ಸುಮಾ ಶೂಟಿಂಗ್ ಲೊಕೇಶನ್ ಗೆ ಹೋಗಿದ್ದಾಳೆ. ತಾನು ಕೂಡಾ ದೊಡ್ಡ ನಟಿಯಾಗಬೇಕೆನ್ನುವ ಕನ್ನಸ್ಸನ್ನು ಹೊತ್ತು ನಿರ್ದೇಶಕ ರಾಣಾರಿಗಾಗಿ ಕಾಯುತ್ತಿದ್ದಾಳೆ. ಮುಂದೇನಾಗುತ್ತೆ ಈ ಜನುಮ ಜನುಮದ ಕತೆಯಲ್ಲಿ ತಪ್ಪದೆ ಓದಿ…
ನಿರ್ದೇಶಕರಿಗೆ ಹೊಗೆರಾಮನ ಪೂಸಿ !
ಹೌದು… ಮಾಚಯ್ಯ ಅಂಕಲ್ ನಮಗೆ ಬೇಕಾದವ್ರು. ಬಂದು ಹೋಗಿ ಅಂತ ಅವ್ರೇ ಹೇಳಿದ್ದು. ಅಂಕಲ್ ಇದ್ದಾರಾ?
ಇಲ್ಲ. ಅವ್ರು ಕೆಲಸ ಅಂತ ಸೋಮವಾರ ಪೇಟೆಗೆ ಹೋಗಿದ್ದಾರೆ. ನಾನು ರಘುರಾಮ. ನೀವು ಬೇಕಾದ್ರೆ ಹೋಗೇರಮ್ಮ ಅಂತಾನೂ ಕರೀರಿ. ಸಿನಿಮಾದ ಪ್ರೊಡಕ್ಷನ್ ಮಾನೇಜರು. ಇಷ್ಟೋತನ್ನಿಂದ ನಿಮ್ಮನ್ನೇ ಕಾಯ್ತಿದ್ದೆ ನೋಡಿ…’
ಇಬ್ಬರಿಗೂ ಖುಷಿಯಾಯಿತು. ತಾವು ನೋಡಿದ ಮೊದಲ ವ್ಯಕ್ತಿಯೇ ಸಿನಿಮಾದ ಪ್ರೊಡಕ್ಷನ್ ಮ್ಯಾನೇಜರು. ಬಂದ ಕೆಲಸ ಆಗಬಹುದೇನೋ?
ಇವ್ಳು ನನ್ನ ತಮ್ಮ ಪೂವಯ್ಯ. ಇಲ್ಲೇ ಮಡಿಕೇರಿ ಹತ್ರ ಬಾಳೆಲೆ ನಮ್ಮೂರು. ನನಗೆ ಸಿನಿಮಾದಲ್ಲಿ ಪಾರ್ಟು ಮಾಡೋ ಆಸೆ.’
ಫೋಟೋ ಕೃಪೆ : SRKunivers
ಚಿಂತೆ ಮಾಡ್ಬೇಡಿ ಮೇಡಂ. ನಮ್ಮ ಡೈರೆಕ್ಟರ್ ಯಾರು ಅಂತ ಗೊತ್ತಲ್ವ? ರಾಣಾ ಅಂತ.
ಇಲ್ಲೀತನಕ ಹಿಟ್ ಸಿನಿಮಾ ಕೊಟ್ಟವರು. ಅವ್ರು ನಿಮ್ಮನ್ನ ನೋಡಿ ಓಕೆ. ಅಂದೇ ಅಂತಾರೆ. ಶಾಟ್ ನಲ್ಲಿದ್ದಾರೆ. ಅವ್ರಿಗೆ ಸುದ್ದಿ ಮುಟ್ಟಿಸ್ತೀನಿ.ಬನ್ನಿ ಆ ಕಡೆ ಕೂತ್ಕೋಳಿ’ ಎಂದು ಹೇಳಿದ. ಪ್ರೊಡಕ್ಷನ್ ಹೂಗನನ್ನು ಕರೆದು ಕಾಫಿ ತಂದ್ಕೊಡೋ’ ಅಂದು ಡೈರೆಕ್ಟರ್ ಇದ್ದ ಕಡೆ ಅವಸರದಿಂದ ಹೋದ. ಸುಮಾಳ ಮುಖದಲ್ಲಿ ಗೆಲುವು ಕಂಡಿತು.
ಸ್ಕ್ರಿಪ್ಟ್ ನೋಡುತ್ತಿದ್ದ ರಾಣಾರ ಹತ್ತಿರ ಬಂದ ಹೊಗೆರಾಮ ಸಮಯ ನೋಡಿ ಹೇಳಿದ.
ಸಾರ್, ಆ ಕೂರ್ಗಿ ಹುಡುಗಿ ಬಂತು ಸಾರ್. ನೋಡೋಕೆ ಸಖತ್ತಾಗವಳೇ. ಅವ್ಳು ಮುಂದೆ ಈ ಹಿಂದಿ ಹುಡುಗಿನೇ ಸೆಕೆಂಡ್ ಹೀರೋಯಿನ್ ಆಗ್ತಾಳೆ ನೋಡಿ. ಈ ಪ್ರೊಡ್ಯೂಸರಿಗೆ ಹುಡುಗಿಯರ ಹುಚ್ಚು. ಅವ್ರನ್ನ ಹಿಟ್ ಆಗ್ಬೇಕು ಸಾರ್.’ ಹೊಗೆರಾಮ ಡೈರೆಕ್ಟರ್ ಪೂಸಿ ಹೊಡೆದ.
ಆ ಒತ್ತಡದಲ್ಲೂ ರಾಣಾ ಗಮನವಿಟ್ಟುಕೊಂಡು ಕೇಳಿದರು. ನಂತರ ಯೋಚಿಸಿ ಹೇಳಿದರು. ಆಯ್ತು. ಈಗ ಶಾಟ್ ನಲ್ಲಿದ್ದೀನಿ. ಲಂಚ್ ವರೆಗೆ ಕಾಯೋದಕ್ಕೆ ಹೇಳು. ನಾನೇ ಆಡಿಷನ್ ಮಾಡ್ತೀನಿ. ಹಾ೦. ಪ್ರೊಡಸರ್ ಗೆ ಏನೂ ಹೇಳೋದು ಬೇಡ.’
ಹೊಗೆರಾಮ ಖುಷಿಯಿಂದ ತಲೆಯಾಡಿಸಿ ಸುಮಾ ಕೂತ ಕಡೆ ಓಡಿದ.
*
ಫೋಟೋ ಕೃಪೆ : patrika
ಶೂಟಿಂಗ್ ನಡೆಯುತ್ತಿತ್ತು. ಖುಷಿ ಮತ್ತು ಕುತೂಹಲದಿಂದ ಸುಮಾ ಮತ್ತು ಪೂವಯ್ಯ ಶೂಟಿಂಗ್ ನೋಡುತ್ತಿದ್ದರು. ನಾಯಕಿ ಅನುಷ್ ಚಾವ್ಲಾ, ನಾಯಕ ನಟ ಶಯನಕುಮಾರನನ್ನು ದೂರದಿಂದಲೇ ನೋಡಿದರು. ಅಷ್ಟು ದೂರದಲ್ಲಿ ಗುಯ್ ಗುಡುತ್ತಿದ್ದ ಜನರೇಟರು, ದೊಡ್ಡ ದೊಡ್ಡ ಲೈಟ್ಸ್, ಕೆಮರಾ,ಓಡಾಡುವ ಹುಡುಗರು ಎಲ್ಲವನ್ನೂ ನೋಡುತ್ತಾ ಸುಮಾ ತನ್ನನ್ನೇ ಮರೆತಳು. ಅಚ್ಚರಿಯ ವಿಷಯವೆಂದರೆ ಅವರಿಬ್ಬರಿಗೂ ನಿರ್ದೇಶಕರ ಮುಖವೇ ಕಾಣಲಿಲ್ಲ. ಅವರು ಮರೆಯಲ್ಲಿ ಅದೆಲ್ಲೋ ಇದ್ದು ಮೈಕಿನಲ್ಲಿ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಸೂಚನೆ ಕೊಡುತ್ತಿದ್ದರು. ಮೈಕಿನಲ್ಲಿ ನಿರ್ದೇಶಕರ ದನಿ ಕೇಳುತ್ತಲೂ ಸುಮಾಳಿಗೆ ಏನೋ ಒಂಥರ ಆಗುತ್ತಿತ್ತು.
ಹೌದು ಇದೆಲ್ಲೋ ಕೇಳಿದ ಧ್ವನಿ. ಎಲ್ಲಿ ಹೇಳಿದ್ದು? ಊರಿನಲ್ಲಾ? ಕಾಲೇಜಿನಲ್ಲಾ? ಅಥವಾ ಯಾವುದಾದರೂ ಮದುವೆ ಮನೆಯಲ್ಲಾ?’
ತನ್ನಷ್ಟಕ್ಕೆ ತಾನೇ ಕೇಳಿಕೊಳ್ಳುತ್ತಿದ್ದಳು ಸುಮಾ. ಒಟ್ಟಿನಲ್ಲಿ ಗೊಂದಲ. ಸ್ವಲ್ಪ ಹೊತ್ತಿಗೆ ಅವರೇ ಕರೆದುತ್ತಾರಲ್ಲ. ಆಗ ಎಲ್ಲಾ ಗೊತ್ತಾಗುತ್ತದೆ. ನಿರ್ದೇಶಕ ರಾಣಾ ತಾನು ನೋಡಿದವರಾ? ಅಥವಾ ಬೇರೆಯವರಾ? ಅನ್ನುವುದು.
ಸುಮಾ ಆಗಲೇ ಅಲ್ಲಿದ್ದವರ ಗಮನ ಸೀದುಬಿಟ್ಟಿದ್ದಳು. ಆಕೆ ಜೀಪು ತಂದು ನಿಲ್ಲಿಸಿದಾಗಲೇ ಎಲ್ಲರ ಗಮನ ಅವಳ ಮೇಲಿತ್ತು
ಟೈಟ್ ಜೀನ್ಸ್ ಪ್ಯಾಂಟ್. ಮೇಲೆ ಕಿತ್ತಳೆ ಬಣ್ಣದ ಟಾಪ್. ಕಣ್ಣಿಗೊಂದು ತಂಪು ಕನ್ನಡಕ ಹೆಗಲ ಮೇಲೆ ಹರಿಡಿಕೊಂಡ ನವಿರಾದ ಉದ್ದ ಕೂದಲು. ಒಮ್ಮೆ ನೋಡಿದರೆ ಮತ್ತೆ ನೋಡಬೇಕು ಅನ್ನಿಸುವ ಮೈಮಾಟ. ಮೇಕಪ್ಪೇ ಇಲ್ಲದ ಸ್ನಿಗ್ಧ ಸುಂದರಿ.
ಹೊಸ ಹುಡ್ಗಿಯಂತೆ ಕಾಣಲಾ. ಹೀರೋಯಿನ್ ಮಾಡ್ತೀನಿ ಅಂತ ಈ ಪ್ರೊಡ್ಯೂಸರೇ ಕರೆಸಿದ್ದಾರಂತೆ. ಇವಳ ಬಣ್ಣ ನೋಡಿದ್ರೆ ಇವಳೂ ಹಿಂದಿಯವಳೇ ಇರಬೇಕು. ಅವ್ರೇ ಅಲ್ವ ಬೋಲ್ಡ್ ಆಗಿರೋದು. ಒಳ್ಳೆ ಫೀಗರೇ ಬಿಡು…’
ಹಾಗಿದ್ರೆ ಇವ್ಳು ಅನುಷ್ ಚಾವ್ಲಾಳ ತಂಗಿನೇ ಇರಬೇಕು. ಒಂದ್ ತಗಂಡ್ರೆ ಇನ್ನೊಂದ್ ಫ್ರೀ ಅಲ್ವ…?
ಯೂನಿಟ್ ಹುಡುಗರ ಮಾತುಗಳು ಶುರು ಆದವು. ಶೂಟಿಂಗ್ ನೋಡುತ್ತಾ ನೋಡುತ್ತಾ ಸುಮಾ ಮತ್ತು ಪೂವಯ್ಯಾರಿಗೆ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ.
ಗಂಟೆ ಒಂದೂವರೆಯಾಯಿತು. ಮೈಕಿನಿಂದ ‘ ಎಂಬ ಸೂಚನೆ ಕೇಳಿಬಂದಿತು. ಕೂಡಲೇ ಜನರೇಟರ್ ಸದ್ದುನಿಲ್ಲಿಸಿತು. ಕೆಮರಾ ಹುಡುಗ ಸ್ಟ್ಯಾಂಡಿನಿಂದ ಕೆಮರಾ ಎತ್ತಿಕೊಂಡ. ಎಲ್ಲೆಲ್ಲೋ ಇದ್ದವರು ಒಂದೆಡೆ ಸೇರಿದರು. ಜ್ಯುನಿಯರ್ ಹುಡುಗಿಯರು ಗುಂಪಾಗಿ ನಿಂತರು.
‘ಸುಮಾ ತಮ್ಮನತ್ತ ನೋಡಿ – ಬಫೆ ಊಟ. ಈಗ ಡೈರೆಕ್ಟರು ಈಚೆ ಬರ್ತಾರಲ್ವಾ? ಹೋ…ಅಲ್ನೋಡು ಹೀರೋ ಶಯನಕುಮಾರ.’
ಅವನ್ನೇನು ನೋಡ್ತೀಯ. ಅಲ್ನೋಡು ಹಿಂದಿ ಹೀರೋಯಿನ್ ಅನುಷ್ ಚಾವ್ಲಾ.’
ಪೂವಯ್ಯ ಕಣ್ಣರಳಿಸಿ ನೋಡಿದ. ಇಬ್ಬರಿಗೂ ಥ್ರಿಲ್ಲೋ ಥ್ರಿಲ್ಲು. ಈಗ ತಮಗೆ ನಿರ್ದೇಶಕರಿಂದ ಕರೆ ಬರಬಹುದು ಅಂದುಕೊಂಡಳು ಸುಮಾ. ಇಂಥ ಹೊತ್ತಿನಲ್ಲಿ ಮಾಚಯ್ಯ ಅಂಕಲ್ಲು ಇರಬೇಕಿತ್ತು ಎಂದು ಅನಿಸದೇ ಇರಲಿಲ್ಲ.
ತಗೊಳ್ಳಿ ಪ್ರೊಡಕ್ಷನ್ ಮ್ಯಾನೇಜರ್ ಸಾರ್ ಹೇಳಿದ್ರು. ನೀವು ಊಟ ಮಾಡ್ಬೇಕಂತೆ’.
ಫೋಟೋ ಕೃಪೆ : youtube
ಸುಮಾ ತಲೆ ಮೇಲೆತ್ತಿ ನೋಡಿದಳು. ಹುಡುಗನೊಬ್ಬ ಎರಡೂ ಕೈಯಲ್ಲಿ ಎರಡೂ ತಟ್ಟೆ ಹಿಡಿದು ಎದುರು ನಿಂತಿದ್ದ. ತಟ್ಟೆಯಲ್ಲಿ ಚಪಾತಿ, ಪಲ್ಯ, ಚಟ್ನಿ, ಉಪ್ಪಿನಕಾಯಿ ಇತ್ತು.
(ಸೂಚನೆ : ಈ ಕತೆಯೂ ಈಗಾಗಲೇ ಪುಸ್ತಕರೂಪದಲ್ಲಿದ್ದು, ಆಕೃತಿಕನ್ನಡ ಮ್ಯಾಗಝಿನ್ ನಲ್ಲಿ ಪ್ರತಿ ಶನಿವಾರ ಪ್ರಕಟವಾಗುತ್ತದೆ. ಇತರೆ ಯಾರು ಕೂಡ ಈ ಕತೆಯನ್ನು ಪ್ರಕಟಿಸುವ ಹಾಗಿಲ್ಲ.ಹಾಗೂ ಕದಿಯುವಂತಿಲ್ಲ.)
[ ಮತ್ತೆ ಮುಂದಿನ ಶನಿವಾರ ಓದಿರಿ. ಇದೊಂದು ಕುತೂಹಲಕಾರಿ ಕತೆ. ತಪ್ಪದೆ ಓದಿರಿ. ]
- ಹೂಲಿಶೇಖರ್ (ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು- ನಾಟಕಕಾರರು- ಚಿತ್ರ ಸಂಭಾಷಣಕಾರರು)