ ಗಂಡಂದಿರವರೆಗೂ ಮೊಬೈಲ್ ಎನ್ನುವ ‘ಮಾಯೆ’ ಎಲ್ಲರನ್ನು ಆಟವಾಡಿಸುತ್ತಿದೆ.
ಮಗುವಿಗೆ ಊಟ ಮಾಡಿಸುವಾಗ, ಹಠ ಮಾಡಿದಾಗಲೆಲ್ಲಾ ಕೈಯಲ್ಲಿ ಮೊಬೈಲ್ ಕೊಟ್ಟು ಕೂರಿಸುತ್ತೇವೆ. ಮಗು ನಮ್ಮ ಬಳಿಗೆ ಬಂದಾಗಲೆಲ್ಲ ನಮ್ಮ ಸ್ವಾತಂತ್ರಕ್ಕಾಗಿ, ಮೊಬೈಲ್ ಅವರ ಕೈಗೆ ಇಟ್ಟು ಸುಮ್ಮನೆಕೂರುತ್ತೇವೆ. ‘ಮೊಬೈಲ್’ ಎನ್ನುವ ಮೊದಲ ಪಾಠ ಶುರುವಾಗುವುದೇ ನಮ್ಮ ಮನೆಯಿಂದ. ಹಂತ ಹಂತವಾಗಿ ಮೊಬೈಲ್ ಎನ್ನುವ ಚಕ್ರವ್ಯೂಹದಲ್ಲಿ ನಾವೇ ನಮ್ಮ ಮಕ್ಕಳನ್ನು ಸಿಲುಕಿಸುತ್ತೇವೆ. ಅದೇ ರೀತಿ ಮಕ್ಕಳು ಸಹ ಆ ಚಕ್ರವ್ಯೂಹದಿಂದ ಹೊರಗೆ ಬರುವುದೇ ಇಲ್ಲ. ಮಕ್ಕಳಿಂದ ಕೆಲಸ ಮಾಡಿಸುವಾಗಲೆಲ್ಲ ಮೊಬೈಲ್ ನ ಆಮಿಷವನೊಡ್ಡಿ ಅವರಿಂದ ಕೆಲಸ ತಗೆದುಕೊಳ್ಳುತ್ತೇವೆ. ದೊಡ್ಡವರೆನಿಸಿಕೊಂಡ ನಾವುಗಳೇ ನೇರವಾಗಿಯೋ, ಪರೋಕ್ಷವಾಗಿಯೂ ಅವರ ಜೀವನದಲ್ಲಿ ಮೊಬೈಲ್ ಗುಲ್ಲು ಎಬ್ಬಿಸುತ್ತೇವೆ. ಕೊನೆಗೆ ಮೊಬೈಲ್ ಹುಚ್ಚು ಬಿಡಿಸಲು ಹರಸಾಹಸ ಪಡುತ್ತೇವೆ. ನಮಗೆ ಮಕ್ಕಳ ಮಾತು ಬೇಡವಾದಾಗಲೆಲ್ಲ ಮೊಬೈಲ್ ಕೊಟ್ಟುಕೂರೀಸುತ್ತಿದ್ದೆವು. ನಂತರ ಮಕ್ಕಳು ನಮ್ಮ ಬಳಿ ಬರದೇ ಇದ್ದಾಗ ಅವರಿಗೆ ಹೊಡೆದೂ ಅಥವಾ ರೂಮ್ ನಲ್ಲಿ ಕೂಡಿ ಹಾಕಿಯುವುದರ ಮೂಲಕ ಹಿಂಸಿಸುತ್ತೇವೆ.
ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ತಂದೆ ತನ್ನ ಮಗನ ಕೈಯಿಂದ ಮೊಬೈಲ್ ಕಿತ್ತಿಕೊಂಡಿದ್ದರಿಂದ ಸಿಟ್ಟಿಗೆದ್ದ ಮಗ ತನ್ನ ಕೈಗಳನ್ನೇ ಚಾಕುವಿನಿಂದ ಇರಿದಕೊಂಡ ಸುದ್ದಿಯನ್ನು ಪ್ರಕಟಿಸಿತ್ತು. ಬೇಕೆಂದಾಗಲೆಲ್ಲ ಮೊಬೈಲ್ ಕೊಟ್ಟು, ಬೇಡವೆಂದಾಗಲೆಲ್ಲ ಕಿತ್ತಿಕೊಂಡಾಗ ಮಗುವಿನ ಮನಸ್ಸಿನ ಮೇಲೆ ಆಗುವ ಪರಿಣಾಮ ಯಾರು ಮೊದಲೇ ತಿಳಿದುಕೊಳ್ಳುವುದಿಲ್ಲ. ಮೊದಲಿನ ಕಾಲದಲ್ಲಿ ಮಗು ಊಟ ಮಾಡುವಾಗ ಕಥೆ ಹೇಳಿ ಮಾಡಿಸುತ್ತಿದ್ದರು. ಹಠ ಮಾಡಿದಾಗ ರಸ್ತೆಯಲ್ಲಿ ಓಡಾಡೋ ಗಾಡಿ,ಗಿಡ, ಮರ, ಪ್ರಾಣಿಗಳ ಬಗ್ಗೆ ಹೇಳಿ ಮನಸ್ಸು ಬೇರೆಯತ್ತ ಹೋಗುವಂತೆ ಮಾಡುತ್ತಿದ್ದರು. ಮಕ್ಕಳು ಸ್ಕೂಲ್ ನಿಂದ ಬಂದ ಮೇಲೆ ಸುತ್ತಲಿನ ಮಕ್ಕಳ ಜೊತೆ ಚನ್ನಾಗಿ ಆಟವಾಡುತ್ತಿದ್ದರು. ಆಗ ಅವರ ಮೈ-ಕೈ ಗಳು ದಣಿಯುತ್ತಿತ್ತು. ಹಠಕ್ಕೆ ಸಮಯವೇ ಇರುತ್ತಿರಲಿಲ್ಲ. ಆಫೀಸಿನಿಂದ ಅಪ್ಪ ಬಂದ ಮೇಲೆ ಮನೆಯವರೆಲ್ಲಾ ಒಟ್ಟಿಗೆ ಕೂತು ಊಟ ಮಾಡುತ್ತಿದ್ದರು.
ಆದರೆ ಇತ್ತೀಚಿನ ದಿನಗಳೇ ಬೇರೆ. ಆಫೀಸಿನಿಂದ ಬಂದ ಅಪ್ಪನ ಜೋಲು ಮುಖ ನೋಡಿಯೇ, ಮಕ್ಕಳು ಅವನ ಹತ್ತಿರ ಹೋಗುವುದೇ ಇಲ್ಲ. ಒಂದು ವೇಳೆ ಅಪ್ಪಿ-ತಪ್ಪಿ ಹೋದರೆ ಯಾವುದೋ ಕೋಪಕ್ಕೆ ತುತ್ತಾಗಬಹುದು ಎನ್ನುವ ಭಯ, ಅಮ್ಮನ ಮೊಬೈಲಿನಲ್ಲಿ ಗೇಮ್ ಆಡುವುದೇ ಉತ್ತಮ ಎಂದುಕೊಳ್ಳುತ್ತಾರೆ. ಈ ಕಡೆ ಅಪ್ಪನೂ ಕೂಡಾ ಮಕ್ಕಳನ್ನು ಮಾತನಾಡಿಸಿದರೆ ತನ್ನ ಮೈಮೇಲೆ ಬೀಳುತ್ತಾರೆ ಎನ್ನುವ ಕಾರಣಕ್ಕೆ ತೆಪ್ಪಗೆ ಸೋಫಾ ಮೇಲೆ ತನ್ನ ಮೊಬೈಲ್ ಒತ್ತುತ್ತಾ ಕೊಡುತ್ತಾನೆ. ಬಿಸಿ- ಬಿಸಿ ಅಡುಗೆ ಮಾಡಿ ಗಂಡನಿಗಾಗಿ ಕಾದು ಕುಳಿತ ಹೆಂಡತಿಗೆ ಮೊಬೈಲ್ ತನ್ನ ಸವತಿಯಂತೆ ಕಾಣುತ್ತದೆ.
ಹತ್ತಿರದ ಸಂಬಂಧಗಳನೆಲ್ಲ ತೊರೆದು, ಅವರಿಗೆ ಕೊಡಬೇಕಾದ ನಮ್ಮ ಅಮೂಲ್ಯ ಸಮಯವನ್ನೆಲ್ಲ ಈ ಮೊಬೈಲ್ ಗೆ ವಹಿಸುತ್ತಿದ್ದೇವೆ. ಇದರಿಂದಾಗಿ ಮಕ್ಕಳು ನಮ್ಮ ಕೈಯಿಂದ ತಪ್ಪಿಹೋಗುತ್ತಿದ್ದಾರೆ. ಗಂಡ – ಹೆಂಡಿರ ಮಧ್ಯೆ ಜಗಳಗಳು ಹೆಚ್ಚುತ್ತಿವೆ. ಹಿರಿಜೀವಿಗಳು ಮಗನ ಪ್ರೀತಿಗಾಗಿ ಹಾ- ತೊರೆಯುತ್ತಿವೆ. ನಾವುಗಳು ಅದರ ಬಲೆಯಲ್ಲಿ ಸಿಕ್ಕಿ ಒದ್ದಾಡುತ್ತೇವೆ. ಮೊಬೈಲ್ ಗೆ ನಮ್ಮ ಮಕ್ಕಳ ಜೀವನ ಹಾಳಾಗಬಾರದು ಅಷ್ಟೇ ನಮ್ಮ ಕಾಳಜಿ.
#ಮಕಕಳ