ಶ್ಯಾಮಲಾ ಮಾಧವ ಅವರಿಗೆ ‘ತುಷಾರ ಹಾರ’ ಪುಸ್ತಕ ಬರೆದು ಸ್ವಲ್ಪ ಮಟ್ಟಿನ ಸಮಾಧಾನ ದೊರೆತಿರಬಹುದು. ನಿಮಗೆ ಒಳ್ಳೆಯದಾಗಲಿ ಶ್ಯಾಮಲಾ. ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ. – ಗಿರಿಜಾ ಶಾಸ್ತ್ರೀ, ತಪ್ಪದೆ ಮುಂದೆ ಓದಿ…
ಪುಸ್ತಕ : ತುಷಾರ ಹಾರ
ಲೇಖಕರು : ಶ್ಯಾಮಲಾ ಮಾಧವ
ಬೆಲೆ: ೧೭೫ /
ಕೊಳ್ಳಲು ಸಂಪರ್ಕಿಸಬೇಕಾದ ನಂಬರ್ – ಮಂಗಳೂರು – ಸರಿತಾ ನಾಯಕ್ – 9845030802.
‘ಓದಿನ ಸುಖ ‘ ‘ಓದುವ ಸುಖ’ ಎಂಬ ಮಾತಿದೆ. ಆದರೆ ಓದಿನ ಸಂಕಟವೂ ಇದೆ ಎಂಬುದು ಗೊತ್ತಾದದ್ದೇ ಗೆಳತಿ ಶ್ಯಾಮಲಾ ಅವರ ‘ತುಷಾರ ಹಾರ’ ವನ್ನು ಓದಿದಾಗಲೇ. ಕ್ಯಾನ್ಸರ್ ರೋಗಕ್ಕೆ ತುತ್ತಾದ ಒಬ್ಭ ಮಗನ ತಾಯಿಯ ತಲ್ಲಣ, ದುಃಖ, ನೋವು , ಹತಾಶೆಗಳು ಇಲ್ಲಿ ವ್ಯಕ್ತವಾಗಿದ್ದರೂ, ಪ್ರತಿಯೊಬ್ಬ ಓದುಗ ತಾಯಿಯೂ ಮೇಲಿನ ಎಲ್ಲಾ ಸಂಕಟಗಳನ್ನು ಜೊತೆಗಿಟ್ಟುಕೊಂಡೇ ಓದುತ್ತಾಳೆ.- ತನಗೇನಾದರೂ ಇಂತಹ ದುಃಸ್ಥಿತಿ ಬಂದು ಬಿಟ್ಟರೆ ಎಂಬ ಭಯದೊಂದಿಗೆ. ಹಾಗೆ ನೋಡಿದರೆ ಪುತ್ರ ಶೋಕದ ಈ ನಿರಂತರ ಸಂಕಟಕ್ಕೆ ಲಿಂಗ ಭೇದ ವಿಲ್ಲ. ಯಾಕೆಂದರೆ ಇದು ಆತ್ಮದ ಸಂಕಟ. ಹೆಂಗಸಿಗೇನೋ ಸೆರಗಿದೆ ಅತ್ತು ಹಗುರಾಗಲು! ಆದರೆ ಪಾಪಿ ಗಂಡಸಿಗೆ ಅದೂ ಇಲ್ಲ. ಒಳಗೇ ಕುದಿತದ ಕೊಪ್ಪರಿಗೆ.
ಈ ಪುಸ್ತಕ ಓದಿ ಕಣ್ಣು ಮುಚ್ಚಿದ ತಕ್ಷಣ ಯಾರ ಮನದಲ್ಲಾದರೂ ಮೂಡುವ ಭಾವ ಒಂದೇ ‘ಯಾವ ಶತ್ರುವಿಗೂ ಈ ದುಃಖ ಬರಬಾರದು’.
ವಯಸ್ಸಾದ ಅಮ್ಮ ಹೇಳುತ್ತಿದ್ದಳು “ಬೇಗ ಕರೆದುಕೋ ದೇವರೇ ಹೆಚ್ಚು ದಿನ ಉಳಿದರೆ ಏನೇನು ನೋಡಬೇಕೋ?” ಎಂದು. ಅಮ್ಮನ ಈ ಆತಂಕದ ಹಿಂದೆ ಮಕ್ಕಳನ್ನು ಕಳೆದುಕೊಳ್ಳುವ ಭಯವೇ ಅಡಗಿತ್ತು. ಚಿರಂಜೀವಿಯಾಗು ಎಂದು ಆಶೀರ್ವಾದ ಮಾಡುತ್ತಾರಲ್ಲ? ಅದು ವರವೇ? ಮಣ್ಣು! ಅದು ನಿಜವಾಗಿ ಶಾಪವೇ! ಎಲ್ಲಾ ತಾಯಂದಿರಿಗೂ ಹಾಗೆಯೇ, ಮಗು ಬೊಮ್ಮಟೆಯಾಗಿರುವ ಕಾಲದಿಂದ ಹಿಡಿದು ಅದು ವಯಸ್ಸಾಗಿ ಮುದಿಯಾದರೂ ಆಯಾ ವಯಸ್ಸಿಗೆ ತಕ್ಕಂತೆ ಮಗುವನ್ನು ಕಳೆದುಕೊಳ್ಳಬಹುದಾದ ಫೋಬಿಯಾ, ಆತಂಕ ಇದ್ದೇ ಇರುತ್ತದೆ. ಈ ಫೋಬಿಯಾ ನಿಜವೇ ಆಗಿ ಧುತ್ತೆಂದು ಒಂದು ಕಾಳರಾತ್ರಿಯಲ್ಲಿ ಎದುರಾಗಿಬಿಟ್ಟಾಗ ಅವಳ ಮನಸ್ಥಿತಿ ಹೇಗಿರಬಹುದು? ಎನ್ನುವುದಕ್ಕೆ ‘ತುಷಾರ ಹಾರ’ ಒಂದು ನೋವಿನ ಉದಾಹರಣೆ. ಅದನ್ನು ಅವರು ಹೇಗೆ ಎದುರಿಸಿರಬಹುದು? ಓದುವ ತಾಯಂದಿರ ಎದೆ ನಡುಗಿ ಹೋಗುತ್ತದೆ.
ಮೊಮ್ಮಗ ಅಜ್ಜಿಯನ್ನು ಕೇಳುತ್ತಿದ್ದ “ಅಂದರೆ ನೀನು ಹೋದ ಮೇಲೆ ನಿನ್ನ ಮಕ್ಕಳಿಗೆ ಏನಾದರು ಆದರೂ ಪರವಾಗಿಲ್ಲವಾ?”
“ಹೌದು ಆಗ ನನಗೇನು ಗೊತ್ತಾಗುತ್ತದಾ?”
ನಮ್ಮೆಲ್ಲರ ಭಯಗಳೂ ಇರುವುದು ಇಲ್ಲಿಯೇ! ದುಃಖ ನನಗೆ ಗೊತ್ತಾಗಬಾರದು! ನಾನೂ ಅದೇ ಸರತಿಯ ಸಾಲಿನಲ್ಲಿದ್ದೇನಲ್ಲವಾ? ಇನ್ನುನಾಲ್ಕು ದಿನವೋ ಎಂಟೋ? ಎಲ್ಲ ಗಡಿಯಾರದ ಲೆಕ್ಕ! ಯಮನ ಲೆಕ್ಕ ಕಂಡವರಾರು? ಯಕ್ಷಪ್ರಶ್ನೆಯ ವಿಸ್ಮಯವೂ ಇದೆ ಅಲ್ಲವೇ? ಹೀಗೆ ಹೇಳಿಕೊಂಡು ನಮಗೆ ನಾವೇ ಸಮಾಧಾನ ಪಟ್ಟುಕೊಳ್ಳಬೇಕು! ಇಲ್ಲದಿದ್ದರೆ ಬುದ್ಧನಾಗಲು ಸಾಧ್ಯವೇ?
ಬಿ.ವಿ. ಭಾರತಿಯೇನೋ ‘ಸಾಸಿವೆ ತಂದರು’. ಅದೂ ಕೂಡ ನೋವಿನ ಕತೆಯೇ! ಆದರೂ ಅಲ್ಲಿ ಗೆಲುವಿದೆ. ಓದಿನ ಸುಖವಿದೆ. ಪುಸ್ತಕ ಮುಚ್ಚಿದ ಮೇಲೆ ‘ಸದ್ಯ’ ಎಂದು ಎದೆಯಮೇಲೆ ಕೈಇಟ್ಟು ನಿರಾಳವಾಗಿ ಬಿಡುಗಡೆಯ ಉಸಿರುಬಿಡುತ್ತೇವೆ. ಈ ರೋಗ ಒಂದು ಪಕ್ಷ ನನಗೋ ನನ್ನ ಗಂಡ, ಮಕ್ಕಳಿಗೋ ವಕ್ಕರಿಸಿದರೂ ಗೆದ್ದು ಬರಬಹುದು ಎನ್ನುವ ಗೆಲುವಿನ ಮೋಡ್ ನಲ್ಲಿ ನಿಲ್ಲಿಸುವ ಸುಖಾಂತದ ಓದು ಅದು. ಆದರೆ ಶ್ಯಾಮಲಾ ಅವರ ತುಷಾರನಿಗೆ, ಯಾವ ರೀತಿಯಲ್ಲೂ ಭ್ರಷ್ಟವಾಗದೇ, ದೇಹವನ್ನು ದುರುಪಯೋಗ ಗೊಳಿಸದೇ ಪರುಶುದ್ಧವಾಗಿ ಬದುಕಿದ ಮಗುವಿಗೆ ಈ ಭಾಗ್ಯವಿಲ್ಲದೇ ಹೋಯಿತು. ಯಾಕೆ ಹೀಗೆ ಆಗುತ್ತದೆ ಕೆಲವರಿಗೆ? ಸಂಕಟದ ಪ್ರಶ್ನೆ.
ನನ್ನ ಗೆಳತಿ ಹೋಮಿಯೋಪತಿ ವೈದ್ಯೆ ಹೇಳುತ್ತಿದ್ದಳು. ಇಂತಹ ಅವಘಡಗಳು ಸಂಭವಿಸಿದಾಗೆಲ್ಲಾ ” why me ?” ಎಂದು ಕೇಳಿಕೊಳ್ಳುತ್ತೇವೆ. ಅದೇ ಪುರಸ್ಕಾರ ಪ್ರಶಸ್ತಿ ಸಿಕ್ಕರೆ ಹೀಗೆ ಕೇಳಿಕೊಳ್ಳುತ್ತೇವೆಯೇ? ಎಂದು. ಪ್ರಶಸ್ತಿ ಪುರಸ್ಕಾರಗಳ ಸುಖದ ಅಮಲಾಗಲೀ, ಸಾವಿನ ಸಂಕಟದ ನೋವಾಗಲೀ ಶಾಶ್ವತವಲ್ಲ. ಪಂಪನ ಕರ್ಣ ತನ್ನ ತಾಯಿ ಕುಂತಿಯನ್ನು ಕೇಳುತ್ತಾನೆ “ಈ ಒಡಲು ಕಲ್ಪಾಂತರ ಸ್ಥಾಯಿಯೇ ಪೇಳಾ ಅಬ್ಬೆ?” ಯಾವುದೂ ಸ್ಥಾಯಿಯಲ್ಲ! ಎಲ್ಲವೂ ಬದಲಾಗುತ್ತಲೇ ಹೋಗುವಂತಹದ್ದು. ಶ್ಯಾಮಲಾ ಗೆಳತಿ ‘ಸಬರ್ ಕರೋ…. ಯಾರ್ . This too shall pass ( ಇಲ್ಲಿ ಹೆಚ್ಚಿನ ಅಧ್ಯಾಯಗಳಿಗೆ ಹಿಂದಿ ಶೀರ್ಷಿಕೆ ಇದೆ) ‘ಗುರುದೇವ್’ ಎನಿಸಿಕೊಂಡ ತುಷಾರ ಅವನ ಸಂಗಡಿಗರ ವಿಚಾರಗಳ ಮೂಲಕ ಚಿಂತನೆಗಳ ಮೂಲಕ ಸೃಜನಶೀಲ ಕ್ರಿಯೆಗಳ ಮೂಲಕ ಮುಂದುವರಿಯುತ್ತಲೇ ಇರುತ್ತಾನಲ್ಲವೇ? ಅವನು ಅಮರ. ನಿಮ್ಮ ಪುಸ್ತಕದ ಮೂಲಕವಂತೂ ನೀವು ಈಗಾಗಲೇ ಅಮರಗೊಳಿಸಿಬಿಟ್ಟಿದ್ದೀರಿ!
ಕೊರಳ ಗೆಳತಿಯಾದರೂ ನಿಮ್ಮ ಸಂಕಟದ ಸಮಯಕ್ಕೆ ನಾನು ಒದಗಿ ಬರಲು ಸಾಧ್ಯವಾಗಲಿಲ್ಲ. ಮನೆಯಾಚೆ ಕೊರೋನಾ ನಮ್ಮನ್ನು ಹೊಂಚು ಹಾಕಿ ಕಾಯುತ್ತಿತ್ತಲ್ಲ ಶ್ಯಾಮಲಾ.? ನಾನು ಅಮ್ಮನ ಸಾವಿಗೂ ಹೋಗಲು ಸಾಧ್ಯವಾಗಲಿಲ್ಲ.
ನಿಮಗೆ ಈ ಪುಸ್ತಕ ಬರೆದು ಸ್ವಲ್ಪ ಮಟ್ಟಿನ ಸಮಾಧಾನ ದೊರೆತಿರಬಹುದು. ಇದು ನಂದದ ಒಡಲುರಿ. ಶಮನವಾಗುವುದಿಲ್ಲ. ಆದರೂ ಆಗಾಗ್ಗೆ ಹೀಗೆ ತಾತ್ಕಾಲಿಕವಾಗಿ ತಂಪುಗೊಳಿಸುತ್ತಿರಬೇಕಾಗುತ್ತದೆ.
ನಿಮಗೆ ಒಳ್ಳೆಯದಾಗಲಿ ಶ್ಯಾಮಲಾ. ಹೆಚ್ಚು ಹೆಚ್ಚು ಬರವಣಿಗೆಯಲ್ಲಿ ತೊಡಗಿಸಿಕೊಳ್ಳಿ.
ನಿಮ್ಮ ನೋವನ್ನು ನಾನು encash ಮಾಡಿಕೊಂಡೆನೇ? ಕ್ಷಮಿಸಿ.
ಶಾಮಲಾ ಅವರ ಮಾತು:
ಈ ‘ತುಷಾರ ಹಾರ’ ದಿಂದ ಒದಗಿ ಬರುವ ಹಣದ ಮೊತ್ತವು Anirudh Charitable Trust ಗೆ ದೇಣಿಗೆಯಾಗಿ ಕೊಡಲ್ಪಡುವುದು. 27 ವರ್ಷ ಪ್ರಾಯದಲ್ಲಿ ಅಗಲಿದ ನನ್ನಣ್ಣನ ಮಗ ಅನಿರುದ್ಧನ ಹೆಸರಲ್ಲಿ ಕಳೆದ ವರ್ಷ ಟ್ರಸ್ಟ್ ಸ್ಥಾಪಿಸಲಾಗಿದೆ. ಡಾ.ವಿವೇಕ ರೈ, ಹಾಜಿ ಅಬ್ದುಲ್ಲಾ ಮುಂತಾದವರು ಟ್ರಸ್ಟಿಗಳಾಗಿದ್ದಾರೆ. ಕ್ಯಾನ್ಸರ್ ಹಾಗೂ ಕಿಡ್ನಿ ಪೇಶೆಂಟ್ಸ್ ಗಳ ಹಾಗೂ ಬಡ ವಿದ್ಯಾರ್ಥಿಗಳ ಸಹಾಯಕ್ಕಾಗಿ ಸ್ಥಾಪಿತವಾದ ಟ್ರಸ್ಟ್ ಗೆ ಸಲ್ಲುವ ದೇಣಿಗೆಯಿದು.
ಕೊಂಡು ಓದಿ… ನಿಮ್ಮ ಹಣ ಯಾವುದೋ ಕ್ಯಾನ್ಸರ್ ರೋಗಿಗೆ, ಕಿಡ್ನಿ ತೊಂದರೆಯಿಂದ ನರಳುವವರಿಗೆ, ಬಡ ವಿದ್ಯಾರ್ಥಿಗೆ ಬೆಳಕು ನೀಡಬಲ್ಲದು ತುಷಾರ ಹಾರ
- ಗಿರಿಜಾ ಶಾಸ್ತ್ರೀ