ಕ್ರೈಸ್ತ ಮಿಶಿನರಿ ಒಬ್ಬರು ಕೈಯಲ್ಲಿ ಹಸಿದ ಮಗುವಿನ ಕೈಯಿದೆ. ಇಡೀ ಉಗಾಂಡದ ದುರಂತ ಸ್ಥಿತಿಯನ್ನು ಇದು ಬಿಂಬಿಸುತ್ತದೆ. ಆ ದೇಶಕ್ಕೆ ಸಹಾಯ ಹಸ್ತ ಬೇಕಿದೆ ಎಂಬುದೇ ಇಲ್ಲಿನ ತಿರುಳು. ಛಾಯಾಗ್ರಾಹಕ ಸಿದ್ಧರಾಮ ಕೂಡ್ಲಿಗಿ ಅವರು ಇನ್ನೊಬ್ಬ ಛಾಯಾಗ್ರಾಹಕ ಮೈಕ್ ವೆಲ್ಸ್ ಅವರು ಕ್ಲಿಕಿಸಿದ ಒಂದು ಚಿತ್ರದ ಹಿಂದಿನ ಕತೆಯಿದು…
–
ಫೋಟೊಗಳನ್ನು ಸ್ಪರ್ಧೆಗೆ ಕಳಿಸೋದು, ಅವುಗಳಿಗೆ ಬಹುಮಾನ, ಪುರಸ್ಕಾರ ಸಿಗೋದು ಫೋಟೊಗ್ರಾಫರ್ ಗಳಿಗೆ ಅತ್ಯಂತ ಸಂತಸದ ಸಂಗತಿ. ಕೆಲವು ಫೋಟೊಗಳನ್ನು ಕ್ಲಿಕ್ ಮಾಡಿದಾಗ ಬಹುಮಾನ ಬಂದರೂ ಅದು ತುಂಬ ಬೇಸರ ಹಾಗೂ ನೋವಿನ ಸಂಗತಿಗಳಾಗಿಬಿಡುವ ಸಂದರ್ಭಗಳೂ ಇರುತ್ತವೆ.

ಫೋಟೋ ಕೃಪೆ : google
–
ಇಲ್ಲಿ ನೋಡಿ ಈ ಚಿತ್ರ Wrold Press Photo ಪುರಸ್ಕಾರ ಲಭಿಸಿದ ಫೋಟೊ. ಇದನ್ನು ಕ್ಲಿಕ್ ಮಾಡಿದ ವ್ಯಕ್ತಿ ಮೈಕ್ ವೆಲ್ಸ್ (Mike Wells). ಉಗಾಂಡದ ಕರಮೊಜಾ ಎಂಬ ಜಿಲ್ಲೆಯಲ್ಲಿ ಈ ಚಿತ್ರವನ್ನು ಎಪ್ರಿಲ್ 1980ರಲ್ಲಿ ಕ್ಲಿಕ್ ಮಾಡಲಾಯಿತು. ಇಲ್ಲಿ ವಿಶೇಷವೆಂದರೆ ಉಗಾಂಡದಲ್ಲಿ 1980ರಲ್ಲಿ ಭೀಕರ ಕ್ಷಾಮ ತಲೆದೋರಿ ಹಸಿವಿನಿಂದಲೇ ಶೇ.20ರಷ್ಟು ಜನ ಸಾವಿಗೀಡಾದರೆ, ಶೇ.60ರಷ್ಟು ಶಿಶುಗಳೂ ಸಹ ಮರಣ ಹೊಂದಿದವು. ಜಗತ್ತಿನ ಇತಿಹಾಸದಲ್ಲಿಯೇ ಇದೊಂದು ಅತ್ಯಂತ ದುರಂತದ ಸಂಗತಿಯಾಗಿದೆ.
–
ಈ ಎಲ್ಲ ಸಂಗತಿಯನ್ನು ಇದೊಂದೇ ಚಿತ್ರ ಹೇಳಿ ಬಿಡುತ್ತದೆ. ಇಲ್ಲಿ ವಿವರಣೆಯ ಅಗತ್ಯವೇ ಇಲ್ಲ. ಜಗತ್ತಿನ ಯಾವುದೇ ನಾಯಕನೂ ಇಲ್ಲಿನ ಕ್ಷಾಮದ ಭೀಕರತೆಯ ಬಗ್ಗೆ ದನಿಯೆತ್ತುವುದು ಬೇಕಿಲ್ಲ, ಪತ್ರಿಕೆಗಳಲ್ಲಿ ಉದ್ದುದ್ದ ಸುದ್ದಿಯನ್ನು ಪ್ರಕಟಿಸುವುದೂ ಬೇಕಿಲ್ಲ. ಕೇವಲ ಈ ಒಂದೇ ಒಂದು ಚಿತ್ರವೇ ಸಾಕು ಎಲ್ಲ ತಿಳಿಸಿಬಿಡುತ್ತದೆ.

ಫೋಟೋ ಕೃಪೆ : google
–
ಕ್ರೈಸ್ತ ಮಿಶಿನರಿ ಒಬ್ಬರು ಕೈಯಲ್ಲಿ ಹಸಿದ ಮಗುವಿನ ಕೈಯಿದೆ. ಅಷ್ಟೇ ಇಲ್ಲಿನ ದೃಶ್ಯವಾದರೂ ಇಡೀ ಉಗಾಂಡದ ದುರಂತ ಸ್ಥಿತಿಯನ್ನು ಇದು ಬಿಂಬಿಸುತ್ತದೆ. ಆ ದೇಶಕ್ಕೆ ಸಹಾಯ ಹಸ್ತ ಬೇಕಿದೆ ಎಂಬುದೇ ಇಲ್ಲಿನ ತಿರುಳು.
–
ನಂತರ ಈ ಚಿತ್ರಕ್ಕೆ ಪ್ರಶಸ್ತಿ ಲಭಿಸಿದಾಗ “ಈ ಚಿತ್ರಕ್ಕಾಗಿ ನಾನು ಪ್ರಶಸ್ತಿ ಪಡೆಯಲು ನಾಚಿಕೆ ಪಡುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ. ಈ ಚಿತ್ರ ಸ್ಪರ್ಧೆಗೆ ಹೋಗುವ ಮುಂದೆ 5 ತಿಂಗಳ ಕಾಲ ಪತ್ರಿಕೆಯಲ್ಲಿ ಪ್ರಕಟವಾಗದೇ ಹಾಗೇ ಕುಳಿತಿತ್ತು ಎಂದರೆ ನಂಬುತ್ತೀರಾ ? ನಿಜ. ಪತ್ರಿಕೆಯಲ್ಲಿ ಪ್ರಕಟವಾದ ನಂತರ ಇದು ಸ್ಪರ್ಧೆಗೆ ಹೋಯಿತು. ಈ ಚಿತ್ರಕ್ಕೆ ಪುರಸ್ಕಾರವೂ ಲಭಿಸಿತಾದರೂ ಛಾಯಾಗ್ರಾಹಕ ಮೈಕ್ ವೆಲ್ಸ್ ಹೇಳುತ್ತಾರೆ ” ಹಸಿವಿನಿಂದ ಸಾವಿಗೀಡಾಗುವ ಜನರ ಚಿತ್ರಗಳಿಗೆ ಬಹುಮಾನ, ಪುರಸ್ಕಾರಗಳನ್ನು ನಾನು ವಿರೋಧಿಸುತ್ತೇನೆ ” ಎನ್ನುತ್ತಾರೆ.

ಫೋಟೋ ಕೃಪೆ : google
–
ಏನೇ ಇರಲಿ ಮೈಕ್ ವೇಲ್ಸ್ ಚಿತ್ರ ತೆಗೆದರು, ಅದು ಜಾಗತಿಕ ಮಟ್ಟದಲ್ಲಿಯೇ ಅತ್ಯಂತ ಪ್ರಸಿದ್ಧ ಚಿತ್ರವೆಂದು ಹೆಸರು ಮಾಡಿತು, ಇಡೀ ದೇಶದ ಹಸಿವನ್ನು ಒಂದೇ ಒಂದು ಚಿತ್ರ ಬಿಂಬಿಸಿತು, ಆದರೆ ಇದಕ್ಕೆ ಪುರಸ್ಕಾರ ದೊರೆತಾಗ ಮಾತ್ರ ಮೈಕ್ ವೆಲ್ಸ್ ದು:ಖಪಡುತ್ತಾರೆ. ಯಾಕೆಂದರೆ ಈ ಚಿತ್ರವನ್ನು ಜಗತ್ತಿನ ಕಣ್ಣು ತೆರೆಸಲು ತೆಗೆದರೆ ಹೊರತು ಪ್ರಶಸ್ತಿಗಾಗಿ ಅಲ್ಲ.
–
ಇಂಥ ಚಿತ್ರಗಳನ್ನು ತೆಗೆಯುವ ಮುಂಚೆ ಎಲ್ಲ ಛಾಯಾಗ್ರಾಹಕರೂ ಇದನ್ನು ಗಮನಿಸಬೇಕು.
- ಸಿದ್ಧರಾಮ ಕೂಡ್ಲಿಗಿ
