ಕವಿ ನಾಗೇಶ್ ಜೆ. ನಾಯಕರವರ ‘ಮನುಷ್ಯರಿಲ್ಲದ ನೆಲ’ ಯಾವುದೆಂದು ಹುಡುಕುತ್ತಾ ಹೋದ ನನಗೆ ದಕ್ಕಿದ್ದು ಅಪಾರ ಓದುತ್ತಾ ಓದುತ್ತಾ ಹೋದಂತೆ ಮನುಷ್ಯ ಸಂಬಂಧಗಳು ತಲೆಯಲ್ಲಿ ಸುಳಿದು ತಮಗೆ ತಾವೆ ಮಾತಾಡಿಕೊಂಡವು. ಆ ಮಾತನ್ನು ನಿಮಗೂ ದಾಟಿಸುವ ಇರಾದೆ ನನಗೆ ಎನ್ನುತ್ತಾರೆ ಕವಿ ಮಾರುತಿ ಗೋಪಿಕುಂಟೆ ಅವರು, ತಪ್ಪದೆ ಮುಂದೆ ಓದಿ…
ಇಲ್ಲಿ ಈ ನೆಲದಲ್ಲಿ ಜೀವಪರ ಜೀವಕ್ಕಾಗಿ ಹುಡುಕಾಡುವ ಕವಿತೆಯ ಸಾಲುಗಳು ಮತ್ತೆ ಮತ್ತೆ ಓದುವಂತೆ ಮಾಡುತ್ತವೆ. ಇದಕ್ಕೆ ಕವಿ ಅನುಭವಿಸಿದ ಮಾನವೀಯತೆಯ ವಿರುದ್ಧವಾದ ನಡವಳಿಕೆಗಳೆ ಅಕ್ಷರದ ರೂಪವನ್ನು ಪಡೆದಿವೆ ಅನಿಸುತ್ತವೆ. ಮನುಷ್ಯ ಮೂಲತಃ ಭಾವಜೀವಿ ಭಾವಕೋಶಕ್ಕೆ ನೋವುಂಟು ಮಾಡುವ ಸಂಗತಿಗಳು ಮನುಷ್ಯನ ಅಸ್ತಿತ್ವವನ್ನೆ ಅಲುಗಾಡಿಸಿ ಬಿಡುತ್ತವೆ ಅದಕ್ಕೆ ಕವಿ ನಾಗೇಶ್ ಜೆ. ನಾಯಕರವರು ‘ಮನುಷ್ಯರಿಲ್ಲದ ನೆಲ’ವೆಂದು ಸಂಕಲನಕ್ಕೆ ಶೀರ್ಷಿಕೆ ಇಟ್ಟು ತಮ್ಮ ಆಕ್ರೋಶವನ್ನು ತಣ್ಣನೆಯ ಧ್ವನಿಯಲ್ಲಿ ಹೇಳಿದ್ದಾರೆ. ಇಲ್ಲಿನ ಬಹುತೇಕ ಕವಿತೆಗಳು ಮನುಷ್ಯನ ಸುಪ್ತವಾದ ನಡವಳಿಕೆಗಳನ್ನು ಪ್ರತಿನಿಧಿಸುತ್ತವೆ. ಅಲ್ಲಲ್ಲಿ ಮನಸ್ಸು ಮತ್ತು ಭಾವನೆ ಬಯಲಾಗುತ್ತದೆ. ಎಲ್ಲವೂ ಬದುಕಿನ ಸತ್ಯಗಳೆ ಅದನ್ನು ಅರಗಿಸಿಕೊಂಡೆ ಬದುಕು ನಡೆಸಬೇಕು
ಬದುಕಿದ್ದೇನೆ…
ಎಷ್ಟೋ ಸತ್ಯಗಳ ಗೋಣು ಸೀಳಿ
ಕಂಡೂ ಕಾಣದಂತೆ
ಉಳ್ಳವರ ತೆವಲಿಗೆ ವಿಲಿವಿಲಿಗುಟ್ಟುವ
ಗುಬ್ಬಚ್ಚಿಗಳ ಮೂಕ ರೋದನಕ್ಕೆ
ಜೀವಂತ ಸಾಕ್ಷಿಯಾಗಿ!
ಮನುಷ್ಯರಲ್ಲದ ಮನಸ್ಸಿನ ಗರಗರಸಕ್ಕೆ ಕೊರಳು ಕೊಟ್ಟು ಬದುಕುವ ಎಷ್ಟೋ ಜೀವಗಳ ಕಣ್ಣೀರಿನ ಅಳಲು ಅನೇಕ ಕವಿತೆಗಳಲ್ಲಿ ಪಡಿಮೂಡಿದೆ ‘ದೇವರು ಬಿಕ್ಕಿದ’ ‘ಹೌದು.. ಸ್ವಾತಂತ್ರ್ಯ ಸಿಕ್ಕಿದೆ’ನೀರಿಗೆ ಮೈಲಿಗೆ ‘ಹಿಟ್ಲರ್ಗಳು ಇನ್ನೂ ಬದುಕಿದ್ದಾರೆ’ ದನಿ ಸತ್ತವರ ದುಃಖ ‘ಇಂತಹ ಅನೇಕ ಕವಿತೆಗಳು ಈ ಸಂಕಲನದಲ್ಲಿವೆ. ಶತಮಾನ ಕಳೆದರೂ ಬೇರೂರಿರುವ ಮನುಷ್ಯ ಸಂಬಂಧದ ಸಂಕೋಲೆಗೆ ಕವಿ ಹೀಗೆ ಉತ್ತರಿಸುತ್ತಾರೆ
“ಮನುಷ್ಯರೆನಿಸಿಕೊಂಡವರೇ
ಮುಟ್ಟಿಸಿಕೊಳ್ಳದಿದ್ದಾಗ
ಯಾರಿಗೆ ದೂರು ನೀಡುವುದು?
ನಮ್ಮದಲ್ಲದ ನಮ್ಮ ತಪ್ಪಿಗೆ
ಸತ್ತು ಸತ್ತು ಬದುಕುವುದು”
ಇದು ಒಬ್ಬನ ಕೂಗಲ್ಲ ಬಹುತೇಕ ತುಳಿತಕ್ಕೊಳಗಾದವರ ಆಂತರ್ಯದ ಧ್ವನಿ ಸಭ್ಯ ನಾಗರೀಕತೆಯ ಉತ್ತುಂಗದಲ್ಲೂ ಇಂತಹ ಅಮಾನವೀಯ ಸಂದರ್ಭದಲ್ಲೆ ಬದುಕು ನಡೆಸುವವರ ನೋವಿನ ತರಂಗಗಳು ದೇವರ ಕಿವಿಯನ್ನು ಮುಟ್ಟದಿರುವುದು ವಿಪರ್ಯಾಸವೆ ಸರಿ.

ಮಾನವೀಯತೆಯ ಭಾವಕೋಶದ ಯಾವ ಜೀವಿಯಾದರೂ ಮಿಡಿಯುವ ಅನೇಕ ಸಾಲುಗಳು ಮತ್ತೆ ಮತ್ತೆ ನಮ್ಮನ್ನೆ ಪ್ರಶ್ನಿಸುವಂತೆ ಮಾಡುತ್ತವೆ. ಕ್ಷಮಿಸಿಬಿಡಿ…. ಉಕ್ಕುವ ದುಃಖದಲ್ಲೂ ಮನುಷ್ಯ ಪ್ರೀತಿ ಮರೆಯದ ಮಾನವೀಯತೆಗೆ ಎಂದು ಅಲ್ಲಲ್ಲಿ ಇಣುಕುವ ಮಿಣುಕುವ ಮಾನವೀಯತೆಯ ಮನಸ್ಸುಗಳಿಗೆ ತಮ್ಮದೆ ದಾಟಿಯಲ್ಲಿ ಕೃತಜ್ಞತೆಯ ನುಡಿಗಳನ್ನಾಡುತ್ತಾರೆ. ಜಗತ್ತು ಪೂರ್ತಿ ಕಲ್ಮಶವಲ್ಲ ಅಲ್ಲಲ್ಲಿ ಮಾನವೀಯತೆಯ ಮನಸ್ಸುಗಳು ಇವೆ ಅವು ನಮ್ಮ ನಡುವೆ ಇರುವುದು ಆಶಾದಾಯಕವಾದುದು ದು. ಸರಸ್ವತಿಯರ ‘ಮಾನವೀಯತೆ ‘ಕವಿತೆಯನ್ನು ನೆನಪಿಸುತ್ತದೆ.
ಇಲ್ಲಿ ನೋವಿಗೆ ಹೆಗಲಾಗುವ ಕವಿತೆಗಳಿವೆ, ಪ್ರೀತಿಗೆ ಮಹಜರು ಒತ್ತುವ, ಬಿಟ್ಟು ಹೋದವರು ಬೆಳೆಸಿಯು ಹೋದರು, ನೋವುಗಳೆಲ್ಲ ನನಗೇ ಇರಲಿ ಎನ್ನುವ ಎದೆಯ ಗೂಡಿನಲ್ಲಿ ಕುಳಿತು ಎದೆಗೆ ಬೆಂಕಿ ಇಟ್ಟವರು, ಸಭ್ಯಸ್ಥನ ಒಳ ಆಂತರ್ಯದಲ್ಲಿರುವ ಅಸಭ್ಯತೆ, ಜೀವಕ್ಕೆ ಕೊನೆಯೆಂಬುದು ಇದೆ ಎಂದುತ್ತರಿಸುವ ಅನೇಕ ಕವಿತೆಗಳು ತಮ್ಮದೆ ಧಾಟಿಯಲ್ಲಿ ಮನುಷ್ಯತ್ವವನ್ನು ಎಚ್ಚರಿಸುತ್ತವೆ.
ಮನುಷ್ಯನ ದುರಾಸೆಗೆ ಹಪಹಪಿತನಕ್ಕೆ ಬಾಪುವಿನ ಆದರ್ಶಗಳನ್ನು ಮರೆತು ಬದುಕುವ ಇಂದಿನ ತಲೆಮಾರಿಗೆ ಕ್ಷಮೆ ಇರಲಿ…. ನಿನ್ನ ಕನಸುಗಳಿಗೆ ಬೆಂಕಿಯಿಕ್ಕಿ ಬೂದಿಯಾಗಿಸಿದ್ದಕ್ಕೆ ಬಾಪು ಎಂದೆನ್ನುವಾಗ ಮೌಲ್ಯದ ಬದುಕು ಕಣ್ಮರೆಯಾಗುವುದಕ್ಕೆ ಕ್ಷಮಾಪಣೆಯ ಅಹವಾಲು ಸಲ್ಲಿಸಿ ಕವಿ ವಿಷಾದಿಸಿದ್ದಾರೆ.
ಏನಾದರೂ ಸರಿಯೇ…
ಒಳಿತನ್ನೆ ಮಾಡುವ ಹಂಬಲವಿದೆ
ನೋವಿಗೆ ಮಿಡಿಯುವ ಅಂತಃಕರಣವಿದೆ…
ಎಂದು ಹೃದಯದ ಮಾತನ್ನು ಹೃದ್ಯವಾಗಿ ಓದುಗರ ಕಣ್ಣಾಲಿಗೂ ತಾಕುವಂತೆ ಹೇಳಿದ್ದಾರೆ. ಇಂದಿನ ಮನುಷ್ಯ ಸಂಬಂಧಗಳನ್ನು ಈ ಕವಿತೆ ಮಾರ್ಮಿಕವಾಗಿ ಧ್ವನಿಸುತ್ತದೆ.
ಎದುರಿಗೆ ಸಿಕ್ಕಾಗ
ಒಮ್ಮೆಯೂ ಅಪ್ಪಿಕೊಳ್ಳದ ಮಂದಿ
ಫೇಸ್ ಬುಕ್, ವ್ಯಾಟ್ಸಾಪ್ಗಳಲ್ಲಿ
ನನ್ನ ಭಾವಚಿತ್ರ ಹಾಕಿ
ಶ್ರದ್ಧಾಂಜಲಿ ಅರ್ಪಿಸುವಾಗ
ಸಾವು ಕೂಡ ನರಳುತ್ತದೆ.
ಎನ್ನುವಲ್ಲಿ ಸಾವಿಗೂ ಈ ನಾಟಕೀಯದ ಅನುಕಂಪ ಇಷ್ಟವಾಗುವುದಿಲ್ಲ ಕ್ಷಣಿಕ ಮನುಷ್ಯ ಸಂಬಂಧಗಳು ಹೀಗೆ ನಡೆದು ಮರೆಯಾಗುತ್ತವೆ. ಅಲ್ಲಿ ಮನುಷ್ಯತ್ವ ಸತ್ತಿರುತ್ತದೆ ತೋರಿಕೆಯ ತೋರಣ ತನ್ನಿರುವಿಕೆಯನ್ನು ಪ್ರದರ್ಶಿಸುತ್ತಿರುತ್ತದೆ. “ಬಣ್ಣ ಬಯಲಾದ ಮೇಲೆ ಇಟ್ಟ ನಂಭಿಕೆಗಳು ತಾವೇ ನೇಣಿಗೇರುತ್ತವೆ.”ನಂಭಿಕೆ ಸಾಯುತ್ತದೆ ಮನುಷ್ಯತ್ವ ಅಳಿಯುತ್ತದೆ. ಎಂದಿದ್ದಾರೆ.

ಕವಿ ಮತ್ತು ಕವಿತೆ ಜನಪರವಾಗಿರಬೇಕು. ಜನರ ನೋವಿನ ಧ್ವನಿಯಾಗಬೇಕು ಆದರೆ ಇಂದು ಕವಿ ಕಾಣೆಯಾಗಿದ್ದಾನೆ ಎಂದೆನ್ನುತ್ತ
ಬಹುಶಃ….
ಕವಿಗೋಷ್ಠಿಯ ಪಟ್ಟಿಯಲ್ಲಿ
ತನ್ನ ಹೆಸರು ಹುಡುಕುತ್ತಾ
ವೇದಿಕೆಯ ಮೇಲೆ ಭಾವಪರವಶನಾಗಿ
ಕವಿತೆ ಓದುತ್ತಾ
ಹಾರ ತುರಾಯಿಗಳ ಭಾರದಲ್ಲಿ
ಕರಗಿ ಹೋಗುತ್ತಾ
ಪ್ರಶಸ್ತಿಗಳ ಮೋಹಕ್ಕೆ ಸಿಲುಕಿ
ಒದ್ದಾಡಿ ಗುದ್ದಾಡುತ್ತಾ
ಕಳೆದು ಹೋಗಿರಬೇಕು
ಈ ಸಾಲುಗಳು ವಾಸ್ತವಕ್ಕೆ ಹಿಡಿದ ಕನ್ನಡಿ ಅಲ್ಲದೆ ಮತ್ತೇನು ಇದು ಕವಿಗೊಂದು ಕಿವಿಮಾತು.
ಇಡೀ ಸಂಕಲನದ ಒಟ್ಟು ಸಾರವನ್ನು ಈ ನಾಲ್ಕು ಸಾಲುಗಳು ಪ್ರತಿಧ್ವನಿಸುತ್ತವೆ ಎಂದು ನನಗನಿಸುತ್ತವೆ.
“ಇಲ್ಲಿ ದೇವರಾಗುವುದು
ನೀರು ಕುಡಿದಷ್ಟೇ ಸಲೀಸು…
ಆದರೆ ನೆನಪಿರಲಿ
ಮನುಷ್ಯನಾಗುವುದಂತೂ
ವಿಪರೀತ ಕಷ್ಟ ಕಷ್ಟ…!!”
ಹಾಗಾಗಿ ಇಡಿ ಸಂಕಲನ ಮನುಷ್ಯತ್ವದ ಗೆರೆಗಳಲ್ಲಿ ಸಾಗಿದ ಬದುಕಿನ ಬೇರೆ ಬೇರೆ ಸಂಕಟಗಳನ್ನು ಕವಿತೆಯ ಮೂಲಕ ಮುಟ್ಟಿಸುವ ನಿಟ್ಟಿನಲ್ಲಿ ಕವಿಯ ಆಂತರ್ಯದ ಭಾವಗಳೆಲ್ಲವೂ ನಮ್ಮನ್ನು ಕವಿತೆಯ ಬೇರೆ ಗುಂಗಿಗೆ ಎಳೆದೊಯ್ದು ಬಿಡುವ ಅಕ್ಷರಗಳ ಮಣಿಹಾರ ಅದನ್ನು ನಾವೊಮ್ಮೆ ಓದಿ ಧರಿಸಿದರೆ ನಮ್ಮೊಳಗೆ ಮನುಷ್ಯತ್ವದ ನೆಲೆ ಮೂಡಬಹುದು. ನಾನಂತೂ ಓದಿ ಮತ್ತೆ ಮತ್ತೆ ಕಣ್ಣೀರಾಗಿದ್ದಾನೆ. ಅಲ್ಲಲ್ಲಿ ನನ್ನವೆ ಬದುಕಿನ ಚತ್ರಗಳೇನೋ ಎಂಬಂತೆ ಬರೆದ ಕವಿ ಇಲ್ಲಿ ಅಭಿನಂದನಾರ್ಹರು. ಸಂಕಲನವನ್ನು ಓದಿ ನಿಮ್ಮಲ್ಲೂ ಮಾನವೀಯತೆಯ ಸುಳಿವು ದೊರಕಬಹುದೇನೊ ಹುಡುಕೋಣ ಬದುಕೆಂದರೆ ಅದೆ ಅಲ್ಲವೆ ಪರಸ್ಪರರು ಹಂಚಿ ಬದುಕುವುದೆ ಆಗಿದೆ. ಅದು ಈ ಕವಿತೆಗಳಲ್ಲಿ ನಿಮಗೆ ಸಿಕ್ಕರೂ ಸಿಗಬಹುದು. ಇನ್ಯಾಕೆ ತಡ ಓದಿ ಓದಿ ಹುಡುಕಿ ಕವಿತೆಗಳು ಮಾತನಾಡಿಯಾವು.
- ಮಾರುತಿ ಗೋಪಿಕುಂಟೆ
