ನಾನು ಬಿಎಸ್ಸಿ ಎರಡನೆಯ ವರ್ಷದಲ್ಲಿ ಓದುತ್ತಿದ್ದಾಗ ನನ್ನ ತಾಯಿಗೆ ಮಾರಣಾಂತಿಕ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಮಕ್ಕಳಿಗಾಗಿ ನಾನು ಗುಣವಾಗಬೇಕು ಅನ್ನೋ ಕಾರಣಕ್ಕೆ ನನ್ನ ತಾಯಿ ಯಾರೇ ಏನೇ ಔಷಧಿ ಹೇಳಿದರು ಅವಳು ತಗೆದುಕೊಳ್ಳುತ್ತಿದ್ದಳು. ಅರವಿಂದ ಕುಲಕರ್ಣಿ ಅವರ ತಾಯಿ ಕುರಿತಾದ ಭಾವುಕ ಬರಹವನ್ನು ತಪ್ಪದೆ ಮುಂದೆ ಓದಿ…
ನನ್ನ ತಾಯಿ ತಾಯಿ ದೊಡ್ಡವಳು. ಪ್ರತಿಯೊಬ್ಬ ತಾಯಿಯೂ ಶ್ರೇಷ್ಠಳು. ಅವಳು ಯಾವಾಗಲೂ ಕರುಣಾಮಯಿ ಮತ್ತು ವಾತ್ಸಲ್ಯ ಮೂರ್ತಿ ಆಗಿರುತ್ತಾಳೆ. “ಮಾತೃ ದೇವೋ ಭವ ”
ಇದು ಒಂದು ಶ್ರೇಷ್ಟ ಉಕ್ತಿ. ತಾಯಿ ಮೊದಲ ಗುರು. ಮೂಲಾಕ್ಷರ ಕಲಿಸಿದಾಕೆ. ಅವಳು ಸದಾ ಕಾಲ ತನ್ನ ಮಕ್ಕಳ ಅಭಿವೃದ್ಧಿಯನ್ನ ಬಯಸುತ್ತಾಳೆ. ನನ್ನ ತಾಯಿಯ ಬಗ್ಗೆ ಬರೆಯಬೇಕು ಎಂದರೆ ಮನಸ್ಸು ತುಂಬಿ ಬರುತ್ತದೆ. ಗೌರ ವರ್ಣದ ಸಣ್ಣ ಮಾಟದ ಸದಾ ಟೋಪು ಸೆರಗಿನ ಇಳಕಲ್ ಸೀರೆ ಉಟ್ಟುಕೊಂಡಿರುವ ಹಸನ್ಮುಖಿ ಗೃಹಿಣಿ. ನೋಡಿದರೆ ಯಾರಿಗಾದರೂ ಭಕ್ತಿ ಬರುವಂತಹ ವ್ಯಕ್ತಿತ್ವ.
ಅವಳ ಬಗ್ಗೆ ಒಂದು ಹೃದಯ ಸ್ಪರ್ಶಿ ಪ್ರಸಂಗ ನೆನಪಾಗುತ್ತದೆ. ನನ್ನ ಬಾಲ್ಯದಲ್ಲಿ ನಿಮಗೆಲ್ಲ ತಿಳಿದಿರುವಂತೆ ಎಲ್ಲರೂ ವಣಕಟ್ಟಿಗೆಯನ್ನು ಅಡುಗೆ ಮಾಡಲು ಬಳಸುತ್ತಿದ್ದರು. ಸ್ಟವ್ ಇಲ್ಲ ಗ್ಯಾಸ್ ಇಲ್ಲ. ಹತ್ತಿರದ ಹಳ್ಳಿಗಳಿಂದ ಕೆಲವು ಬಡ ಹೆಣ್ಣುಮಕ್ಕಳು ಮತ್ತು ಗಂಡಸರು ಮರ ಕಡಿಯುವವರು ಕಾಡಿನಿಂದ ಕಟ್ಟಿಗೆ ಹೊರೆ ತರುತ್ತಿದ್ದರು ಮತ್ತು ಅವರು ನಮ್ಮ ಹಳ್ಳಿಯಲ್ಲಿ ಮಾರಾಟ ಮಾಡುತ್ತ ಇದ್ದರು.
ಅವರು ಮಧ್ಯಾಹ್ನದ ಸಮಯದಲ್ಲಿ ತಮ್ಮ ತಲೆಯ ಮೇಲೆ ಭಾರವಾದ ಕಟ್ಟಿಗೆ ಹೊರೆ ಹೊತ್ತು ತರುತ್ತಿದ್ದರು. ಬೇಸಿಗೆಯಲ್ಲಿ ಇದು ತುಂಬಾ ಬಿಸಿಯಾಗಿರುತ್ತದೆ. ನಮ್ಮದು ಬಯಲು ನಾಡು. ವಣಕಲ್ಲಿನ ಗುಡ್ಡದ ಮೇಲಿಂದ ಬರಬೇಕು. ಇದು ತುಂಬಾ ಕಷ್ಟದ ಕೆಲಸ ಆ ದಿವಸ ಗಳಲ್ಲಿ ಆ ಹೊರೆಯ ಬೆಲೆ ರೂ 2 ಅಥವಾ 3 ರೂ. ಅವರು ನಮ್ಮ ಮನೆಯ ಮುಂದೆ ಬರುತ್ತಾರೆ.
ಅಭ್ಯಾಸ ದಂತೆ ಕಟ್ಟಿಗೆ ಹೊರೆಯವರು ಬೆಲೆಯನ್ನು ಹೇಳುತ್ತಿದ್ದರು. ಶಿವಪ್ಪ ಅಂತಾ ನಮ್ಮಮನೆಯಲ್ಲಿ ಒಬ್ಬ ವಕ್ಕಲುತನದ ಕೆಲಸಗಾರನು ಇದ್ದನು. ನಮ್ಮ ತಾಯಿಯವರು ಮನೆಯಲ್ಲಿ ಕಟ್ಟಿಗೆ ಇಲ್ಲ .” ಯಾರಾದರೂ ಕಟ್ಟಿಗೆ ಹೊರೆಯವರು ಬಂದರೆ ನೋಡು “ಎಂದು ನಮ್ಮ ಶಿವಪ್ಪ ನಿಗೆ ಹೇಳಿದರು. ಆ ಪ್ರಕಾರ ಶಿವಪ್ಪ ಕಟ್ಟಿಗೆ ಹೊರೆ ಪ್ರತಿಕ್ಷೆ ಮಾಡುತ್ತ ಮನೆಯ ಮುಂದೆ ಕಾಯುತ್ತಿದ್ದ. ಅಷ್ಟು ಹೊತ್ತಿಗೆ ಕಟ್ಟಿಗೆ ಹೊರೆ ಹೊತ್ತುಕೊಂಡು ಸುಮಾರು ಏಳೆಂಟು ಜನ ಹೆಣ್ಣಮಕ್ಕಳು ಬಂದರು.
ಶಿವಪ್ಪನು ಕಟ್ಟಿಗೆ ಹೊರೆ ಬೆಲೆಯನ್ನು ಮಾತುಕತೆ ನಡೆಸ ಹತ್ತಿದ್ದನು. ಅವರು ಸಾಮಾನ್ಯವಾಗಿ ಬೆಲೆ ಹೊಂದಿದರೆ ಹೊರೆ ಇಳಿಸಿ ಹಣ ಪಡೆದು ಹೋಗುತ್ತಾರೆ. ಅಷ್ಟು ಹೊತ್ತಿಗೆ ನನ್ನ ತಾಯಿ ಮನೆಯೊಳಗಿಂದ ಬಂದು ನೋಡಿದಳು. ಮಧ್ಯಾಹ್ನ ಬಿಸಿಲು, ಕಾಲು ಸುಡುತ್ತಿವೆ, ತಲೆಯ ಮೇಲೆ ಭಾರವಾದ ಕಟ್ಟಿಗೆ ಹೊರೆ ಹೊತ್ತುಕೊಂಡು ಹೆಣ್ಣುಮಕ್ಕಳು ನಿಂತಿದ್ದಾರೆ. ಮತ್ತು ವ್ಯವಹಾರ ಕುದುರಿಸುತ್ತಿದ್ದಾರೆ.
ಅವಳು ಶಿವಪ್ಪನಿಗೆ ಹೇಳಿದಳು, “ಮಾತುಕತೆ ಬೇಡ, ಮೊದಲು ತಮ್ಮ ತಲೆಯ ಮೇಲಿನ ಕಟ್ಟಿಗೆ ಹೊರೆ ನೆಲದ ಮೇಲೆ ಇರಿಸಲು ಹೇಳು” ಎಂದು ಹೇಳಿದಳು. ಅವರಿಗೆ ನೀರು ಮತ್ತು ಬೆಲ್ಲವನ್ನು ಕೊಟ್ಟಳು. ಮತ್ತು ರೊಟ್ಟಿ ಪಲ್ಯ ತೆಗೆದುಕೊಳ್ಳಿ . ಮಧ್ಯಾಹ್ನ ಆಗಿದೆ, ನಿಮಗೆ ಹಸಿವೆ ಆಗಿರಬಹುದು. ಇದು ಅವಳ ಮಾತೃ ಹೃದಯ. ಅವರ ಕೋರಿಕೆಯಂತೆ ಅವರ ಹಣವನ್ನು ಕೊಟ್ಟು ಮತ್ತೆ ಬೇಕಾದರೆ ಹೇಳುತ್ತೇನೆ ಅಂತಾ ಹೇಳಿ ಕಳಿಸಿದಳು.
ಅವಳು ಅವರ ಕಡೆಗೆ ಅನುಕಂಪ ತೋರಿಸಿದಳು. ಮತ್ತು ನನಗೆ ಹೇಳಿದಳು. ಸುಡು ಬಿಸಿಲಿನ ಮಧ್ಯಾಹ್ನದ ಸಮಯದಲ್ಲಿ ಅವರ ಸಮಸ್ಯೆಯನ್ನು ನೋಡಿ ಅವರ ಸ್ಥಾನದಲ್ಲಿ ನಾವು ನಿಂತು ನೋಡಬೇಕು ( it is empathy) ದೇವರ ದಯೆಯಿಂದ ನಾವು ಚೆನ್ನಾಗಿದ್ದೇವೆ. ಆ ದಯಾಘನನೀಗೆ ನಾವು ಕೃತಜ್ಞತೆ ಸಲ್ಲಿಸಬೇಕು. ಇದು ಅವಳ ದೃಷ್ಠಿ ಯಾಗಿತ್ತು.
ಆ ಬಡ ಹೆಣ್ಣುಮಕ್ಕಳು ಕೊನೆಯ ವರೆಗೂ ನಮ್ಮ ತಾಯಿ ಯವರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದರು. ಅವಳ ನಡೆ ನನಗೆ ತುಂಬಾ ಆಳವಾದ ಪ್ರಭಾವ ಬೀರಿತು.
ನನ್ನ ಪ್ರಾಥಮಿಕ ಶಾಲಾ ಶಿಕ್ಷಣ ನಮ್ಮ ಹಳ್ಳಿಯಲ್ಲಿಯೇ ಆಯಿತು. ಆದರೆ ಹೈಸ್ಕೂಲ್ ನಮ್ಮ ಊರಿನಲ್ಲಿ ಇರಲಿಲ್ಲ. ಹೀಗಾಗಿ ನಾನು ರಾಮದುರ್ಗಕ್ಕೆ ಹೋಗಬೇಕಾಯಿತು. ನನಗೂ ಬೇರೆ ಊರಿಗೆ ಹೊಗುವುದು ಬಹಳ ಆಸಕ್ತಿ. ಅವಳಿಗೆ ಬೇರೆ ಊರಿಗೆ ಕಳಿಸುವ ಆತಂಕ. ಅನಿವಾರ್ಯ ಕಳಿಸಲೆ ಬೇಕು. ಬಸ್ ಸ್ಟಾಂಡ್ ವರೆಗೆ ಬಂದಿದ್ದಳು.ಕಣ್ಣಾಲಿ ನೀರು ತುಂಬಿದ್ದವು
ಆದರೆ ತೋರಿಸುವ ಹಾಗಿಲ್ಲ. ಅವಳಿಗೆ ನನ್ನ ಊಟ ತಿಂಡಿ ಬಗ್ಗೆ ಕಾಳಜಿ. ಅದಕ್ಕಾಗಿ ಅವಳ ಆತಂಕ ಭರಿತ ಸೂಚನೆಗಳು “ಒ” ಮಾಡ್ತೀನಿ ಬಿಡ ಅವ್ವಾ ಯಾಕ ಚಿಂತಿ ಮಾಡತಿ” ಹೋಗಿ ಒಂದು ವಾರ ಆಗಿತ್ತು ಹೊಸ ಪರಿಸರ ಹೊಸ ಪುಸ್ತಕ ಹೊಸ ಶಾಲೆ ಹೊಸ ಸಹಪಾಠಿಗಳು.
ಖಾನಾವಳಿ ಊಟ. ಒಂದು ವಾರದ ನಂತರ ಅವ್ವ ಒಮ್ಮೆಲೆ ನೆನಪಿಗೆ ಬಂದಳು. ನನ್ನನ್ನು ಬಸ್ ಸ್ಟಾಂಡ್ ಗೆ ಬಂದು ಕಳಿಸುವಾಗ ಕಂಡ ಮುಖ ಪದೇ ಪದೇ ನೆನಪಿಗೆ ಬರಹತ್ತಿತು. ದು:ಖ ಉಮ್ಮಳಿಸಿ ಬರಹತ್ತಿತ್ತು. ಅಳು ನಿಲ್ಲವಲ್ತು. ಅಪ್ರಯತ್ನವಾಗಿ ಅಳು ಬರುತ್ತಿದೆ. ಎಂಟನೆಯ ಕ್ಲಾಸಿನಲ್ಲಿ ಕಲಿಯುವ ಹುಡುಗ ನಾನು. ಆದಷ್ಟು ದೊಡ್ಡ ಹುಡುಗ, ಅಳಬಾರದು ಎಂದು ಗೊತ್ತಿದೆ. ಆದರೆ ನನ್ನ ನಿಯಂತ್ರಣದಲ್ಲಿ ಇಲ್ಲ. ಸಹಪಾಠಿ ನಾರಾಯಣ ” ನಿನಗೆ ಅವ್ವನ ನೆನಪಾಗಿದೆ.
ಊರಿಗೆ ಹೋಗಿ ಬರೋಣ ನಡಿ “. ನನಗೂ ಅಷ್ಟೇ ಸಾಕಾಗಿತ್ತು. ಇಬ್ಬರೂ ಕೂಡಿ ಊರಿಗೆ ಹೋಗಿ ಅವ್ವನನ್ನು ಭೆಟ್ಟಿ ಯಾದಾಗ ಸಮಾಧಾನ “ಏ ಹುಚ್ಚಾ ಓದಿನ ಕಡೆ ಲಕ್ಷ ಹಾಕು ಮತ್ತ ಗಣೇಶನ ಹಬ್ಬಕ್ಕ ಬರುವಂತೆ ಹೋಗು ” ಎಂದು ಹುರುಪು ಹಾಕಿ ಕಳಿಸಿದವಳು ನನ್ನಮ್ಮ. ನಾನು ಒಳ್ಳೆ ಅಂಕ ಪಡೆದು SSLC ಮುಗಿಸಿ ಊರಿಗೆ ಬಂದಾಗ ಅವಳ ಹರ್ಷ ಹೆಳತೀರದು .
ಸಂಬಂಧಿಗಳಿಗೆ , ಪರಿಚಯಸ್ಥರಿಗೆ ” ನನ್ನ ಮಗ ಫಸ್ಟ್ ಕ್ಲಾಸ್ ನಲ್ಲಿ ಪಾಸಾಗಿದ್ದಾನೆ “ಎಂದು ಹೇಳಿದ್ದೆ ಹೇಳಿದ್ದು. ಅಷ್ಟೊಂದು ಸಂಭ್ರಮ. ಮುಂದೆ ನಾನು ನನ್ನ ಕಾಲೇಜು ಶಿಕ್ಷಣಕ್ಕಾಗಿ ಧಾರವಾಡಕ್ಕೆ ಹೋದೆ.
ಆ ಸಮಯದಲ್ಲಿ ನಾನು ಆಗೊಮ್ಮೆ ಈಗೊಮ್ಮೆ ನನ್ನ ಹಳ್ಳಿಗೆ ಭೇಟಿ ನೀಡುತ್ತೇನೆ ಮತ್ತು ನನ್ನ ತಾಯಿಯನ್ನು ಭೇಟಿಯಾಗುತ್ತೇನೆ. ಅವಳು ಯಾವಾಗಲೂ ನನ್ನನ್ನು ಪ್ರೀತಿಸುತ್ತಾಳೆ ಮತ್ತು ನಿನ್ನ ಅಧ್ಯಯನ ಮುಂದುವರೆಸು ಸಮಯವನ್ನು ವ್ಯರ್ಥ ಮಾಡಬೇಡ ಎಂದು ಹೇಳುತ್ತಾಳೆ. ನಾನು ಬಿಎಸ್ಸಿ 2 ಓದುತ್ತಿದ್ದಾಗ ಆಕೆಗೆ ಮಾರಣಾಂತಿಕ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅವಳು ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಳು. ಅವಳ ನೋವಿನಲ್ಲೂ ಅವಳು ಸಂತೋಷದಿಂದ ಕೆಲಸ ಮಾಡುತ್ತಿದ್ದಳು. ಮತ್ತು ಇತರರಿಗೆ ತೋರಿಸಿಕೊಳ್ಳುತ್ತಿದ್ದಿಲ್ಲ.
ನನ್ನ ಬಿ ಎಸ್ಸಿ ಪರೀಕ್ಷೆಯನ್ನು ಮುಗಿಸಿದ ನಂತರ, ನಾನು ಹಳ್ಳಿಗೆ ಬಂದೆ. ನಾನು ಫಲಿತಾಂಶಕ್ಕಾಗಿ ಕಾಯುತ್ತಿದ್ದೆ. ಒಂದು ದಿನ ಫಲಿತಾಂಶ ಬಂದಿತು. ಆ ಸಮಯದಲ್ಲಿ ಫಲಿತಾಂಶ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರಲಿಲ್ಲ. ಕಾಲೇಜಿಗೆ ಭೇಟಿ ನೀಡಿ ಫಲಿತಾಂಶ ಪಡೆಯಬೇಕು. ಹಾಗಾಗಿ ಫಲಿತಾಂಶ ತಿಳಿಯಲು ಧಾರವಾಡಕ್ಕೆ ಹೋಗಬೇಕೆಂದು ಅಮ್ಮನಿಗೆ ಹೇಳಿದೆ. ನನ್ನ ತಾಯಿ ನೀನು ಹೋಗಬೇಡ, ನಾನು ಆ ಕೆಲಸಕ್ಕೆ ಯಾರನ್ನಾದರೂ ಕಳುಹಿಸುತ್ತೇನೆ ಎಂದು ಹೇಳಿದರು. ಎಲ್ಲಿಯಾದರೂ ಫಲಿತಾಂಶ ವ್ಯತಿರಿಕ್ತ ಆದರೆ ಅನ್ನುವ ಆತಂಕ
ಅವಳಿಗೆ ಅವಳು ಸ್ವಲ್ಪ ಹಣವನ್ನು ಕೊಟ್ಟು ನನ್ನ ಗೆಳೆಯ ಮತ್ತು ಸಹಪಾಠಿ ಗೋವಿಂದಪ್ಪನನ್ನು ಕಳುಹಿಸಿದಳು.
“ನನ್ನ ಮಗ ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತಾನೆ ಎಂದು ನನಗೆ ಖಾತ್ರಿ ಇದೆ”.
“ಆದ್ದರಿಂದ ಬರುವಾಗ ಧಾರವಾಡ ಫೇಡೆ ತೆಗೆದುಕೊಂಡು ಬಾ” ಎಂದು ಅವಳು ಅವನಿಗೆ ಮೊದಲೇ ಗುಟ್ಟಾಗಿ ಹೇಳಿದ್ದಳು. ನಿರೀಕ್ಷಿತವಾಗಿ ನಾನು ಪಾಸಗಿದ್ದೆ.!! ಓಣಿಯ ಮಂದಿಗೆ ತಾನೇ ಸ್ವತಃ ಹೋಗಿ ತನ್ನ ಅರ್ಬುದ ರೋಗದ ಅಪಾರ ನೋವು ಮರೆತು “ನನ್ನ ಮಗ ಪದವೀಧರ ಆಗಿದ್ದಾನೆ” ಎಂದು ಹೇಳಿ ಎಲ್ಲರಿಗೂ ಪೇಡೆ ಕೊಟ್ಟು ಸಂಭ್ರಮಿಸಿದಳು. ನಂತರದ ದಿನಗಳಲ್ಲಿ ಅವಳ ದೇಹದಲ್ಲಿ ಪಸರಿಸಿದ್ದ ಕ್ಯಾನ್ಸರ್ ರೋಗ ತನ್ನ ಪ್ರಭಾವ ಬಿರತೊಡಗಿತ್ತು.
1975 ರಲ್ಲಿ, ಕೆಲವು ತಿಂಗಳಿನ ನಂತರ ಆ ಕ್ರೂರ ರೋಗಕ್ಕೆ ಅವಳ ಭೌತಿಕ ದೇಹವನ್ನು ತೆಗೆದುಕೊಂಡ ಹೋಗಲು ಮಾತ್ರ ಸಾಧ್ಯವಾಯಿತು. ಅವಳು ಬಿಟ್ಟು ಹೋದ ಜೀವನ ಮೌಲ್ಯ , ಕಾರುಣ್ಯ, ವಾತ್ಸಲ್ಯ, ಸರ್ವರಲ್ಲಿ ಪ್ರೇಮ ಇವು ನಮ್ಮಲ್ಲಿ ಅನುಗಾಲ ಉಳಿದವು. ನಾವು ಎಲ್ಲ ಸಹೋದರ ಸಹೋದರಿಯರು ಯಾವಾಗಲೂ ಅವಳಲ್ಲಿ ಸೂರ್ಯನ ಬಿಸಿಲು ಕಾಣಲೇ ಇಲ್ಲ ಏನಿದ್ದರೂ ಚಂದ್ರನ ಶೀತಲತೆಯನ್ನೇ ಕಂಡೆವು.
ಪೂಜ್ಯರಾದ ತಾಯಿ ತಂದೆ ನಮ್ಮ ಬಾಲ್ಯದಲ್ಲಿ ನಮ್ಮ ಅನೇಕ ದೈಹಿಕ ಮತ್ತು ಮಾನಸಿಕ ಕಷ್ಮಲ ದೂರ ಮಾಡಿ ನಮ್ಮನ್ನು ಒಬ್ಬ ಒಳ್ಳೆ ಮನುಷ್ಯರನ್ನಾಗಿ ಮಾಡಿದ. ಅವರ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ವೃದ್ದಾಪ್ಯದಲ್ಲಿ ಅವರ ಸೇವೆ ಮಾಡುವ ಅವಕಾಶ ದೊರೆಯುವದು ಪುಣ್ಯವಂತರಿಗೆ ಮಾತ್ರ. ಅವಕಾಶ ಇದ್ದವರು ಇದನ್ನು ಅರಿಯಬೇಕು.
- ಅರವಿಂದ ಕುಲಕರ್ಣಿ