‘ಹೆಚ್ಚೇನೂ ಬೇಡ ದೊರೆಯೇ, ಸಾಯೋವರೆಗೆ ಬದುಕೋಣ ಗೆಳೆಯಾ’…ಕವಿ ಹಂದಿಕುಂಟೆ ನಾಗರಾಜ ಅವರು ಗೆಳೆಯನಿಗಾಗಿ ಬರೆದ ಕವನ, ತಪ್ಪದೆ ಮುಂದೆ ಓದಿ…
ಇನ್ನೂ ದಾರಿ ದೂರವಿದೆ ಗೆಳೆಯಾ
ಸಾಗಬೇಕಿದೆ ನಿನ್ನೊಟ್ಟಿಗೆ,
ಈಗಲೇ ನಡೆವುದ ನಿಲ್ಲಿಸಬೇಡ
ಕಾಲು ಸೋತಿವೆಯೆಂಬ ಹುಸಿ ನೆಪವ ಹೇಳಿ.!
ನಡೆವ ಹಾದಿಯಲ್ಲಿ ಬಿಸಿಲಾದಾಗೆಲ್ಲ
ನೀನಿದ್ದರೂ ಸಾಕು ನೆರಳು, ನೀರಡಿಕೆ ನೀಗಲಿಕ್ಕೆ.
ನೀನಿಟ್ಟ ಹೆಜ್ಜೆಯ ಮೇಲೊಂದು ಹೆಜ್ಜೆ
ಕಾಲಡಿಯ ಕಾದ ಮರಳೂ ಕೂಡಾ ಮೃದುತಲ್ಪ.!
ಇನ್ನೇನು ನಾನೂ ಸೋತೆನೆಂಬ
ನಿಟ್ಟುಸಿರು ನಿನಗೆ ತಲುಪಿದರೂ ಸಾಕು
ಅದಾಗಲೇ ನಿನ್ನಾಸರೆಯ ಭುಜಗಳು!!
ತೋಳ ತೆಕ್ಕೆ ಇನ್ನೇನು ಬೇಕು ?ಈ ಬಡವಿಗೆ?
ಸಾವಿರ ಕನಸುಗಳ ಕಣ್ಣೊಳಗೆ
ಹೊತ್ತು ತಂದಿದ್ದೇನೆ, ಕಾವಲಿಗೆ
ನೀನಿದ್ದರೆ ಸಾಕು ಅಕ್ಷೋಹಿಣಿ ಸೈನ್ಯ ಬಲ,
ಇನ್ನೇನು ಬೇಡ ಈ ಬಂಧದ ಹೊರತು.
ಒಮ್ಮೆ ಈ ಕಣ್ಣಲ್ಲಿ ಕಣ್ಣಿಟ್ಟು ನೋಡು
ಅಷ್ಟೂ ಬೆಳಕಿನ ಪ್ರತಿಫಲನ ನೀನೆ,
ನೀನೆಂದರೇ ಬೆಳಕು,ಇದು ಕತ್ತಲಾಗದಿರಲಿ ದೊರೆ,
ಕಣ್ಣೆವೆಯಿಕ್ಕದೆ ಕಾಯ್ದುಕೊಳ್ಳುತ್ತೇನೆ.
ನಡೆವ ಹಾದಿಗೆಲ್ಲಾ ಕನಸುಗಳ ಹಾಸುತ್ತೇನೆ
ಬದುಕಬೇಕೆಂದಾಗ ಜೀವ ಪಣಕ್ಕಿಡುತ್ತೇನೆ,!
ನಾಳೆಗೆ ನೆರಳಾಗಿ ನಿನ್ನೆಯ ನೆನಪುಗಳಿವೆ
ಈ ದಾರಿಯ ಕತ್ತಲೆಗೆ ನೀನೆ ಬೆಳಕು.!!
ಹೆಚ್ಚೇನೂ ಬೇಡ ದೊರೆಯೇ
ಸಾಯೋವರೆಗೆ ಬದುಕೋಣ ಸಾಕು,
ಅಷ್ಟಾದರೂ ನಿನ್ನಲ್ಲಿ ಕೇಳದೆ ಇನ್ನೆಲ್ಲಿ ಕೇಳಲಿ ನಾನು?
ಗುರಿ ಮುಟ್ಟುವ ತನಕ ಗುರುವಾಗಿರು ಅಷ್ಟೇ ಸಾಕು.!
- ಹಂದಿಕುಂಟೆ ನಾಗರಾಜ