ಮೀನು ಹಿಡಿಯಲು ಹೋಗಿ ಹಾವು ಹಿಡಿದ ಕಥೆ



ಹಾವಿನ ತಲೆಯನ್ನು ಗಟ್ಟಿಯಾಗಿ ಹಿಡಿದಿದ್ದೆ. ಅದು ನೋವು ತಾಳಲಾರದೆ ನನ್ನ ಕೈಯನ್ನು ಸುತ್ತಿಕೊಂಡಿತ್ತು. ನನ್ನ ಬಾಲ್ಯದ ಗೆಳೆಯ ವಾಸುದೇವ ಅಲ್ಲಿಂದ ಓಡಿ ಹೋದ, ಮುಂದೆ ಲೇಖಕ ಡಾ.ಯುವರಾಜ್ ಹೆಗಡೆ ಅವರ ಕತೆ ಏನಾಯಿತು. ಮುಂದೆ ಓದಿ ಒಂದು ಹಾಸ್ಯಭರಿತ ಸಣ್ಣಕತೆ …

ಬಾಲ್ಯದ ಮರೆಯಲಾಗದ ಮಧುರ ಕ್ಷಣಗಳು ಸದಾ ಅವಿಸ್ಮರಣೀಯ. ಅದನ್ನು ನೆನೆದಷ್ಟೂ ಮುಗಿಯದ, ಸವೆಯದ ಮಧುರ ಕ್ಷಣಗಳನ್ನು ಅನುಭವಿಸಿದ ನಾವೇ ಧನ್ಯರು. ಮೂರು ದಶಕಗಳ ಹಿಂದಿನ ಬಾಲ್ಯದ ಕ್ಷಣ ಕ್ಷಣಗಳೂ ಮಸ್ತಿಷ್ಕದಲ್ಲಿ ಅಚ್ಚಳಿಯದೇ ಉಳಿದಿವೆ. ನಾವು ಪ್ರಕೃತಿಯೊಂದಿಗೆ ಬೆರೆತು ಬೆವರುತ್ತಿದ್ದೆವು .ಬಯಲಿನಲ್ಲಿ ಆಟೋಟ, ಅರಣ್ಯಗಳಲ್ಲಿ ಕಾಡು ಹಣ್ಣುಗಳ ಹುಡುಕಾಟ, ನದಿಯಲ್ಲಿ ಈಜಾಟ, ಹಳ್ಳಕೊಳ್ಳಗಳಲ್ಲಿ ಮೀನಾಟ, ದೂರದರ್ಶನದ ರಾಮಾಯಣ ಮಹಾಭಾರತ ನೋಡಿ ಗದ್ದೆ ಬಯಲಿನಲ್ಲಿ ಬಿಲ್ಲುಹಿಡಿದು ಕಾದಾಟ, ರಾತ್ರಿಯಾದರೆ ಬಯಲಾಟ.. ಹೀಗೆ ಬಾಲ್ಯವನ್ನು ಅಕ್ಷರಶಃ ಅನುಭವಿಸಿದವರು ನಾವು. ಅಂತಹ ನೆನಪಿನಲ್ಲಿ ಉಳಿದ ಹಲವಾರು ಸಂದರ್ಭಗಳಲ್ಲಿ ನನ್ನ ಬಾಲ್ಯ ಸ್ನೇಹಿತ ನಿವಣೆ ವಾಸುದೇವನ ಜೊತೆ ಮೀನು ಹಿಡಿಯಲು ತೆರಳಿದಾಗ ನಡೆದ ಘಟನೆ ಜೀವನದಲ್ಲಿ ಮರೆಯಲು ಅಸಾಧ್ಯ.

ನನ್ನಜ್ಜನ ಮನೆ ಇರುವುದು ಹೊಸನಗರ ತಾಲ್ಲೂಕಿನ ನಿವಣೆಯಲ್ಲಿ (ಸೊನಲೆ ಸಮೀಪದ ಹಳ್ಳಿ). ಬೇಸಿಗೆ ರಜೆ ಬಂತೆಂದರೆ ತಡಮಾಡದೆ ನಿವಣೆಯಲ್ಲಿ ಠಿಕಾಣಿ ಹೂಡುತ್ತಿದ್ದೆ. ಅಲ್ಲಿಯ ಪ್ರಕೃತಿ ಸೌಂದರ್ಯ ನನಗೆ ಮುದ ನೀಡುತ್ತಿತ್ತು. ಅಲ್ಲಿ ವಾಸುದೇವ ಎಂಬ ಬಾಲ್ಯ ಸ್ನೇಹಿತನಿದ್ದಾನೆ. ಆತ ಹೇಳುತ್ತಿದ್ದ ಶಿಕಾರಿ ಕಥೆಗಳು, ಕಾಡು ಪ್ರಾಣಿಗಳ ಜೀವನ ಶೈಲಿ, ಹೆಬ್ಬುಲಿಯ ವಿಶ್ಲೇಷಣೆ, ಜುಟ್ಟಿಕಾಳಿಂಗದ ಕಥೆ , ಮಳೆಗಾಲದ ಹತ್ಮೀನು ಹಿಡಿಯುವುದು, ಹಳ್ಳ ಸೋಕುವುದು. ಒಂದೇ… ಎರಡೇ, ನಾನು ಬಿಟ್ಟಕಣ್ಣಿನಿಂದ ನಿಬ್ಬೆರಗಾಗಿ ಆತನನ್ನೇ ನೋಡುತ್ತಿದ್ದೆ. ಇವೆಲ್ಲವೂ ನನ್ನ ಬಾಲ್ಯವನ್ನು ಸ್ವಲ್ಪ ಮಟ್ಟಿಗೆ ಪ್ರಭಾವಿಸಿ, ನಾನು ದನ ಮೇಯಿಸಲು ಬ್ಯಾಣಕ್ಕೆ ಹೋದಾಗ ಆತನೂ ಅಲ್ಲಿಗೆ ದನ ಹೊಡೆದು ತಂದು ಒಂದೆಡೆ ಸೇರುತ್ತಿದ್ದೆವು. ನಂತರ ಅಲ್ಲೇ ಹತ್ತಿರದ ಹಳ್ಳದಲ್ಲಿ ಏಡಿ, ಮೀನು ಹಿಡಿಯುವುದು ಕಲಿಸಿಕೊಡು ಎಂದು ದುಂಬಾಲು ಬೀಳುತ್ತಿದ್ದೆ. ಆತನಿಗೂ ದನ ಕಾಯುವ ಕೆಲಸ ಬೇಸರವೆನಿಸಿದಾಗ ನನ್ನನ್ನು ಹಳ್ಳಕ್ಕೆ ಕರೆದೊಯ್ದು ಹಳ್ಳದ ನೀರು ಸೋಕಿ ಒಂದಷ್ಟು ಜಬ್ಬು ಮೀನು ( ಚಿಕ್ಕ ಗಾತ್ರದ ಮೀನುಗಳು), ಏಡಿ ಕುಣಿಯೊಳಗೆ ಕೈ ಹಾಕಿ ಕಾರೇಡಿ ಹಿಡಿದು ಕೊಡುತ್ತಿದ್ದ ಮತ್ತು ಹಿಡಿಯುವುದು ನನಗೂ ಕಲಿಸಿ ಕೊಟ್ಟ. ಹೀಗೆ ಹಿಡಿದ ಏಡಿ ಮೀನುಗಳನ್ನು ಒಂದು ಬಕೇಟಿನಲ್ಲಿ ಹಾಕಿ ವಾರಗಟ್ಟಲೆ ಸಾಕಿ ಅವುಗಳಿಗೆ ಕೊಡಬಾರದ ಹಿಂಸೆ ಕೊಟ್ಟು ಆನಂದಿಸುವುದು ಸಾಮಾನ್ಯವಾಗಿತ್ತು.

ಲೇಖಕರು ಡಾ.ಯುವರಾಜ್ ಹೆಗಡೆ

ಸ್ವಲ್ಪ ದಿನಗಳ ವರೆಗೆ ಸಾಕಿದ ಸಣ್ಣ ಜಬ್ಬು ಮೀನುಗಳು ಸಾಯುವ ಸಂದರ್ಭದಲ್ಲಿ ಜೀವಸಂಕಟಕ್ಕೆ ಅಂಗಾತ ಈಜುವುದನ್ನು (ಅಡಿ ಮೇಲಾಗಿ) ನೋಡಿ ಒಲಂಪಿಕ್ ನಲ್ಲಿ Back Stroke Swimming ಗಾಗಿ ಅಭ್ಯಾಸ ಮಾಡುತ್ತಿವೆ ಎಂದು ಕುಹಕವಾಡುತ್ತಿದ್ದೆ. ಎಷ್ಟೋ ಭಾರಿ ಅರೆಜೀವವಾದ ಮೀನುಗಳನ್ನು ಬದುಕಿಕೋ ಹೋಗು ಎಂದು ಬಾವಿಯೊಳಗೆ ಎಸೆದ ನಂತರ ಅವು ಸತ್ತು, ಬಾವಿಯ ನೀರು ಕುಡಿಯಲು ಬಾರದಷ್ಟು ಹಾಳಾಗಿ ವಾರಗಟ್ಟಲೆ ದುರ್ವಾಸನೆ ಬೀರಿದ್ದೂ ಉಂಟು. ಆಗ ನನ್ನಜ್ಜಿ ಬಾವಿಯ ನೀರಿಗೆ ಸುಣ್ಣ, ಬ್ಲೀಚಿಂಗ್ ಪೌಡರ್ ಎರಚಿ ಶುದ್ದೀಕರಿಸುತ್ತಾ “ಹಡ್ಬೆ ಮುಂಡೆಗಂಡ ಇನ್ನೊಂದು ಸಲ ಆ ವಾಸು ಜೊತೆ ಸೇರಿದ್ರೆ ಮನೆಗೆ ಸೇರಿಸಲ್ಲ ನೋಡು” ಎಂದು ಬೈದದ್ದೂ ಇದೆ. ಆದರೆ ಇದ್ಯಾವುದಕ್ಕೂ ಜಗ್ಗದ ನಮ್ಮ ಸ್ನೇಹ ದಿನ ಹೋದಂತೆ ಮತ್ತಷ್ಟು ಗಟ್ಟಿಯಾಗಿತ್ತು. ನಮ್ಮ ಅಜ್ಜನದು ಶ್ರಿಮಂತ ಕುಟುಂಬ, ವಾಸುವಿನದ್ದು ಆಗ ಸೋಗೆ ಮನೆಯಾದರೂ ಕೃಷ್ಣ ಕುಚೇಲರ ರೀತಿ ನನಗಂತೂ ಅವರ ಮನೆಯ ಕಡುಬು ಚಟ್ನಿಯೇ ಅಚ್ಚುಮೆಚ್ಚು. ಹೇಗಾದರೂ ಮಾಡಿ ಬೆಳಗ್ಗೆ ಅಜ್ಜಿ ಗಂಗಮ್ಮನ ಕಣ್ತಪ್ಪಿಸಿ ಅವನ ಮನೆಗೆ ಹೋಗಿ ಕಡುಬು ಚಟ್ನಿ ತಿಂದು ಬರುತ್ತಿದ್ದೆ. ಅವರ ಮನೆಗೆ ತಿಂಡಿಗೆ ಹೋಗುವುದನ್ನು ಬಿಡಿಸಲು ನನ್ನಜ್ಜಿ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು ಈಗ ಇತಿಹಾಸ. ಏನೇ ಹೇಳಿ ಅಷ್ಟಿಲ್ಲದೆ ” ಶ್ರೀಮಂತರ ಮನೆಯ ನೋಟ ಚೆಂದ, ಬಡವನ ಮನೆಯ ಊಟ ಚೆಂದ ” ಎಂಬ ಗಾದೆಯ ಮಾತು ಹೇಳಿದ್ದಾರೆಯೇ?

ಚಿತ್ರ ಕೃಪೆ : ಅರಳಸುರಳಿ ನಟರಾಜ್ ( ಖ್ಯಾತ ವ್ಯಂಗ್ಯಚಿತ್ರಕಾರರು, ಪ್ರಾಧ್ಯಾಪಕರು) ತೀರ್ಥಹಳ್ಳಿ

ಇದರ ಮಧ್ಯೆ ಆತನ ಕೆಲವು ಅನುಭವ ಕಥಾನಕಗಳು ನನ್ನನ್ನು ಬಹಳವಾಗಿ ಆಕರ್ಷಿಸುತ್ತಿದ್ದವು. ಅವುಗಳಲ್ಲಿ ಅವನ “ಮುರುಗೋಡು” ಮೀನು ಹಿಡಿಯುವುದೂ ಒಂದು. ನನಗೂ ಮುರುಗೋಡು ಹೇಗಿರುತ್ತೆ ಅಂತ ಹಿಡಿದು ತೋರಿಸು ಎಂದು ಆಗಾಗ ಅವನಿಗೆ ಕಾಡುತ್ತಿದ್ದೆ. ಆಗ ಆತ ನೀಡುತ್ತಿದ್ದ ಮುರುಗೋಡು ಮೀನಿನ ವರ್ಣನೆಯೇ ಬಹಳ ಕುತೂಹಲ ನೀಡುತ್ತಿತ್ತು. ದೊಡ್ಡ ಲೋಳೆಯಂತಹ ಮೀನು, ಅಗಲವಾದ ತಲೆ, ಮುಖದಲ್ಲಿ ಮೀಸೆ, ಬಾಯಲ್ಲಿ ಚೂಪಾದ ಹಲ್ಲುಗಳು, ದೊಡ್ಡ ಕಣ್ಣುಗಳು….. ಅಬ್ಬಾ, ಭಯವಾದರೂ ಹಿಡಿದೇ ತೀರಬೇಕೆಂಬ ನಿರ್ಧಾರ ಕೈಗೊಂಡೆ. ಹೀಗೆ ನಮ್ಮ ಹಳ್ಳದಾಟ ಸಾಗುತ್ತಿರುವಾಗ ಹಳ್ಳದ ದಡ ಹಿಡಿದು ಸುಮಾರು ಒಂದು ಕಿ.ಮೀ ದೂರ ಹೋದೆವು. ಅಲ್ಲಿ ಹತ್ತಾರು ಏಡಿ ಕುಣಿಗಳು. ಒಂದು ದೊಡ್ಡ ಕುಣಿಯೊಳಗೆ ನೀರು ಹೊಕ್ಕು ಮತ್ತೊಂದು ಕುಣಿಯ ಮುಖಾಂತರ ಹೊರಬರುತ್ತಿತ್ತು. ಅದರಲ್ಲಿ ಭಾರೀ ಏಡಿಗಳಿರಬಹುದೆಂದು ಗುರುದೇವ ವಾಸು ತಿಳಿಸಿದ್ದೇ ತಡ,ಗುರುಗಳ ಅಪ್ಪಣೆ ಪಡೆದು ತೋಳು ಮಡಚಿದವನೇ ಸೀದಾ ಏಡಿಕುಣಿಯೊಳಗೆ ಕೈ ಹಾಕಿದವನಿಗೆ ಲೋಳೆಯಂತಹ ಉದ್ದವಾದ ಮೀನು ಸಿಕ್ಕಿದಂತಾಯಿತು. ವಾಸು ವಾಸು ದೊಡ್ಡ ಮೀನುಕಣೋ. . . . ಕೂಗಿದೆ. ಕೂಡಲೆ ತಡಮಾಡದ ಆತ ನೀರು ಹೊರ ಹೋಗುತ್ತಿದ್ದ ಕುಣಿಯ ಮತ್ತೊಂದು ದ್ವಾರವನ್ನು ದೊಡ್ಡ ಕಲ್ಲು ಅಡ್ಡಗಟ್ಟಿ ನಿಲ್ಲಿಸಿದ.ಮುರುಗೋಡು ಹಿಡಿಯಬೇಕೆಂದು ನನ್ನ ಕಾಟ ದಿನೇ ದಿನೇ ಹೆಚ್ಚಾಗಿದ್ದ ಕಾರಣದಿಂದ, ಅದನ್ನು ಹಿಡಿದು ತೋರಿಸಲು ಸದಾವಕಾಶವೆಂದು ಅರಿತ ಆತ ಬಿಡಬೇಡ ಅದನ್ನು ಗಟ್ಟಿ ಹಿಡಿ ಎಂದು ಹಿಂಬದಿಯಲ್ಲಿ ನಿಂತು ಪ್ರಚೋದಿಸುತ್ತಾ, ಅದು ಲೋಳೆ ಇರುತ್ತೆ ಮಾರಾಯ ನುಣುಚಿಕೊಂಡು ಹೋದೀತು, ಹುಷಾರು ಗಟ್ಟಿ ಹಿಡಿ ಎಂದು ಪದೇ ಪದೇ ಹೇಳಲಾರಂಬಿಸಿದ. ಆತನ ಅಣತಿಯಂತೆ ನಾನೂ ಕೂಡ ಅದನ್ನು ಗಟ್ಟಿಯಾಗಿ ಹಿಡಿದೆ. ಅಂದು ನನ್ನ ಹರುಷಕ್ಕೆ ಪಾರವೇ ಇರಲಿಲ್ಲ . ಆಸೆ ಪಟ್ಟು ನೋಡಬೇಕೆಂದು ಕಾದಿದ್ದ ಮೀನು. ಹಲವು ದಿನಗಳ ಕನಸು ಇಂದು ನನಸಾಗುವ ಸಂದರ್ಭ. ಆತನೂ ಬಿಟ್ಟ ಕಣ್ಣಿನಿಂದಲೇ ಕ್ಷಣಗಣನೆ ಮಾಡುತ್ತಿರುವಾಗ ನಾನು ಅದನ್ನು ಕುಣಿಯಿಂದ ಹೊರತೆಗೆದೆ. ನೋಡುವುದೇನು . . . ದೊಡ್ಡ ಗಾತ್ರದ ನೀರು ಹಾವು!!! ನನ್ನ ಜಂಗಾಬಲವೇ ಉಡುಗಿ ಹೋಗಿತ್ತು.



ನಾನು ಅದರ ತಲೆಯನ್ನು ಗಟ್ಟಿಯಾಗಿ ಹಿಡಿದಿದ್ದೆ. ಅದು ನೋವು ತಾಳಲಾರದೆ ನನ್ನ ಕೈಯನ್ನು ಸುತ್ತಿಕೊಂಡಿತ್ತು. ಅಯ್ಯೋ… ವಾಸು ಹಾವು ಕಣೋ ಬಿಡಿಸೋ ಎಂದು ಕೂಗತೊಡಗಿದೆ. ನಾನು ಅದರ ತಲೆಯ ಹಿಡಿತ ಬಿಟ್ಟಿದ್ದೇ ಆದಲ್ಲಿ ಅದು ನನ್ನ ಕೈಯನ್ನು ಮೊದಲೇ ಸುತ್ತುವರೆದಿದ್ದ ಕಾರಣ ಕಚ್ಚುವುದು ಖಾತ್ರಿಯಾಗಿತ್ತು. ಅಷ್ಟರಲ್ಲಾಗಲೇ ಭಯಭೀತನಾಗಿದ್ದ ಆತ 100 ಮೀಟರ್ ರನ್ನಿಂಗ್ ರೇಸ್ನಲ್ಲಿ ಒಲಂಪಿಕ್ ಕ್ರೀಡಾಪಟುವನ್ನು ಮೀರಿಸುವಂತೆ ಓಡತೊಡಗಿದ್ದ .ಯಾರಾದರೂ ವೀಡಿಯೋ ಮಾಡಿದ್ದರೆ World Record ಖಂಡಿತ ದಾಖಲಾಗುತ್ತಿತ್ತು.

ನಾನು ಅವನಲ್ಲಿ ಸಹಾಯ ಕೋರುತ್ತಾ ಹಾವನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದು ಅವನ ಹಿಂದೆ ಹಿಂದೆ ಓಡಲಾರಂಬಿಸಿದೆ. ಹೇಗಾದರೂ ಮಾಡಿ ನನ್ನಿಂದ ತಪ್ಪಿಸಿ ಕೊಳ್ಳಬೇಕೆಂದು ಅವನು ಹಳ್ಳ ಬಿಟ್ಟು ಪಕ್ಕದ ಕೆಸರು ಗದ್ದೆಗೆ ಹಾರಿದ. ನಾನೂ ಹಾರಿದೆ. ನನ್ನ ಹವಾಯ್ ಚಪ್ಪಲಿ ಕೆಸರಿನಲ್ಲಿ ಹೂತು ಹೋದ ಕಾರಣ ನಾನು ಅಲ್ಲಿಯೇ ಮುಗ್ಗರಿಸಿ ಬಿದ್ದೆ. ನಾನೆಲ್ಲಿ ಬಿದ್ನೋ, ಹಾವೆಲ್ಲಿ ಹೋಯ್ತೋ , ವಾಸು ಎಲ್ಲಿ ಓಡಿದ್ನೋ… ಒಂದೆರಡು ಸೆಕೆಂಡುಗಳಲ್ಲಿ ಎಲ್ಲವೂ ನಡೆದೋಯ್ತು, ಒಟ್ನಲ್ಲಿ ಹಾವಿನಿಂದ ಮುಕ್ತಿ ದೊರಕಿತು. ಆದ್ರೆ ಮತ್ತೆಂದೂ ಹಳ್ಳದಲ್ಲಿ ಮೀನು ಹಿಡಿಯುವ, ಏಡಿ ಕುಣಿಗೆ ಕೈ ಹಾಕುವ ದುಸ್ಸಾಹಸಕ್ಕೆ ಮುಂದಾಗಲಿಲ್ಲ. ಇಂದಿಗೂ ಎಂದಿಗೂ ಮಾಡುವುದಿಲ್ಲ.

ಮರಳಿ ಬಾರದ ಈ ಬಾಲ್ಯದ ನೆನಪುಗಳು ಅದೆಷ್ಟು ಸುಂದರ ಅಲ್ಲವೇ ಸ್ನೇಹಿತರೆ. ವಾಸು ಮಿಸ್ ಯು ಕಣೋ………


  • ಡಾ.ಯುವರಾಜ್ ಹೆಗಡೆ ಪಶು ವೈದ್ಯರು, ತೀರ್ಥಹಳ್ಳಿ

5 1 vote
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW