‘ಮಾಸದ ಹೆಜ್ಜೆ’ ಕವನ – ಶಿವದೇವಿ ಅವನೀಶಚಂದ್ರ

ನಿನ್ನ ಹೆಜ್ಜೆಯ ತುಳಿತಕ್ಕೆ ಮುದಗೊಂಡು ಫಕ್ಕನೆ ತಳಿತವರು ಹೂವಾಗಿ ಪರಿಮಳ ಹರಡಿದವರು… ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಅಳಿಸಿಲ್ಲ ನಾನು ಇಂದಿಗೂ
ನೀ ನನ್ನೆದೆಯ ಕ್ಯಾನ್ವಾಸಿನಲ್ಲಿ
ಉಳಿಸಿ ಹೋದ ಹೆಜ್ಜೆ ಗುರುತ…

ಎಲ್ಲೆಲ್ಲಿಯೋ ಮೂಡಿಸಿರಬಹುದು
ನಿನ್ನ ಗಮನದ ಸಾಕ್ಷಿಯಾಗಿ
ನಿನ್ನ ಹೆಜ್ಜೆ ಗುರುತ…
ನನ್ನೆದೆಯಲಿ ಮೂಡಿಸಿದಂತೆ

ಆದರೆ ಅದು ಇನ್ನೂ ಅಲ್ಲಲ್ಲಿ
ಉಳಿದಿರಬಹುದು ಎಂಬುದ
ನಂಬಲಾರೆ ನಾ…ಸಂದರ್ಭದ
ಜಡಿಮಳೆ…ಜಂಝಾವಾತ ಸಾಗರದ ಅಲೆಗಳ ನಿರಂತರ ಹೊಡೆತದಲಿ
ಅದು ತನ್ನ ಅಸ್ತಿತ್ವ ಕಳೆದುಕೊಂಡಿರಬಹುದು

ನನ್ನಂತೆ ಅದನು ಸ್ವೀಕರಿಸಿದವರು
ನಿನ್ನ ಹೆಜ್ಜೆಯ ತುಳಿತಕ್ಕೆ ಮುದಗೊಂಡು
ಫಕ್ಕನೆ ತಳಿತವರು ಹೂವಾಗಿ
ಪರಿಮಳ ಹರಡಿದವರು…
ತಂಗಾಳಿಯ ಚಾಮರ
ಬೀಸಿದವರು…ನಿನಗೆ ಸಿಕ್ಕಾರೆಂದು
ನಾ ನಂಬುವುದಿಲ್ಲ ಎಂದಿಗೂ

ಕೊನೆಗೆ ನಾನೂ ಅವರಂತೆಯೇ
ಆದೇನೆಂಬ ಭೀತಿಯಲಿ
ಛಾಪಿಸಿಕೊಂಡಿದ್ದೇನೆ ಅದನು
ಮಹಾನ್ ಕಲಾಕೃತಿಯಂತೆ
ನೀ ಮತ್ತೆ ಬರುವುದಾದರೆ
ನನ್ನ ಪ್ರೀತಿಯ ರುಜುವಾತಿಗಾಗಿ

ಒಮ್ಮೊಮ್ಮೆ ಮುಟ್ಟುತ್ತದೆ,
ಮೃದುವಾಗಿ ತಟ್ಟುತ್ತದೆ
ತನುವ ದಂಡಿಗೆ ಮಾಡಿ
ನಾದ ಹರಿಸುತ್ತದೆ
ಎದೆಯ ರಂಗದ ತುಂಬೆಲ್ಲ
ನೆನಪಿನ ಗೆಜ್ಜೆಗಳ ಕುಣಿಸಿ
ನಲಿದಾಡಿ….
ಭಾವದಲೆ ಬೀಸಿ ಬೀಸಿ
ಸಂತೈಸುತ್ತದೆ
ಅಂದು ಎಂದೋ ಒಮ್ಮೆ
ಇದ್ದವನು ಇಂದೂ ಇದ್ದಾನೆಂದು… ಮುಂದೆಂದೂ ಇರಲಾರನೆಂಬ ಸಂದೇಹವ
ತೊಲಗಿಸುವಂತೆ
ಜೀವದ ಅನಂತಯಾತ್ರೆಯಲಿ
ಹೆಜ್ಜೆ ಹಾಕಲು ಶ್ರೀಕಾರ ಬರೆದವನಂತೆ…
ನಗುತ್ತದೆ ನಗಿಸುತ್ತದೆ ಕನ್ನಡಿಸುತ್ತದೆ
ಮುನ್ನಡೆಸುತ್ತದೆ ಕನಸುಗಳ
ಪೀಳಿಗೆಯ….
ಉದರದಲಿ ಅಂಕುರಗೊಳುತ್ತಿರುವ
ಜೀವದ ಸುಂದರ ಕನಸಿನಂತೆ
ಮರಣದ ಭೀಕರ ಸ್ವರೂಪದಂತೆ…


  • ಶಿವದೇವಿ ಅವನೀಶಚಂದ್ರ – ಶಿಕ್ಷಕರು, ಕೊಡಗು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW