ಮೇಘನಾ.ಕೆ.ಟಿ. ಅವರು ದೂರದರ್ಶನದಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿಧಿ ಎಳೆದ ಕತ್ತಲ ಪರದೆ ಸರಿಸಿ, ಬದುಕಿನ ರಂಗಸ್ಥಳದಲ್ಲಿ ಗೆದ್ದು ನಿಂತ ಮೇಘನಾ ಅವರ ಸಾಧನೆ ಹಿಂದಿನ ಕತೆಯನ್ನು ಪತ್ರಕರ್ತರಾದ ಪ್ರಭುಸ್ವಾಮಿ ನಟೇಕರ್ ಅವರು ಸಂದರ್ಶಿಸಿದ್ದಾರೆ, ತಪ್ಪದೆ ಮುಂದೆ ಓದಿ…
ಮೇಘನಾ.ಕೆ.ಟಿ. ಸಹಾಯಕ ನಿರ್ದೇಶಕಿ, ದೂರದರ್ಶನ ಸುದ್ದಿವಿಭಾಗ,
ಅದು, 2010ನೇ ಸಾಲಿನ ಜೂನ್‌ತಿಂಗಳು.. 10ನೇ ತರಗತಿಗೆ ಆಗಷ್ಟೇ ಕಾಲಿಟ್ಟು ಕೆಲವೇ ದಿನಗಳಷ್ಟೇ ಕಳೆದಿದ್ದವು. ಒಂದಿನ ಶಿಕ್ಷಕರೊಬ್ಬರು ಅದ್ಯಾಕೋ ಮುಂದಿನ ಬೆಂಚ್‌ನಲ್ಲಿ ಕುಳಿತುಕೊಳ್ಳುತ್ತಿದ್ದ ಬಾಲಕಿಯನ್ನು ಕೊನೆಯ ಬೆಂಚ್‌ಗೆ ಕಳುಹಿಸಿದ್ದರು. ಆ ದಿನ ಕೊನೆಯ ಬೆಂಚ್‌ನಲ್ಲಿ ಕುಳಿತು ಬೋರ್ಡ್‌ನೋಡಿದಾಗ ಕಂಡ ಆ ಅಸ್ಪಷ್ಟ ದೃಶ್ಯ, ಕೇವಲ ಬೋರ್ಡ್ ಮೇಲಿನ ಅಕ್ಷರಗಳನ್ನಷ್ಟೇ ಅಲ್ಲ, ಆಕೆಯ ಬದುಕಿನ ಬಣ್ಣಗಳನ್ನೂ ಮಸುಕಿಗೆ ಮುನ್ನಡಿ ಎಂಬಂತೆ ಭಾಸವಾಯಿತು. ಬೋರ್ಡ್ ಮೇಲಿನ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಕಣ್ಣುಗಳನ್ನು ಉಜ್ಜಿ ನೋಡಿದರೂ ಎಲ್ಲವೂ ‘ಮಂಜು ಮಂಜಾಗಿ’ ಕಾಣಿಸುತ್ತಿತ್ತು. ಮೊದಮೊದಲು ಇದು ಕೇವಲ ಭ್ರಮೆ ಇರಬಹುದು ಅಂದುಕೊಂಡಳು. ಆದರೆ ಸಮಯ ಕಳೆದಂತೆ ಆ ಮಂಜು ಕರಗಲಿಲ್ಲ, ಬದಲಿಗೆ ಆವರಿಸಿಕೊಳ್ಳತೊಡಗಿತು.

ವಿಧಿ ಆ ಬಾಲಕಿಗಾಗಿ ಬರೆದಿಟ್ಟಿದ್ದು ಬೇರೆಯದೇ ಹಣೆಬರಹವಾಗಿತ್ತು. ಕಣ್ಣು ಮಂಜಾದರೂ ಕನಸು ಮಂಜಾಗಲು ಬಿಡದೆ, ದೃಷ್ಟಿದೋಷವನ್ನು ಮೆಟ್ಟಿ ನಿಂತು ಇಂದು ದೇಶದ ಪ್ರತಿಷ್ಠಿತ ನಾಗರಿಕ ಸೇವೆಗೆ ಆಯ್ಕೆಯಾಗಿರುವ ಆಕೆಯ ಕಥೆ ನಿಜಕ್ಕೂ ರೋಚಕ ಮತ್ತು ಸ್ಫೂರ್ತಿದಾಯಕ. ವಿಧಿ ಆಕೆಯ ಕಣ್ಣುಗಳ ಮುಂಭಾಗ ಪರದೆ ಎಳೆದಾಗ, ಆಕೆ ತನ್ನ ಮನಸ್ಸಿನ ಕಣ್ಣುಗಳನ್ನು ತೆರೆದರು. “ನನ್ನಿಂದ ಜಗತ್ತನ್ನು ನೋಡಲು ಸಾಧ್ಯವಾಗದಿರಬಹುದು. ಆದರೆ ಇಡೀ ಜಗತ್ತೇ ನನ್ನತ್ತ ನಿಬ್ಬೆರಗಾಗಿ ನೋಡುವಂತೆ ಸಾಧಿಸಿ ತೋರಿಸುತ್ತೇನೆ” ಎಂದು ಪಣತೊಟ್ಟರು. ಆ ಛಲದ ಅನ್ವರ್ಥನಾಮವೇ ಮೇಘನಾ ಕೆ.ಟಿ. ದೃಷ್ಟಿದೋಷವಿದ್ದರೂ ಕನಸುಗಳು ಸ್ಪಷ್ಟವಾಗಿದ್ದರೆ ಜಗತ್ತನ್ನೇ ಗೆಲ್ಲಬಹುದು ಎಂಬುದಕ್ಕೆ ಜ್ವಲಂತ ಸಾಕ್ಷಿ. ಯಾರು ಜಗತ್ತನ್ನು ಸ್ಪಷ್ಟವಾಗಿ ನೋಡಲು ಕಷ್ಟ ಪಡುತ್ತಿದ್ದರೋ ಅವರೀಗ ಜಗತ್ತಿಗೇ ಸುದ್ದಿಗಳನ್ನು ತಲುಪಿಸುವ ಪ್ರತಿಷ್ಠಿತ ‘ದೂರದರ್ಶನ’ದ ಸುದ್ದಿವಿಭಾಗದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೇವಲ ಉದ್ಯೋಗವಲ್ಲ, ಅದೊಂದು ಛಲದ ಪ್ರತೀಕ.
ಅಪರೂಪದಲ್ಲಿ ಅಪರೂಪದ ಸಮಸ್ಯೆ
ಬಾಲ್ಯದಲ್ಲಿ ಎಲ್ಲರಂತೆ ಚೂಟಿಯಾಗಿದ್ದ ಮೇಘನಾ ಲವಲವಿಕೆಯಿಂದ ಓಡಾಡಿಕೊಂಡಿದ್ದಳು. 10ನೇ ತರಗತಿಗೆ ಬರುವವರೆಗೆ ಸೈಕಲ್‌ತುಳಿಯುತ್ತಾ, ಅಪ್ಪನ ಸ್ಕೂಟರ್‌ಚಲಿಸುತ್ತಾ ಚಿಟ್ಟೆಯಂತೆ ಸಂತೋಷದಲ್ಲಿ ಜೀವನ ನಡೆಯುತ್ತಿತ್ತು. 10ನೇ ತರಗತಿಗೆ ಬಂದ ಮೇಲೆ ಕಾಣಿಸಿಕೊಂಡ ಸಮಸ್ಯೆ ಭವಿಷ್ಯದ ದಿಕ್ಕನ್ನೇ ಬದಲಿಸಿತು. ಸಾಮಾನ್ಯ ಕಣ್ಣಿನ ಪರೀಕ್ಷೆಯಿಂದ ಆರಂಭವಾದ ಪಯಣ, ದೊಡ್ಡ ದೊಡ್ಡ ಸ್ಪೆಷಲಿಸ್ಟ್ ಆಸ್ಪತ್ರೆಗಳ ಮೆಟ್ಟಿಲೇರುವಂತೆ ಮಾಡಿತು. ಇದು ಪವರ್ ಸಮಸ್ಯೆಯಲ್ಲ, ರೆಟಿನಾದಲ್ಲಿನ ‘ಅಪರೂಪದಲ್ಲಿ ಅಪರೂಪದ’ ಸಮಸ್ಯೆ ಎಂದು ತಜ್ಞ ವೈದ್ಯರೇ ಕಹಿಸತ್ಯವನ್ನು ಹೇಳಿದರು. ಸದ್ಯಕ್ಕೆ ಇದಕ್ಕೆ ಚಿಕಿತ್ಸೆ ಇಲ್ಲ, ಸಂಶೋಧನೆಗಳು ನಡೆಯುತ್ತಿವೆ. ಭವಿಷ್ಯದಲ್ಲಿ ಇದಕ್ಕೆ ಚಿಕಿತ್ಸೆ ಬರಬಹುದು ಎಂದು ವೈದ್ಯರು ಕೈಚೆಲ್ಲಿದಾಗ ಕುಟುಂಬಕ್ಕೆ ಆಕಾಶವೇ ಕಳಚಿ ಬಿದ್ದಂತಾಗಿತ್ತು. “ಮನುಷ್ಯ ಚಂದ್ರ, ಮಂಗಳ ಗ್ರಹಕ್ಕೆ ಹೋಗುತ್ತಾನೆ. ಆಧುನಿಕ ಯುಗದಲ್ಲಿ ಏನೆಲ್ಲಾ ಸಂಶೋಧನೆಗಳು ನಡೆಯುತ್ತಿವೆ. ಈ ಸಮಸ್ಯೆಗೆ ಪರಿಹಾರ ಹುಡುಕಿಲ್ಲವೇ? ಎಂದು ಪೋಷಕರು ಹತಾಶರಾದರು. ನಾರಾಯಣ ನೇತ್ರಾಲಯ, ಶಂಕರ್ ಕಣ್ಣಿನ ಆಸ್ಪತ್ರೆ, ಚೆನ್ನೈ ಎಂದು ಅಲೆದಾಡಿದರು. ಆಸ್ಪತ್ರೆಗಳ ಸುತ್ತಾಟವೇ ಆಯಿತು ಹೊರತು ಯಾವುದೇ ಪ್ರಯೋಜನವಾಗಿಲ್ಲ. 10ನೇ ತರಗತಿಯ ಆ ಅಮೂಲ್ಯ ವರ್ಷವು ಆಸ್ಪತ್ರೆಗಳ ಅಲೆದಾಟದಲ್ಲೇ ಕಳೆದುಹೋಯಿತು.
ಟೆರಸ್ ಮೇಲಿನ ಓದು.. ಶೇ.97ರಷ್ಟು ಸಾಧನೆ!
ಚಿಕಿತ್ಸೆ ಸಿಗದೆ, ದೃಷ್ಟ ದೋಷದಿಂದ ಓದಲೂ ಆಗದೆ ಮಾನಸಿಕವಾಗಿ ಕುಗ್ಗಿದ್ದರು. ಸೈಕಲ್ ತುಳಿದು ಸಂಭ್ರಮಿಸುವ ಸ್ವಾತಂತ್ರ್ಯವೂ ಹೋಯಿತು. ಆದರೂ ಛಲ ಬಿಡಲಿಲ್ಲ. ಕತ್ತಲೆಯಲ್ಲಿ ಅವರಿಗೆ ಕಷ್ಟವಾಗುತ್ತಿದ್ದರಿಂದ ಬೆಳಕಿನ ಮೊರೆ ಹೋದರು. ಸಹೋದರ, ಸಹೋದರಿ, ಸ್ನೇಹಿತರು ನೆರವಿನ ಹಸ್ತ ಚಾಚಿಸಿದರು. ಮನೆಯ ಟೆರಸ್ ಮೇಲೆ ಎಲ್ಲಿ ಹೆಚ್ಚು ಸೂರ್ಯನ ಬೆಳಕು ಬೀಳುತ್ತದೆಯೋ ಅಲ್ಲಿ ಕುಳಿತು ಓದತೊಡಗಿದರು. ಪರೀಕ್ಷಾ ಮಂಡಳಿಯ ವಿಶೇಷ ಅನುಮತಿ ಪಡೆದು, ಹೆಚ್ಚು ಬೆಳಕಿರುವ ಜಾಗದಲ್ಲಿ ಕುಳಿತು ಪರೀಕ್ಷೆ ಬರೆದರು. ದೃಷ್ಟಿ ಸಮಸ್ಯೆಯ ಆಘಾತದ ನಡುವೆಯೂ ಛಲದಂಕಮಲ್ಲೆಯಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಬರೋಬ್ಬರಿ ಶೇ.97ರಷ್ಟು ಅಂಕ ಗಳಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಜ್ಞಾನಬೋಧಿನಿ ಶಾಲೆಗೆ ಸಾಧನೆಯ ಕಿರೀಟವನ್ನು ತಂದು ಕೊಟ್ಟರು.
ತಮ್ಮದೇ ಸ್ನೇಹಿತರ ತಂಡ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡ ಕಾರಣಕ್ಕಾಗಿ ಮೇಘನಾ ಸಹ ವಿಜ್ಞಾನ ವಿಭಾಗವನ್ನು ತೆಗೆದುಕೊಂಡರು. ಆದರೆ, ಅದು ಸುಲಭವಾಗಿರಲಿಲ್ಲ. ವಿಜ್ಞಾನದಲ್ಲಿನ ವಿಷಯಗಳು ಅವರ ದೃಷ್ಟಿದೋಷಕ್ಕೆ ಸಹಾಯ ಮಾಡುತ್ತಿರಲಿಲ್ಲ. ಬಳಿಕ ಕಾಲೇಜಿನ ಪ್ರಾಂಶುಪಾಲರ ಸಲಹೆಯಂತೆ, “ಕೇಳಿಸಿಕೊಂಡು ಕಲಿಯಲು ಸುಲಭವಾಗುವ” ಕಲಾ ವಿಭಾಗವನ್ನು ಆಯ್ದುಕೊಂಡು ಶೇ.92 ರಷ್ಟು ಅಂಕಗಳಿಸಿ, ರಾಜ್ಯಕ್ಕೇ 4ನೇ ರ‍್ಯಾಂಕ್ ಪಡೆದರು. ಪಿಯುಸಿ ಮುಗಿಸಿದ ಬಳಿಕ ಮೇಘನಾ ಅವರು ಆಯ್ಕೆ ಮಾಡಿಕೊಂಡಿದ್ದು ಪತ್ರಿಕೋದ್ಯಮ, ಸೈಕಾಲಜಿ, ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ. ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಅಲ್ಲಿಯೂ ಟಾಪರ್ ಆಗಿ ಹೊರಹೊಮ್ಮಿದರು. ಕತ್ತಲೆ ಕೇವಲ ಕಣ್ಣಿಗಷ್ಟೇ ಹೊರತು ಬುದ್ಧಿಗಲ್ಲ ಎಂಬುದನ್ನು ಸಾಬೀತುಪಡಿಸಿದರು.

ಫ್ರೀಸ್ಟೈಲ್ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ ಮೇಘನಾ ಕೇವಲ ಪುಸ್ತಕದ ಹುಳುವಾಗಿರಲಿಲ್ಲ. ಅವರೊಬ್ಬ ಬಹುಮುಖ ಪ್ರತಿಭೆ. ವಿದ್ಯಾಭ್ಯಾಸದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿಯೂ ತೊಡಗಿಸಿಕೊಂಡಿದ್ದರು. ರಾಜ್ಯಮಟ್ಟದ ಹಾಡುಗಾರಿಕೆ ಮತ್ತು ಚರ್ಚಾ ಸ್ಪರ್ಧೆಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ. ‘ಕಲಾಧಾರೆ’ ತಂಡದ ಭಾಗವಾಗಿ ಫ್ರೀಸ್ಟೈಲ್ ಡ್ಯಾನ್ಸರ್ ಆಗಿ ವೇದಿಕೆಗಳ ಮೇಲೆ ಹೆಜ್ಜೆ ಹಾಕಿದ್ದಾರೆ. ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕನ್ನಡ ರಾಜ್ಯೋತ್ಸವ, ಮಹಿಳಾ ದಿನಾಚರಣೆಯಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿದ್ದಾರೆ. ದೃಷ್ಟಿದೋಷದಿಂದಾಗಿ ಕತ್ತಲೆಯಲ್ಲಿ ಹೊಂದಾಣಿಕೆಯಾಗುವುದು ಕಷ್ಟವಿದ್ದರಿಂದ ನೃತ್ಯದಿಂದ ದೂರ ಸರಿದರು. ಆದರೆ, ಇತರೆ ಪ್ರತಿಭೆಗಳನ್ನು ಮುಂದುವರಿಸಿ ತಮ್ಮದೇ ಛಾಪು ಮೂಡಿಸಿದರು.
ತಂತ್ರಜ್ಞಾನದ ಆಸರೆ ಮತ್ತು ತಿರಸ್ಕಾರದ ನೋವು
ಪದವಿ ಮುಗಿದಾಗ ಮುಂದೇನು ಎಂಬ ಪ್ರಶ್ನೆ ಮೇಘನಾ ಅವರಿಗೆ ಎದುರಾಯಿತು. ಆಗ ಬೆಳಕು ಮೂಡಿದ್ದೆ ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಎನ್‌ಜಿಒ ಮಿತ್ರ ಜ್ಯೋತಿ ಸಂಸ್ಥೆಯಲ್ಲಿ. ಅಲ್ಲಿ ದೃಷ್ಟಿದೋಷ ಉಳ್ಳವರಿಗಾಗಿ ಇರುವ ಜಾಸ್ ಮತ್ತು ಎನ್‌ವಿಡಿಎ ತಂತ್ರಜ್ಞಾನವನ್ನು ಕಲಿತರು. ಕಂಪ್ಯೂಟರ್ ಪರದೆಯನ್ನು ನೋಡದೆಯೇ ಕೇಳಿಸಿಕೊಂಡೇ ಕೆಲಸ ಮಾಡುವುದನ್ನು ಕರಗತ ಮಾಡಿಕೊಂಡರು. ಆದರೆ ಉದ್ಯೋಗದ ಬೇಟೆ ಸುಲಭವಿರಲಿಲ್ಲ. ಫೋನ್ ಸಂದರ್ಶನದಲ್ಲಿ ಧ್ವನಿ ಮತ್ತು ಜ್ಞಾನ ನೋಡಿ ಆಯ್ಕೆ ಮಾಡುತ್ತಿದ್ದ ಕಂಪನಿಗಳು, ನೇರವಾಗಿ ಹೋದಾಗ ದೃಷ್ಟಿ ಸಮಸ್ಯೆ ಇದೆ ಎಂದು ತಿಳಿದು ತಿರಸ್ಕರಿಸುತ್ತಿದ್ದವು. ಸವಾಲುಗಳನ್ನು ಎಷ್ಟೇ ಗಟ್ಟಿಯಾಗಿ ಎದುರಿಸಿದರೂ ಕೆಲವೊಂದು ಘಟನೆಗಳು ಖಿನ್ನತೆಕ್ಕೊಳಗಾಗುವುಂತೆ ಮಾಡುವುದು ಸಹಜ. ಅಂತೆಯೇ ಕಂಪನಿಗಳ ನಡೆಯು ಸಹ ಕುಗ್ಗುವಂತೆ ಮಾಡಿತ್ತು. ಈ ಸಮಯದಲ್ಲಿ ಬೆನ್ನಿಗೆ ನಿಂತಿದ್ದು ಕುಟುಂಬ. ತಂದೆ ತಾಂಡವಮೂರ್ತಿ, ತಾಯಿ ನವನೀತ ಅವರು ಮೇಘನಾ ಅವರ ಬೆನ್ನಿಗೆ ಸದಾ ನಿಂತು ಧೈರ್ಯ ತುಂಬುತ್ತಿದ್ದರು. ಛಲ ಬಿಡದೆ ನಡೆಸಿದ ಪ್ರಯತ್ನಕ್ಕೆ ಕೊನೆಗೂ ಸಿಸ್ಕೋ ಕಂಪನಿಯಲ್ಲಿ ಉದ್ಯೋಗ ಲಭಿಸಿತು. ಅಲ್ಲಿನ ತಂಡವೂ ಸಹ ಮೇಘನಾ ಅವರಿಗೆ ಬೆಂಬಲ ಒದಗಿಸಿತು. ಜೀವನವೂ ಒಂದು ಹಂತಕ್ಕೆ ಸುಗಮವಾಗಿ ನಡೆಯುತ್ತಿದೆ ಎನಿಸಿದರೂ, ಮನಸ್ಸಿನ ಮೂಲೆಯಲ್ಲಿ ಏನೋ ದೊಡ್ಡದನ್ನು ಸಾಧಿಸಬೇಕೆಂಬ ತುಡಿತವಿತ್ತು.
ಸಂಚಾರ ದಟ್ಟಣೆಯೇ ಓದಿಗೆ ವರದಾನ
ಸಿಕ್ಕಿದ ಸಣ್ಣದೊಂದು ಕೆಲಸದಲ್ಲಿ ತೃಪ್ತಿಪಟ್ಟುಕೊಂಡು ಇಲ್ಲಿಗೇ ನಿಲ್ಲಿಸೋದಾ? ಅಥವಾ ದೊಡ್ಡದಾಗಿ ಏನಾದರೂ ಸಾಧಿಸಬೇಕಾ?” ಈ ತುಮುಲಗಳ ನಡುವೆಯೇ ಜೀವನ ಸಾಗಿಸುತ್ತಿದ್ದ ಮೇಘನಾ ಅವರಿಗೆ ಮೊಬೈಲ್‌ನ ವಾಟ್ಸ್‌ಆಪ್‌ನಲ್ಲಿ ಬಂದ ಆ ಒಂದು ಮೇಸೆಜ್ ಬದುಕಿನ ದಿಕ್ಕನ್ನೇ ಬದಲಿಸಿತು. ಅದು ‘ರಾಜ್‌ಕುಮಾರ್ ಅಕಾಡೆಮಿ’ಯಲ್ಲಿ ಕೋಚಿಂಗ್ ಆರಂಭವಾಗುತ್ತಿರುವ ಬಗೆಗಿನ ಸಂದೇಶವಾಗಿತ್ತು. ಅವರ ಮಾತಿನಲ್ಲಿಯೇ ಹೇಳುವುದಾದರೆ, “ನಿಜ ಹೇಳಬೇಕೆಂದರೆ, ನಾಗರಿಕ ಸೇವೆಗಳ ಪರೀಕ್ಷೆ ಎಂದರೆ ನನಗೆ ಆರಂಭದಲ್ಲಿ ಭಯವಿತ್ತು. ನಾನು ಪ್ರಥಮ ಪಿಯುಸಿಯಲ್ಲಿದ್ದಾಗ ನಡೆದ ಓರಿಯೆಂಟೇಷನ್ ಕಾರ್ಯಕ್ರಮವೊಂದರಲ್ಲಿ, “ಇದನ್ನು ಪಾಸು ಮಾಡಲು ದಿನಕ್ಕೆ ಕನಿಷ್ಠ 10 ಗಂಟೆ ಓದಬೇಕು” ಎಂದು ಹೇಳಿದ್ದರು. ಅಪ್ಪೋ.. ಅಷ್ಟೊಂದು ಕಷ್ಟನಾ ಎಂದು ಹೆದರಿ ಸುಮ್ಮನಾಗಿದ್ದೆ. ಆದರೆ, ಯಾವಾಗ ನಾನು ಸಾಫ್ಟ್‌ವೇರ್ ಮತ್ತು ತಂತ್ರಜ್ಞಾನವನ್ನು ಕಲಿತೆನೋ, ಆಗ ನನ್ನಲ್ಲಿ ಒಂದು ಕಿಚ್ಚು ಮೂಡಿತು. “ತಂತ್ರಜ್ಞಾನವನ್ನೇ ಕಲಿಯಲು ಸಾಧ್ಯವಾದರೆ, ಈ ಪರೀಕ್ಷೆಗಳ ಪ್ರಯತ್ನವನ್ನೇಕೆ ಮಾಡಬಾರದು?” ಎಂದು ಛಲ ತೊಟ್ಟು ಅಕಾಡೆಮಿಗೆ ಸೇರಿಕೊಂಡೆ ಎಂದರು.

ಈ ಪಯಣದಲ್ಲಿ ಅವರಿಗೆ ಸಿಕ್ಕ ಅದ್ಭುತ ಮಾರ್ಗದರ್ಶಕ, ಅವರ ಪಾಲಿನ ‘ಗಾಡ್‌ಫಾದರ್’ ಅಂದರೆ ಗಂಧರ್ವ ಅವರು. ಅವರು ಮೇಘನಾ ಅವರಲ್ಲಿನ ಸಾಮರ್ಥ್ಯವನ್ನು ಗುರುತಿಸಿ, ಪ್ರೋತ್ಸಾಹಿಸಿದರು. “ಮೊದಲು ಕೆಪಿಎಸ್‌ಸಿ ಬರೆಯಿರಿ” ಎಂದು ಬೆನ್ನು ತಟ್ಟಿ ಪರೀಕ್ಷೆಗೆ ಅಣಿಗೊಳಿಸಿದರು. ಪರೀಕ್ಷೆಯ ಸಿದ್ದತೆಯ ಹೋರಾಟದ ದಿನಗಳು ಅಷ್ಟು ಸುಲಭವಾಗಿರಲಿಲ್ಲ. ಮನೆ ಇದ್ದದ್ದು ಕೆಂಗೇರಿಯಲ್ಲಿ, ಆಫೀಸು ಮಾರತ್‌ಹಳ್ಳಿಯಲ್ಲಿ..! ಬೆಂಗಳೂರಿನ ಟ್ರಾಫಿಕ್‌ನಲ್ಲಿ ಸಂಚರಿಸುವುದೆಂದರೆ ಯಮಹಿಂಸೆ. ಆದರೆ, ಅವರು ಆ ಟ್ರಾಫಿಕ್‌ಗೆ ಶಪಿಸುವ ಬದಲು, ಆ ಸಮಯವನ್ನೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡರು. ಕೆಂಗೇರಿಯಿಂದ ಮಾರತ್‌ಹಳ್ಳಿಗೆ ಹೋಗುವ ಆ ದೀರ್ಘ ಪ್ರಯಾಣದ ಪ್ರತಿಯೊಂದು ನಿಮಿಷವನ್ನೂ ಓದಿಗಾಗಿ ಬಳಸಿಕೊಂಡರು. ಕ್ಯಾಬ್‌ನಲ್ಲಿಯೇ ಓದಲಾರಂಭಿಸಿದರು. ಬೆಂಗಳೂರಿನ ಸಂಚಾರ ದಟ್ಟಣೆಯೇ ಅವರಿಗೆ ಚಲಿಸುವ ಲೈಬ್ರರಿಯಾಗಿತ್ತು.
ಕಾರ್ಪೊರೇಟ್ ನಿಂದ ಸರ್ಕಾರಿ ಸೇವೆಯತ್ತ:
ಪದವಿ ಓದುವಾಗ ದ್ವಿತೀಯ ಪಿಯುಸಿ ಅಂಕಗಳ ಆಧಾರದ ಮೇಲೆ ಗ್ರಾಮ ಲೆಕ್ಕಿಗ ಹುದ್ದೆಗೆ ಅರ್ಜಿ ಹಾಕಿ ಕೆಲಸ ದೊರಕಿತ್ತು. ಆದರೆ ಆಗ ಸಹೋದರ ಹೇಳಿದ ಮಾತು ಇವರ ಬದುಕಿನ ದಿಕ್ಕನ್ನೇ ಬದಲಿಸಿತು. “ವಿಲೇಜ್ ಅಕೌಂಟೆಂಟ್ ಎಂದರೆ ಒಂದು ಹಳ್ಳಿಗೆ ಸೀಮಿತ, ಜಿಲ್ಲಾಧಿಕಾರಿ ಆದರೆ ಇಡೀ ಜಿಲ್ಲೆಗೆ ಬಾಸ್” ಎಂದಿದ್ದರು. ಆಗ ದೊಡ್ಡ ಹುದ್ದೆಯ ಕನಸನ್ನು ಹೊತ್ತಿದರು. ಆರಂಭದಲ್ಲಿ ಸಿಸ್ಕೋ ಕಂಪನಿಯಲ್ಲಿ ಉದ್ಯೋಗ ಪಡೆದ ಮೇಘನಾ ಅವರಿಗೆ, ಏನಾದರೂ ಸಾಧಿಸಬೇಕೆಂಬ ತುಡಿತ ಕೆಪಿಎಸ್‌ಸಿ (KAS) ಪರೀಕ್ಷೆ ಬರೆಯುವಂತೆ ಮಾಡಿತು. ಕೆಪಿಎಸ್‌ಸಿ ಪರೀಕ್ಷೆ ಬರೆದು ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಆಯ್ಕೆಯಾದರು. ಆ ಕೆಲಸ ಮಾಡುತ್ತಲೇ ಯುಪಿಎಸ್‌ಸಿ ತಯಾರಿ ಮುಂದುವರಿಸಿದರು. 2018ರಲ್ಲಿ ಮೊದಲ ಬಾರಿ ಬರೆದಾಗ ಸಂದರ್ಶನದ ಹಂತದವರೆಗೂ ಹೋಗಿದ್ದರು. ಆದರೆ ಅಂತಿಮ ಪಟ್ಟಿಯಲ್ಲಿ ಹೆಸರು ಬರಲಿಲ್ಲ. ಮನಸ್ಸು ಕಸಿವಿಸಿಯಾದರೂ ಕುಗ್ಗಲಿಲ್ಲ. ಛಲ ಬಿಡದೆ ಮತ್ತೆ ಪ್ರಯತ್ನಿಸಿದರು. 2020ರ ಬ್ಯಾಚ್‌ನಲ್ಲಿ ನನ್ನ ಕನಸು ನನಸಾಯಿತು. 2ನೇ ಪ್ರಯತ್ನದಲ್ಲಿ ಯಶಸ್ಸು ಕಂಡು ‘ಭಾರತೀಯ ಮಾಹಿತಿ ಸೇವೆ’ಗೆ ಆಯ್ಕೆಯಾದರು. 2020ರ ಬ್ಯಾಚ್‌ನಲ್ಲಿ ಐಐಎಸ್‌ಸೇವೆ ಪ್ರಾರಂಭಿಸಿದರು. ಪ್ರಸ್ತುತ ಅವರು ಬೆಂಗಳೂರಿನ ದೂರದರ್ಶನ ಚಂದನ ವಾಹಿನಿಯಲ್ಲಿ ಸುದ್ದಿ ವಿಭಾಗದ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಕಾಲದಲ್ಲಿ ತಾವು ಜಗತ್ತನ್ನು ನೋಡಲು ಕಷ್ಟಪಡುತ್ತಿದ್ದ ಮೇಘನಾ, ಇಂದು ಜಗತ್ತಿಗೆ ಮಾಹಿತಿಯನ್ನು ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿದ್ದಾರೆ.

ಮುಗಿಲೆತ್ತರದ ಸಾಧನೆಗೆ ಒಲಿದ ಗರಿಗಳು:
ಮೇಘನಾ ಅವರ ಅದ್ಭುತ ಪಯಣದಲ್ಲಿ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಪುಣೆಯ ಯಶದಾದಲ್ಲಿ ನಡೆದ ವಿಶೇಷ ಫೌಂಡೇಶನ್ ಕೋರ್ಸ್‌ನಲ್ಲಿ “ಬೆಸ್ಟ್ ಆಫೀಸರ್ ಟ್ರೈನಿ” ಎಂಬ ಹೆಗ್ಗಳಿಕೆ. ಇಂಡಿಯಾ ಇನ್ಕ್ಲೂಷನ್ ಸಮಿಟ್‌ನಲ್ಲಿ ಗೌರವ. 2015ರಲ್ಲಿ “ಯುವ ಕವಿ” ಪ್ರಶಸ್ತಿಗೆ ಭಾಜನರಾಗಿದ್ದಾರೆ. 2017ರಲ್ಲಿ “ಅತ್ಯುತ್ತಮ ದೃಷ್ಟಿಚೇತನ ಸಾಧಕಿ” ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಭಾ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಓರ್ವ ಪ್ರಖರ ವಾಗ್ಮಿಯಾಗಿ, ವಿಶೇಷಚೇತನರ ಹಕ್ಕುಗಳ ಪ್ರತಿಪಾದಕಿಯಾಗಿ ಮತ್ತು ಯುವಜನತೆಗೆ ಯುಪಿಎಸ್‌ಸಿ ಮಾರ್ಗದರ್ಶಕಿಯಾಗಿ ಮೇಘನಾ ಇಂದು ಸಾವಿರಾರು ಕಣ್ಣುಗಳಿಗೆ ‘ಬೆಳಕಾಗಿ’ ನಿಂತಿದ್ದಾರೆ.
ಕಣ್ಣುಗಳಿಗೆ ಮಂಜು ಕವಿದಿರಬಹುದು. ಆದರೆ ಮೇಘನಾಳ ಮನಸ್ಸಿನ ದೃಢತೆಗೆ ಯಾವ ಮಂಜೂ ಅಡ್ಡಿಯಾಗಲಿಲ್ಲ. ಆ ಒಂದು ದಿನದ ಆಘಾತವನ್ನೇ ಮೆಟ್ಟಿ ನಿಂತು, ದೃಷ್ಟಿಗಿಂತಲೂ ‘ದೃಷ್ಟಿಕೋನ’ ಮುಖ್ಯ ಎಂಬುದನ್ನು ಸಾಬೀತುಪಡಿಸುವ ಹಾದಿ ಹಿಡಿದರು. ಅಂದು ಕೊನೆಯ ಬೆಂಚ್‌ನಲ್ಲಿ ಮಂಜಾಗಿದ್ದ ಲೋಕವನ್ನು, ಇಂದು ತಮ್ಮ ಸಾಧನೆಯ ಮೂಲಕ ಸ್ಪಷ್ಟವಾಗಿ ಮತ್ತು ಪ್ರಕಾಶಮಾನವಾಗಿ ಕಾಣುವ ಛಲ ಮೇಘನಾ ಅವರದ್ದಾಗಿದೆ. ಇಂದು ಉನ್ನತ ಹುದ್ದೆಯ ಮೂಲಕ ಎದ್ದು ನಿಂತಿರುವ ಮೇಘನಾ ಸಾಧನೆ ನಿಜಕ್ಕೂ ಯುವಪೀಳಿಗೆಗೆ ದಾರಿದೀಪ.

ನನಗೇನು ಬೇಕು ಎನ್ನುವುದಕ್ಕಿಂತ ನನಗೆ ಏನು ಸಾಧ್ಯವಾಗುತ್ತದೆಯೋ ಅದನ್ನು ಮಾಡಬೇಕಾಯಿತು. ಜೀವನದಲ್ಲಿ ಮೊದಲು ವಾಸ್ತವತೆಯನ್ನು ಒಪ್ಪಿಕೊಳ್ಳಲೇ ಬೇಕು. ನಂತರ ಗುರಿ ಸ್ಪಷ್ಟವಾಗಿರಬೇಕು. ಬೇರೆಯವರು ಮಾಡಿದ್ದನ್ನು ನಾವು ಮಾಡಲಾಗದು. ನಮ್ಮದೇ ಹಾದಿಯನ್ನು ನಾವೇ ಕಂಡುಕೊಳ್ಳಬೇಕು. ಮನೋಸ್ಥೈರ್ಯ ಗಟ್ಟಿಯಾಗಿದ್ದರೆ ಎಂತಹ ಕತ್ತಲನ್ನೂ ಭೇದಿಸಿ ಬೆಳಕಾಗಬಹುದು.
- ಪ್ರಭುಸ್ವಾಮಿ ನಟೇಕರ್ – ಪತ್ರಕರ್ತರು, ಬೆಂಗಳೂರು
