ಹೆಣ್ಣಿಗಾಗಲಿ ಅಥವಾ ಗಂಡಿಗಾಗಲಿ ಮದುವೆ ಅನ್ನೋದು ಒಂದು ಮಹತ್ವದ ಘಟ್ಟ. ನೂರಾರು ಕನಸುಗಳು ಹೊತ್ತು ನಡೆಯುವ ಸುಂದರ ಕ್ಷಣ. ಅದೇ ಮದುವೆ ಕೊರೊನ ಸಂದರ್ಭದಲ್ಲಿ ಗಡಿ ಬಿಡಿಯಲ್ಲಿ ನಡೆದಾಗ ಮನೆಯವರಿಗೆ ಆಗುವ ತಲ್ಲಣದ ಚಿತ್ರಣವನ್ನು ಕಾವ್ಯ ದೇವರಾಜ್ ಅವರು ಎಳೆ ಎಳೆಯಾಗಿ ವಿವರಿಸಿದ್ದಾರೆ. ಮುಂದೆ ಓದಿ…
ಹುಡುಗ ಬೆಂಗಳೂರಿನಲ್ಲಿ ವೈದ್ಯ. ಹುಡುಗಿ ಬೆಂಗಳೂರಿನ ಪ್ರಖ್ಯಾತ ಕಂಪೆನಿಯೊಂದರ ಸಾಫ್ಟ್ ವೇರ್ ಎಂಜಿನಿಯರ್. ಈ ಇಬ್ಬರೂ ಮೂಲತಃ ಮಂಗಳೂರಿನವರು. ಇವರಿಬ್ಬರ ಮದುವೆಯನ್ನು ಗುರು-ಹಿರಿಯರು ಏಪ್ರಿಲ್‌ನಲ್ಲಿ ನಿಶ್ಚಯಿಸಿದ್ದರು. ಆದರೆ ಕರೋನ ಮಹಾಮಾರಿಯ ದೆಸೆಯಿಂದ ಆ ಸಮಯದಲ್ಲಿ ದೇಶದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಇದ್ದಿದ್ದರಿಂದ ಮದುವೆಯನ್ನು ಎರಡೂ ಕುಟುಂಬಗಳು ಮೇ ತಿಂಗಳಲ್ಲಿ ಮಾಡಲು ನಿರ್ಧರಿಸಿ ೧ ತಿಂಗಳು ಮುಂದೂಡಿದರು. ಆದರೆ ಮೇ ತಿಂಗಳಲ್ಲಿ ಸಹ ಕೇಂದ್ರ ಸರ್ಕಾರ ಸ್ವಲ್ಪ ಸಡಿಲ ಲಾಕ್ ಡೌನ್ ದೇಶದಲ್ಲಿ ಜಾರಿಗೆ ತಂದಿತು. ಮದುವೆ ಮತ್ತಿತರ ಸಮಾರಂಭಗಳಿಗೆ ನಿರ್ದಿಷ್ಟ ಇಷ್ಟೇ ಜನ ಹಾಗೂ ಪೊಲೀಸರ ಅನುಮತಿ ಕಡ್ಡಾಯವೆಂದು ತಿಳಿಸಿತ್ತು. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಲು ಸೂಕ್ತ ಕಾರಣ ಕೊಟ್ಟು ಆಯಾ ಡಿಸಿ ಮತ್ತು ಅಥವಾ ಎಸ್ಪಿ ಕಚೇರಿಯಿಂದ ಇಲ್ಲವೇ ಸೇವಾಸಿಂಧು ಮುಖಾಂತರ ಅನುಮತಿ ಪತ್ರ ಪಡೆಯುವುದು ಕಡ್ಡಾಯವಾಗಿತ್ತು.

ಫೋಟೋ ಕೃಪೆ : indiaspend
ಸಾಫ್ಟ್ ವೇರ್ ಇಂಜಿನಿಯರ್ ಗಳಿಗೆ work from home ಸೌಲಭ್ಯವಿದ್ದುದರಿಂದ ಹುಡುಗಿ ಮಂಗಳೂರಿನ ತನ್ನ ಹಳ್ಳಿಯ ಮನೆಯಿಂದಲೇ ಕೆಲಸ ಮಾಡಿಕೊಂಡು ಇದ್ದಳು. ಹುಡುಗ ಬೆಂಗಳೂರಿನಲ್ಲಿ ತನ್ನ ಸೇವೆಯಲ್ಲಿ ನಿರತರಾಗಿದ್ದರು. ಗೊತ್ತುಪಡಿಸಿದ ಮದುವೆ ದಿನಾಂಕದ 3 ದಿನದ ಮುಂಚೆಯೇ ಸೇವಾಸಿಂಧು ಮುಖಾಂತರ ಅನುಮತಿ ಪತ್ರ ಪಡೆದು ಮಂಗಳೂರಿಗೆ ತೆರಳಿದ್ದರು. ಅಂದು ಸಂಜೆ ಮದುವೆಗೆ ಅನುಮತಿ ಪಡೆಯಲು ಸಂಬಂಧಪಟ್ಟ ಪೊಲೀಸ್ ಠಾಣೆಗೆ ಹುಡುಗನ ತಂದೆ ಮತ್ತು ಹುಡುಗಿಯ ತಂದೆ ಹೋದರು. ಆದರೆ ಕಾರಣಾಂತರಗಳಿಂದ ಪೋಲಿಸ್ ಠಾಣೆಯಲ್ಲಿ ಇವರಿಗೆ ಅನುಮತಿಯನ್ನು ಕೊಡಲಿಲ್ಲ. ಎರಡೂ ಕುಟುಂಬಗಳಿಗೆ ಹೇಳಿಕೊಳ್ಳಲಾಗದಷ್ಟು ಬೇಸರ, ನಿರಾಸೆಯಾಯಿತು. ಮತ್ತೆ ಎಲ್ಲವೂ ಸಹಜ ಸ್ಥಿತಿಗೆ ಬರುವವರೆಗೂ ಕಾಯೋಣ. ಇನ್ಯಾವ ದಿನಾಂಕವನ್ನು ಸದ್ಯದಲ್ಲೇ ನಿಗದಿ ಮಾಡುವುದು ಬೇಡ ಎಂದು ಎರಡೂ ಕುಟುಂಬಗಳು ನಿರ್ಧರಿಸಿದರು. ಹುಡುಗ ಮತ್ತೆ ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಮಾರನೇಯ ದಿನ ಬೆಳಗ್ಗೆಯೇ ಹೊರಟು ಬೆಂಗಳೂರಿಗೆ ಬಂದು ತನ್ನ ಕೆಲಸಕ್ಕೆ ಹಾಜರಾದರು.
ಸಮಯ ಸುಮಾರು ಸಂಜೆ ೪.೩೦ ಹುಡುಗಿಯ ತಂದೆ ಚಹಾ ಕುಡಿಯುತ್ತಾ ತನ್ನ ಮಗಳಿಗೆ ಎಲ್ಲಾ ಸರಿ ಇದ್ದಿದ್ದರೆ ನಾಳೆ ನಿನ್ನ ಮದುವೆ ನಡೆಯುತ್ತಿತ್ತು ಎಂದು ಬೇಸರದಿಂದ ಹೇಳುತ್ತಿದ್ದರು. ಅಷ್ಟರಲ್ಲಿ ಇಬ್ಬರು ಪೇದೆಗಳು ಇವರ ಮನೆಗೆ ಬಂದು ಮದುವೆ ತಯಾರಿ ಹೇಗೆ ನಡೆದಿದೆ? ಎಷ್ಟು ಜನಕ್ಕೆ ಆಮಂತ್ರಣ ನೀಡಿದ್ದೀರಿ? ಎಂದು ವಿಚಾರಿಸಿದರು. ಹುಡುಗಿಯ ಮನೆಯವರಿಗೆಲ್ಲಾ ಆಶ್ಚರ್ಯವಾಯಿತು. ಹುಡುಗಿಯ ತಂದೆ ‘ಸರ್… ನೀವು ನಮಗೆ ಅನುಮತಿ ನೀಡಲಿಲ್ಲವಾದ್ದರಿಂದ ಮದುವೆಯನ್ನು ಮುಂದೂಡಿದ್ದೇವೆ’ ಎಂದರು. ಪೇದೆಗಳು ‘ಹೌದಾ… ‘ಎಂದು ಒಬ್ಬ ಪೇದೆ ತಮ್ಮ ಇನ್ಸ್ ಪೆಕ್ಟರ್ ಗೆ ಕಾಲ್ ಮಾಡಿ ವಿಷಯ ತಿಳಿಸಿದರು. ನಂತರ ‘ಸರ್… ಇನ್ಸ್ಪೆಕ್ಟರ್ ಮದುವೆ ಮಾಡಲು ನಿಮಗೆ ನಾಳೆಗೆ ಅನುಮತಿ ನೀಡಿದ್ದಾರೆ. ಹೆಚ್ಚು ಜನರನ್ನು ಸೇರಿಸದೆ ನೀವು ಮದುವೆ ಮಾಡಬಹುದು. ‘ನಿಮಗೆ ನಾಳೆಗೆ ಮದುವೆ ಮಾಡಿಕೊಳ್ಳಲು ತಯಾರಿ ಮಾಡಿಕೊಳ್ಳಲು ಸಾಧ್ಯವಿದೆಯೇ?’ ಎಂದು ಪ್ರಶ್ನಿಸಿದರು.

ಫೋಟೋ ಕೃಪೆ : HuffPost
ಹುಡುಗಿಯ ತಂದೆ ಗಲಿಬಿಲಿಗೆ ಒಳಗಾಗಿ ಬೀಗರ ಮನೆಗೆ ಕರೆ ಮಾಡಿ ನಡೆದ ವಿಷಯ ತಿಳಿಸಿದರು. ಅವರು ‘ಸರಿ… ನಿಮಗೆ ಅಭ್ಯಂತರವಿಲ್ಲವೆಂದರೆ ನಮಗೂ ಅಭ್ಯಂತರವಿಲ್ಲ’ ಎಂದರು. ಆಗ ಹುಡುಗಿಯ ತಂದೆ ‘ಸಮಯ ಈಗ ಸಂಜೆ ೫ ಆಗಿದೆ. ಇವರಿಬ್ಬರಿಗೂ ಮದುವೆ ಮುಹೂರ್ತವಿದ್ದದ್ದು, ನಾಳೆ ಮುಂಜಾನೆ ೫.೩೦ ಕ್ಕೆ ಅಷ್ಟರಲ್ಲಿಹುಡುಗ ಬೆಂಗಳೂರಿನಿಂದ ಹೇಗೆ ಬರುತ್ತಾರೆ?. ನಾವು ಈಗ ಹೇಳಿದರೆ, ಒಮ್ಮೆ ನೀವು ಅವರಿಗೆ ಕರೆ ಮಾಡಿ ಕೇಳಿ ಹೇಳಿ’ ಎಂದರು. ಸರಿ ಎಂದು ಹುಡುಗನ ತಂದೆ ಹುಡುಗನಿಗೆ ಕರೆ ಮಾಡಿದರು. ಅತ್ತ ಅವರು ಆಗತಾನೆ ತನ್ನ ಡ್ಯೂಟಿ ಮುಗಿಸಿ ಆಸ್ಪತ್ರೆಯಿಂದ ಮನೆಗೆ ಹೊರಡುತ್ತಿದ್ದರು. ಆಗ ಅವರಿಗೆ ತಂದೆಯಿಂದ ಕರೆ ಬಂದಿತು. ಹುಡುಗ ಫೋನ್ ಸ್ವೀಕರಿಸುತ್ತಲೇ ತಂದೆ ಎಲ್ಲ ವಿಷಯವನ್ನು ವಿವರಿಸಿ ಈಗಲೇ ನಿನಗೆ ಹೊರಡಲು ಸಾಧ್ಯವಾ? ಎಂದು ಹುಡುಗನನ್ನು ಕೇಳಿದರು. ಹುಡುಗ ಸರಿ ನಾನು ಬರುತ್ತೇನೆ. ನೀವು ಬೇಕಾದ ತಯಾರಿ ಮಾಡಿಕೊಳ್ಳಿ ಎಂದು ಒಪ್ಪಿಗೆ ಸೂಚಿಸಿ ಸೀದಾ ಎಸ್ಪಿ ಕಚೇರಿಗೆ ತೆರಳಿದರು. ಅಲ್ಲಿ ಅವರು ಅಂತರ್ ಜಿಲ್ಲೆ ಅನುಮತಿ ಪತ್ರ ಪಡೆಯುವಷ್ಟರಲ್ಲಿ ಸಂಜೆ ೬ ೩೦ ಆಗಿತ್ತು. ನಂತರ ಮನೆಗೆ ತೆರಳಿ ಬೇಕಾದ ಲಗೇಜು ತೆಗೆದುಕೊಂಡು ಬೆಂಗಳೂರಿನ ಮನೆ ಬಿಡುವಷ್ಟರಲ್ಲಿ ರಾತ್ರಿ ೯ ಗಂಟೆಯಾಗಿತ್ತು. ಮುಂಜಾನೆ ೪.೩೦ ಕ್ಕೆ ಹುಡುಗ ತನ್ನ ಸ್ವಗೃಹವನ್ನು ತಲುಪಿದನು. ಇತ್ತ ಹುಡುಗ ಮತ್ತು ಹುಡುಗಿ ಮನೆಯವರು ಮದುವೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಹುಡುಗಿ ಮನೆಯ ನೆರೆಹೊರೆಯವರು ತಮ್ಮ ತೋಟದಲ್ಲಿ ಬೆಳೆದಿದ್ದ ಹಣ್ಣು. ಹೂ, ತರಕಾರಿಗಳನ್ನು ತಂದು ಮನೆಯ ಮುಂದೆ ಚಪ್ಪರ ಹಾಕಿ ಅಡುಗೆ ಕಾರ್ಯಗಳಿಗೆಲ್ಲ ಸಹಾಯ ಮಾಡಿದರು. ಅಂದುಕೊಂಡಂತೆ ಮುಂಜಾನೆ ೫.೩೦ ರ ಮುಹೂರ್ತಕ್ಕೆ ಕೇವಲ ಅತ್ಯಾಪ್ತರ ಸಮ್ಮುಖದಲ್ಲಿ ಮದುವೆ ಸರಳವಾಗಿ ಸಂತೋಷ ಸಡಗರದಿಂದ ನೆರವೇರಿತು.
ಮದುವೆಯನ್ನು ಹೀಗೂ ಸರಳವಾಗಿಯೂ ಮಾಡಬಹುದು ಎಂದು ಕೊರೊನ ತಿಳಿಸಿಕೊಟ್ಟಿತು. ಮತ್ತು ತುರಾತುರಿಯಲ್ಲಿ ನಡೆದ ಮದುವೆಯನ್ನು ಮನೆಯವರೆಲ್ಲ ಈಗ ನೆನೆದು ಹಾಸ್ಯ ಮಾಡಿ ನಗುತ್ತಾರೆ.
- ಕಾವ್ಯ ದೇವರಾಜ್