‘ಕಲ್ಲು ಮಂಟಪ’ ಕೃತಿ ಪರಿಚಯ

ಪ್ರಸಿದ್ಧ ಕವಿ- ಸಾಹಿತಿ ಸುಬ್ರಾಯ ಚೊಕ್ಕಾಡಿಯವರಿಗೆ ೮೦ ವರ್ಷ ತುಂಬಿದ ಸಂದರ್ಭದಲ್ಲಿ ಅವರ ೮೦ ಕವಿತೆಗಳ ಈ ಸಂಕಲನವನ್ನು ಪ್ರಕಟಿಸಲಾಗಿದೆ. ಮಾಲತಿ ರಾಮಕೃಷ್ಣ ಭಟ್ ಅವರು ಸುಬ್ರಾಯ ಚೊಕ್ಕಾಡಿಯವರ ಕಲ್ಲು ಮಂಟಪ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ  : ಕಲ್ಲು ಮಂಟಪ .
ಲೇಖಕರು: ಸುಬ್ರಾಯ ಚೊಕ್ಕಾಡಿ.
ರೂಪ ಪ್ರಕಾಶನ ಮೈಸೂರು.
ಮುದ್ರಣದ ವರ್ಷ:೨೦೨೦.
ಪುಟಗಳು:೧೨೪..
ಬೆಲೆ: ರೂ.೧೧೦.

ಅಗಲಿದ ತಮ್ಮ ಗೆಳೆಯನಿಗೆ ‘ಕಲ್ಲು ಮಂಟಪ’ ಇಷ್ಟವಾದ ಕವನವೆಂದು ಅದೇ ಶೀರ್ಷಿಕೆಯನ್ನು ಇಟ್ಟಿದ್ದಾಗಿ ಕವಿ ಹೇಳಿದ್ದಾರೆ. ಕಳೆದು ಹೋದ ಕಾಲದ ಬಗ್ಗೆ ತಮ್ಮ ಮಾಗಿದ ಅನುಭವದ ಪಾಕದಲ್ಲಿ ಹದವಾಗಿ ಬೆರೆಸಿ ಬರೆದ ಕವನಗಳು ತುಂಬಾ ಸೊಗಸಾಗಿವೆ.

* ಕಲ್ಲು ಮಂಟಪ.

ಎತ್ತರದ ಬೋಳು ಗುಡ್ಡದ ತುದಿಯಲ್ಲಿ
ಕಲ್ಲು ಮಂಟಪ
ಒಂಟಿಯಾಗಿದೆ
ಗೊಮ್ಮಟನ ಹಾಗೆ
ಎಲ್ಲ ಕಳಚಿಕೊಂಡಿದೆ
ಜಗದ ಪರಿವೆಯೆ ಇರದೆ, ನಿರಾಳ
ಆಕಾಶಕ್ಕೆ ಮುಖ ಮಾಡಿದೆ
ಧ್ಯಾನಸ್ಥವಾದಂತಿದೆ.

ಕಲ್ಲು ಮಂಟಪದ ಕಂಬಗಳಲ್ಲಿ ಹಿಂದೆ ಇಲ್ಲೇ ಇದ್ದ ಯೋಗಿಯ ಧ್ಯಾನದ ಪ್ರಭಾವಳಿಯು ಎಲ್ಲಕ್ಕೂ ಅಂಟಿಕೊಂಡ ಹಾಗೆ….ಜಂತುಗಳು- ಗಿಡ- ತೊರೆ ಜೀವ- ಜಂತುಗಳು ಸದ್ದಿರದೇ ನಿದ್ದೆ ಹೋದಂತಿವೆ. ಯೋಗಿಯಾಗಿ ಬಿಟ್ಟಂತೆ ಇರುವ ಅದಕ್ಕೆ ಆಕಾಶದ ಸಿಗ್ಧ ಬೆಳಕು ಸಮೀಪಿಸುತ್ತಿದೆ ಎಂದು ಬಣ್ಣಿಸಿದ್ದಾರೆ.


*ಪಂಡಿತ ವೆಂಕಟೇಶ ಕುಮಾರ್ ಅವರ ಗಾಯನವನ್ನು ಕೇಳಿ ಬರೆದ ‘ನಾದದ ನದಿಯೊಂದು…. ಕವನದ ಕೆಲವು ಸಾಲುಗಳು ನೋಡಿ….
ವಿಲಂಬಿತ- ಲಯ- ವಿನ್ಯಾಸದಲ್ಲಿ
ನದಿ ಅಲ್ಲಲ್ಲಿ ನಿಂತು, ನಿರುಕಿಸುತ್ತ
ಮುನ್ನಡೆಯುತ್ತ ಧ್ರುತ ಗತಿಯಲ್ಲಿ
ಹರಿಯುತಿದೆ ನಾದದ ನದಿಯೊಂದು
ಶ್ರುತಿ- ಲಯದ ಎರಡು ದಡಗಳ

ಸಮಯದ ಪರಿವೆ ಇಲ್ಲದ ಹಾಗೆ..
ಅರಿವೇ ಮರೆಯುವ ಹಾಗೆ
ನಿರಂತರ
ಭಾವಗಳ ತಬ್ಬುತ್ತ
ಬಯಲಲ್ಲಿ ಹರಡುತ್ತ
ಬಯಲಾಗಿ ತುಂಬಿ ಹರಿಯುತ್ತ
ಮುಂದರಿದಂತೆ

ದಕ್ಕಿದ್ದು : ಹೊಸದೇ ಆದ
ಭವವೇ? ಭಾವವೇ?
ಅನುಭವವೇ?
ಭಾವದನುಭವವೇ?
ಭವ,ಭಾವ, ಅನುಭವಗಳೊಂದಾದ
ಅನುಭಾವವೇ?


ಹರಿದು ಹೋದ ನೀರನ್ನು ಮತ್ತೆ ಹಿಡಿಯಲಾಗದಂತೆ ಕಳೆದ ತನ್ನ ಬಾಲ್ಯ ಯೌವನದ ದಿನಗಳನ್ನು ನೆನಪಿಸಿ ಕೊಳ್ಳುವ ವೃದ್ಧನೊಬ್ಬ ನದಿ ಸಮುದ್ರವನ್ನು ಸೇರಿ ಇಲ್ಲವಾಗುವಂತೆ ತಾನೂ ಇಲ್ಲವಾಗುವುದಷ್ಟೇ ಬಾಕಿ ಎಂದು ಯೋಚಿಸುವ ಕವಿತೆಯ ಹೆಸರು.

*ನದಿ ಮತ್ತು ಮುದುಕ.
ನದಿಯ ದಡದಲ್ಲೊಬ್ಬ ಮುದುಕ
ನೋಡುತ್ತಾ ನಿಂತಿದ್ದ ಹರಿದು ಹೋಗುತ್ತಿರುವ ನೀರ
ತನ್ನ ಕಾಲ ಕಳೆದು ಹೋಗುತ್ತಿರುವ ಹಾಗೆ
ಉಕ್ಕಿ ಹರಿವ ನದಿ
ಈಗ ಬಡವಾಗಿದೆ
ತಳ ಕಾಣಿಸುತ್ತಿದೆ
ತನ್ನ ಹಾಗೆ.

ಈ ಸೃಷ್ಟಿಯಲ್ಲಿ ಎಲ್ಲಾ ಕಾಯುವಿಕೆಗೂ ಒಂದೊಂದು ಅರ್ಥವಿದೆ ಎಂದು ಸಾರುವ ಕವಿತೆಯ ಹೆಸರು.

*ಕಾಯುತ್ತಿದೆ.
ಹಕ್ಕಿ ಕಾಯುತ್ತಿದೆ ತನಗೆ
ಆಶ್ರಯ ನೀಡುವ ಮರಕ್ಕಾಗಿ
ಮರ ಕಾಯುತ್ತಿದೆ, ತನ್ನ
ಮಿಡಿವ ಹೃದಯದ ತೆರೆದ
ಹಕ್ಕಿಗಾಗಿ

ಕಾಯುತ್ತಿದೆ ಬೇರು, ಮರಕ್ಕೆ
ಒದಗಿಸಲು ಜೀವ ಜಲಕ್ಕಾಗಿ
ಕಾಯುತ್ತಿವೆ ಜೀವ ಜಗತ್ತು
ಮರ ಒದಗಿಸುವ
ಪ್ರಾಣವಾಯುವಿಗಾಗಿ.
And the time is short but waiting is long.

ಬಸ್ಸಿಗಾಗಿ ಕಾದು ನಿಂತಾಗ ಎಷ್ಟೊಂದು ಬಸ್ಸು ನಿಲ್ದಾಣ ದಲ್ಲಿದ್ದರೂ ತನ್ನೂರಿನ ಬಸ್ಸು ಕಾಣದೇ, ಬೋರ್ಡು ನೋಡಿ ಹುಡುಕುತ್ತಾ ಇದ್ದ ಅವನಿಗೆ ಕಡೆಗೂ ಡಕೋಟಾ ಎಕ್ಸ್ ಪ್ರೆಸ್ ನಂತ ತನ್ನೂರ ಬಸ್ಸು ಸಿಕ್ಕಿತ್ತು.

ಆ ನಿರಾಳತೆಯನ್ನು ಕವಿತೆಯನ್ನಾಗಿಸಿ , ಚೆದುರಿದಂತಿರುವ ವಸ್ತುಗಳ ರಾಶಿಯ ನಡುವೆ ತನಗೆ ಬೇಕಾದ್ದನ್ನು ಹುಡುಕಿ ತೆಗೆಯುವ ಕವಿಯ ಮನಸ್ಸಿಗೆ ಹೋಲಿಸಿದ ‘ಹುಡುಕಿ ಹಿಡಿಯುವ ಆಟ’ ಎನ್ನುವ ಸುಧೀರ್ಘ ಕವನ ತುಂಬಾ ಚೆನ್ನಾಗಿದೆ.

*ಮಾತು -ಮೌನ
ಬದುಕಿನುದ್ದಕ್ಕೂ ಮಾತು ಮಾತು ಮಾತು
ಮಾತಾಡುತ್ತಲೇ ಕಾಲ ಕಳೆದೆ
ಮಾತು ಹೂ ಬಿಡಲಿಲ್ಲ
ಮಾತು ಫಲ ಕೊಡಲಿಲ್ಲ

ಈ ನಡುವೆ ಕಾದು ಕಾದು
ಹತಾಶೆಗೊಂಡ ಮೌನ
ಎಲ್ಲೋ ಪರಾರಿಯಾಗಿ
ತಲೆ ಮರೆಸಿ ಕೊಂಡಿದೆ

ಈಗ ಹುಡುಕುತ್ತಿದ್ದೇನೆ ನಾನು
ಅದನ್ನ
ನನ್ನಲ್ಲಿ ಆವಾಹಿಸಿಕೊಳ್ಳಲು, –
ನೀವು ಕಂಡಿರೇ, ನೀವು ಕಂಡಿರೇ…..

ಎಷ್ಟು ಅರ್ಥವತ್ತಾದ ಕವಿತೆ ಅಲ್ಲವೇ?…
••••••
*ಇರುವುದು ಮತ್ತು ಇಲ್ಲದಿರುವುದು.
ಇವೆರಡರ ನಡುವೆ ಅಂಥಾ ವ್ಯತ್ಯಾಸವೇನೂ ಇಲ್ಲ.
ಇರುವುದು ಇರುತ್ತದೆ ಹಾಗೂ
ಇಲ್ಲದೆ ಇರುವುದರಲ್ಲೂ
ಇರುವುದು ಇರುತ್ತದೆ.
ಇಲ್ಲದಿರುವುದರಲ್ಲಿ ಇಲ್ಲದೆ ಹೋದಾಗ
ಇರುವುದು ಇರುತ್ತದೆ
ಇರುವುದರಿಂದಾಗಿಯೇ ಇಲ್ಲದೆ ಇರುವುದು
ಇರುತ್ತದೆ.
ಇರುವುದು ಇಲ್ಲದೇ ಆದಾಗಲೂ
ಇಲ್ಲದಿರುವುದು ಇರುತ್ತದೆ
ಒಂದು ಇನ್ನೊಂದಾಗಿ
ಒಂದೇ ಆಗಿ-
ದೇವರ ಹಾಗೆ!

ಕವಿ ಸುಬ್ರಾಯ ಚೊಕ್ಕಾಡಿ ಈ ಕವನ ಮೇಲ್ನೋಟಕ್ಕೆ ಸರಳವೆನಿಸಿಸಿದರೂ ಒಂದೆರಡು ಬಾರಿ ಓದಿ ನೋಡಿ… ಹೊಸದೇ ಹೊಳಹು ಮನದಲ್ಲಿಳಿದು ಉಳಿಯುತ್ತದೆ.

ಇನ್ನಷ್ಟು ಕವನಗಳಿಗಾಗಿ ಕೃತಿಯನ್ನು ಓದಿ..


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading