‘ಮಿಡತೆಗಳನ್ನು ಕುರಿತು ನಮ್ಮ ಪ್ರಖ್ಯಾತ ಸಂಸ್ಕೃತಿ ಚಿಂತಕರಾದ ಪ್ರೊ.ಚಂದ್ರಶೇಖರ ನಂಗಲಿ ಒಂದೊಳ್ಳೆಯ ಟಿಪ್ಪಣಿ ಬರೆದಿದ್ದಾರೆ. ಅದನ್ನು ಓದಿದ ಬಳಿಕ ಮಿಡತೆಗಳ ಲೋಕದ ನನ್ನ ನೆನಪುಗಳು ಮರುಕಳಿಸಿದವು’ – ಡಾ.ವಡ್ಡಗೆರೆ ನಾಗರಾಜಯ್ಯ, ಮುಂದೆ ಓದಿ …
ನಮ್ಮ ಹೊಲದ ದಾರಿಯುದ್ದಕ್ಕೂ ಎಕ್ಕದ ಗಿಡಗಳಲ್ಲಿ ಮತ್ತು ಕಕ್ಕೆಮರಗಳಲ್ಲಿ ಬಣ್ಣ ಬಣ್ಣದ ಭಾರಿಗಾತ್ರದ ಮಿಡತೆಗಳಿದ್ದವು. ಹಳದಿ ಹೊಟ್ಟೆ, ಕೆಂಪು ಬೆನ್ನು, ಹಸಿರು ರೆಕ್ಕೆ ಹೀಗೆ ಮೂರ್ನಾಲ್ಕು ಬಣ್ಣಗಳಲ್ಲಿರುವ ಕುಂಟೆ ಮಿಡತೆಗಳನ್ನು ನೋಡಿದಾಗ ಮೈ ಜುಂ ಎಂದಿದೆ ನನಗೆ. ಈಗ ಆ ಜಾತಿಯ ಮಿಡತೆಗಳು ಅಪರೂಪವಾಗಿವೆ. ಮೈಮೇಲೆ ಹಾರಿಬಿಡುತ್ತವೇನೋ ಎಂದು ಕೆಂಪು ಕಣ್ಗುಡ್ಡೆಗಳ ಮಿಡತೆಗಳನ್ನು ಕಂಡು ಬೆದರುತ್ತಿದ್ದೆ. ನೆಲ್ಲಗದ್ದೆ ರಾಗಿಹೊಲ ಕಳ್ಳೆಗಿಡದ ಹೊಲಗಳಲ್ಲಿ ಒಂದೇ ಬಣ್ಣದ ಸಣ್ಣ ಗಾತ್ರದ ಸಾವಿರಾರು ಮಿಡತೆಗಳ ಗುಂಪು ಅಪರೂಪಕ್ಕೆ ಕಾಣಿಸಿಕೊಂಡು ಬದುವಿನ ಮೇಲಿನ ಮೇವನ್ನು ನಮ್ಮ ದನಗಳ ಬಾಯಿಗೂ ಸಿಗದಂತೆ ತಿಂದು ಚೊಕ್ಕಟ ಮಾಡುತ್ತಿದ್ದವು. ರಾಗಿದಂಟು, ಜೋಳದ ದಂಟು, ಅಕ್ಕಡಿ ಸಾಲಿನ ಗಿಡಗಳ ಕಡ್ಡಿಗಳನ್ನು ಹೊರತುಪಡಿಸಿ ಎಲೆ ಹುಲ್ಲುಗರಿಯನ್ನೆಲ್ಲಾ ನುಣ್ಣಗೆ ತಿಂದು ಇನ್ನೊಬ್ಬರ ಹೊಲಕ್ಕೆ ಹಾರುತ್ತಿದ್ದವು. ಅಂತಹ ದೃಶ್ಯ ಇನ್ನೆಂದೂ ನಮಗೆ ಕಾಣಿಸದು ಅನ್ನಿಸ್ತಿದೆ.

ಫೋಟೋ ಕೃಪೆ :google
ನೈಜೀರಿಯಾದ ಶ್ರೇಷ್ಠ ಕಾದಂಬರಿಕಾರ ಚಿನುವಾ ಅಚಿಬೆ ತನ್ನ Things Fall Apart ಕಾದಂಬರಿಯಲ್ಲಿ ವಸಾಹತುಶಾಹಿ ಬ್ರಿಟಿಷರು ಬುಡಕಟ್ಟುಗಳ ಮೇಲೆ ಆಕ್ರಮಣ ಮಾಡಿದ ಬಗೆಯನ್ನು ಚಿತ್ರಿಸುತ್ತಾ ಮಿಡತೆಗಳ ಹಾವಳಿಯ ದೃಶ್ಯವನ್ನು And then the locusts came ಎಂದು ಬ್ರಿಟಿಷರೊಂದಿಗೆ ಮಿಡತೆಗಳನ್ನು ಸಮೀಕರಿಸಿ ಬರೆದಿದ್ದಾನೆ.
ಅಂದ್ಹಾಗೆ ಹೊಲದ ಬೆಳೆ ತಿನ್ನುವ ಮಿಡತೆಗಳನ್ನು ಮನುಷ್ಯರು ಆಹಾರಕ್ಕಾಗಿ ಹಿಡಿದು ತಿನ್ನುವ ಮೂಲಕ ಮಿಡತೆಗಳ ಹಾವಳಿಯನ್ನು ನಿಗ್ರಹಿಸುತ್ತಿದ್ದರೆಂದು ಆರೋಗ್ಯ ಇಲಾಖೆಯಲ್ಲಿ ಶುಶ್ರೂಷಕಿಯಾಗಿರುವ ರಾಯಚೂರು ಮೂಲದ ಮಹಾದೇವಿ ಬಿಂಗಿ Mahadevi Bingi ಹಿಂದೊಮ್ಮೆ ನನಗೆ ತಿಳಿಸಿದ್ದರು. ಈಚಲು ಹುಳದ ವರ್ಮಿ ಚಾಟ್ಸ್ ಬಗ್ಗೆ ಮಾತ್ರ ಗೊತ್ತಿರುವ ನನಗೆ ಮಿಡತೆ ಚಾಟ್ಸ್ ಬಗ್ಗೆ ತಿಳಿದಿಲ್ಲ.
- ಡಾ.ವಡ್ಡಗೆರೆ ನಾಗರಾಜಯ್ಯ
