ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರ ‘ಮಹಲಿಂಗರಂಗನ ಅನುಭವಾಮೃತ ಬ್ರಹ್ಮಯಾನ’ ಪುಸ್ತಕದ ಕುರಿತು ಡಾ. ಸತ್ಯಮಂಗಲ ಮಹಾದೇವ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…
ಪುಸ್ತಕ : ಮಹಲಿಂಗರಂಗನ ಅನುಭವಾಮೃತ ಬ್ರಹ್ಮಯಾನ
ಲೇಖಕರು : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಪ್ರಕಾಶಕರು : ಉದಯ ಪ್ರಕಾಶನ
ಬೆಲೆ : 700.00
ಪುಟಗಳು : ೭೦೦
ಖರೀದಿಗಾಗಿ :080 23389143
ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಗುರುಗಳ ‘ಮಹಲಿಂಗರಂಗನ ಅನುಭವಾಮೃತ ಬ್ರಹ್ಮಯಾನ’ವು ಆಧ್ಯಾತ್ಮದ ಆಧಾರ ರಚಿಸಲ್ಪಟ್ಟ ಕೃತಿ. ಅಧಿಕಾರ ಲಕ್ಷಣ ,ವೈರಾಗ್ಯ ಪ್ರಕರಣ , ತ್ವಂಪದಾರ್ಥ ಶೋಧನೆ, ತತ್ಪದಾರ್ಥ ಶೋಧನೆ, ಅಸಿಪದಾರ್ಥ ನಿರ್ಣಯ, ಸಪ್ತಭೂಮಿಕೆಗಳ ಅಭ್ಯಾಸ, ಪರಮಾತ್ಮದ ನಿರೂಪಣ,ಮಾಯೆಯ ಮಿಥ್ಯಾಸ್ವರೂಪ, ಜೀವತ್ರಯ ವಿಚಾರ, ನಿರ್ಗುಣಾರಾಧನೆಯ ನಿರ್ಣಯ, ಜೀವನ್ಮುಕ್ತಿ ನಿರೂಪಣ ಎಂಬ 11 ಅಧ್ಯಾಯಗಳಿದ್ದು, ಅವುಗಳ ಉಪವಿಭಾಗಗಳಿವೆ.
ಕೃತಿಕಾರ ಮಲ್ಲೇಪುರಂ ಜಿ. ವೆಂಕಟೇಶ ಹೇಳುವಂತೆ `ಬ್ರಹ್ಮಯಾನ’ ಮಹಾಸಂಪುಟವು ಭೌತಿಕಚರ್ಯೆಯನ್ನು ವಿಮುಕ್ತಗೊಳಿಸಿ ಪಾರಮಾರ್ಥಿಕ ನೆಲೆಗೆ ನಮ್ಮನ್ನು ಒಯ್ಯುವ ವಿಶಿಷ್ಟ ಬೆಳಗು. ಕಳೆದ ಐದು ವರ್ಷಗಳಿಂದ ನಾನು ಈ ಅರಿವಿನ ಬೆಳಗಿನಲ್ಲಿ ತೋಯ್ದು ಹೋಗಿದ್ದೇನೆ. ಈ ಮಹಾಸಂಪುಟದ ಓದು, ಅಧ್ಯಯನ, ಅನುಸಂಧಾನ, ಸಂವಾದಗಳು ಅರಿವಿನ ಬೆಳಗನ್ನು ತಂದುಕೊಟ್ಟು ಪಾರಮಾರ್ಥಿಕ ಪ್ರಪಂಚದ ಕಡೆ ನಿಮ್ಮನ್ನೂ ನನ್ನನ್ನೂ ಕರೆದೊಯ್ಯುತ್ತಿವೆ ಎಂದಿದ್ದಾರೆ.
ಮಹಲಿಂಗರಂಗನ `ಅನುಭವಾಮೃತ’ ವೇದಾಂತ ಕಾವ್ಯವು ಕನ್ನಡದಲ್ಲಿ ಮೂಡಿದೆ. ಈ ಸಂಗತಿಯನ್ನು ನಾವು ಚೆನ್ನಾಗಿ ಮನಗಾಣಬೇಕು. ನಾನು ಪ್ರಾಚೀನ ಪದ್ಧತಿಯ ಟೀಕು-ತಾತ್ಪರ್ಯಗಳನ್ನು ಅನುಸರಿಸಿಲ್ಲ; ಅಥವಾ ಆಧುನಿಕ ರೀತಿಯ ವಿಮರ್ಶಾ ಕ್ರಮವನ್ನೂ ಅನುಸರಿಸಿಲ್ಲ. ಇವೆರಡು ಪ್ರತ್ಯೇಕ ಪ್ರತ್ಯೇಕವಾಗಿ ಉತ್ತಮ ಕ್ರಮಗಳೇನೋ ಸರಿ. ಆದರೆ, ಪ್ರತಿಯೊಂದು ಅಧ್ಯಾಯದ ಒಂದೊಂದು ಘಟ್ಟವನ್ನು ವೈಚಾರಿಕ ಆಕೃತಿಯ ನೆಲೆಯಲ್ಲಿ ಮಾತ್ರ ನೋಡಿದ್ದೇನೆ. ಸೂಕ್ತವಾದ ಪದ್ಯಗಳನ್ನು ಆಯ್ದು ಅನುವಾದಿಸಿ, ವಿವರಿಸಿದ್ದೇನೆ. ಇನ್ನೂ ಕೆಲವು ಕಡೆ ಪದ್ಯದ ಸಾರಾಂಶಗಳನ್ನು ಕೊಟ್ಟು ವಿಚಾರದ ಕಂಡಿಕೆಗೆ ಕುತ್ತು ಬರದಂತೆ ಮುಂದುವರೆಸಿದ್ದೇನೆ.
‘ಮಹಲಿಂಗರಂಗನ ಅನುಭವಾಮೃತ ಬ್ರಹ್ಮಯಾನ’ ಪುಸ್ತಕ ಲೇಖಕರು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ನಾನು ಅಂಕಣದಲ್ಲಿ `ಆಧ್ಯಾತ್ಮಿಕಾನುಸಂಧಾನ’ವನ್ನೇ ಪ್ರಧಾನವಾಗಿ ಹಮ್ಮಿಕೊಂಡಿದ್ದೇನೆ. ಅದು ಸರಿಯಾದ ದಾರಿಯಲ್ಲಿ ನಡೆಯಿತೆಂದು ತಿಳಿದುಕೊಂಡಿದ್ದೇನೆ. ಆ ಗ್ರಂಥಗಳ ತಾತ್ತ್ವಿಕ ಭಾವವನ್ನು ಗ್ರಹಿಸಿ ನನ್ನ ಮಾತಿನಲ್ಲಿ ಅವನ್ನು ಪುನಾರೂಪಿಸಿರುವುದುಂಟು. ನಾನು ಆಧುನಿಕ ವೇದಾಂತಜ್ಞರ ಹತ್ತಾರು ಕೃತಿಗಳನ್ನು ಅನುಸಂಧಾನಿಸಿದ್ದೇನೆ. ಸಾಧನೆಯ ದೃಷ್ಟಿಯಿಂದಲೂ ಸಾಧಕರ ಮನೋಕಲ್ಪ ನೆಲೆಯಿಂದಲೂ ಹತ್ತಾರು ವಿಚಾರಗಳನ್ನು ಜೋಡಿಸಿ ವಿವರಿಸಿದ್ದೇನೆ. ನನ್ನದು ಪ್ರಧಾನವಾಗಿ ವಿಶ್ಲೇಷಣಾ ಪ್ರವೃತ್ತಿ. ಇವೆರಡು ಪ್ರವೃತ್ತಿಗಳು ಒಂದಕ್ಕೊಂದು ಪೂರಕವೇ ಹೊರತು; ಮಾರಕವಲ್ಲ! ಇದರ ಜತೆಗೆ, ವಿಚಾರಗಳ ಸ್ಪಷ್ಟತೆಗಾಗಿ ಪ್ರತಿ ವಿಷಯ ವಿಭಾಗದ ಕಡೆಯಲ್ಲಿ `ಕೊನೆ ಟಿಪ್ಪಣಿ’ಗಳನ್ನು ನೀಡಿದ್ದೇನೆ. ನನ್ನ ವ್ಯಾಖ್ಯಾನಕ್ಕೆ ‘ಅಧ್ಯಾತ್ಮ ಸಂಜೀವಿನಿ’ ಎಂದು ಹೆಸರು ಕೊಟ್ಟಿದ್ದೇನೆ’ ಎಂಬುದಾಗಿ ಮಲ್ಲೇಪುರಂ ಗುರುಗಳು ಹೇಳಿದ್ದಾರೆ
- ಡಾ. ಸತ್ಯಮಂಗಲ ಮಹಾದೇವ