ಮೊಬೈಲ್ ನಲ್ಲಿ ಬಂದ ಮೆಸ್ಸೇಜ್ ನೋಡಿ ಗಾಬರಿಯಾದೆ, ಆ ಗಾಬರಿಯಿಂದ ಒಂದು ವಾರ ಮೊಬೈಲ್ ನ್ನು ಕಣ್ಣೆತ್ತು ನೋಡಲಿಲ್ಲ. ಅಂತದ್ದು ಏನಾಯಿತು ತಪ್ಪದೆ ಓದಿ “ಮೊಬೈಲ್ ಅವಾಂತರ” ಸಣ್ಣಕತೆ…
ಈ ಹಾಳಾದು ಮೊಬೈಲ್ ನ್ನ ಯಾರು ಕಂಡು ಹಿಡಿದ್ರೋ ಗೊತ್ತಿಲ್ಲ… ಹೋಗ್ಲಿ, ಯಾರಾದ್ರೂ ಕಂಡು ಹಿಡಿಯಲಿ, ಈ ನನ್ನ ಪದ್ದಣ್ಣನಿಗೆ ಬುದ್ದಿ ಬೇಡ್ವಾ… ಮೊಬೈಲ್ ನಾನು ಕೇಳಿದ್ನಾ. ಇಲ್ಲಾ…ಕೇಳಿರಲಿಲ್ಲ. ಈ ಮೊಬೈಲ್ ತಗೋ, ಆ ಮೊಬೈಲ್ ತಗೋ ಅಂತ ಕೊನೆಗೆ ಟಚ್ ಸ್ಕ್ರೀನ್ ಮೊಬೈಲ್ ನ್ನೇ ಕೊಡಿಸಿ ಬಿಟ್ಟ. ಮೊಬೈಲ್ ಕೈಗೆ ಬಂದ್ಮೇಲೆ ಸುಮ್ನೆ ಇರೋಕೆ ಆಗುತ್ತಾ…ಫೇಸ್ಬುಕ್, ವಾಟ್ಸಪ್ಪ್ ಅಂತ ಸ್ಕ್ರೀನ್ ನಲ್ಲಿ ತುಂಬಿಸೋದು ಬೇಡ್ವಾ. ತುಂಬಿದ್ಮೇಲೆ ಕಣ್ಣು ಪದೆ ಪದೆ ಮೊಬೈಲ್ ನತ್ತ ಹೋಗದೆ ಇರುತ್ತಾ?…ಇದಕ್ಕೆಲ್ಲ ಕಾರಣ ಪದ್ದಣ್ಣನ, ಅಂತ ಆಗಾಗ ಬೈಕೊಂಡು ಮತ್ತೆ ಮೊಬೈಲ್ ಹಿಡಿದೆ. ಒಂದಾದ್ಮೇಲೆ ಒಂದು ರೀಲ್ಸ್ ನೋಡ್ತಾ ಕೂತಿದ್ದೆ.
ಸರಿಯಾಗಿ ಒಂದು ಗಂಟೆಗೆ ಪದ್ದಣ್ಣ ಹೊರಗೆ ಊಟಕ್ಕೆ ಹೋಗೋಣ್ವಾ ಅಂದ. ಈ ಮೊಬೈಲ್ ಕೆರೆತಕ್ಕೆ ಅಡುಗೆ ಮಾಡೋದೇ ಮರೆತಿದ್ದೆ. ಸದ್ಯ ಪದ್ದಣ್ಣನ ಬಾಯಿರುಚಿಗೆ ಬದ್ಕೊಂಡೆ ಅಂತ ಸರಿ ಹೋಗೋಣ ಅಂದೆ. ಅಡುಗೆ ಮಾಡೋದು ತಪ್ತು ಅಂತ ಖುಷಿಯಲ್ಲಿ ಬೇಗ ಬೇಗನೇ ಬಗಲಿಗೆ ಬ್ಯಾಗ್ ಹಾಕೊಂಡು, ಆ ಗಡಿ ಬಿಡಿಯಲ್ಲಿಯೂ ಮೊಬೈಲ್ ಮಾತ್ರ ಕೈ ಬಿಡದೆ ಎಲ್ಲವನ್ನು ಹಿಡಿದುಕೊಂಡು ಕಾರ್ ಬಳಿ ಹೋಗಿ ನಿಂತೆ.
ಪದ್ದಣ್ಣ ಕಾರ್ ಶುರು ಮಾಡುತ್ತಿದ್ದಂತೆ ಹಿಂದಿನ ಬಾಗಿಲು ತೆರೆದು ಬ್ಯಾಗ್ ಇಡಲು ಹೋದೆ. ಪದ್ದಣ್ಣ ಇವಳು ಹಿಂದಿನ ಸೀಟ್ ನಲ್ಲಿ ಕೂಡ್ತಾಳೆ ಅನ್ಕೊಂಡು “ನಾನೇನು ನಿನ್ನ ಕಾರ್ ಡ್ರೈವರಾ ?…ಮುಂದೆ ಬಂದು ಕುತ್ಕೋ”…ಗುರ್ ಅಂದ.
ಪದ್ದಣ್ಣ ಗುರ್ ಅಂದಾಕ್ಷಣ ನಾನು ಸುಮ್ನೆ ಕೂಡ್ತಿನಾ?… ಚಾನ್ಸ್ ಯೇ ಇಲ್ಲಾ… “ಡ್ರೈವರ್ ಆಗಿದ್ರೆ….ನಾನು ಎಲ್ಲಿ ಹೇಳ್ತಿನೋ ಅಲ್ಲಿ ಕರಕೊಂಡು ಹೋಗ್ತಿದ್ದ. ನೀನೂ ಇದ್ದೀಯಾ… ನೀನೇನೂ ನಾನು ಹೇಳಿದ್ದಲ್ಲಿ ಕರಕೊಂಡು ಹೋಗ್ತಿಯಾ, ನೀನು ಹೇಳಿದಲ್ಲಿ ನಾನು ಬರಬೇಕು…. ಇಷ್ಟೇ ವ್ಯತ್ಯಾಸ ಆ ಡ್ರೈವರ್ ಗೂ ನಿನಗೂ” ಅಂದೆ.
ಪದ್ದಣ್ಣ ಈ ಮಾತಿಗೆ ಬಿಡ್ತಾನಾ?…”ಆ ಕಾರ್ ಡ್ರೈವರ್ ಗೆ ದುಡ್ಡು ಸಿಗುತ್ತೆ, ನೀನು ಹೇಳಿದ್ದಲ್ಲಿ ಕರಕೊಂಡು ಹೋಗ್ತಾನೆ.ನನಗೇಲ್ಲಿ ನೀನು ದುಡ್ಡು ಕೊಡ್ತೀಯಾ… ಸುಮ್ನೆ ಕಾರ್ ಹತ್ತು”… ಅಂದಾಗ ನನ್ನ ಸಿಟ್ಟು ಮೂಗಿನ ತುದಿಯಲ್ಲಿ ಇತ್ತು,ಆದರೆ ತೋರಗೋಡಲಿಲ್ಲ , ಯಾಕೆಂದರೆ ಜಗಳಾಡ್ಕೊಂಡು ಕೂತ್ರೆ ಪದ್ದಣ್ಣನ ತಲೆ ಕೆಟ್ಟು ಕಾರ್ ಇಳಿದು ಹೋಟೆಲ್ ಬೇಡ…ಮನೆಯಲ್ಲಿಯೇ ಊಟ ಮಾಡೋಣ ಅಂದ್ರೆ, ಅಯ್ಯೋ ಕಷ್ಟ…ಕಷ್ಟ…ಅನ್ಕೊಂಡು ತೆಪ್ಪಗೆ ಕೂತೆ.
ಕಾರ್ ಕೆಂಗೇರಿ ರಸ್ತೆಯಲ್ಲಿದ್ದ ಹೋಟೆಲ್ ಮುಂದೆ ನಿಂತಿತು. ನಾನು ನನ್ನ ಬ್ಯಾಗ್ ನ್ನು ಕಾರ್ ಲ್ಲಿ ಇಟ್ಟು ಬ್ಯಾಗ್ ನೊಳಗೆ ಇದ್ದ ಮೊಬೈಲ್ ನ್ನು ಮರೆಯದೆ ಎತ್ತುಕೊಂಡೆ. ಪದ್ದಣ್ಣ ಅದನ್ನು ನೋಡಿ,
“ಯಾಕೆ ಬ್ಯಾಗ್ ಕಾರ್ ಲ್ಲಿಯೇ ಇಟ್ಟೆ” ಅಂದ.
ಖಾಲಿ ಬ್ಯಾಗ್ ಹೋಟೆಲ್ ಒಳಗೆ ಒಯ್ಯೋದು ವ್ಯರ್ಥ, ಹೇಗೂ ನಿಂದು ಪರ್ಸ್ ಇದೆ ಅಲ್ವಾ ನಡಿ” ಅಂತ ನನ್ನ ಸೇಡು ತೀರಿಸಿಕೊಂಡೆ.
ಸೀದಾ ಟೇಬಲ್ ಮುಂದೆ ಕೂತು ಮೇನು ನೋಡ್ತಾ ಇದ್ದೆ. ಆಷ್ಟೋತ್ತಿಗೆ ಹೋಟೆಲ್ ನ ವ್ಯಕ್ತಿಯೊಬ್ಬ “ಆರ್ಡರ್ ಮೇಡಂ” ಅಂದ. “ಸರ್ ಕೇಳಪಾ… ಅವರೇ ಕೊಡೋಸೋರು”…ಸತಿ ಸಾವಿತ್ರಿ ತರ ಒಂದು ಪೋಸ್ ಕೊಟ್ಟೆ. ಪದ್ದಣ್ಣನಿಗೆ ಅಚ್ಚರಿ, ನಾನು ಹೇಳಿದ್ದಕ್ಕೆಲ್ಲ ಮೂಗು ಮುರಿಯೋ ಇವಳು. ನಾನು ಆರ್ಡರ್ ಮಾಡಿದ್ದು ತಿಂತಾಳಾ?…ನೋಡೇ ಬಿಡೋಣ ಎನ್ನುವ ರೀತಿಯಲ್ಲಿ, ನಾನು ಇಷ್ಟ ಪಡದ ಪನೀರು ಮಂಚೂರಿ, ಪನೀರ್ ಗ್ರೇವಿ, ರೋಟಿ ಹೇಳಿದ. ಆರ್ಡರ್ ಮಾಡಿದ ಮೇಲೆ ಅಡ್ಡ ಹೋಗಿ ಇದು ಬೇಡ…ಅಂದ್ರೆ ಹೋಟೆಲ್ ಅವನ ಮುಂದೆ ಮರ್ಯಾದೆ ಪ್ರಶ್ನೆ… ನಗುತ್ತಾ ಸುಮ್ನೆ ಕೂತೆ. ಪದ್ದಣ್ಣ ಒಳ ಒಳಗೆ ಖುಷಿ ಪಟ್ಟ.
ಹೇಳಿದ ಐಟಂ ಎಲ್ಲಾ ಒಂದಾದ ಮೇಲೊಂದು ಟೇಬಲ್ ಮೇಲೆ ಬಂತು. ಪದ್ದಣ್ಣ ತಿನ್ನೋದರಲ್ಲಿ ಬ್ಯುಸಿ ಆದ. ನಾನು ಮಾತ್ರ ಲೊಚ್ ಗುಟ್ಟುತ್ತ ಎಮ್ಮೆ ಮೆಲುಕು ಹಾಕುವಂತೆ ಒಂದೊಂದು ತುತ್ತಿಗೂ ನಿಧಾನಕ್ಕೆ ಮೆಲುಕು ಹಾಕುತ್ತಾ ತಿನ್ನುವಷ್ಟುರಲ್ಲಿ ಬೇಸರ ಆಗಿ ಹೋಯ್ತು. ಪದ್ದಣ್ಣ ನನ್ನ ಕಷ್ಟ ಅರಿತಿದ್ದ, ಹಾಗಂತ ಬಿಡಲಿಲ್ಲ ಬೇಗ ಬೇಗ ತಿನ್ನು ಅಂತ ವ್ಯಂಗ್ಯ ನಗು ಕೊಟ್ಟ. ಇಷ್ಟೇ ಸಾಕು ಹೊಟ್ಟೆ ತುಂಬಿತು ಅಂತ ಸುಮ್ನೆ ಕೂತೆ.
ಹಾಳಾದ್ ಮೊಬೈಲ್ ಚಟ,ಕೈ ಅಲ್ಲೂ ನಿಧಾನಕ್ಕೆ ಮೊಬೈಲ್ ಸ್ಕ್ರೀನ್ ಮೇಲೆ ಹೋಯಿತು. ತಿರುವುತ್ತಾ ಕೂತಿದ್ದೆ. ಇದ್ದಕ್ಕಿದ್ದಂತೆ ಮೆಸ್ಸೆಂಜರ್ ನಲ್ಲಿ ಒಂದು ಅಟ್ಯಾಚ್ಮೆಂಟ್ ಬಂತು. ಏನೋ ಗುಡ್ ಮಾರ್ನಿಂಗ್ ಅದು ಇದು ಫಾರ್ವರ್ಡ್ ಫೋಟೋ ಅನ್ಕೊಂಡು ಧೈರ್ಯವಾಗಿ ಮೊಬೈಲ್ ನ್ನು ಟೇಬಲ್ ಮೇಲೇನೆ ಇಡ್ಕೊಂಡು ಓಪನ್ ಮಾಡಿದೆ. ಅದನ್ನು ನೋಡ್ತಿದ್ದ ಹಾಗೆ ತಲೆ ಗೀರಾ… ಗೀರಾ.. ಅಂದಿದೆ…. ಅಂತ ಗಿರಕಿ ಹೊಡೆದಿದಷ್ಟೇ ಅಲ್ಲ, ಗಾಬರಿಗೆ ಏನು ಮಾಡೋದು ತಿಳಿದೆ ಬ್ಲಾಕ್ ಬಟನ್ ಒತ್ತೋಕೆ ಹೋಗಿ ಲೈಕ್ ಒತ್ತಿಟ್ಟೆ…ಅಷ್ಟೇ ಆಗಿದ್ರೆ ಹಾಳಾಗಿ ಹೋಗ್ಲಿ ಅನ್ಕೋತಿದ್ದೆ. ಆದರೆ ಅದೇ ಸಮಯಕ್ಕೆ ಹೋಟೆಲ್ ವ್ಯಕ್ತಿ ಬಿಲ್ ಕೊಡೋಕೆ ಪಕ್ಕಕ್ಕೆ ಬಂದು ನಿಂತಿದ್ದ. ಅವನ ಮುಂದೆ ಕಮಂಗಿಯಾಗಿ ಹೋಗಿದ್ದೆ. ಅವನು ಅದನ್ನು ನೋಡಿ ಬಿಟ್ನಾ ಏನ್ ಕತೆ … ಈ ಹೆಣ್ಣುಮಗಳು ಇಂತ ಫೋಟೋನ್ನೆಲ್ಲಾ ನೋಡುತ್ತಾ… ಗಂಡನ್ನ ಮುಂದೆ ಸತಿ ಸಾವಿತ್ರಿ ತರ ಇದ್ದು ಜೋರ್ ಇದೆ ಅಂತ ಏನಾದ್ರೂ ಹುಬ್ಬೇರಿಸಿದ್ನಾ… ಎಲ್ಲಾ ಪ್ರಶ್ನೆಗಳು ಪ್ರಶ್ನಾರ್ಥಕವಾಗಿ ನಾಚಿಕೆ ಆಗಿ ಪದ್ದಣ್ಣನ ಮುಂದೆ ಏನು ಹೇಳದೆ. ತಲೆ ತಗ್ಗಿಸಿಕೊಂಡು ಮನೆಗೆ ಹೋದೋವಳು ಒಂದು ವಾರ ಮೊಬೈಲ್ ಕಡೆ ತಲೆ ಹಾಕಿಕೂಡಾ ಮಲಗಲಿಲ್ಲ.ಪದ್ದಣ್ಣ ಈ ಸ್ಕ್ರೀನ್ ಟಚ್ ಮೊಬೈಲ್ ಕೊಡಸಿರಲಿಲ್ಲ ಅಂದಿದ್ರೆ ಈ ಅವಾಂತರ ಆಗುತ್ತಿರಲಿಲ್ಲ ಅಂತ ಆಗಲೂ ಅವನ ಮೇಲೆ ಸಿಟ್ಟು ಬಂತು.
ಅಂದಹಾಗೆ ಆ ಅಟ್ಯಾಚ್ಮೆಂಟ್ ನಲ್ಲಿ ಅಂತದ್ದು ಏನಿತ್ತು?.. ನಾನು ಮಾತ್ರ ಹೇಳೋಲ್ಲ…
- ಶಾಲಿನಿ ಹೂಲಿ ಪ್ರದೀಪ್
