(ಅಮ್ಮನ ಅಗಲಿಕೆಯಿಂದ ನೊಂದು ಮಗಳು, ತಾಯಿ ಮೇಲೆ ಬರೆದ ಈ ಕವನ ಮನ ಕದಡುತ್ತದೆ.)
ನಿಲ್ಲೇ …ನಿಲ್ಲೇ … ನನ್ನ ಅಮ್ಮ, ಎಂದರೂ
ಕೇಳದ ಹಾಗೆ ಹೋದೆಯಲ್ಲೇ? ನಮ್ಮನ್ನು ತೊರೆದು.
ತಬ್ಬಲಿಗಳಾಗಿ ಮಾಡಿದೆಯಲ್ಲಾ ನಮ್ಮನ್ನು ನೀನು.
ಈ ಮೋಸ ನಮಗೆ ಸರಿಯೇ ನೀನೇ ಹೇಳು ?
ಕಣ್ಣುಗಳು ಕಾತುರದಿ ಹುಡುಕುತಿದೆ ನಿನ್ನನ್ನು ಕಾಣಲು.
ಮನಸ್ಸು ಒಪ್ಪುತ್ತಿಲ್ಲ, ಇನ್ನೂ ನಿನ್ನ ಅಗಲಿಕೆಯನ್ನು
ಎಲ್ಲಾ ತಿಳಿದು ಹೋದೆ ಈ ಪರಿ ನಿನಗೆ ಇದು ಸರಿಯೇ ಹೇಳು ?
ತುಟಿಗಳು ಬಾಯ್ಬಿಡದೆ ಬಚ್ಚಿಡಲೆತ್ನಿಸಿದೆ
ನಿನ್ನಇಂಗಿತವನ್ನು .
ಮನಸ್ಸು ಮುದುಡಿ ಸಂಕಟ ಪಡುತಿದೆ.
ನಿನ್ನಇಲ್ಲದಿರುವಿಕೆಯನ್ನು ನೆನೆದು.
ಮನೆಯಾಚೆ ಎಂದೂ ಹೇಳದೆ ಹೋಗದ ನೀನು
ಒಂದು ಮಾತೂ ಹೇಳದೆ
ಹೊರಟೆ ಇಹ ಲೋಕ ಪಯಣಕೆ
ನಮ್ಮ ಪ್ರೀತಿ ಸಾಕಾಯಿತೇ ನಿನಗೆ?
ಯಾವ ಕೋಪ ಕಂಡಿತು ನಮ್ಮ ನಗುವಿನಲಿ
ಆ ದೇವರಿಗೆ?
ಹೋತ್ತೊಯ್ದನಲ್ಲ ನಿನ್ನನ್ನು,
ತಬ್ಬಲಿಯನ್ನಾಗಿ ಮಾಡಿದಾ ನಮ್ಮನ್ನು
ಅವನಿಗಿಲ್ಲವೇ ಕರುಣೆ ?
ಒಂದು ಕ್ಷಣ ಅವ ಯೋಚಿಸಿದ್ದರೆ,
ಆಗುತ್ತಿರಲಿಲ್ಲ ನಮ್ಮ ಸ್ಥಿತಿ ಹೀಗೆ
ಈಗ ಯಾರನ್ನು ಕರೆಯಲಿ ಅಮ್ಮ ಎಂದು?
ತಬ್ಬಲಿಗಳಾದೆವು
ನಿನ್ನ ಪ್ರೀತಿಯನ್ನು ಕಳೆದುಕೊಂಡು.
#ಕವನ