‘ನನಗೆ ಕಾಗದದ ಮುದ್ರಿತ ಪತ್ರಿಕೆಗಳಿಗೆ ಬರೆಯುವಾಗ ಕೊಟ್ಟ ಸಂತೋಷ, ಚೋಟುದ್ದದ ಮೊಬೈಲ್ ನಲ್ಲಿ ಬರಲಿಲ್ಲ, ಆದರೂ ಆ ಮೊಬೈಲ್ ನಲ್ಲೆ ವಾರ ವಾರವೂ ಆರೇಳು ಬ್ಲಾಗ್ ಗಳಿಗೆ, ಮುನ್ನೂರು ಲೇಖನಗಳು ಮತ್ತು ಎರಡು ಪುಸ್ತಕ ಬರೆದ್ದೇನೆ. ನಾಲ್ಕು ವರುಷಗಳಿಂದ ಮೊಬೈಲ್ ನಲ್ಲಿ ಬರೆಯುತ್ತಿದ್ದರಿಂದ ಎಡಗಣ್ಣು ಮತ್ತು ಎಡಗೈಗಳು ಕೊಂಚ ಊನಗೊಂಡಿವೆ’- ಲೇಖಕ ಮಲ್ಲಿಕಾರ್ಜುನ ಕಡಕೋಳ ಅವರ ಒಂದು ಲೇಖನ, ತಪ್ಪದೆ ಓದಿ….
ಈಗ್ಗೆ ಬರೋಬ್ಬರಿ ನಾಲ್ಕು ವರ್ಷಗಳ ಹಿಂದಿನ ಮಾತುಗಳ ಕತೆ. ಪ್ರಜಾವಾಣಿ ದೈನಿಕದ ಹಿರಿಯ ಉಪ ಸಂಪಾದಕಿಯಾಗಿರುವ ನನ್ನ ಮಗಳು ಡಾ. ಮಂಜುಶ್ರೀ ಕಡಕೋಳ ನನಗೊಂದು ಅಂಡ್ರಾಯಿಡ್ ಮೊಬೈಲ್ ಫೋನ್ ಕೊಡಿಸಿದಳು. ಅದು ನನಗೆ ತೀರಾ ಹೊಸದು. ಆಗ ಅದನ್ನು ವಾಪರಿಸುವ ವಿಧಾನವೇ ನನಗೆ ತಿಳಿದಿರಲಿಲ್ಲ. ಈಗಲೂ ಅದರ ವಿವಿಧ ಬಗೆಯ ಉಪಯೋಗ ಮತ್ತು ಕೆಲವು ದುರುಪಯೋಗಗಳ ಕುರಿತು ನಾನು ಪಕ್ಕಾ ಪರಿಣತಿ ಹೊಂದಿಲ್ಲ. ವಿವೋ ಸೆಲ್ ದೊರಕಿದ ಆರಂಭದ ದಿನಗಳಲ್ಲಿ ಅದರ ಒಡಲಾಳದ ನಿಗೂಢ ಜಗತ್ತಿನ ಪರಿಚಯ ಮತ್ತು ಒಡಂಬಡಿಕೆ ಕುರಿತು ಥರಾವರಿಯ ಹತ್ತಾರು ಕತೆಗಳನ್ನು ಅವರಿವರಿಂದ ಕೇಳುತ್ತಿದ್ದೆ.
ನಿಮ್ಮ ಬೆರಳ ತುದಿಯಲ್ಲೇ ಜಗದ ಸಂಪರ್ಕ. ದುನಿಯಾ ಮುಟ್ಟೀಮೆ ಮುಂತಾದ ಮಾತುಗಳು ಮುನ್ನೆಲೆಯ ಧ್ವನಿಗಳಾಗಿ ಕೇಳಿ ಬರುತ್ತಿದ್ದವು. ಆದರೆ ಅಷ್ಟೊತ್ತಿಗಾಗಲೇ ಟ್ವಿಟರ್, ಫೇಸ್ಬುಕ್, ವಾಟ್ಸ್ಯಾಪ್ ವಿಶ್ವವಿದ್ಯಾಲಯಗಳು ಮತ್ತು ಅದರ ವಿದ್ವಾಂಸರು ಜನ್ಮತಾಳಿದ್ದರು. ಅವರ ಸೀತಲ ಸಮರಗಳು ಸಹಿತ ಶುರುವಾಗಿದ್ದವು. ಅದಕ್ಕೆ ಮೊದಲು ಅಂದರೆ ಅಜಮಾಸು ಇಪ್ಪತ್ತೈದು ವರ್ಷಗಳ ಹಿಂದೆ ಬೆಂಗಳೂರಲ್ಲಿ ಪೇಜರುಗಳ ಭಾರೀ ಹವಾ ಎದ್ದಿತ್ತು.
ಅವತ್ತಿನ ಆಪ್ತಮಿತ್ರ ರವಿ ಬೆಳಗೆರೆ ಡಾವಣಗೇರಿಯ ನಮ್ಮನೆಗೆ ಬಂದಾಗೆಲ್ಲ ಅದೇ ಆಗ ಬಂದಿದ್ದ ಪೇಜರ್ ಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬರುತ್ತಿದ್ದ. ಬೆಂಗಳೂರಲ್ಲಿ ಹಾಗೆ ಪೇಜರುಗಳನ್ನು ಕಟ್ಟಿಕೊಂಡು ಓಡಾಡುವುದು ಫ್ಯಾಷನ್ ಆಗಿತ್ತು. ಅವುಗಳ ಸಂದೇಶಗಳನ್ನು ಪವಾಡ ಸದೃಶವಾಗಿ ಕಂಡು ಸೋಜಿಗ ಪಡುತ್ತಿದ್ದೆವು. ಡಾವಣಗೇರಿಯಲ್ಲಿ ಪೇಜರ್ ಬಳಕೆಯ ಅಪ್ರಸ್ತುತತೆ ಇದ್ದರು ಕೂಡಾ ಅವನು ಪೇಜರ್ ಉಪಯೋಗ ಕುರಿತು ನಮ್ಮನೆ ಮಂದಿಗೆಲ್ಲಾ ಸೋಜಾಗಿ ವಿವರಿಸುತ್ತಿದ್ದ.
ಫೋಟೋ ಕೃಪೆ : starofmysore
ಪ್ರಾಯಶಃ ಆಗ ಅವುಗಳ ವಿನಿಯೋಗ ಬೆಂಗಳೂರಿಗೆ ಸೀಮಿತವಾಗಿದ್ದ ನೆನಪು ನನ್ನದು. ಬೆಂಗಳೂರಿನ ನನ್ನ ಇನ್ನೋರ್ವ ಸನ್ಮಿತ್ರ ಸೀತಾನದಿ ಸುರೇಂದ್ರ ಸಹಿತ ಆಗ ಪೇಜರ್ ಓನರ್ ಆಗಿದ್ದ. ಪತ್ರಕರ್ತರಿಗೆ ಪೇಜರ್ ಆಗ ಅಗತ್ಯವಾಗಿತ್ತು. ಬೆಳಗೆರೆ ಮತ್ತು ಸೀತಾನದಿ ಈ ಇಬ್ಬರೂ ನನಗಾಗ ಆಪ್ತಮಿತ್ರರು. ನಾನು ಬೆಂಗಳೂರಿಗೆ ಹೋದಾಗೆಲ್ಲ ಅವರನ್ನು ಭೆಟ್ಟಿ ಮಾಡಲೇಬೇಕೆಂಬಷ್ಟು ಸಂಪ್ರೀತಿಯ ದೋಸ್ತಿ ನಮ್ಮದಾಗಿತ್ತು. ಅವರಿಬ್ಬರೂ ‘ಹಾಯ್ ಬೆಂಗಳೂರ್’ ಎಂಬ ಕಪ್ಪು ಸುಂದರಿ ಸಾಪ್ತಾಹಿಕದ ಜನ್ಮದಾತರು. ಹಾಯ್ ಬೆಂಗಳೂರ್ ಹುಟ್ಟಿಗೂ ಹತ್ತಾರು ವರ್ಷಗಳ ಹಿಂದಿನ ಗೆಳೆತನ ನಮ್ಮದು. ಆ ಇಬ್ಬರೂ ಈಗಿಲ್ಲ. ಆ ಇಬ್ಬರ ಬಗ್ಗೆ ಅವರು ಬದುಕಿದ್ದಾಗ ಮತ್ತು ತೀರಿ ಹೋದಾಗ ಆಗ ನಾನು ಬರೆಯುತ್ತಿದ್ದ ಕಡಕೋಳ ಕಾಲಮ್ಮಿಗೆ ಬರೆದಿದ್ದೇನೆ.
* * *
ಹಾಗೆ ನೋಡಿದರೆ ‘ಇ’ ಜಗತ್ತಿಗೆ ನನ್ನದೇ ಲೇಟ್ ಎಂಟ್ರಿ. ಅಷ್ಟೊತ್ತಿಗಾಗಲೇ ನನ್ನ ಹೆಂಡತಿ ಕೂಡಾ ವಾಟ್ಸ್ಯಾಪ್, ಫೇಸ್ಬುಕ್, ಇ ಬ್ಯಾಂಕಿಂಗ್ ವ್ಯವಹಾರಗಳ ಉಪಯೋಗಿ ವಿಧಾನಗಳನ್ನು ಕಲಿತಿದ್ದಳು. ಅದರಿಂದಾಗಿ ಒಂದಷ್ಟು ಬಲವಾದ ಕುತೂಹಲ. ಖರೇ ಹೇಳುವುದಾದರೆ ಅದಕ್ಕಿಂತ ಹೆಚ್ಚಿನದಾದ ಹಿಂಜರಿಕೆ ಮತ್ತು ಅಪ್ರಸ್ತುತ ಮುಜುಗರ.

ಅಕ್ಷರ ಮಾಂತ್ರಿಕ ರವಿಬೆಳೆರೆ ಮತ್ತು ಲೇಖಕ ಮಲ್ಲಿಕಾರ್ಜುನ ಕಡಕೋಳ, ಫೋಟೋ ಕೃಪೆ : basavamarga
ಅಷ್ಟಕ್ಕೂ ನೂತನ ಮೊಬೈಲಿನ ನುಣುಪಾದ ಸುಂದರ ಸ್ಕ್ರೀನ್ ಮೇಲೆ ಬೆರಳಿಡಲು ಸಾಕಷ್ಟು ಯೋಚನೆ ಮಾಡುತ್ತಿದ್ದೆ. ಮೊದಲೇ ಅದು ಬೆಣ್ಣೆಯಂತಹ ಮೋಹಕ ಟಚ್ ಸ್ಕ್ರೀನ್ ನೋಡಿ. ಅದರ ಮೃದು ಉದರದ ಮೇಲೆ ನನ್ನ ಒರಟಾದ ಬೆರಳುಗಳಾಡಿಸಲು ಅದೊಂದು ಬಗೆಯ ಹೇಳಲಾಗದ ಭಯಮಿಶ್ರಿತ ಸಂಕೋಚ. ಅದರ ಸಪೂರ ಮುಖದ ಮೇಲೆ ಬೆರಳಿಡುವ ಮುನ್ನ ನನ್ನ ನೆನಪುಗಳು ಅದೇಕೋ ಥಟ್ಟಂತ್ ಹರೆಯಕ್ಕೆ ಹೊರಟು ಹೋದವು. ಅಂದಹಾಗೆ ನಾನು ಮದುವೆಗೆ ಮುಂಚೆ ಪ್ರೀತಿಸುತ್ತಿದ್ದ ನನ್ನವಳ ಒಡನಾಟದ ದಿನಮಾನಗಳು ಧುತ್ತೆಂದು ನೆನಪಿನ ಹೃದಯದ ಕವಾಟು ತೆರೆದಿರಿಸಿದವು. ಭರಪೂರ ಪ್ರೇಮದ ಆರಂಭಿಕ ಗಳಿಗೆಗಳವು. ಅವಳ ನನ್ನ ನಡುವೆ ನಿತ್ಯವೂ ಧುಮ್ಮಿಕ್ಕುವ ಪ್ರೇಮಪತ್ರಗಳ ಜಲಪಾತ.
ಅವಳ ಕಿರುಬೆರಳ ತುದಿಯ ಉಗುರು ಸ್ಪರ್ಶಿಸಲು ಧೈರ್ಯ ಸಾಲದ ಸಂಕೋಚ ನನ್ನದಾಗಿತ್ತು. ನಾನು ಅದಕ್ಕಾಗಿ ಹೆಚ್ಚೂ ಕಮ್ಮಿ ಅರ್ಧ ವರ್ಷದ ಸಮಯವನ್ನೇ ತಗೊಂಡಿದ್ದೆ. ಹಾಗೆ ಸ್ಪರ್ಶಗಳ ಅನುಭವ ಅಪರಿಚಿತವಾಗಿದ್ದಷ್ಟು ಕುತೂಹಲದ ಅನನ್ಯತೆ ಅಧಿಕವಾಗುತ್ತಲೇ ಹೋಗುತ್ತಿತ್ತು. ಅಂತಹದ್ದೊಂದು ಸುಕೋಮಲ ಸಂಕೋಚ ಸ್ವಭಾವ ನನ್ನದು. ಅಂತಹದ್ದೇ ಪ್ರೀತಿ ಈಗ ಕುಡಿಯೊಡೆದು ಅರಳುವ ಅಳುಕು ನನ್ನನ್ನು ಅಣಕಿಸುತ್ತಿತ್ತು.
ಹೌದು ಆ ನನ್ನ ಮಧುರ ನೆನಪುಗಳ ಮೃದು ಮೋಹಕ ಚಣ ಮಾಧುರ್ಯದ ಗಳಿಗೆಗಳು ನನ್ನಲ್ಲಿನ್ನೂ ಹಚ್ಚ ಹಸಿರಿನ ಹಸಿಯಾದ ತಾಜಾತನ ಉಳಿಸಿಕೊಂಡಿವೆ. ಖಂಡಿತವಾಗಿಯೂ ಅವು ಕ್ಷಣಭಂಗುರದ ನಾಸ್ಟಾಲ್ಜಿಯಾ ಅಲ್ಲವೇ ಅಲ್ಲ. ನಮ್ಮ ಅಮರ ಪ್ರೇಮದ ಅಪರಿಚಿತ ಸುಖದ ಕಥನವನ್ನು ಇನ್ನೊಮ್ಮೆ ನಿವಾಂತವಾಗಿ ಕುಂತು ಹೇಳುವೆ. ಸಧ್ಯಕ್ಕೆ ನಿಮಗೆ ಅಂಡ್ರಾಯಿಡ್ ಸೆಲ್ ಎಂಬ ಆತ್ಮಸತ್ಯದ ಮತ್ತು ಸಖ್ಯದ ಸಖಿಯು ಬರೆಸಿಕೊಂಡ ಎರಡು ಪುಸ್ತಕಗಳ ಸುಂದರ ಬಾಂಧವ್ಯದ ಕಥನ ಕುರಿತು ಹೇಳಲಿಕ್ಕಿದೆ. ಅದರಲ್ಲೊಂದು ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನವೂ ಬಂದಿದೆ.
* * *

ಆಗೊಮ್ಮೆ ದೂರದ ಊರಿಗೆ ರೈಲುಪ್ರಯಾಣ. ಅದು ಹವಾನಿಯಂತ್ರಿತ ಭೋಗಿ. ಬೇಸಿಗೆ ದಿನಗಳಾದ್ದರಿಂದ ಪ್ರಯಾಣಕ್ಕೆ ಏಸಿ ಅಗತ್ಯವಿತ್ತು. ದಿನಗಟ್ಟಲೇ ಪ್ರಯಾಣಗಳಿಗೆ ಪುಸ್ತಕವೇ ನನಗೆ ಸಂಗಾತಿ. ಆದರೆ ಪುಸ್ತಕದ ಜಾಗಕ್ಕೆ ಅದೇ ಆಗ ಹೊಸದಾದ ಅಂಡ್ರಾಯಿಡ್ ಸೆಲ್ ಫೋನ್ ಕೈ ಸೇರಿತ್ತು. ಕಲರ್ಫುಲ್ ಚೆಲುವೆ ತೋಳ್ತೆಕ್ಕೆಗೆ ಸಿಕ್ಕಾಗ ಹುಚ್ಚು ಹರೆಯಕ್ಕೆ ಇನ್ನೇನಾಗಬೇಡ ಎಂಬಂತಾಗಿತ್ತು. ಆದರೆ ತುಡುಗು ಮನಕ್ಕೆ ತಡೆಯೊಡ್ಡಿದೆ. ಏನಾದರೂ ನೋಡುವ ಕೇಳುವ ಕುತೂಹಲಕರ ಸಂಗತಿಗೆ ಬದಲು ಜಸ್ಟ್ ಕನ್ನಡ ಆ್ಯಪ್ ಡೌನ್ ಲೋಡ್ ಮಾಡಿಕೊಂಡು ಕನ್ನಡ ಬರೆಯುವುದನ್ನು ಕಲಿಯುತ್ತ ಹೋದೆ. ಹೊಸದಾಗಿ ಅಕ್ಷರಗಳನ್ನು ಟೈಪಿಸುವ ನನ್ನ ಉಮೇದು ಕಂಡಾಪಟಿ ಖುಷಿ ಹುಟ್ಟಿಸ ತೊಡಗಿತು. ನನ್ನೊಳಗೊಂದು ನವಸಾಕ್ಷರ ಪ್ರಜ್ಞೆ ಅಂಕುರಿಸಿದ ಮೃದುಲ ಪ್ರೀತಿಯ ಸೆಲೆ ಉಕ್ಕಿಸುತ್ತಿತ್ತು.
ಒಂದೊಂದೇ ಅಕ್ಷರಗಳನ್ನು ಹುಡುಕಿ ಹುಡುಕಿ ಪದಗಳನ್ನಾಗಿ ಜೋಡಿಸಿ ನೋಟ್ ಪ್ಯಾಡಲ್ಲಿ ಬರೆಯ ತೊಡಗಿದೆ. ಮಗಳು ಅದಕ್ಕೆಂದೇ ಒಂದೆರಡು ದಿನಗಳ ಮೊದಲೇ ನೋಟ್ ಪ್ಯಾಡ್ ಮತ್ತು ಜಸ್ಟ್ ಕನ್ನಡ ಹುಡುಕಿ ಕೊಟ್ಟಿದ್ದಳು. ಹೀಗಾಗಿ ನನಗೆ ಟೈಪ್ ಮಾಡುವ ಕೆಲಸ ತುಸು ಸುಲಭವಾಯಿತು. ಹೀಗೆ ಮೂರೇ ಮೂರು ತಾಸುಗಳಲ್ಲಿ ಟೈಪಿಸುವುದನ್ನು ಯಾರ ನೆರವಿಲ್ಲದೇ, ಗುರುವಿಲ್ಲದ ಏಕಲವ್ಯನಂತೆ ಕಲಿತೆ. ನನ್ನ ಸಂತಸಕ್ಕೆ ಪಾರವೇ ಇಲ್ಲದಾಯಿತು. ಮುಂದಿನ ಮೂರು ತಾಸುಗಳಲ್ಲಿ ಅಜಮಾಸು ನೂರೈವತ್ತು ಶಬ್ದಗಳನ್ನು ಟೈಪಿಸಿದೆನೆಂದು ಕಾಣುತ್ತದೆ. ಅದು ಪುಟ್ಟದೊಂದು ಲೇಖನವೇ ಆಗುವ ಎಲ್ಲ ಸಾಧ್ಯತೆಗಳು ನನಗೆ ಖಾತರಿಯಾಗಿ ಅನಿಸ ತೊಡಗಿದವು. ಅದನ್ನೇ ಮತ್ತೆ ಮತ್ತೆ ರಿಪೇರಿ ಮಾಡ ತೊಡಗಿದೆ. ಆದರದು ಅಕ್ಷರಶಃ ಹೈರಾಣದ ಕೆಲಸವೇ ಆಯ್ತು. ಏಕೆಂದರೆ ತಿದ್ದಲು ಹೋಗುತ್ತಿದ್ದರೆ ಇಡೀ ಪದವೇ ಗಾಯಬ್ ಆಗುತ್ತಿತ್ತು. ಒಮ್ಮೊಮ್ಮೆ ವಾಕ್ಯವೇ ನಾಪತ್ತೆ. ಹೀಗಾಗಿ ತಿದ್ದುವ ಗೋಜಿಗಿಳಿಯದೇ ತಪ್ಪಾಗದಂತೆ ನಾಜೂಕಾಗಿ ಹೆಚ್ಚು ಎಚ್ಚರಿಕೆಯಿಂದ ಧೇನಿಸಿಕೊಂಡು ಟೈಪಿಸಲು ಜಾಗ್ರಗೊಂಡೆ.
ಅದು ನನ್ನ ಬಾಲ್ಯದ ಯಡ್ರಾಮಿ ಸಂತೆಯ ದಿನಗಳ ನೆನಪುಗಳನ್ನು ಮೆಲುಕು ಹಾಕುವ ಲೇಖನವಾಗಿತ್ತು. ಹಾಗು ಹೀಗು ಮಾಡಿ ಆರೇಳು ತಾಸುಗಳಲ್ಲಿ ಮೊಬೈಲ್ ಟೈಪಿಂಗ್ ಕಲಿತು ಸಣ್ಣದೊಂದು ಲೇಖನ ಸಿದ್ಧಮಾಡಿದ ಅದಮ್ಯ ಖುಷಿ. ಖುದ್ದು ನಾನೇ ಟೈಪಿಸಿದ ನನ್ನ ಮೊದಲ ಮೊಬೈಲ್ ಲೇಖನಕ್ಕೆ ” ನಾನು ಕಂಡ ಯಡ್ರಾಮಿ ಸಂತೆ ” ಅಂತಲೇ ಹೆಸರಿಟ್ಟೆ. ಅಷ್ಟೊತ್ತಿಗಾಗಲೇ ನಾನು ಪೆನ್ನಿಂದ ಬರೆದು ಕಳಿಸಿದ ಬರಹಗಳನ್ನು ಮುದ್ರಣ ಮಾಧ್ಯಮಗಳು ಮತ್ತು ಅವಧಿ ಹಾಗೂ ಕೆಂಡಸಂಪಿಗೆಯಂತಹ ವೆಬ್ ಮ್ಯಾಗಜೀನ್ ಯಾನೆ ಬ್ಲಾಗ್ ಗಳು ಪ್ರಕಟಿಸಿದ ಅನುಭವವಿತ್ತು. ಅಂತೆಯೇ ನನ್ನೀ ಮೊದಲ ಮೊಬೈಲ್ ಲೇಖನ ಯಾವುದಾದರೂ ಕಾಗದರಹಿತ ಅಂತರ್ಜಾಲ ನಿಯತಕಾಲಿಕಕ್ಕೆ ಕಳಿಸುವ ಸಂಕಲ್ಪ ಮಾಡಿದೆ. ಆಗ ಧುತ್ತನೆ ನೆನಪಾದುದು ಇ – ಮೀಡಿಯ ಲೈನ್ ಬ್ಲಾಗ್. ಅದೇ ಆಗ ಹುಟ್ಟಿದ ಅದು ತುಂಬಾ ವೇಗದ ಬೆಳವಣಿಗೆಯಲ್ಲಿತ್ತು. ಅದರ ಇ – ಮೇಲ್ ವಿಳಾಸಕ್ಕೆ ಕಳಿಸುವುದು ನನಗೆ ತಾಂತ್ರಿಕವಾಗಿ ಬಹಳೇ ಕಷ್ಟದ ಕೆಲಸ. ಅದು ನಿಜಕ್ಕೂ ದುಃಸಾಧ್ಯವೆನಿಸಿತು.

ಇನ್ನೇನು ಮಾಡೋದಂತ ಸಹ ಪ್ರಯಾಣದ ಯುವಕನ ನೆರವು ಪಡೆದು ನನ್ನ ಮೊಬೈಲ್ ಹೊಟ್ಟೆಯೊಳಗೆ ವಾಟ್ಸ್ಯಾಪ್ ಹುಟ್ಟಿಸಿಕೊಂಡು ವಾಟ್ಸ್ಯಾಪ್ ಮೂಲಕವೇ ಇ – ಮೀಡಿಯಾ ಲೈನ್ ಸಂಪಾದಕರ ವಾಟ್ಸ್ಯಾಪ್ ಗೆ ಕಳಿಸುವ ಸಾಹಸ ಮಾಡಿದೆ. ಹಾಗೆ ನೋಡಿದರೆ ಅದು ಸಹಪ್ರಯಾಣಿಕ ತರುಣನಿಗೆ ಸಲ್ಲುವ ಕ್ರೆಡಿಟ್. ಹೀಗೆ ಶುರುವಾದ ಮೊಬೈಲ್ ಬರಹದ ಪ್ರಯಾಣ ಬೇರೆ ಬೇರೆ ಬ್ಲಾಗ್ ಗಳಿಗೆ ಧಾರಾಕಾರ ಹರಿಯ ತೊಡಗಿದೆ. ವಾರ ವಾರವೂ ಆರೇಳು ಬ್ಲಾಗ್ ಗಳಿಗೆ ಬರೆಯುತ್ತಾ ಬಂದಿದ್ದೇನೆ. ಆದರೆ ನನಗೆ ಕಾಗದದ ಮುದ್ರಿತ ಪತ್ರಿಕೆಗಳಿಗೆ ಬರೆಯುವ ಖುಷಿಯನ್ನು ವಿದ್ಯುನ್ಮಾನ ಬ್ಲಾಗ್ ಗಳು ಇದುವರೆಗೂ ಕೊಟ್ಟಿಲ್ಲ. ನಾನು ಕಾಗದ ಇಲ್ಲವೇ ಕಾಗದ ರಹಿತ ಯಾವುದೇ ಪತ್ರಿಕೆಗೆ ಬರೆಯುವುದಾದರೂ ಅದನ್ನು ನನ್ನ ಈ ಪುಟ್ಟ ಮೊಬೈಲಿನಲ್ಲೇ ಬರೆಯುತ್ತೇನೆ.
* * *
ಚೋಟುದ್ದಕ್ಕೂ ಚಿಕ್ಕದಾದ ಮೊಬೈಲಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಬರೆಯುತ್ತಿದ್ದರಿಂದ ಎಡಗಣ್ಣು ಮತ್ತು ಎಡಗೈಗಳು ಕೊಂಚ ಊನಗೊಂಡಿವೆ. ಮೊಬೈಲನ್ನು ಎಡಗೈಯಲ್ಲಿ ಹಿಡಕೊಂಡು, ಹಿಡಕೊಂಡು ಗಂಟೆಗಟ್ಟಲೇ ಟೈಪ್ ಮಾಡುತ್ತಿರುವುದರಿಂದ ನನ್ನ ಎಡಗೈ ಹೆಬ್ಬೆರಳು ಮತ್ತು ಎಡ ತೋರುಬೆರಳು ವರ್ಷದಿಂದ ಮರಗಟ್ಟಿ ಹೋಗಿವೆ. ಇನ್ನು ಕಣ್ಣಿನ ವಿಷಯಕ್ಕೆ ಬರುವುದಾದರೆ ಅದಕ್ಕೆ ಪೂರ್ಣ ಪ್ರಮಾಣದ ಪೊರೆ ಬಂದಿದೆ. ಆದಷ್ಟು ಬೇಗ ಕಣ್ಣಿನ ಪೊರೆಯ ಆಪರೇಷನ್ (ಕ್ಯಾಟ್ರ್ಯಾಕ್ಟ್) ಮಾಡಿಸಿಕೊಂಡರೆ ಎರಡೂ ಕಣ್ಣುಗಳ ಪೂರ್ಣ ಆಸರೆ ದೊರಕಬಲ್ಲದು. ಇದನ್ನು ಮನಗಂಡೇ ಮುಂಬಯಿಯಲ್ಲಿರುವ ಮತ್ತೊಬ್ಬ ಮಗಳು ಕಾವ್ಯಶ್ರೀ ಚೆಂದದ ಟ್ಯಾಬ್ ಕೊಡಿಸಿದ್ದಾಳೆ. ಟ್ಯಾಬಿಗೆ ಪದೋನ್ನತಿ ಪಡೆಯುವ ಪ್ರಯತ್ನದಲ್ಲಿದ್ದೇನೆ.

ಹೀಗೆ ಚೋಟಿಗೂ ಚಿಕ್ಕದಾದ ಮೊಬೈಲಲ್ಲೇ ಟೈಪಿಸಿ ನೂರೆಂಬತ್ತೆಂಟು ಪುಟಗಳ “ಯಡ್ರಾಮಿ ಸೀಮೆ ಕಥನಗಳು” ಪುಸ್ತಕ ಪ್ರಕಟಿಸಿದೆ. ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಅತ್ಯುತ್ತಮ ಪುಸ್ತಕ ಪ್ರಶಸ್ತಿ ದೊರಕಿತು. ೨೦೧೯ರ ಡಿಸೆಂಬರ್ ೨೨ ರಂದು ಅದ್ದೂರಿಯಾದ ಯಡ್ರಾಮಿ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿತು. ನನಗೆ ಪ್ರಥಮ ಸಮ್ಮೇಳನಾಧ್ಯಕ್ಷ ಪಟ್ಟ. ಇದನ್ಯಾಕೆ ಪ್ರಸ್ತಾಪಿಸಿದೆನೆಂದರೆ ಸಮ್ಮೇಳನಾಧ್ಯಕ ಭಾಷಣದ ಇಪ್ಪತ್ನಾಲ್ಕು ಪುಟದ ಪುಟ್ಟ ಪುಸ್ತಿಕೆ ಸಿದ್ಧಗೊಂಡದ್ದು ಇದೇ ನನ್ನ ಮೊಬೈಲಿನಲ್ಲೇ.
ಈ ವರ್ಷದ (೨೦೨೨) ಎಪ್ರಿಲ್ ಮಾಹೆಯಲ್ಲಿ ನೂರೈವತ್ತು ಪುಟದ “ಕಡಕೋಳ ನೆಲದ ನೆನಪುಗಳು” ಪುಸ್ತಕ ತಯಾರಾದುದು ನನ್ನ ಮೊಬೈಲಿನಲ್ಲೇ. ಇಲ್ಲಿಯತನಕ ನನ್ನ ಮೊಬೈಲಿನಲ್ಲಿ ಮುನ್ನೂರಕ್ಕೂ ಹೆಚ್ಚು ಲೇಖನಗಳನ್ನು, ಒಂಬತ್ತು ಕತೆಗಳನ್ನು, ಕರ್ನಾಟಕ ನಾಟಕ ಅಕಾಡೆಮಿಗೆ ಒಂದು ಸುದೀರ್ಘವಾದ ಫೆಲೋಶಿಪ್ ಪ್ರಬಂಧವನ್ನು ಬರೆದಿದ್ದೇನೆ. ಹೀಗೆ ಮೊಬೈಲಿನಲ್ಲಿ ಬರೆಯುತ್ತಿದ್ದರಿಂದ ಒಂದು ‘ಹದ’ ಸಿಕ್ಕಿದೆ. ಐವತ್ತು ಸಾಲುಗಳನ್ನು ಬರೆದರೆ ೧/೮ ಡೆಮ್ಮಿ ಸೈಜಿನ ಪುಸ್ತಕದ ಒಂದು ಪುಟಕ್ಕಾಗುವಷ್ಟು ಅಕ್ಷರಗಳ ಸಾಮರ್ಥ್ಯದ ಲೆಕ್ಕ ಸಿಕ್ಕುತ್ತದೆ. ಹಾಗೆಯೇ ಅಂಕಣ ಬರಹಗಳ ಪದಗಳ ಲೆಕ್ಕಾಚಾರ ಠೀಕಾಗಿ ತಿಳಿಯುತ್ತದೆ. ಆದರೆ ಇನ್ನೇನಿಲ್ಲ ಒಂದು ಕಣ್ಣು ಎರಡು ಕೈ ಬೆರಳುಗಳನ್ನು ಊನ ಮಾಡಿಕೊಂಡೆನೆಂಬ ಸಣ್ಣದೊಂದು ಅಳುಕು ಸಣ್ಣದಾಗಿ ಕಾಡುತ್ತಲಿದೆ.
- ಮಲ್ಲಿಕಾರ್ಜುನ ಕಡಕೋಳ (ಖ್ಯಾತ ಬರಹಗಾರರು, ವಿಮರ್ಶಕರು, ಅಂಕಣಕಾರರು, ನಾಟಕಕಾರರು)
