ಕವಿಮನ ಮಿಡಿದ ಭಾವ ಸ್ಫುರಣವೇ ಮಾತಿನಿಂ ಹಗೆ ಒಲವು

ಕವಿತೆ ಕವಿಯ ಅಂತರಂಗದ ಸೃಷ್ಟಿ. ಕವಿತೆ ರಚಿಸಲು ಕಡಲ ತಡಿಗೆ ಹೋಗಬೇಕಿಲ್ಲ, ಮಲೆನಾಡಿಗೆ ಹೋಗಬೇಕಿಲ್ಲ. ಹೃದಯದಲ್ಲಿ ಸಾಹಿತ್ಯಾಸಕ್ತಿ, ಮನಸಿನಲ್ಲಿ ಕನ್ನಡಪ್ರೇಮ ಇದ್ದರೆ ನಗರ ಮಧ್ಯದಲ್ಲಿ ಇದ್ದರೂ ಕವಿತೆಗಳ ಸೃಷ್ಟಿಯಾಗುತ್ತದೆ ಎನ್ನಲು ಹರಿನರಸಿಂಹ ಉಪಾಧ್ಯಾಯರೇ ಸಾಕ್ಷಿ. ಹರಿನರಸಿಂಹ ಉಪಾಧ್ಯಾಯ ಅವರ ಮಾತಿನಿಂ ಹಗೆ ಒಲವು ಕೃತಿಯ ಕುರಿತು ಲೇಖಕರಾದ ಪದ್ಮನಾಭ.ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಮಾತಿನಿಂ ಹಗೆ ಒಲವು ( ಮುಕ್ತಕ ಸಂಕಲನ)
ಕವಿ: ಹರಿನರಸಿಂಹ ಉಪಾಧ್ಯಾಯ
ಹೆಚ್ ಎಸ್ ಆರ್ ಎ ಪ್ರಕಾಶನ

ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ|
ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ||

ಮಹಾಕವಿ ಕಾಳಿದಾಸನ “ಕುಮಾರಸಂಭವ” ಮಹಾಕಾವ್ಯದ ಶ್ಲೋಕವಿದು. ಶಬ್ದ ಅರ್ಥಗಳನ್ನು ಸರಿಯಾಗಿ ತಿಳಿದುಕೊಳ್ಳಲು, ಶಬ್ದ ಅರ್ಥಗಳಂತೆ ಹೊಂದಿಕೊಂಡಿರುವ ಜಗತ್ತಿನ ತಂದೆತಾಯಿಗಳಾದ ಪಾರ್ವತೀ ಪರಮೇಶ್ವರರನ್ನು ವಂದಿಸುತ್ತೇನೆ ಎಂದು ಕವಿ ಶಿವಪಾರ್ವತಿಯರನ್ನು ಸ್ತುತಿಸಿದ್ದಾನೆ. ನಾವು ಬಳಸುವ ಪದ (ಶಬ್ದ) ಹಾಗೂ ಅದು ಧ್ವನಿಸುವ ಅರ್ಥವನ್ನು ಸರಿಯಾಗಿ ಅರ್ಥಮಾಡಿಕೊಂಡಾಗ ಮಾತ್ರ ನಮ್ಮ ಮಾತಿನಲ್ಲಿ ಮತ್ತು ಬರಹದಲ್ಲಿ ಗಟ್ಟಿತನ ಮೂಡುತ್ತದೆ. ಅರ್ಥವಿಲ್ಲದ ಪದಬಳಕೆಯಿಂದ ಅಪಾರ್ಥವೂ, ಅನರ್ಥವೂ ಸಂಭವಿಸಬಹುದು. ಆದ್ದರಿಂದ ಸೂಕ್ತಪದಗಳ ಬಳಕೆ ಮಾಡಲು ಪದ ಮತ್ತು ಅರ್ಥವನ್ನು ತಿಳಿಯಬೇಕು ಎನ್ನುವುದು ಕವಿಯ ಅಂತರ್ವಾಣಿ.

“ರವಿ ಕಾಣದ್ದನ್ನು ಕವಿ ಕಾಣುವ” ಎಂಬ ಲೋಕೋಕ್ತಿಯನ್ನು ಎಲ್ಲರೂ ಕೇಳಿರುತ್ತೀರಿ. ಕವಿ ತಾನು ಕಾಣುವುದಷ್ಟೇ ಅಲ್ಲ; ತಾನು ಕಂಡದ್ದನ್ನು ಇಡೀ ಲೋಕಕ್ಕೇ ತೋರಿಸುತ್ತಾನೆ. ಆನಂದಿಸುವಂತೆ ಮಾಡುತ್ತಾನೆ. ತಾನು ಕಂಡದನ್ನಷ್ಟೇ ಅಲ್ಲ; ಕಾಣದ್ದನ್ನು, ಕೇಳಿದ್ದನ್ನು ಮತ್ತು ಯಾವುದಾದರೂ ವಿಷಯವನ್ನು ಕಂಡಾಗ, ಕೇಳಿದಾಗ ತನಗನಿಸಿದುದನ್ನೂ ಸಹ ಹಂಚಿಕೊಳ್ಳುತ್ತಾನೆ. ವಿಷಯ ಸಂಗ್ರಹಣೆ ಮತ್ತು ಹಂಚುವಿಕೆ ಮಾನವನ ಸಹಜ ಪ್ರವೃತ್ತಿ. ಹಾಗಾದರೆ ಕವಿಯದೇನು ವಿಶೇಷತೆ? ಈ ಪ್ರಶ್ನೆಗೆ ಉತ್ತರ ಈ ಮುಕ್ತಕಲ್ಲಿದೆ.

ಅನಿಸಿದ್ದು ಕೇಳಿದ್ದು ಕಂಡದ್ದು ಕಾಣದ್ದು
ಮನದಾಳಕಿಳಿವಂತೆ ಬರೆಯುವವ ಕವಿಯು
ಹನಿಸಿ ಅದರೊಳು ರಾಗ ರಸಭಾವ ಉಪಮೆಗಳ
ಉಣಿಸುವನು ಜಗಕೆಲ್ಲ ಚಕ್ರಪಾಣಿ ||

ಇತರರು ಇದ್ದುದನ್ನು ಇದ್ದ ಹಾಗೆ ಹೇಳಿದರೆ, ಕವಿ ಅದಕ್ಕೆ ರಾಗ ರಸಭಾವಗಳನ್ನು ಬೆರೆಸಿ ಅನುಭವಿಸಿ ಓದುಗರ ಮನದಾಳಕ್ಕೆ ಇಳಿಯುವಂತೆ ಹೇಳುತ್ತಾನೆ. ಇದಕ್ಕಾಗಿ ಸೂಕ್ತಪದಗಳ ಬಳಕೆ ಮಾಡಿ ಆ ಪದಚಮತ್ಕಾರದಿಂದ ಓದುಗರಿಗೆ ಆನಂದ ನೀಡಲು ಸದಾ ಪ್ರಯತ್ನಶೀಲನಾಗಿರುತ್ತಾನೆ, ಅಧ್ಯಯನಶೀಲನಾಗಿರುತ್ತಾನೆ. ಈ ರೀತಿಯ ಅಧ್ಯಯನ, ಪ್ರಯತ್ನಶೀಲತೆಗಳಿಂದ ೧೧ ಸಾಹಿತ್ಯ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅಪಾರ ಓದುಗರ ಪ್ರೀತಿಯನ್ನು ಗಳಿಸಿರುವ ಶ್ರೀ ಹರಿನರಸಿಂಹ ಉಪಾಧ್ಯಾಯರು ಈಗ ಅದೇ ಉತ್ಸಾಹದೊಂದಿಗೆ “ಮಾತಿನಿಂ ಹಗೆ ಒಲವು” ಎಂಬ ಮುಕ್ತಕ ಸಂಕಲನವನ್ನು ಸಾಹಿತ್ಯಲೋಕಕ್ಕೆ ಅರ್ಪಿಸುತ್ತಿದ್ದಾರೆ. ಇದಕ್ಕಾಗಿ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತಾ ನನ್ನೆರಡು ಮಾತುಗಳನ್ನು ಹಂಚಿಕೊಳ್ಳುತ್ತೇನೆ.

ಕವಿತೆ ಕವಿಯ ಅಂತರಂಗದ ಸೃಷ್ಟಿ. ಕವಿತೆ ರಚಿಸಲು ಕಡಲ ತಡಿಗೆ ಹೋಗಬೇಕಿಲ್ಲ, ಮಲೆನಾಡಿಗೆ ಹೋಗಬೇಕಿಲ್ಲ. ಹೃದಯದಲ್ಲಿ ಸಾಹಿತ್ಯಾಸಕ್ತಿ, ಮನಸಿನಲ್ಲಿ ಕನ್ನಡಪ್ರೇಮ ಇದ್ದರೆ ನಗರ ಮಧ್ಯದಲ್ಲಿ ಇದ್ದರೂ ಕವಿತೆಗಳ ಸೃಷ್ಟಿಯಾಗುತ್ತದೆ ಎನ್ನಲು ಹರಿ ನರಸಿಂಹ ಉಪಾಧ್ಯಾಯರೇ ಸಾಕ್ಷಿ. ಮೂಲತಃ ಮಂಗಳೂರಿನವರಾದ ಇವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಚಂದಾಪುರದಲ್ಲಿ ವಾಸವಿದ್ದಾರೆ. ವೃತ್ತಿಯಲ್ಲಿ ಎಸ್. ಕೆ. ಎಫ್ ಇಂಡಿಯಾ ಲಿಮಿಟೆಡ್ ಕಂಪೆನಿಯಲ್ಲಿ ತಾಂತ್ರಿಕ ಉದ್ಯೋಗಿಯಾಗಿ ಜೊತೆಜೊತೆಗೇ ಸಾಹಿತ್ಯ ಕೃಷಿಯನ್ನು ಬಿಡದೇ ಮುಂದುವರೆಸಿದ್ದಾರೆ. ಇವರು ಈಗಾಗಲೇ ಭಾವಶರಧಿ, ಭಾವರಶ್ಮಿ, ಭಾವದುಯ್ಯಾಲೆ, ವಸುಧಾರಿಣಿ, ಮನೋವಾರಿಧಿ ಕವನಸಂಕಲನಗಳಲ್ಲದೆ ಅರಳುಮೊಗ್ಗು ಎಂಬ ಶಿಶುಗೀತೆಗಳ ಕೃತಿ, ಚಕ್ರಪಾಣಿಯ ಮುಕ್ತಕಗಳು, ಮುಕ್ತಕ ಪುಷ್ಪೋದ್ಯಾನ ಎಂಬ ಮುಕ್ತಕ ಕೃತಿಗಳು, ಪಂಚವಟೀ ಖಂಡಕಾವ್ಯ, ನವೋಲ್ಲಾಸಿನಿ ಎಂಬ ಷಟ್ಪದಿ ಕವನಸಂಕಲನ ಹಾಗೂ ಕವನ ನಮನ ಎಂಬ ಸಂಪಾದಿತ ಸಂಸ್ಮರಣ ಕೃತಿಯನ್ನು ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಸಂಪಾದಿತ ಕೃತಿಗಳಲ್ಲಿ ಇವರ ಕವನ, ಮುಕ್ತಕ, ಗಝಲ್, ಕತೆ, ಪ್ರವಾಸ ಕಥನ, ಇತ್ಯಾದಿಗಳು ಪ್ರಕಟವಾಗಿವೆ. ಅನೇಕ ಪ್ರಶಸ್ತಿ ಸನ್ಮಾನಗಳು ಶ್ರೀಯುತರನ್ನು ಅರಸಿ ಬಂದಿವೆ. ಪ್ರಸ್ತುತ “ಮಾತಿನಿಂ ಹಗೆ ಒಲವು” ಇವರ ೧೨ ನೇ ಕೃತಿ. ಇದರಲ್ಲಿ ಒಟ್ಟು ೪೪೪ ಮುಕ್ತಕಗಳಿವೆ.

ಮುಕ್ತಕಗಳು ಎಂದರೆ ಬಿಡಿ ಪದ್ಯಗಳು ಎಂಬ ಅರ್ಥವಿದ್ದರೂ ಒಂದು ನಿರ್ದಿಷ್ಟ ಮಾತ್ರಾಗಣದ ಚೌಕಟ್ಟಿನಲ್ಲಿ ರಚಿತವಾದ ನಾಲ್ಕು ಸಾಲುಗಳುಳ್ಳ “ಮುಕ್ತಕ ” ಎಂಬ ಸಾಹಿತ್ಯ ಪ್ರಕಾರದಲ್ಲಿ ಜನಮನ್ನಣೆ ಗಳಿಸಿದವರೆಂದರೆ ಶ್ರೀ ಡಿ. ವಿ. ಜಿ. ಯವರು. ಅವರ ಮಂಕುತಿಮ್ಮನ ಕಗ್ಗ ಕನ್ನಡದ ಭಗವದ್ಗೀತೆ ಎಂದೇ ಹೆಸರಾಗಿದೆ. ಮುಕ್ತಕ ಪ್ರಕಾರವನ್ನು ಹೆಚ್ಚು ಜನಪ್ರಿಯಗೊಳಿಸಲು ಮೈಸೂರಿನ ಶ್ರೀ ಮುತ್ತುಸ್ವಾಮಿ, ಶ್ರೀ ರಾಮಪ್ರಸಾದ್, ಶ್ರೀ ಗೋಪಾಲ ಭಟ್.ಸಿ.ಯಚ್ ಮುಂತಾದವರಿದ್ದು ಅಂತೆಯೇ ಶ್ರೀ ಹರಿನರಸಿಂಹ ಉಪಾಧ್ಯಾಯರೂ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಕೃತಿ ಉಪಾಧ್ಯಾಯರ ಮೂರನೆಯ ಹೆಜ್ಜೆ.

ಕೃತಿಯ ಒಳಹೊಕ್ಕು ನೋಡುವುದಾದರೆ ವಿವಿಧ ವಿಷಯಗಳ ಬಗ್ಗೆ ಕವಿಯ ಚಿಂತನೆ ಮತ್ತು ವಿಭಿನ್ನ ಪರಿಸ್ಥಿತಿಗಳಲ್ಲಿ ಕವಿಮನ ಮಿಡಿದ ಭಾವಸ್ಫುರಣವೇ ಹದವಾದ ಪದಮಾಲೆಯೊಂದಿಗೆ ಹೊರಬಂದಿದೆ. ಭಕ್ತಿಸುಧೆ, ನೀತಿ ಬೋಧೆ ಪ್ರಧಾನವಾಗಿ ಕಂಡರೂ ಕನ್ನಡಪ್ರೇಮ, ದೇಶಭಕ್ತಿ, ಪರಿಸರಪ್ರಜ್ಞೆ, ಗುರುವಂದನೆ, ರಾಜಕೀಯ ಪ್ರಜ್ಞೆ, ಸಾಮಾಜಿಕ ಚಿಂತನೆ ಈ ಮುಕ್ತಕಗಳಲ್ಲಿ ಗೋಚರಿಸುತ್ತವೆ. ಉದಾಹರಣೆಗೆ…

ಭಾಷೆ ಕನ್ನಡಮೆನಗೆ ನಾಡಿದುವೆ ಕರುನಾಡು
ತೋಷದಲಿ ನೆಲಜಲಕೆ ನಮಿಸುತಿರಬೇಕು
ರೋಷ ಮತ್ಸರ ತೊರೆದು ಕನ್ನಡಾಂಬೆಗೆ ಮಣಿಯೆ
ಈಶನೊಲಿಯುವನೆಮಗೆ ಚಕ್ರಪಾಣಿ ||

ಎನ್ನುತ್ತಾ ಕನ್ನಡತಾಯಿಯ ಸೇವೆಗೈದರೆ ಈಶ ಮೆಚ್ಚುವನೆಂದು ಅಭಿಮಾನ ಮೆರೆದಿದ್ದಾರೆ. ಜೊತೆಯಲ್ಲೇ “ಒಂದು ದಿನ ಬಡಬಡಿಸಿ ಕೊಂಡಾಡಿದರೆ ಸಾಕೇ” ಎಂದು ಪ್ರಶ್ನಿಸುವ ಕವಿ “ಚಂದದಿಂದಲಿ ನಿತ್ಯ ಕನ್ನಡವ ಬಳಸು” ಎಂದು ಕರೆ ಕೊಟ್ಟಿದ್ದಾರೆ.

ಮಂಗಾಟವಾಡುತ್ತ ಪಕ್ಷದಿಂ ಪಕ್ಷಕ್ಕೆ
ಲಂಘಿಸುವರಿಹರಲ್ಲ ನಿಷ್ಠೆಯನು ತೊರೆದು
ಹಂಗಿಸುತ ಅಧಿಕಾರ ದಾಹಕ್ಕೆ ಬಲಿಬಿದ್ದು
ದಂಗೆಯೇಳುವರೇಕೆ ಚಕ್ರಪಾಣಿ ||

ಈ ಮುಕ್ತಕ ಪಕ್ಷದಿಂದ ಪಕ್ಷಕ್ಕೆ ಹಾರುವ ಪಕ್ಷಾಂತರಿಗಳ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದೆ.

ಗದ್ದುಗೆಯ ಹಿಡಿವಾಸೆಯಲಿ ಪೊಳ್ಳು ಭರವಸೆಯು
ಸದ್ದುಮಾಳ್ಪುದು ವಿವಿಧ ಪಕ್ಷಗಳ ನಡುವೆ
ಗೆದ್ದನಂತರದಲ್ಲಿ ಹುಸಿಯೆಂದು ತಿಳಿಯುವುದು
ಪೆದ್ದರಾರೆಂದು ಪೇಳ್ ಚಕ್ರಪಾಣಿ ||

ಈ ಮುಕ್ತಕ ವಾಸ್ತವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ ರೀತಿ ಪೊಳ್ಳು ಭರವಸೆ ನಂಬಿ ಪೆದ್ದರಾಗುವ ಬದಲು ವಿವೇಚನೆಯಿಂದ ಮತದಾನ ಮಾಡಿ ಎಂದು ಕವಿ ಹೇಳಿದ್ದಾರೆ.

“ಬುದ್ಧಿಯಿಂ ಮತ ನೀಡು ಚಕ್ರಪಾಣಿ” ಎನ್ನುತ್ತಲೇ..

ಹೆಂಡ ಕುಡಿಯತ ನಾವು ಮಾರಿಕೊಳ್ಳುವ ಮತವು
ಪಿಂಡ ತರ್ಪಣವಹುದು ನಮ್ಮ ಬದುಕಿಂಗೆ
ಪುಂಡುಪೋಕರಿಗಳನು ಹುಟ್ಟಡಗಿಸದೆ ಬಿಡುವ
ಚಂಡಾಲರಿಗೆ ಹಬ್ಬ ಚಕ್ರಪಾಣಿ ||

ಎಂದು ಮತದಾರರನ್ನು ಎಚ್ಚರಿಸುತ್ತಾರೆ. ‘ಈ ಭಾರತವು ಶ್ರೇಷ್ಠ ಚಕ್ರಪಾಣಿ’ ಎಂದು ಒಂದು ಮುಕ್ತಕದಲ್ಲಿ ಹೇಳಿರುವ ಕವಿ.

ವೇಷ ಭಾಷೆಗಳೆಲ್ಲ ಭಿನ್ನವಿದ್ದರದೇನು
ದೇಶವಿದು ನಮದೆಂಬ ಭಾವವಿದ್ದರೆ ಸಾಕು
ಹಾಸುಹೊಕ್ಕಾಗಿರಲು ದೇಶಭಕ್ತಿಯು ಮನದಿ
ನಾಶಕ್ಕೆ ಎಡೆಕೊಡದು ಚಕ್ರಪಾಣಿ ||

ಎಂದು ಮನೋಜ್ಞವಾಗಿ ಬರೆದಿದ್ದಾರೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವೈಶಿಷ್ಟ್ಯ. ಇದನ್ನು ಮನದಟ್ಟು ಮಾಡಿಕೊಂಡು ನಾವೆಲ್ಲರೂ ಒಂದೇ ನಾವೆಲ್ಲರೂ ಭಾರತೀಯರು ಎಂಬ ಭಾವನೆ ಬೆಳೆದಾಗ ನಮ್ಮ ಉನ್ನತಿ, ಇಲ್ಲದಿದ್ದರೆ ಅವನತಿ ಎಂದು ಸರಳವಾಗಿ ಹೇಳಿದ್ದಾರೆ.

ಜಾಲತಾಣದ ಸಖ್ಯ ಮೇಣದಂತೆಯೇ ನಿತ್ಯ
ಕಾಲದರಿವನು ಮರೆಸಿ ಬಾಧಿಪುದು ಸತ್ಯ
ಆಲದಂತದರ ವಿಸ್ತಾರ ಜಗದಾಧಾರ
ಮೂಲ ಆವಿಷ್ಕಾರ ಚಕ್ರಪಾಣಿ ||

ಪೂರ್ವಾಪರ ವಿಚಾರಿಸದೇ ಅತಿ ಪರಿಚಯ, ಅತಿ ಸಲಿಗೆ ಬೆಳೆಸಿಕೊಂಡಾಗ ಜಾಲತಾಣದ ಸ್ನೇಹ ಒಮ್ಮೊಮ್ಮೆ ಅಪಾಯವನ್ನು ತರಬಹುದು. ಆದರೆ ವಿವೇಚನಾಯುಕ್ತ ಬಳಕೆ ನಮ್ಮ ಕೈಯ್ಯಲ್ಲೇ ಇದೆ ಅಲ್ಲವೇ?

ಸಾಹಿತ್ಯದ ಬಗ್ಗೆ, ಕಾವ್ಯ ಧರ್ಮದ ಬಗ್ಗೆ ಕವಿಯ ಮನೋಧರ್ಮ ಬಹಳ ಸುಂದರವಾಗಿ ಅಭಿವ್ಯಕ್ತಗೊಂಡಿರುವ ಈ ಮುಕ್ತಕ ನೋಡಿ…

ಹೇಳುವುದು ಸಾಹಿತ್ಯ ಸೇವೆಗೈಯುವುದೆಂದು
ಹೇಳುವುದು ಭಾವಾಭಿವ್ಯಕ್ತಿಯಿದು ಎಂದು
ಜಾಳುನುಡಿಯಾಡುತ್ತ ತೌಡುಕುಟ್ಟುವ ಕೆಲರು
ಹಾಳುಗೈವರು ನುಡಿಯ ಚಕ್ರಪಾಣಿ ||

ಇಲ್ಲಿ ಕಾವ್ಯಸೌಂದರ್ಯದ ಬಗ್ಗೆ ಸಾಹಿತ್ಯದ ಮೂಲ ಆಶಯದ ಬಗ್ಗೆ ಅರಿವಿರದೆ ಹಲವರು ಸಹಜತೆ, ನಮ್ಮ ಭಾವಾಭಿವ್ಯಕ್ತಿ ಎಂದುಕೊಂಡು ಭಾಷಾಸೌಂದರ್ಯವನ್ನು ಹಾಳು ಮಾಡುತ್ತಾರೆ. ಸಾಹಿತ್ಯ ಸೇವೆ ಎಂದು ತೋಚಿದ್ದನ್ನು ಗೀಚುವವರ ಬಗ್ಗೆ ಚಾಟಿ ಬೀಸಿದ್ದಾರೆ.

ಹೆಣ್ಣಿನ ಹಿರಿಮೆಯ ಬಗ್ಗೆ ಈ ಸಂಕಲನದಲ್ಲಿರುವ ಮುಕ್ತಕಗಳು ಬಹಳ ಸುಂದರವಾಗಿವೆ.

“ಹೆಣ್ಣಿಂದಲೇ ಜನನ ಹೆಣ್ಣಿಂದಲೇ ಬಾಳು ಹೆಣ್ಣಿಂದ ಸುಖ ದುಃಖ ಸಂತಾನ ಭಾಗ್ಯ” ಎನ್ನುವ ಕವಿ “ಹಳಿಯದಿರು ಹೆಣ್ಣುಜನ್ಮವನು” ಎನ್ನುತ್ತ ಹೀಗೆ ಹೇಳುತ್ತಾರೆ.

ಅವಳಿರಲು ಈ ಸೃಷ್ಟಿ ಅವಳಿ ಮನೆಗಳ ಕೀರ್ತಿ
ಅವನಿಯಂತೆಯೆ ಸಹನೆ ಸಾಕಾರಮೂರ್ತಿ
ಅವಮಾನ ನೋವುಗಳನುಂಡು ನಗೆ ಚೆಲ್ಲುವಳ
ಅವಗಣನೆ ಮಾಡದಿರಿ ಚಕ್ರಪಾಣಿ ||

ಹೆಣ್ಣಿಲ್ಲದೆ ಸೃಷ್ಟಿಯಿಲ್ಲ, ಹೆಣ್ಣಿಲ್ಲದೆ ಸೌಂದರ್ಯವಿಲ್ಲ, ಕಥೆ ಕಾವ್ಯಗಳಿಲ್ಲ ಅಂತಹ ಹೆಣ್ಣನ್ನು ಅವಗಣನೆ ಮಾಡದಿರಿ ಎಂಬ ಸಾಲುಗಳು ಮನಸೆಳೆಯುತ್ತವೆ.

ಏಳು ತೂಕದ ಮಲ್ಲಿಗೆಯ ತರುಣಿ ಚೆಲ್ವಿಕೆಗೆ
ಸೋಲದವನಾರಿಹನು ಭೂಲೋಕದಲ್ಲಿ
ಏಳು ಸುತ್ತಿನ ದುಂಡುಮಲ್ಲಿಗೆಯು ಅವಳಾಗೆ
ಏಳು ಮೆಲ್ಲಗೆ ಎಂದ ಚಕ್ರಪಾಣಿ ||

ಎಂದು ರಸಜ್ಞತೆಯನ್ನು ಹರಿಸಿರುವ ಕವಿ, ಬದುಕಿನ ಅನಿಶ್ಚಿತತೆಯ ಬಗ್ಗೆ ಬಹಳಷ್ಟು ಮುಕ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ನನಗಿಷ್ಟವಾದುದು.

ಅವನಿಯಲಿ ಹುಟ್ಟುವುದು ಕೆಲಕಾಲ ಬದುಕುವುದು
ಜವರಾಯ ಕರೆದಾಗ ಮರಳಿ ತೆರಳುವುದು
ಅವಧರಿಸಬೇಕಿದನು ಮನುಜ ತನ್ನೊಳು ತಾನು
ವಿವಶಗೊಳ್ಳದೆ ಮನದಿ ಚಕ್ರಪಾಣಿ ||

ಮನುಷ್ಯ ಸ್ಥಿತಪ್ರಜ್ಞನಾಗಿರಬೇಕು. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ ಎನ್ನುವ ಸತ್ಯವನ್ನು ಸರಳವಾಗಿ ಹೇಳಿದ್ದಾರೆ. ಈ ಅನಿತ್ಯವಾದ ಬದುಕಲ್ಲಿ ನಾವು ಸಮಯವನ್ನು ವ್ಯರ್ಥಮಾಡಿಕೊಂಡು ಕೊರಗಬಾರದು ಎನ್ನುವ ಈ ಚೌಪದಿ ಮನೋಜ್ಞವಾಗಿದೆ.

ಬಾಳೊಂದು ವರ್ಣಮಯ ಕನಸುಗಳ ಪರಪಂಚ
ನಾಳೆಯೆನ್ನದೆ ಸವಿದು ಸಾರ್ಥಕತೆ ಪಡೆಯೋ
ಹಾಳುಗೆಡವದೆ ವೇಳೆ ಒಳಿತನ್ನು ಗೈದವಗೆ
ನಾಳೆಗಳ ಹಂಗಿರದು ಚಕ್ರಪಾಣಿ ||

ಬದುಕು ನಶ್ವರವಾದರೂ ಅದರಲ್ಲಿ ಸಾರ್ಥಕತೆ ಸವಿಯಬೇಕು. ಅದಕ್ಕಾಗಿ ಸಮಯದ ಸದುಪಯೋಗವಾಗಬೇಕು ಎಂಬುದು ಕವಿಯ ಆಶಯ. ಈ ಭೂಮಿ ಕರ್ಮಭೂಮಿ. ಇಲ್ಲಿ ಧರ್ಮಮಾರ್ಗದಿಂದ ಕರ್ಮವನ್ನು ಆಚರಿಸಿ ಮುಕ್ತಿ ಪಡೆಯಬೇಕೆಂಬ ತತ್ವವನ್ನು ಸೊಗಸಾಗಿ ಹೇಳುವ ಈ ಸಾಲುಗಳನ್ನು ನೋಡಿ.

ಕರ್ಮಭೂಮಿಯು ಧರೆಯು ಜನ್ಮವೆತ್ತಿದ ನಮಗೆ
ಧರ್ಮವಾಚರಿಸುತ್ತ ಕರ್ಮಫಲವುಣಲು
ಧರ್ಮದಿಂ ಚರಿಸಿದೊಡೆ ಮುಕ್ತಿ ದೊರಕುವುದೆನುವ
ಮರ್ಮವನು ಅರುಹುತಿದೆ ಚಕ್ರಪಾಣಿ ||

ಬದುಕಿನ ನೀತಿ ಸೂತ್ರಗಳನ್ನು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಹೇಳುವ ಸಾಕಷ್ಟು ಮುಕ್ತಕಗಳಿವೆ.. ಗುರುವಾಣಿಯನುಸರಿಸು, ಹಿರಿಯರನು ಗೌರವಿಸು, ಬಳಸು ಪದಪುಂಜಗಳ ಪರರ ನೋಯಿಸದಂತೆ, ಹಗಲು ದುಡಿದರೆ ಮನುಜ ರಾತ್ರಿ ಸುಖನಿದ್ದೆ,, ಆಸುಪಾಸನು ನಾವು ಶುಚಿಯಾಗಿ ಇಟ್ಟಿರಲು ಹೇಸಿಗೆಯು ತುಂಬದೈ ಮನೆಯೊಳಗೆ… ಈ ರೀತಿ ವಿಧವಿಧವಾಗಿ ನೀತಿಲಹರಿ ಹರಿಸುವ ಕವಿ ಕೊನೆಯಲ್ಲಿ ಸಾರುವ ಸಂದೇಶ ಗಮನಾರ್ಹವಾದದ್ದು.

ಇರಲಿ ಪೂರ್ಣಾಯಸ್ಸು, ಇರಲಿ ದೇಹಾರೋಗ್ಯ
ಮರೆಯಾಗಿ ಆಯಾಸ ಚೈತನ್ಯ ಬರಲಿ
ಧರೆಯೊಳೆಲ್ಲರು ನಿತ್ಯ ಸತ್ಕಾರ್ಯ ಗೈಯುತಲಿ
ಹರಿಭಕ್ತಿಯಿಂದಿರಲಿ ಚಕ್ರಪಾಣಿ ||

ಎಲ್ಲರಿಗೂ ಒಳ್ಳೆಯದಾಗಲಿ ಶುಭವಾಗಲಿ ಎಂದು ಹಾರೈಸಿದ ಹರಿನರಸಿಂಹ ಉಪಾಧ್ಯಾಯರಿಗೆ ಶುಭವಾಗಲಿ. ಅವರ ಸಾಹಿತ್ಯಕೃಷಿ ನಿರಂತರವಾಗಿ, ನಿರಾತಂಕವಾಗಿ ಸಾಗುತ್ತಿರಲಿ. ಓದುಗರ ಜ್ಞಾನದಾಹವನ್ನು ನೀಗಲು ಇದೂ ಕೂಡ ಉತ್ತಮ ಸಾಧನವಾಗಲಿ ಎಂದು ಹಾರೈಸುತ್ತೇನೆ


  • ಪದ್ಮನಾಭ. ಡಿ – ಬೆಂಗಳೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW