‘ವಾತ್ಸಲ್ಯಧಾಮ’ ಆಶ್ರಮಕ್ಕೆ ಯಾರಾದರೂ ಬಂದರೆ ಪ್ರೀತಿ ತೋರುವ ಮುಧೋಳದ ಹಿರಿಯ ಜೀವ ತೊಂಭತ್ತಾರು ವರ್ಷದ ಮೀರತಾಯಿ ಕೊಪ್ಪಿಕರ್. ಅವರಿಗೆ ೨೦೨೦ ನೇ ಇಸವಿಯ ಗಾಂಧಿ ಸೇವಾ ಪ್ರಶಸ್ತಿ ಸಂದಿರುವುದು ನಮ್ಮ ಹೆಮ್ಮೆ. ಮೀರಕ್ಕನ ಕುರಿತು ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ ಸಾಹಿತಿ ಸಂತೋಷ ಕೌಲಗಿ ಅವರು, ಮುಂದೆ ಓದಿ…
೨೦೨೦ ನೇ ಇಸವಿಯ ಗಾಂಧಿ ಸೇವಾ ಪ್ರಶಸ್ತಿಯನ್ನು ಮುಧೋಳದಲ್ಲಿರುವ ಹಿರಿಯ ಜೀವ ತೊಂಭತ್ತಾರು ವರ್ಷದ ಮೀರಕ್ಕ ಅವರಿಗೆ ಕರ್ನಾಟಕ ಸರ್ಕಾರ ನೀಡಿದೆ. ಆದರೆ ಬಹಳ ಜನಕ್ಕೆ ಈ ಮೀರಕ್ಕ ಯಾರು ಎಂಬುದು ಗೊತ್ತಿಲ್ಲ. ಯಾವ ಪತ್ರಿಕೆಯಲ್ಲೂ ಅವರ ಬಗ್ಗೆ ಎರಡು ಸಾಲಿಗಿಂತ ಹೆಚ್ಚಿನ ಮಾಹಿತಿ ಇಲ್ಲ. ಹಾಗಾಗಿ ಅವರ ಬಗ್ಗೆ ಒಂದಿಷ್ಟು ಬರೆಯಬೇಕಾದ ಅನಿವಾರ್ಯತೆ ನನಗೆ ಉಂಟಾಗಿದೆ.
ಮೀರತಾಯಿ ಕೊಪ್ಪಿಕರ್ ಮೂಲತಃ ಧಾರವಾಡದವರು, ಬಹುಶಃ ಅವರು ೧೯೨೪/೨೫ ರಲ್ಲಿ ಹುಟ್ಟಿರಬೇಕು. ಕೊಪ್ಪಿಕರ್ ಒಂದು ಅನುಕೂಲಸ್ಥ ಕುಟುಂಬ. ಯುವತಿಯಾಗಿದ್ದಾಗಲೇ ವಿನೋಬಾ ಭಾವೆಯವರ ಭೂದಾನ ಚಳುವಳಿಯಿಂದ ಪ್ರೇರಿತರಾಗಿ ಭೂದಾನ ಪಾದಯಾತ್ರೆಯನ್ನು ಸೇರಿದರು. ದೇಶದ ಉದ್ದಗಲಕ್ಕೂ ವಿನೋಬಾ ಅವರೊಂದಿಗೆ ಹೆಜ್ಜೆ ಹಾಕಿದರು. ಅವರೊಂದಿಗಿದ್ದ ಇನ್ನೂ ಮೂರು ಕನ್ನಡದ ಮಹಿಳೆಯರನ್ನು ನಾನು ಬಲ್ಲೆ. ಅವರು ಮಹದೇವತಾಯಿ, ಚನ್ನಮ್ಮ ಹಳ್ಳಿಕೇರಿ ಮತ್ತು ಲಕ್ಷ್ಮಿ ಅವರು.

ಫೋಟೋ ಕೃಪೆ : public tv
ವಿನೋಬಾ ಅವರು ೧೯೫೯ ರಲ್ಲಿ ವಾರ್ಧಾ ಬಳಿಯ ಪವನಾರ್ ನದಿಯ ಬಳಿ ‘ಬ್ರಹ್ಮ ವಿದ್ಯಾಮಂದಿರ’ವನ್ನು ಸ್ಥಾಪಿಸಿದರು. ಆರೇಳು ವರ್ಷ ಅಲ್ಲಿದ್ದ ಮೀರಕ್ಕನಿಗೆ ಅದೇಕೋ ಅಲ್ಲಿಯ ವಾತಾವರಣ ಸರಿ ಬರಲಿಲ್ಲ. ವಿನೋಬಾ ಅವರ ಮಾತನ್ನು ಸಮ್ಮತಿಸಿ, ಒಂದು ದಿನ ಅವರಿಗೆ ಹೇಳದೆ ( ೧೯೬೫?) ಹೊರ ನಡೆದು ಬಿಟ್ಟರು.
ಮುಂಡಗೋಡ ಬಳಿ ಕುಸಾಯಿ ಎಂಬಲ್ಲಿ ನೆಲಸುವ ಪ್ರಯತ್ನ ಮಾಡಿದರು. ಅಲ್ಲಿ ಆಗಲಿಲ್ಲ. ನಂತರ ಬೆಂಗಳೂರಿಗೆ ಬಂದು ವಿಶ್ವನೀಡಂ ಮತ್ತು ವಲ್ಲಭನಿಕೇತನದಲ್ಲಿ ನೆಲಸುವ ಪ್ರಯತ್ನ ನಡೆಸಿದರು. ಆದರೆ ಅದು ಅವರಿಗೆ ಒಗ್ಗಲಿಲ್ಲ. ಆಗಲೇ ಅವರಿಗೆ ಸೇವಾ ನಂದಜೀ ಅವರ ಪರಿಚಯ ಆಗಿತ್ತು. ಎಲ್ಲಾದರೂ ಒಂದೆಡೆ ಒಂದು ಸಣ್ಣ ಜಾಗ ಕೊಂಡು ಸಮಾನ ಮನಸ್ಕರೊಂದಿಗೆ ಆಶ್ರಮವೊಂದನ್ನು ಕಟ್ಟುವ ಕನಸು ಅವರದಾಗಿತ್ತು. ಜಮಖಂಡಿಯ ಕಡೆಗೆ ಅವರ ಮನಸ್ಸು ಓಡಿತು. ಏಕೆಂದರೆ ಜಮಖಂಡಿ ವಿನೋಬಾ ಅವರ ತಾಯಿಯ ಮನೆ. ಆದರೆ ಅಲ್ಲಿಯೂ ಅವರಿಗೆ ಜಾಗ ಸಿಗಲಿಲ್ಲ. ಅವರೇ ಹೇಳಿದಂತೆ ಅಲ್ಲಿನ ನೀರಿನ ಋಣ ಇರಲಿಲ್ಲ. ಕಡೆಗೆ ಅವರಿಗೆ ಲಭಿಸಿದ್ದು ಮುಧೋಳದ ನೀರು ಮಣ್ಣು.
೧೯೮೩ ರಲ್ಲಿ ಮುಧೋಳದಲ್ಲಿ ’ವಾತ್ಸಲ್ಯ ಧಾಮ” ಆಶ್ರಮವನ್ನು ಸ್ಥಾಪಿಸಿದರು. ಸೇವಾನಂದಜೀ, ಮೀರಕ್ಕ, ನಾರಾಯಣ ಭಾಯ್, ಭೂಮಾ ಕಾಕಾ ಮತ್ತು ರಮೇಶ ಭಾಯಿ ಆಶ್ರಮವಾಸಿಗಳಾದರು. ವಿನೋಬಾ ಅವರ ಸಹೋದರ ಶಿವಾಜಿ ಭಾವೆ ಆಶ್ರಮವನ್ನು ಉದ್ಘಾಟಿಸಿದರು. ಆಶ್ರಮ ಕಟ್ಟಲು ಮುಧೋಳದ ಸರ್ವೋದಯ ಕಾರ್ಯಕರ್ತ ಶಂಕರ ಉತ್ತೂರ್ ಮತ್ತು ಕುಟುಂಬ ಬಹುವಾಗಿ ಶ್ರಮಿಸಿತು.

ಮೀರಕ್ಕನ ಮುಧೋಳದ ವಾತ್ಸಲ್ಯ ಧಾಮ (ಫೋಟೋ ಕೃಪೆ : santosh badiger)
ಹೊಸ ಪೀಳಿಗೆಗೆ ಆಶ್ರಮ ಎಂದ ಕೂಡಲೆ ಬೆಂಗಳೂರಿನ ಕನಕಪುರ ರಸ್ತೆಯ ಆಶ್ರಮಗಳೋ, ಬಿಡದಿ ಆಶ್ರಮವೋ, ಇಲ್ಲವೇ ಇವನ್ನು ಮೀರಿದ ಕೊಯಮತ್ತೂರಿನ ಆಶ್ರಮವೋ ನೆನಪಿಗೆ ಬರಬಹುದು.
ಆದರೆ ಮುಧೋಳದ ವಾತ್ಸಲ್ಯ ಧಾಮ ಅಸಲಿ ಶ್ರಮ ಜೀವಿಗಳ ಆಶ್ರಮ. ಗಾಂಧಿಯವರ ಏಕಾದಶ ವೃತಗಳನ್ನು ಅನುಷ್ಠಾನಕ್ಕೆ ತಂದ ಆಶ್ರಮ. ( ನಮ್ಮ ಆಧುನಿಕ ಆಶ್ರಮಗಳು ಏಕಾದಶ ವೃತಗಳನ್ನು ತೂರಿ ಬೆಳೆದ ಆಶ್ರಮಗಳು) ಆಶ್ರಮದ ಭೂಮಿ ಎರಡೂವರೆ ಎಕರೆ. ಅಲ್ಲಿ ವಾಸಿಸಲು ಒಂದರೆಡು ಸರಳ ಮನೆಗಳು. ಒಂದು ಸಣ್ಣ ಗೋ ಶಾಲೆ. ಎರಡು ಎಕರೆ ಭೂಮಿಯನ್ನು ಏಳು ತಾಕುಗಳಾಗಿ ಮಾಡಿ ಅವಕ್ಕೆ ಸಪ್ತ ಋಷಿಗಳ ಹೆಸರು. ಭತ್ತ, ಜೋಳ, ಶೇಂಗಾ, ವಿವಿಧ ಕಾಳುಗಳನ್ನು ಅಲ್ಲಿ ಬೆಳೆಯಲಾಗುತ್ತಿತ್ತು.
ಆಶ್ರಮದ ದಿನಚರಿ ಬೆಳಿಗ್ಗೆ ೪.೩೦ ಕ್ಕೆ ಪ್ರಾರಂಭ. ಗೀತೆಯನ್ನು ಪಠಿಸುತ್ತಾ ಗೋ ಸೇವೆ, ನಂತೆ ಅಡಿಗೆ ಮನೆಯ ಕೆಲಸ, ಉಪಹಾರ ನಂತರ ಹೊಲಕ್ಕೆ ಹೋದರೆ ಮಧ್ಯಾಹ್ನದವರೆಗೆ ದುಡಿತ, ಉಪ್ಪು ಖಾರವಿಲ್ಲದ ತಾವೇ ಬೆಳೆದ ಧಾನ್ಯಗಳ ಸಾದಾ ಊಟ, ಸ್ವಲ್ಪ ವಿರಾಮ, ನೂಲುಗಾರಿಕೆ, ಪ್ರಾರ್ಥನೆ, ಗೋಸೇವೆ, ೭ ಗಂಟೆಗೆ ದಿನದ ಚಟುವಟಿಕೆಗಳಉ ಮುಕ್ತಾಯ. ಹೀಗೆ ಇಡೀ ದಿನ ಕೆಲಸವೋ ಕೆಲಸ. ಪೂರ್ಣ ಪ್ರಮಾಣದ ಶ್ರಮಾಧಾರಿತ,ಆಧ್ಯಾತ್ಮ ಚಿಂತನೆಯ ಬದುಕು. ವಾತ್ಸಲ್ಯಧಾಮದಲ್ಲಿ ಸಾವಯವ ಕೃಷಿ. ಆಶ್ರಮವಾಸಿಗಳೆಲ್ಲರೂ ಅಸಂಗ್ರಹ ವೃತ ನಿಷ್ಠರು. ಹಾಗಾಗಿ ವರ್ಷದಲ್ಲಿ ಹೆಚ್ಚು ಬೆಳೆದದ್ದನ್ನು ಮುಂದಿನ ವರ್ಷಕ್ಕೆಂದು ಇಟ್ಟುಕೊಳ್ಳುತ್ತಿರಲಿಲ್ಲ. ಅಕ್ಕ ಪಕ್ಕದ ಬಡವರಿಗೆ ಹಂಚಿ ಬಿಡುತ್ತಿದ್ದರು. ತಮ್ಮ ಬಟ್ಟೆಗೆ ಬೇಕಾದಷ್ಟು ನೂಲನ್ನು ಅವರೇ ನೂಲುತ್ತಿದ್ದರು.

ಫೋಟೋ ಕೃಪೆ : vijaya karnataka
ಹೀಗೆ ೩೮ ವರ್ಷ ಕಳೆಯಿತು. ಸೇವಾನಂದಜೀ ೨೦೧೪ ರಲ್ಲಿ ದೈವಾಧೀನರಾದರು. ಭೂಮಾಕಾಕಾ ಅದಕ್ಕೆ ಮುಂಚೆಯೇ ತೀರಿ ಹೋದರು ಎಂದು ತೋರುತ್ತದೆ. ಕಾಲ ಚಕ್ರ ಉರುಳುತ್ತಿದೆ. ಇಂದು ಮೀರಕ್ಕನಿಗೆ ೯೬ ವರ್ಷ. ೧೯೮೩ರಲ್ಲಿ ’ಕ್ಷೇತ್ರ ಸನ್ಯಾಸ’ ಪಡೆದ ಮೀರಕ್ಕ ವಾತ್ಸಲ್ಯಧಾಮದಿಂದ ಹೊರಕ್ಕೆ ಕಾಲಿಟ್ಟಿಲ್ಲ. ಆಶ್ರಮಕ್ಕೆ ಯಾರಾದರೂ ಬಂದರೆ ಅವರಿಗೆ ಬಹಳ ಪ್ರೀತಿ ತೋರುತ್ತಿದ್ದ ಮೀರಕ್ಕ ದುಂಡಗಿನ ಸಣ್ಣ ಅಕ್ಷರದಲ್ಲಿ ಪೋಸ್ಟ ಕಾರ್ಡಿನಲ್ಲಿ ಪತ್ರ ಬರೆಯುತ್ತಿದ್ದರು. ಪತ್ರದ ಶೈಲಿಯಿಂದಲೇ ಅದು ಮೀರಕ್ಕನದು ಎಂದು ದೂರದಿಂದಲೇ ಗುರುತಿಸಬಹುದಿತ್ತು.
ನಿಮ್ಮೊಂದಿಗೆ ಹಂಚಿಕೊಳ್ಳಲು ಅವರ ಯಾವ ಚಿತ್ರವೂ ನನ್ನ ಬಳಿ ಇಲ್ಲ. ಆದರೆ ನನ್ನ ಸಹೋದರ ಸುಘೋಷ ನಾಲ್ಕು ವರ್ಷದ ಹಿಂದೆ ಅಂದರೆ ಮೀರಕ್ಕನಿಗೆ ೯೨ ವರ್ಷ ಆಗಿದ್ದಾಗ ಅಲ್ಲಿಗೆ ಹೋಗಿದ್ದ. ಅವರು ನೂಲುತ್ತಿದ್ದ ಒಂದು ವಿಡಿಯೋ ನನ್ನೊಂದಿಗೆ ಹಂಚಿ ಕೊಂಡಿದ್ದ. ಅದನ್ನು ಇಲ್ಲಿ ಹಂಚಿದ್ದೇನೆ. ಇದು ಅಪೂರ್ವವಾದ ವಿಡಿಯೋ.
ವಿಡಿಯೋ ಕೃಪೆ : ಸಂತೋಷ ಕೌಲಗಿ ಫೇಸ್ಬುಕ್ ಪೇಜ್
ಮೀರಕ್ಕ ಕಳೆದ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ಈಗ ಅವರೊಂದಿಗೆ ೭೦ ರ ಅಂಚಿನಲ್ಲಿರುವ ರಮೇಶ್ ಭಾಯಿ ಇದ್ದಾರೆ. ಅವರ ಸೇವೆ ಮಾಡುತ್ತಿದ್ದಾರೆ.
ಸರ್ಕಾರ ಪ್ರಶಸ್ತಿಯ ಬದಲು ಅವರ ಸೇವೆಗೆ ದಾದಿಯೊಬ್ಬರನ್ನು ನಿಯುಕ್ತಿಗೊಳಿಸಿದ್ದರೆ ಅವರಿಗೆ ಅನುಕೂಲವಾಗುತ್ತಿತ್ತು. ಅವರಿಗೆ ಪ್ರಶಸ್ತಿ ಇಂದ ಏನೂ ಆಗಬೇಕಿರಲಿಲ್ಲ. ಹೋಗಲಿ ಬಿಡಿ…ಮುಂದೆ ಗಾಂಧಿ ಪ್ರಶಸ್ತಿ ಪಡೆಯುವ ಸಾಲಿನಲ್ಲಿ ಯಾರು ಯಾರು ಇದ್ದಾರೆ ಎಂದು ನೆನೆಸಿಕೊಂಡರೆ ಭಯವಾಗುತ್ತದೆ.
ವಾತ್ಸಲ್ಯಧಾಮ , ಮೀರಕ್ಕ ಮುಂದಿನ ತಲೆಮಾರಿಗೆ ದಂತ ಕತೆಗಳು. ಅಂತಹವರೊಂದಿಗೆ ಒಡನಾಡಿದ ಕಡೆಯ ತಲೆಮಾರು ನಮ್ಮದು.
- ಸಂತೋಷ ಕೌಲಗಿ (ಬರಹಗಾರರು, ಚಿಂತಕರು) ಮೇಲಕೋಟೆ
