ನಿವೃತ್ತ ಕೆ. ಎ. ಎಸ್. ಅಧಿಕಾರಿಗಳಾದ ಎಚ್. ಪಿ. ಶೆಲ್ಲಿಕೇರಿ ಅವರು ತಮ್ಮ ಎರಡನೇ ಪ್ರವಾಸ ಕಥನ “ಮೇಪಲ್ ನಾಡಿನಲ್ಲಿ” ಕೃತಿಯನ್ನು ಹೊರ ತರುತ್ತಿದ್ದಾರೆ. ಕಥೆಗಾರರಾದ ಡಾ. ಬಸು ಬೇವಿನಗಿಡದ ಅವರು ಈ ಕೃತಿಗೆ ಬೆನ್ನುಡಿ ಬರೆದಿದ್ದು, ತಪ್ಪದೆ ಮುಂದೆ ಓದಿ…
ಪುಸ್ತಕ : ಮೇಪಲ್ ನಾಡಿನಲ್ಲಿ
ಲೇಖಕರು : ಎಚ್.ಪಿ.ಶೆಲ್ಲಿಕೇರಿ
ಪ್ರಕಾರ : ಪ್ರವಾಸ ಕಥನ
ಪ್ರಕಾಶನ : ತುಳಸಿ ಪ್ರಕಾಶನ
ಬೆಲೆ : ೨೦೦.೦೦
ಕರಾವಳಿಗಳನ್ನು ಕೆನಡಾದ ಪ್ರಜೆಗಳು ಕಾಪಾಡಿಕೊಂಡು ಬಂದಿರುವುದನ್ನು ಶೆಲ್ಲಿಕೇರಿಯವರು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಒಂದು ದೇಶವನ್ನು ನೋಡದಿದ್ದರೂ ಆ ದೇಶವನ್ನು ಕುರಿತ ಒಂದು ಪುಸ್ತಕವನ್ನಾದರೂ ಓದಬೇಕಂತೆ. ದೇಶ ನೋಡು, ಕೋಶ ಓದು ಎನ್ನುವ ಮಾತು ಅದರಿಂದಲೇ ಬಂದಿರಬಹುದು. ನಮ್ಮಲ್ಲಿ ಹೆಚ್ಚಾಗಿ ಎಲ್ಲರೂ ಅಮೇರಿಕಾ, ಅಮೇರಿಕಾ ಎನ್ನುವವರೆ. ಆದರೆ ಕೆನಡಾ ಕುರಿತು ಹೆಚ್ಚಿನ ಪ್ರವಾಸ ಕಥನಗಳು ಬಂದಿಲ್ಲ.

ಆ ಒಂದು ಕೊರತೆಯನ್ನು ಎಚ್.ಪಿ.ಶೆಲ್ಲಿಕೇರಿ ಅವರ ‘ಮೇಪಲ್ ನಾಡಿನಲ್ಲಿ’ ಎನ್ನುವ ಪ್ರವಾಸ ಕಥನ ನೀಗಿಸುತ್ತದೆ. ಅವರು ತಮಗೆ ಲಭ್ಯವಿದ್ದ ಸೀಮಿತ ದಿನಗಳಲ್ಲಿಯೇ ಕೆನಡಾದ ಎಲ್ಲ ಮಗ್ಗುಲಗಳ ಒಂದು ಸಮಗ್ರ ನೋಟವನ್ನು ಕೊಡಲು ಯತ್ನಿಸಿದ್ದಾರೆ. ಅಲ್ಲಿಯ ಸಾವಿರ ದ್ವೀಪಸಮೂಹ, ರಿಡೋ ಕಾಲುವೆ, ಯುದ್ಧಸ್ಮಾರಕಗಳು, ರಾಷ್ಟ್ರೀಯ ಗ್ಯಾಲರಿ, ಡಿಸ್ಟೆಲರಿ ಜಿಲ್ಲೆ ಮುಂತಾದ ಸ್ಥಳಗಳ ವಿಶಿಷ್ಟತೆ ಮತ್ತು ಅಲ್ಲಿಯ ಜನರು ಅವುಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಬಗೆಯನ್ನು ಹೇಳುತ್ತಾರೆ. ಜೊತೆಗೆ ತಾವು ಭೇಟಿ ನೀಡಿದ ಸ್ಮಾರಕ ಮತ್ತು ಸ್ಥಳಗಳ ವಿಶಿಷ್ಟತೆಯನ್ನು ಮನದಟ್ಟು ಮಾಡುತ್ತಾರೆ. ಅಲ್ಲಿಯ ನಿಸರ್ಗ ಸೌಂದರ್ಯ ಮತ್ತು ನಾಡಚೆಲುವನ್ನು ಅವರು ವರ್ಣಿಸಿರುವುದನ್ನು ಓದಿಯೇ ಸವಿಯಬೇಕು. ಕರಾವಳಿಗಳನ್ನು ಕೆನಡಾದ ಪ್ರಜೆಗಳು ಕಾಪಾಡಿಕೊಂಡು ಬಂದಿರುವುದನ್ನು ಶೆಲ್ಲಿಕೇರಿಯವರು ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ.

ಕೆನಡಾ ದೇಶದ ಇತಿಹಾಸ, ಅದರ ಭೌತಿಕ ಲಕ್ಷಣ,ಹವಾಮಾನ, ಅಲ್ಲಿಯ ಚಳಿ- ಬಿಸಿಲು, ಜನರ ಸ್ವಭಾವ, ಗುಣಲಕ್ಷಣ ಇತ್ಯಾದಿಗಳನ್ನು ಹೇಳುತ್ತ ಆ ರಾಷ್ಟ್ರದ ಒಂದು ಸಮಗ್ರ ಚಿತ್ರಣ
ಕಟ್ಟಿಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಜೊತೆಗೆ ತಾವು ಗ್ರಹಿಸಿಕೊಂಡ ಮೇಪಲ್ ನಾಡನ್ನು ಓದುಗರ ಮುಂದೆ ತಂದು ನಿಲ್ಲಿಸುವುದು ವಿಶಿಷ್ಟವಾಗಿದೆ. ನಯಾಗರ ಜಲಪಾತ ಜಗತ್ತಿನ ಒಂದು ಅದ್ಭುತ. ಅಮೇರಿಕ ಕಡೆಯಿಂದ ನೋಡುವುದಕ್ಕಿಂತಲೂ ಕೆನಡಾ ಕಡೆಯಿಂದ ನೋಡಿದಾಗ ಅದರ ಸೌಂದರ್ಯವೇ ಬೇರೆ. ಅದರ ಚೆಲುವನ್ನು ತುಂಬ ಸಮ್ಮೋಹಕವಾಗಿ ಶೆಲ್ಲಿಕೇರಿಯವರು ಶಬ್ಧಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಜೊತೆಗೆ ಪ್ರವಾಸದ ಸಮಯದಲ್ಲಿ ಕೆಲವಡೆ ಅವರಿಗೆದುರಾದ ಪ್ರಸಂಗಗಳು ತುಂಬ ಸ್ವಾರಸ್ಯಕರವಾಗಿ ನಿರೂಪಿತವಾಗಿವೆ.ಅವು ತಮಾಷೆ, ಒಮ್ಮೆಲೆ ಎದುರಾಗುವ ತೊಂದರೆ ಮತ್ತು ಅಪರಿಚಿತರು ನಮಗೆ ತೋರಿಸುವ ಅಕ್ಕರೆಯನ್ನು ವಿವರಿಸುತ್ತವೆ. ಪ್ರವಾಸ ಮತ್ತು ಪ್ರಯಾಣದ ಸಂದರ್ಭದಲ್ಲಿ ಎಷ್ಟು ಕಾಳಜಿ ತೆಗೆದುಕೊಂಡರೂ ಕಡಿಮೆಯೇ ಎನ್ನುವುದನ್ನು ಆ ಘಟನೆಗಳು ಹೇಳುತ್ತವೆ. ಒಟ್ಟಿನಲ್ಲಿ ‘ಮೇಪಲ್ ನಾಡಿನಲ್ಲಿ’ ಕೃತಿ ಕೆನಡಾವನ್ನು ಪುಸ್ತಕದ ಕಿಟಕಿ ಮೂಲಕ ದರ್ಶಿಸಲು ಅನುವು ಮಾಡಿ ಕೊಡುತ್ತದೆ. ಅಲ್ಲಿಗೆ ಹೋಗದಿದ್ದರೂ ಹೋಗಿ ಬಂದೆವು ಎನ್ನುವ ಭಾವ ಬಂದರೆ ಅಚ್ಚರಿಯಿಲ್ಲ.
- ಡಾ. ಬಸು ಬೇವಿನಗಿಡದ, ಧಾರವಾಡ
