‘ಮೆರವಣಿಗೆ’ ಕವನ ಸಂಕಲನದ ಪರಿಚಯ

ಲೇಖಕರಾದ ಹರಿನರಸಿಂಹ ಉಪಾಧ್ಯಾಯರ ಅವರ 13 ನೇ ಕೃತಿ ‘ಮೆರವಣಿಗೆ’ ಕವನ ಸಂಕಲನದ ಕುರಿತು ಪದ್ಮನಾಭ. ಡಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ: ಮೆರವಣಿಗೆ ( ಕವನ ಸಂಕಲನ)
ಲೇಖಕರು: ಹರಿನರಸಿಂಹ ಉಪಾಧ್ಯಾಯ
ಪ್ರಕಾಶನ : ಹೆಚ್ ಎಸ್ ಆರ್ ಎ ಪ್ರಕಾಶನ

ಜೀವಂಧರ ಚರಿತೆ ಕೃತಿಯ ಪೀಠಿಕಾಭಾಗದಲ್ಲಿ ಬರುವ ಒಂದು ಪದ್ಯ  ಸುಂದರ ಕಾವ್ಯ/ಕವನ ಹೇಗಿರಬೇಕೆಂದು ಸೂಚಿಸುತ್ತದೆ.  ಅರ್ಥಗಾಂಭೀರ್ಯ, ಹದವರಿತ ಪದಬಳಕೆ ಮತ್ತು ಭಾವಾನುಸಂಧಾನದಿಂದ ಮಾತ್ರ  ಕವಿಯ ರಚನೆ ಜನಾದರಣೀಯವಾಗುತ್ತದೆ. ಓದುಗರಿಗೆ ಮುದ ನೀಡುತ್ತದೆ. ಈ ಅಂಶವನ್ನು  ಚೆನ್ನಾಗಿ ಮನದಟ್ಟು ಮಾಡಿಕೊಂಡು ತಮ್ಮ ಚೊಚ್ಚಲ ಕೃತಿಯಿಂದಲೂ  ಪಾಲಿಸಿಕೊಂಡು ಬರುತ್ತಿರುವ ಶ್ರೀ ಹರಿನರಸಿಂಹ ಉಪಾಧ್ಯಾಯರು ದಣಿವರಿಯದ ಲೇಖಕರು.

ಭಾವಶರಧಿಯಲ್ಲಿ ಮುಳುಗಿ ಅನರ್ಘ್ಯ ಕವಿತಾರತ್ನಗಳನ್ನು  ನೀಡಿ ಭಾವರಶ್ಮಿಯಿಂದ ಆಹ್ಲಾದತೆಯನ್ನು ನೀಡಿ, ಭಾವದುಯ್ಯಾಲೆಯಲ್ಲಿ ಓದುಗರನ್ನು ತೂಗಿದ ಬಳಿಕ ಮುಕ್ತಕಗಳ ಸವಿಯನುಣಿಸಿ, ಮೈಥಿಲೀ ಶರಣಗುಪ್ತರ “ಪಂಚವಟೀ” ಖಂಡಕಾವ್ಯವನ್ನು ಕನ್ನಡಕ್ಕೆ  ಸಶಕ್ತವಾಗಿ ಅನುವಾದಿಸಿ  ಈಗ 13 ನೇ ಕೃತಿಯಾಗಿ “ಮೆರವಣಿಗೆ”  ಎಂಬ ಕವನ ಸಂಕಲನವನ್ನು ಸಾಹಿತ್ಯಲೋಕಕ್ಕೆ ಸಮರ್ಪಿಸುತ್ತಿದ್ದಾರೆ. ಹೆಸರೇ ಹೇಳುವಂತೆ ಇದು  ಕೇವಲ ಬರವಣಿಗೆಯಷ್ಟೇ ಅಲ್ಲ ಕವಿಮನದ ಭಾವಗಳ ಮೆರವಣಿಗೆ. ಕವನ ಎಂದರೆ ಭಾವಗಳ ಬಿಂಬ. ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾಹಿತ್ಯಾಸಕ್ತರನ್ನು ಆಮಂತ್ರಿಸಿದ್ದಾರೆ.

ಚಿತ್ತ ಭಿತ್ತಿಯೊಳೆನ್ನ ಸರಿದಿಹುದು ಚಿತ್ರಗಳು
ಮತ್ತೆ ಕಾಡುವ ತೆರದಿ ಒತ್ತರಿಸಿ ಬಂದು
ನಿತ್ಯ ಬದುಕಿನಲಿ ಕಂಡಂಥ ಹಲವಾರು
ವಿದ್ಯಮಾನಗಳೆಲ್ಲ ನೆನಪಾಗಿ ನಿಂದು”

ಎಂದು ಹೇಳುವ ಕವಿ

“ಆಹ್ಲಾದ ಆತಂಕ ಅಂತರಂಗದಾಲಾಪಗಳು
ಮೇಳಯಿಸಿಹುದಿಲ್ಲಿ ಮೆರವಣಿಗೆಯಂತೆ”

ಎಂದು  ಕೃತಿಯ ಒಳಹಂದರದ ಬಗ್ಗೆ ಸೂಕ್ಷ್ಮವಾಗಿ ಹೇಳಿದ್ದಾರೆ.

ನಡೆನುಡಿಯಲ್ಲಿ ಕನ್ನಡಾಭಿಮಾನ ಮೆರೆದಿರುವ ಶ್ರೀಯುತರು ಈ ಕೃತಿಯ ಹಲವು ಕವನಗಳಲ್ಲೂ ಕನ್ನಡಾಭಿಮಾನವನ್ನು ಹರಿಸಿದ್ದಾರೆ.

“ಕನ್ನಡದಲಿ  ನಾ ನುಡಿಯುವೆನು
ಕನ್ನಡದಲಿ ನಾ ಬರೆಯುವೆನು” 
ಎನ್ನುವ  “ಕನ್ನಡ ಕನ್ನಡ ಹಾ ಸವಿಗನ್ನಡ”  ಕವನದ ಸಾಲುಗಳನ್ನು ನೋಡಿ,

“ವಿಧವಿಧ ಜಾತಿ ಭಾಷೆಯು ಒಂದೇ
ಲಿಪಿಗಳ ರಾಣಿಯು ಕನ್ನಡವೆಂದೇ
ನಾಡಹಬ್ಬ ರಾಜ್ಯೋತ್ಸವ ಒಂದೇ
ಬನ್ನಿರಿ ಸುಜನರೆ  ವಂದಿಸಲೆಂದೇ”

ಹಚ್ಚಬನ್ನಿ ಕರುನಾಡ  ದೀಪವ ಹಾಗೂ ಕನ್ನಡಕ್ಕಾಗಿ ಕೈ ಎತ್ತು  ಕವನಗಳಲ್ಲೂ ಭಾಷಾಭಿಮಾನದ ಝರಿ ಹರಿದಿದೆ.

ಮೆರವಣಿಗೆ ಮಂದೆ ಸಾಗಿದಂತೆ “ಮಹಾತ್ಮಾ ಗಾಂಧೀಜಿ” ಯವರ ಉಪ್ಪಿನ ಸತ್ಯಾಗ್ರಹ  ಕಾಣಿಸುತ್ತದೆ. ಚರಕವ ಹಿಡಿಯುತ ಖಾದಿಯ ಧರಿಸುತ ಸ್ವದೇಶೀಮಂತ್ರವ ಜಪಿಸಿದ ಬಾಪೂ ರವರ ಆಯುಧವೇ “ಸತ್ಯಾಗ್ರಹ”..

“ಹೊಸ ಕ್ರಾಂತಿ”  ಕವನದ ಈ ಸಾಲುಗಳನ್ನು ನೋಡಿ…

“ಗಾಂಧಿಯು ಅರುಹಿದ ಸೂತ್ರವ ತಿಳಿಯದೆ
ದೇಶವು ಕಾಣದು ಸುಖ ಶಾಂತಿ
ದೇಶೀ ಉತ್ಪಾದನೆಗಳ ಬಳಸುತ ಪ್ರಜೆಗಳು
ಮಾಡಲೇಬೇಕಿದೆ ಹೊಸ ಕ್ರಾಂತಿ” 

ಇದು ಇಂದಿನ ದಿನಮಾನಕ್ಕೂ ಪ್ರಸ್ತುತವಾದ ಸಂದೇಶ. ನನ್ನ ಮಾನಸ ಗುರುಗಳಾದ ಶ್ರೀ ಕೆ.ಎಸ್.ನ  ರವರು  ಐರಾವತ ಎಂಬ ಕವನದಲ್ಲಿ “,ಈ ಭೂಮಿ  ಈ ಚೆಲುವು ನಮದೆಂದು ಹೇಳದವ ಕವಿಯೇ?” ಎಂದು ಪ್ರಶ್ನಿಸಿದ್ದಾರೆ. ಕವಿಯಾದವನು ತನ್ನ ಸುತ್ತಮುತ್ತಲಿನ ಚೆಲುವನ್ನು ಆನಂದಿಸಬೇಕು ಆರಾಧಿಸಬೇಕು. ಈ ನಿಟ್ಟಿನಲ್ಲಿ ಯುಗಾದಿ, ಭೂದೇವಿಗೆ ನಮನ  ಹಾಗೂ ಚೈತ್ರದ ಸಿರಿ ಕವನಗಳು ಸೊಗಸಾಗಿ ಮೂಡಿಬಂದಿವೆ. ಯುಗಾದಿ  ಕವನದ ಸಾಲುಗಳನ್ನು ನೋಡಿ…

“ಮನದ ಬೇಗುದಿ ಕಳೆದು ನವ ಜೀವನಕೆ ಎಮ್ಮ
ಭೂತಾಯಿ ಮಡಿಲಿಂದು ಸ್ವಾಗತಿಸಿದೆ
ಯುಗಗಳುರುಳಿದರೇನು ಹೊರಳಿ ಬರುವುದು ತಾನು
ನಿತ್ಯ ಸತ್ಯದ ಕುರುಹು ಕಣ್ಮುಂದಿದೆ”

“ಸುಖವೆಂಬುದಿಲ್ಲವೆ ದುಃಖದನುಭವಿಗೆ? ಎಂದು ಕೆ.ಎಸ್.ನ ಹೇಳುವಂತೆ ಈ ಬದುಕು ಬರೀ ವೇದನೆ ಗೋಳಾಟ ಜಂಜಾಟಗಳಿಂದ ತುಂಬಿಲ್ಲ. ನಮಗೆ ಸಂತಸ ನೀಡುವ ಕ್ಷಣಗಳೂ ಇವೆ.  ಕೇವಲ ದುಃಖ ದುಮ್ಮಾನದ ಆಳದಲ್ಲಿ ಮುಳುಗಿ ಜೀವನೋತ್ಸಾಹ ಕಳೆದುಕೊಳ್ಳಬಾರದು. ಶಿಶಿರವಾದ ಮೇಲೆ ಚೈತ್ರ ಬಂದೇ ಬರುವುದು, ಇದೇ ನಿತ್ಯಸತ್ಯ. ಅದನ್ನು ಅರಿತು ಮನದ ಬೇಗುದಿ ಕಳೆಯಲೆಂದೇ ಈ ಯುಗಾದಿ ಬಂದಿದೆ  ಎಂದು ಹೇಳುವ ಈ ಕವಿತೆ ಮನೋಜ್ಞ ವಾಗಿದೆ.

ಮೆರವಣಿಗೆಯಲ್ಲಿ ನಮಗೆ ಕಾಣುವ ಮತ್ತೊಂದು ಭಿತ್ತಿ ಚಿತ್ರ ಚಿರವಿರಹಿ ರಾಧೆಯದು. ರಾಧಾಮಾಧವರನ್ನು ನೆನೆಯದ ಕವಿಮನ ಇಲ್ಲವೇ ಇಲ್ಲ.  ಅಂತೆಯೇ  “ಗೋಕುಲವಾಸನೇ ನವನೀತಚೋರನೇ ನೀ ಬಾರೋ” ಎಂದು  ಕೃಷ್ಣನನ್ನು ರಾಧೆ ಆಲಾಪಿಸುವ “ಬಾರೋ ಕೃಪೆತೋರೋ” ಕವನ ಮನೋಹರವಾಗಿ ಮೂಡಿಬಂದಿದೆ. ಈ ಕವನದ ಕೆಲವು ಸಾಲುಗಳನ್ನು ನೋಡಿ…

“ಸುಮದಳ ಬಿರಿದಿವೆ ಕಂಪನು ಸೂಸಿವೆ
ಭೃಂಗದ ಬರುವಿಕೆಯನು ಕಾದು
ಮಕರಂದವ ಹೀರುತ ಮನೋಲ್ಲಾಸದಿ
ಹೃದಯವು ಕುಣಿದಿದೆ ನೆನೆನೆನೆದು”

ಲಯಬದ್ಧವಾಗಿ ಹಾಡಲು ಯೋಗ್ಯವಾಗಿದೆ ಎನಿಸಿತು.

ಕೇವಲ ರಮ್ಯತೆಯ ಜಾಡಿನಲ್ಲಿ ಮುಂದುವರೆಯದೇ ಮನಸ್ಸನ್ನು ಗಾಢವಾಗಿ ಆವರಿಸುವ ಭಾವನಾತ್ಮಕ ಕವನಗಳತ್ತಲೂ ಕವಿ ಚಿತ್ತ ಹರಿದಿದೆ ಎನ್ನಲು “ಆಕ್ರಂದನ” ಹಾಗೂ “ನಿತ್ಯಮಹಿಳಾ ದಿನಾಚರಣೆ” ಕವನಗಳು ಸಾಕ್ಷಿಯಾಗಿವೆ. ಕೇವಲ ಒಂದು ದಿನ ಮಹಿಳೆಯನ್ನು ಹಾಡಿ ಹೊಗಳಿ ಸುಮ್ಮನಾಗುವವರಿಗೆ ನಿತ್ಯವೂ ದೂಷಣೆಗೆ ಶೋಷಣೆಗೆ ಗುರಿಯಾಗುವ ಹೆಣ್ಣುಮಕ್ಕಳ ಆಕ್ರಂದನ ಕೇಳಿಸುವುದಿಲ್ಲವೇ ಎಂದು ಕವಿಮನ ಮರುಗಿದೆ. ಕಿವುಡರಿಗೆ ಕೇಳಿಸದು ಹೆಣ್ಣಿನ ಆಕ್ರಂದನ ಆದ್ದರಿಂದ ಏಳಿ ಎದ್ದೇಳಿ ಜಾಗೃತರಾಗಿ ಎಂಬ ವಿವೇಕಾನಂದರ ಸಂದೇಶ ಅನುಸರಿಸಿ ಎಲ್ಲರೂ ಕಾರ್ಯೋನ್ಮುಖರಾಗಿ  ನಿತ್ಯ ಮಹಿಳಾದಿನಾಚರಣೆ ಎಂದು ಮರೆಯದಿರಿ ಎಂಬುದು ಬಹಳ ಅರ್ಥಪೂರ್ಣ ಸಾಲುಗಳು.

ಜಲಕ್ಷಾಮದ ಬಗ್ಗೆ ಪ್ರಕೃತಿ ಸಂರಕ್ಷಣೆಯ ಬಗ್ಗೆ ಮೂಡಿರುವ ಮಳೆ, ಭೂಮಿಗಿರಲಿ ಹಸಿರಿನ ಕವಚ ಹಾಗೂ ದಾಹ ಕವನಗಳು ಅತ್ಯುತ್ತಮವಾಗಿ ಮೂಡಿಬಂದಿವೆ. ಜಲಕ್ಷಾಮದ ಚಿತ್ರಣದ ಜೊತೆಗೆ ಅದಕ್ಕೆ ಕಾರಣವೇನು ಮತ್ತು ಪರಿಹಾರ ಏನು ಎಂದು ಬಹಳ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಕವಿ ವಿವರಿಸಿದ್ದಾರೆ. ದಾಹ ಕವನದಲ್ಲಿ ನನಗೆ ಇಷ್ಟವಾದ  ಸಾಲುಗಳನ್ನು ನೋಡಿ…

ತಂತ್ರಜ್ಞಾನ ಬೆಳೆಯಿತಲ್ಲಾ
ನೀರನು ಮಾತ್ರ ತರಲಾಗಲಿಲ್ಲಾ,
ಕೃತಕ ಮೋಡ ಸೃಷ್ಟಿಸಿದರೇನು ಎಲ್ಲವೂ ಕೈಲಿಲ್ಲಾ
ನದಿಯನ್ನೇ ತಿರುವಿದರೂ ಬರಿದಾಗಿದೆಯಲ್ಲ.
ಉಳಿಸು ಜೀವಗಳನೆಲ್ಲಾ,
ನಿನ್ನಯ ಆಸೆಗೆ ಕೆಡಿಸಬೇಡ ಜಗವನೆಲ್ಲಾ
ಕಾಡು ಬೆಳೆಸು, ನೀರನುಳಿಸು,
ಜೀವ ಸಂಕುಲ ಸ್ಥಿತಿಯಲ್ಲಿರಿಸು,
ಸುಖಿಸು ಜೀವಮಾನವೆಲ್ಲ.

ಕವಿಗೆ ಕಲ್ಪನಾವಿಲಾಸದಷ್ಟೇ, ವಾಸ್ತವಪ್ರಜ್ಞೆಯೂ ಇರಬೇಕು. ವರ್ತಮಾನದ ಸಂಗತಿಗಳಿಗೆ ಸ್ಪಂದಿಸಬೇಕು.  ಈ ನಿಟ್ಟಿನಲ್ಲಿ ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ  ಬರೆದಿರುವ ಕವನ  ಭಾವಸ್ಪರ್ಶಿಯಾಗಿದೆ. ಪಹಲ್ಗಾಮ್ ಉಗ್ರರ ಅಟ್ಟಹಾಸ ನೆನಪಾದರೆ ಮರುಗದ ಭಾರತೀಯನಿಲ್ಲ. ಅದರ ವಿರುದ್ಧ ಸಿಡಿಯದ  ದೇಶಭಕ್ತನಿಲ್ಲ.

“ಧರ್ಮಾಂಧತೆಯ ಮೆರೆದು
ಅಮಾಯಕ ಪ್ರವಾಸಿಗರ ಕೊಲ್ಲುವ
ಉಗ್ರರದ್ದು ಯಾವ ಧರ್ಮ ?
ಜೀವ ಕೊಡಲಾಗದವನಿಗೆ
ಜೀವ ತೆಗೆಯುವ ಹಕ್ಕು ಎಲ್ಲಿದೆ?… 

ಎಂದು ಪ್ರಶ್ನಿಸುತ್ತಲೇ….

ಇಂದು ಕಾಶ್ಮೀರ, ನಾಳೆ?
ಯೋಚಿಸಬೇಕಲ್ಲ..
ದೇಶವೇ ತಲ್ಲಣಗೊಂಡಿದೆ
ನೀಚರ ಹೇಯ ಕೃತ್ಯಕ್ಕೆ
ಕಣ್ಣೀರ್ಗರೆಯುತ್ತಿದೆ, ಶಪಿಸುತ್ತಿದೆ …

ಎನ್ನುತ್ತಾ ಎಲ್ಲರೂ ಇದರ ಬಗ್ಗೆ ಚಿಂತಿಸಬೇಕು ಎಂದು ಕರೆ ಕೊಡುತ್ತಾರೆ.ಸ್ಪಷ್ಟವಾಗಿ ಹೇಳುವುದಾದರೆ ಮಧುರವಾದ ಭಾವನೆಗಳು, ಅರ್ಥಪೂರ್ಣ ಸಾಲುಗಳು ಜೊತೆಯಲ್ಲಿ ಸಂದೇಶಾತ್ಮಕ ಕವನಗಳ ಗುಚ್ಛ ಈ ಕವನ ಸಂಕಲನ. ನಾನು ಮೊದಲೇ ಹೇಳಿದಂತೆ ಇದು ಕೇವಲ ಬರವಣಿಗೆಯಲ್ಲ, ಭಾವಗಳ ಮೆರವಣಿಗೆ. ಇಂತಹ ಮತ್ತಷ್ಟು ಕೃತಿಗಳು ರಚನೆಯಾಗಲಿ. ಸಾಹಿತ್ಯಲೋಕದಲ್ಲಿ  ಉಪಾಧ್ಯಾಯರ ಪಯಣ ಅವಿರತವಾಗಿ ಸಾಗಲಿ ಎಂದು ಶುಭ ಹಾರೈಸುತ್ತಾ ನನ್ನ ಮಾತುಗಳಿಗೆ ವಿರಾಮವಿಡುವೆ.


  • ಪದ್ಮನಾಭ. ಡಿ – ಸಾಹಿತಿಗಳು, ಬೆಂಗಳೂರು

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW