‘ಮಾತಿನೊಳಗಣ ಧಾತು’ ಕೃತಿ ಪರಿಚಯ

ಡಾ.ವಿದುಷಿ ಶ್ಯಾಮಲಾ ಪ್ರಕಾಶ್ ಅವರ ‘ಮಾತಿನೊಳಗಣ ಧಾತು’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಮಾತಿನೊಳಗಣ ಧಾತು
ಲೇಖಕರು : ಡಾ.ವಿದುಷಿ ಶ್ಯಾಮಲಾ ಪ್ರಕಾಶ್

ನನ್ನ ಮುಂಬಯಿ ವಿ.ವಿ ಲಯದ ಶಿಷ್ಯೆಯರಲ್ಲಿ ಒಬ್ಬರಾದ ಶ್ಯಾಮಲಾ ಪ್ರಕಾಶ್ ಅವರ ಮೇಲಿನ ಕೃತಿಯಲ್ಲಿ ಎರಡಕ್ಕೂ ಇರುವ ಅನ್ಯೋನ್ಯ ಸಂಬಂಧಗಳ ಅನಾವರಣ ಮಾಡಿದ್ದು, ದಾಸ ಸಾಹಿತ್ಯದ ಅಧ್ಯಯನ ಮಾಡುವವರಿಗೆ ಒಂದು ಹೊಸ ಕೈಪಿಡಿಯನ್ನು ರಚಿಸಿ ಕೊಟ್ಟಿದ್ದಾರೆ. ಆರು ಅಧ್ಯಾಯಗಳಲ್ಲಿ ಇದರ ಹರಹು ಇದೆ.

ಮೊದಲ ಅಧ್ಯಾಯದಲ್ಲಿ ದಾಸ ಸಾಹಿತ್ಯಕ್ಕೆ ಪ್ರೇರಣೆ ನೀಡಿದ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಕ್ಕೆ ಇರುವ ಸಮಾನ ಅಂಶಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳಲ್ಲಿ ಕನ್ನಡದ ಅಭಿವ್ಯಕ್ತಿ ಸಾಮಾಜಿಕ ಮತ್ತು ಧಾರ್ಮಿಕ ಕಳಕಳಿ ಹಾಗೂ ಸಂಗೀತದ ಸಾಹಚರ್ಯಗಳನ್ನು ನಮೂದಿಸಿದ್ದಾರೆ.

ಮುಂದಿನ ಭಾಗದಲ್ಲಿ ದಾಸ ಸಾಹಿತ್ಯದ ಉಗಮ ಮತ್ತು ವಿಕಾಸದ ಘಟ್ಟಗಳ ಚರಿತ್ರೆಯನ್ನು ಸೋದಾಹರಣವಾಗಿ ದಾಖಲಿಸಿದ್ದಾರೆ . ಹದಿಮೂರನೇ ಶತಮಾನದ ಮಧ್ವಾಚಾರ್ಯರಿಂದ ಮೊದಲಾದ ಅದು ಇಲ್ಲಿಯವರೆಗೆ ಬೆಳೆದು ಬಂದ ಬಗೆಯನ್ನು ನಿರೂಪಿಸಿದ್ದಾರೆ. ಅದರ ನಡುವೆ ಬರುವ ದಾಸರ ಕೊಡುಗೆಯನ್ನು ಸಾಧಾರವಾಗಿ ಮಂಡಿಸಿದ್ದಾರೆ. ಅವರ ಕೆಲವು ಕೀರ್ತನೆಗಳನ್ನು ಕೊಟ್ಟಿರುವುದು ಇದಕ್ಕೆ ನಿದರ್ಶನ. ದಾಸರಲ್ಲಿ ಕೀರ್ತನೆಗಳನ್ನು ಮಾತ್ರವಲ್ಲದೆ ಕಾವ್ಯಗಳನ್ನು ಬರೆದ ಕನಕದಾಸರ ಮತ್ತು ಜಗನ್ನಾಥದಾಸರ ಕಾವ್ಯಗಳನ್ನು ಇಲ್ಲಿ ಪರಿಚಯಿಸಿದ್ದಾರೆ.

ಎರಡನೇ ಅಧ್ಯಾಯದಲ್ಲಿ ದಾಸ ಸಾಹಿತ್ಯದಲ್ಲಿ ಸಂಗೀತ ಹಾಸುಹೊಕ್ಕಾಗಿರುವುದನ್ನು ಅಲ್ಲಿ ಬಳಕೆಯಾದ ರಾಗಗಳನ್ನು ಮತ್ತು ಸಂಗೀತ ವಾದ್ಯಗಳನ್ನು ಸಾಧಾರವಾಗಿ ತೋರಿಸಿ ಕೊಟ್ಟಿದ್ದಾರೆ. ವಚನ ಸಾಹಿತ್ಯದಲ್ಲಿ ಬರುವ ಬತ್ತೀಸ ರಾಗಗಳನ್ನು ಮತ್ತು ದಾಸ ಸಾಹಿತ್ಯದಲ್ಲಿ ಅದು ಮುಂದುವರೆದ ಬಗ್ಗೆ ತೌಲನಿಕ ದೃಷ್ಟಿಯಿಂದ ವಿವರಿಸುತ್ತಾರೆ. ಯಾವ ಯಾವ ದಾಸರ ಕೀರ್ತನೆಗಳಲ್ಲಿ ಯಾವ ಯಾವ ರಾಗಗಳಿವೆ ಎಂದು ಸ್ಪಷ್ಟವಾಗಿ ತೋರಿಸಿದ್ದಾರೆ. ಪುರಂದರದಾಸರು ಹೇಗೆ ಕರ್ನಾಟಕ ಸಂಗೀತ ಪಿತಾಮಹ ಎಂಬ ಬಿರುದಿಗೆ ಪಾತ್ರರು ಎಂದು ಸ್ಪಷ್ಟವಾಗಿ ಸ್ಥಾಪಿಸಿದ್ದಾರೆ.

ಮೂರನೇ ಅಧ್ಯಾಯದಲ್ಲಿ ಮಹಿಳಾ ದಾಸರ ಕೀರ್ತನೆಗಳನ್ನು ಪರಿಚಯ ಮಾಡಿ ಕೊಡುವಾಗ ವಚನ ಸಾಹಿತ್ಯ ರಚನೆಯಲ್ಲಿ ವಿಪುಲವಾಗಿ ಮಹಿಳೆಯರು ಹನ್ನೆರಡನೆಯ ಶತಮಾನದಲ್ಲಿ ತೊಡಗಿದ್ದರೆ, ಇಲ್ಲಿ ಹದಿನೆಂಟನೆ ಶತಮಾನದ ವರೆಗೂ ಅವರು ಕೀರ್ತನೆಗಳನ್ನು ರಚಿಸಲು ಕಾಯಬೇಕಿತ್ತು ಎಂಬುದು ಎರಡೂ ಸಾಹಿತ್ಯ ಸಂದರ್ಭಗಳಿಗೂ ಇರುವ ಅಂತರವನ್ನು ಗ್ರಹಿಸಬಹುದು. ಇದನ್ನು ಕುರಿತು ಲೇಖಕಿ ತೌಲನಿಕ ಅಧ್ಯಯನ ಕೈಗೊಂಡರೆ ಒಳ್ಳೆಯದು. ಹೆಳವನಕಟ್ಟೆ ಗಿರಿಯಮ್ಮನಿಂದ ತೊಡಗಿ ತಿರುಮಲಾಂಬವರೆಗೂ ಇವರ ವ್ಯಾಪ್ತಿ ಇದೆ. ದೇವರನ್ನು ಕುರಿತು ಮಾತ್ರವಲ್ಲ ದೇಶಭಕ್ತಿಯ ಕೀರ್ತನೆಗಳನ್ನು ರಚಿಸಿದ ಶ್ರೇಯಸ್ಸು ಅವರದು ಎಂದು ಗುರುತಿಸಲಾಗಿದೆ.

ದಾಸ ಸಾಹಿತ್ಯದಲ್ಲಿ ಮುಂಡಿಗೆಗಳ ಉಗಮವನ್ನು ಅಲ್ಲಮನ ಬೆಡಗಿನ ವಚನಗಳೊಂದಿಗೆ ಗುರುತಿಸಿ ದಾಸ ಸಾಹಿತ್ಯದಲ್ಲಿ ಕನಕದಾಸರ ಮುಂಡಿಗೆಗಳನನ್ನು ಪಟ್ಟಿ ಮಾಡಿ ಆವರಣದಲ್ಲಿ ಅವುಗಳನ್ನು ಬಿಡಿಸಿದ್ದಾರೆ. ಇದಲ್ಲದೆ ಅವರು ರಚಿಸಿದ ಇತರ ಪ್ರಕಾರಗಳಾದ ಸುಳಾದಿಗಳನ್ನು ಕುರಿತು ಸೋದಾಹರಣವಾಗಿ ನಿರೂಪಿಸಿದ್ದಾರೆ. ಕೊನೆಯ ಅಧ್ಯಾಯದಲ್ಲಿ ತಮ್ಮ ಇಲ್ಲಿಯವರಿಗಿನ ಅಧ್ಯಯನದ ಸಾರ ಸಂಗ್ರಹಿಸಿದ್ದಾರೆ.

ಈ ಕೃತಿಯ ವೈಶಿಷ್ಟ್ಯಗಳನ್ನು ಹೀಗೆ ಪಟ್ಟಿ ಮಾಡಬಹುದು:

  • ವಚನ ಸಾಹಿತ್ಯದ ಮತ್ತು ದಾಸ ಸಾಹಿತ್ಯಕ್ಕೆ ಇರುವ ಸಂಬಂಧದ ಮೇಲೆ ಬೆಳಕು ಚೆಲ್ಲಿರುವುದು.
  • ವಚನ ಸಾಹಿತ್ಯದ ಸಂಗೀತ ಮತ್ತು ದಾಸ ಸಾಹಿತ್ಯದಲ್ಲಿನ ಸಂಗೀತ ಕುರಿತ ತೌಲನಿಕ ಅಧ್ಯಯನ. ಬತ್ತೀಸ ರಾಗಗಳ ಉಲ್ಲೇಖ.
  • ಮುಂಡಿಗೆಯನ್ನು ಅಲ್ಲಮನ ವಚನದಲ್ಲಿರುವುದರ ಉಲ್ಲೇಖ ಅದನ್ನು ಪುರಂದರದಾಸರು ಮತ್ತು ಕನಕದಾಸರು ಮುಂದುವರೆಸಿದ್ದು.
  • ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯದಲ್ಲಿ ಡಾಂಭಿಕ ಭಕ್ತಿಯ ವಿಡಂಬನೆ: ತಾಳಮೇಳವಿದ್ದು ಭಕ್ತಿ ಇಲ್ಲದ ಗಾನ ಕೇಳನೊ ಹರಿ … ಇದರ ಜೊತೆಗೆ ಬಸವಣ್ಣನವರ ” ಭಕ್ತಿ ಎಂಬುದು ತೋರಿ ಉಂಬ ಲಾಭ “ಎಂದರೆ ಪುರಂದರದಾಸರ ” ಉದರ ವೈರಾಗ್ಯವಿದು ನಮ್ಮ ಪದ್ಮನಾಭನಲ್ಲಿ ಲೇಶ ಭಕುತಿಯಿಲ್ಲ _ ಗಮನಿಸಬಹುದು.
  • ವ್ಯಾಸರಾಯರ ಕೀರ್ತನೆಯಲ್ಲಿ ಬರುವ “ರಂಗ ಅಂತರಂಗದ ಗುಡಿ”ಗಳನ್ನು ಆದಿಪುರಾಣದಲ್ಲಿ ನೀಲಾಂಜನೆ ನೃತ್ಯದ ವರ್ಣನೆಯ ಜೊತೆಗೆ ಹೋಲಿಸಿ ವ್ಯಾಸರಾಯರು ಪ್ರಾಚೀನ ಸಾಹಿತ್ಯ ಅಧ್ಯಯನದ ಮಾಡಿರುವ ಸಾಧ್ಯತೆಯ ಮೇಲೆ ಬೆಳಕು ಚೆಲ್ಲಿರುವುದು. ಸಂಗೀತ ವಿದುಷಿಯಾಗಿ ಸಾಹಿತ್ಯ ಅಧ್ಯಯನ ಪ್ರವೇಶ ಮಾಡಿ, ಅದರ ಫಲವಾಗಿ ಎರಡೂ ಶಿಸ್ತುಗಳ ನಡುವೆ ಇರುವ ಅಂತರ್ಸಬಂಧ, ಹಾಗೂ ಸಾಹಿತ್ಯ ಸಂಗೀತಗಳ ಸಾಮರಸ್ಯದ ಅನಾವರಣ ಲೇಖಕಿಯಿಂದ ಸಾಧ್ಯವಾಗಿರುವುದಕ್ಕೆ ಅಭಿನಂದನೆಗಳು.

    ಅಧ್ಯಾಯಗಳ ಕೊನೆಗೆ ಕೊಟ್ಟ ಅಡಿ ಟಿಪ್ಪಣಿಗಳು ಮತ್ತು ಆಕರ ಗ್ರಂಥಗಳು ಅವರ ಅಧ್ಯಯನ ಶೀಲತೆಗೆ ಸಾಕ್ಷಿ. ಅವುಗಳಲ್ಲಿ ಆದಿಪುರಾಣದ ಉಲ್ಲೇಖ ಬಿಟ್ಟು ಹೋಗಿದೆ. ಅನುಬಂಧದಲ್ಲಿ ಸಂಗೀತ ವಾದ್ಯಗಳ ಚಿತ್ರಗಳ ಸೇರ್ಪಡೆಯಾಗಿರುವುದು ಪುಸ್ತಕಕ್ಕೆ ಮೆರುಗು ತಂದಿದೆ. ಇದನ್ನು ಪ್ರಕಟಿಸಿದ ಗೆಳೆಯರಾದ ವಿದ್ಯಾಧರ ಮುತಾಲಿಕ್ ದೇಸಾಯಿರವರಿಗೆ , ಪುಸ್ತಕ ಕೊಟ್ಟ ನನ್ನ ಇನ್ನೊಬ್ಬ ಶಿಷ್ಯೆ ಸುಮಾಧ್ವಾರಕಾನಾಥ ಅವರಿಗೆ ವ0ದನೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW