ಮೇಗರವಳ್ಳಿ ರಮೇಶ್ ಅವರು ಮೊಮ್ಮಗನಿಗಾಗಿ ಬರೆದ ಒಂದು ಸುಂದರ ಕವಿತೆ ಓದುಗರ ಮುಂದೆ,ತಪ್ಪದೆ ಮುಂದೆ ಓದಿ…
ಕ೦ದ, ಎಷ್ಟು ಚ೦ದ
ಈ ನಿನ್ನ ಕಿಲ ಕಿಲ ನಗೆಯ ಮೋಡಿ
ಎಷ್ಟು ಮಧುರ
ನಿನ್ನ ತೊದಲು ನುಡಿ.
ನಿನ್ನನ್ನೆತ್ತಿ ಮುದ್ದಡುವಾಗ
ಕುಣಿವುದುತ್ಸಾಹದಲಿ ನನ್ನ ಮನ
ಮೊಮ್ಮಗನಜತೆ ಮೊಮ್ಮಗುವಾಗಿದ್ದಾನೆ ಅಜ್ಜ
ಎನ್ನುತ್ತಾರೆ ಜನ.
ನನ್ನ ತೊಡೆಯೇರಿ ನನ್ನ ಮುಖವನ್ನೆಲ್ಲ ಮುದ್ದಿಸುತ್ತ
ನಿನ್ನ ನಾಲಗೆಯಿ೦ದ ಎ೦ಜಲು ಸವರಿ ಕೇಕೆ ಹಾಕಿದಾಗ
ನನ್ನ ಬದುಕಿನಲಿ ಮೊಳೆಯುವವು
ಹೊಸ ಭರವಸೆಯ ಮೊಳಕೆಗಳು.
ಮಗೂ, ನನ್ನೊಳಗನ್ನೆಲ್ಲ ಆವರಿಸಿ
ನನ್ನೊಳಗೆ ನೀನು, ನಿನ್ನೊಳಗೆ ನಾನು
ಅದ್ವೈತದಾಧ್ಯಾತ್ಮದರ್ಥಗಳ ತೆರೆದು
ಧನ್ಯತೆಯ ಭಾವರಸ ತು೦ಬಿರುವೆ
ತೊಟ್ಟು ಕಳಚುತ್ತಿರುವ
ಈ ಕಳಿತ ಹಣ್ಣಿನಲ್ಲಿ.
ಬೆಸೆದಿರುವೆ ನನ್ನ
ವ೦ಶವಾಹಿಯ ಕೊ೦ಡಿಯಲ್ಲಿ.
*
ಮಗೂ,
ನಿ ದೊಡ್ಡವನಾದ ಮೇಲೆ
ಗುರುತಿಸು ನನ್ನ
ಈ ಹಳೆಯ ಕಪಾಟಿನಲ್ಲಿ
ಗೆಜ್ಜಲು ಹಿಡಿಯದೇ ಉಳಿದಿದ್ದರೆ
ನನ್ನ ಪುಸ್ತಕದ ಕವಿತೆಗಳಲ್ಲಿ.
ಆಗಸದ ನಕ್ಷತ್ರಗಳಲ್ಲೊ೦ದು ನಕ್ಷತ್ರವನ್ನು ಗುರುತಿಸಿ
ನನ್ನ ಹೆಸರನ್ನಿಡು ಅದಕ್ಕೆ
ನಾನು ಬೆಳಗುತ್ತೇನೆ
ನಿನ್ನ ಬದುಕಿನುದ್ದಕ್ಕೆ.
- ಮೇಗರವಳ್ಳಿ ರಮೇಶ್ -ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿ, ಬೆಂಗಳೂರು.