ಸೂರಜ್ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿದ್ದ, ದಿನ ತನ್ನ ಬಸ್ಸಲ್ಲಿ ಬರುತ್ತಿದ್ದ ಆಶಿಕಾಳ ಸೌಂದರ್ಯಕ್ಕೆ ಮಾರು ಹೋಗಿದ್ದ. ಆಶಿಕಾಳು ಅವನ ಪ್ರೀತಿಗೆ ಮನಸೋತಿದ್ದಳು.ಆ ಒಂದು ದಿನ ಆಶಿಕಾಳ ಹಿತಚಿಂತಕ ಶಾಮಣ್ಣ ಅವರು ಬಸ್ ನಲ್ಲಿ ಸೂರಜ್ ಜೊತೆಗೆ ಮಾತನಾಡಿದಾಗ, ಸೂರಜ್ ಗಲಿಬಿಲಿಯಾದ. ಬಸ್ ನಿಲ್ಲುತ್ತಿದ್ದಂತೆ ಏನನ್ನು ಮಾತನಾಡದೆ ಬಸ್ ನಿಂದ ಇಳಿದು ಹೋದ, ಶಾಮಣ್ಣ ಅಂತದೇನು ಸೂರಜ್ ಗೆ ಹೇಳಿದರು?.ಸೂರಜ್ ಆಶಿಕಾಳತ್ತ ಯಾಕೆ ನೋಡದೆ ಹೋದ. ಸ್ಮಿತಾ ಬಲ್ಲಾಳ್ ಅವರ ಈ ಸಣ್ಣಕತೆ ವಾಸ್ತವಕ್ಕೆ ಹತ್ತಿರವಾಗಿದೆ. ತಪ್ಪದೆ ಮುಂದೆ ಓದಿ…
ಪ್ರತಿದಿನದಂತೆ ಅಂದೂ ಬಸ್ಸು ಹತ್ತಿ ನನಗರಿವಿಲ್ಲದೇ ಕಣ್ಣುಗಳಲ್ಲೇ ಹುಡುಕಾಡಿದ್ದೆ. ಕೊನೆಯ ಸೀಟಲ್ಲೇ ಕೂತಿದ್ದ ಆತ ಎಂದಿನ ತುಂಟ ನಗೆಯೊಂದಿಗೆ ಆಹ್ವಾನಿಸಿದ್ದ. ನಾನೊಮ್ಮೆ ಆತನೆಡೆ ಗಂಭೀರಯುತ ದೃಷ್ಟಿ ಬೀರಿ ಖಾಲಿಯಿದ್ದ ಸೀಟನ್ನು ಹುಡುಕಿ ಕಿಟಕಿಯ ಪಕ್ಕ ಕೂತಿದ್ದೆನಷ್ಟೆ, ಪಕ್ಕದಲ್ಲಾರೋ ಕೂತಂತಾಗಿತ್ತು. “ಎಕ್ಸ್ ಕ್ಯೂಸ್ ಮಿ….ನಾನಿಲ್ಲಿ ಕುಳಿತುಕೊಳ್ಳಬಹುದೇ?” ಕಂಚಿನ ಕಂಠದ ಧ್ವನಿ ಕೇಳಿಸಿದಾಗ ಕಣ್ಣುಗಳು ಅಪ್ರಯತ್ನವಾಗಿ ಪಕ್ಕಕ್ಕೆ ಸರಿದಿದ್ದವು. ಮೊದಲು ಬೆಚ್ಚಿ ಬಿದ್ದರೂ ಸಾವರಿಸಿಕೊಂಡ ನಾನು, ‘ಈತ ಪಕ್ಕದಲ್ಲಿ ಕುಳಿತುಕೊಂಡ ಮೇಲೆ ನನ್ನ ಅನುಮತಿ ಕೇಳುತ್ತಾನಲ್ಲ’ ಎಂದುಕೊಂಡು ಹುಬ್ಬುಗಂಟಿಕ್ಕಿದ್ದೆ. ಗಲಿಬಿಲಿಗೊಂಡ ಆತ, “ಕ್ಷಮಿಸಿ…ನಿಮ್ಮ ಜೊತೆ ಮಾತನಾಡುವ ಮನಸ್ಸಾಯಿತು. ತಾವು ತಪ್ಪು ತಿಳಿದುಕೊಂಡಿದ್ದಲ್ಲಿ ನಾನು ಈಗಲೇ ಎದ್ದು ಬೇರೆ ಸೀಟಲ್ಲಿ ಕೂರುತ್ತೇನೆ…” ಆತ ಬಾಯಲ್ಲಿ ಹಾಗಂದರೂ ಮೇಲೇಳುವ ಸೂಚನೆಯೇ ಕಾಣಿಸದಾಗ ನನಗೆ ನಗು ಬಂದಿತ್ತು. ನನ್ನ ಬಿರಿದ ತುಟಿಗಳನ್ನು ಕಂಡಾಗ ಸ್ವಲ್ಪ ಧೈರ್ಯ ಬಂತೋ ಏನೋ, ಆರಂಭಿಸಿಯೇ ಬಿಟ್ಟಿದ್ದ.
” ನಾನು ಸೂರಜ್ , ಇಲ್ಲೇ ಹತ್ತಿರದ ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಕೆಲಸ ಮಾಡ್ತಿದ್ದೀನಿ. ನೀವು ಇಳಿಯುವ ಸ್ಟಾಪ್ ನಲ್ಲೇ ನಾನೂ ಇಳೀಬೇಕು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಎಡಗಡೆಗೆ ತಿರುಗಿದಲ್ಲಿ ಅದೇ ರಸ್ತೆಯಲ್ಲಿ ನಮ್ಮ ಕಾಲೇಜು ಇರೋದು. ನನಗೆ ಮೊದಲಿನಿಂದಲೂ ಲೆಕ್ಚರರ್ ಕೆಲಸ ತುಂಬಾ ಇಷ್ಟ…..” ಮಾತು ಅತಿಯಾಯಿತೇನೋ ಅನ್ನಿಸಿ ತಟ್ಟನೆ ನಿಲ್ಲಿಸಿದವನು ನನ್ನತ್ತ ತಿರುಗಿದವನೇ, “ನಾನು ಬೋರ್ ಹೊಡಿಸಿಲ್ಲ ತಾನೇ?” ಎಂದಾಗ ನಾನು ಎದ್ದು ನಿಂತಿದ್ದೆ. ತನ್ನ ತಪ್ಪಿನರಿವಾಗಿ ಆತನೂ ಎದ್ದು ನಿಂತು ಬಸ್ಸಿನಿಂದ ಇಳಿದಿದ್ದ. ನಾನಾಗಲೇ ಇಳಿದು ಟೈಲರಿಂಗ್ ಶಾಪ್ ನ ಮೆಟ್ಟಿಲೇರಿದ್ದೆ. ಓರೆಗಣ್ಣಲ್ಲಿ ದಿಟ್ಟಿಸಿದಾಗ ಆತನ ಕಣ್ಣುಗಳಲ್ಲಿನ ನಿರಾಶೆ ಕಂಡ ನಾನು ಮೊದಲ ಬಾರಿಗೆ ಆತನ ಬಗ್ಗೆ ಕನಿಕರಗೊಂಡಿದ್ದೆ.
ಕಾಲುಗಳು ಯಾಂತ್ರಿಕವಾಗಿ ಹೊಲಿಗೆ ಯಂತ್ರ ತುಳಿಯುತ್ತಿದ್ದರೂ ಮನಸ್ಸು ನಾನು ಕಳೆದ ಇಪ್ಪತ್ತೆರಡು ವಸಂತಗಳ ಕುರಿತು ಮೆಲುಕು ಹಾಕುತ್ತಿತ್ತು. ಕಷ್ಟದಲ್ಲೇ ಹುಟ್ಟಿ, ಕಷ್ಟದಲ್ಲೇ ಬೆಳೆದ ನನಗೆ ಅಮ್ಮನನ್ನು ಬಿಟ್ಟರೆ ಬೇರಾರೂ ಇರಲಿಲ್ಲ. ಚಿಕ್ಕಂದಿನಿಂದಲೇ ಎಲ್ಲಾ ವಿಷಯಗಳಲ್ಲೂ ನಾನು ಚುರುಕಾಗಿದ್ದರೂ ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಅಮ್ಮನೇ ನನ್ನ ಸರ್ವಸ್ವ. ಆಟ, ಊಟ, ಪಾಠ ಎಲ್ಲವೂ ಅಮ್ಮನೊಂದಿಗೆ ಮಾತ್ರ. ಅಪ್ಪನನ್ನು ಕಣ್ಣಿಂದ ನೋಡಿರಲಿಲ್ಲ. ಅಮ್ಮ ಎಷ್ಟೇ ಒತ್ತಾಯಿಸಿದ್ದರೂ ಶಾಲೆಗೆ ಹೋಗುವ ಮನಸ್ಸಾಗಿರಲಿಲ್ಲ. ಅಮ್ಮನಿಂದಲೇ ಓದು-ಬರಹ ಕಲಿತ ನಾನು ಅವಳಿಂದಲೇ ಕಸೂತಿ ಹಾಕುವುದನ್ನೂ ಕಲಿತಿದ್ದೆ. ಪಕ್ಕದ ಮನೆಯ ಶಾಮಣ್ಣನವರಿಗೆ ನನ್ನನ್ನು ಕಂಡರೇನೋ ಅಕ್ಕರೆ. ಅವರ ಕೃಪೆಯಿಂದಲೇ ಹಳ್ಳಿಯಿಂದಾಚೆ ಇರುವ ಅವರದೇ ಟೈಲರಿಂಗ್ ಶಾಪ್ ನಲ್ಲಿ ಕೆಲಸವೂ ಸಿಕ್ಕಿತ್ತು. ಶಾಮಣ್ಣನವರ ಹೆಂಡತಿ ಮಕ್ಕಳಿಲ್ಲದ ಕೊರಗಿನಿಂದ ತೀರಿಕೊಂಡು ಆಗಲೇ ವರ್ಷಗಳೆರಡು ಕಳೆದಿದ್ದವು. ನನ್ನನ್ನು ತನ್ನ ಮಗಳಂತೆ ಕಾಣುತ್ತಿದ್ದ ಶಾಮಣ್ಣನವರೇ ಮೊದಲ ದಿನ ಬಸ್ಸಿನಲ್ಲಿ ಕರೆದುಕೊಂಡು ಹೋಗಿ ಟೈಲರಿಂಗ್ ಶಾಪ್ ನ ಸ್ಥೂಲ ಪರಿಚಯವಿತ್ತಿದ್ದರು. ಟೈಲರಿಂಗ್ ಶಾಪ್ ನೆದುರೇ ಬಸ್ಸು ನಿಲ್ಲುವುದರಿಂದ ಇಳಿಯಲೇನೂ ಕಷ್ಟವಾಗುತ್ತಿರಲಿಲ್ಲ. ನನ್ನ ನಾಲ್ಕು ಸಾವಿರ ರೂಪಾಯಿಗಳಲ್ಲೇ ನನ್ನ ಮತ್ತು ಅಮ್ಮನ ಜೀವನ ಸಾಗಬೇಕಿತ್ತು. ಕ್ರಮೇಣ ಇದೇ ಜೀವನಕ್ಕೆ ಒಗ್ಗಿಹೋಗಿದ್ದೆ. ಅಮ್ಮ ಈಗೀಗ ದಿನಾಲೂ ನನ್ನನ್ನು ತಬ್ಬಿ ” ನಿನ್ನದೊಂದು ಮದುವೆಯಾಗಿದ್ದರೆ ನಾನು ನಿಶ್ಚಿಂತೆಯಿಂದ ಸಾಯುತ್ತಿದ್ದೆ.” ಎನ್ನುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿರುತ್ತಾಳೆ. ನನ್ನ ಕಣ್ಣಿಂದಲೂ ನನ್ನರಿವಿಲ್ಲದೇ ಕಂಬನಿ ಜಾರುತ್ತದೆ. ಆದರೂ ಸಮಾಧಾನಿಸುವಂತೆ ಅಮ್ಮನ ಕಣ್ಣೀರೊರೆಸುತ್ತಾ ಹೊರಟು ಬರುತ್ತಿದ್ದೆ. ಈಗ್ಗೆ ಸುಮಾರು ಹತ್ತು ದಿನಗಳಿಂದಲೂ ಆ ಸೂರಜ್ ಕಾಟ ಬೇರೆ. ಇಷ್ಟು ದಿನ ಕಣ್ಣಲ್ಲೇ ಮಾತನಾಡಿಸುತ್ತಿದ್ದವನು ಇವತ್ತು ಪಕ್ಕದಲ್ಲೇ ಬಂದು ಕೂತಿದ್ದ.

ಫೋಟೋ ಕೃಪೆ : google
ಹೊಲಿಗೆ ದಾರ ಕಡಿದಾಗ ಮನದ ಯೋಚನೆಗಳಿಗೂ ತಡೆ ಬಿತ್ತು. ದಾರ ಸರಿಪಡಿಸಿಕೊಂಡು ಮತ್ತೆ ಹೊಲಿಯುವುದರಲ್ಲಿ ತಲ್ಲೀನಳಾಗಿದ್ದೆ. ಸಂಜೆ 4.45 ರ ಬಸ್ಸು ಹತ್ತಿ 5 ಗಂಟೆಗೆ ಮನೆ ತಲುಪಿದ್ದೆ. ಅಮ್ಮನ ಜೋಲು ಬಿದ್ದ ಮೋರೆ. ಕೆಮ್ಮು ಬೇರೆ ಜೋರಾಗಿದೆ. ಮಳೆಗೆ ನೆನೆದದ್ದೇ ನೆಪವಾಗಿ ಆರಂಭವಾದ ಜ್ವರ ಐದಾರು ದಿನಗಳಿಂದಲೂ ಬಿಟ್ಟಿಲ್ಲ. ಮನೆಕೆಲಸವೆಲ್ಲಾ ಮುಗಿಸಿ ಅಮ್ಮನಿಗೆ ಗಂಜಿ ಕುಡಿಸಿ ಮಾತ್ರೆ ಮತ್ತು ನೀರಿನ ಲೋಟ ಹಿಡಿದುಕೊಂಡು ಅಮ್ಮನ ಹಾಸಿಗೆಯಲ್ಲಿ ಕೂತಿದ್ದೆ. ಅಮ್ಮ ಮಾತ್ರೆ ನುಂಗಿದ ನಂತರ ದಿನನಿತ್ಯದಂತೆ ನನ್ನನ್ನು ತಬ್ಬಿಕೊಂಡು ಅತ್ತಾಗ ಸೂರಜ್ ನ ನೆನಪಾಗಿ ಮನ ಪುಳಕಿತಗೊಂಡಿತ್ತು.
ಮರುದಿನವೂ ಬಸ್ಸು ಹತ್ತಿದಾಗ ಕಣ್ಣುಗಳು ತನ್ನಿಂತಾನೇ ಬಸ್ಸಿಡೀ ಹರಿದಾಡಿದ್ದವು. ಅದೇ ಕೊನೆಯ ಸೀಟಲ್ಲೇ ಕೂತು ಎಂದಿನ ನಗೆ ತುಳುಕಿಸಿದ್ದ ಸೂರಜ್. ನಾನು ಖಾಲಿ ಸೀಟು ಹುಡುಕಿ ಕಿಟಕಿಯ ಪಕ್ಕದಲ್ಲೇ ಕುಳಿತಾಗ ಆತ “ಗುಡ್ ಮಾರ್ನಿಂಗ್” ಅನ್ನುತ್ತಾ ಪಕ್ಕದಲ್ಲೇ ಕೂತರೂ ನನ್ನಿಂದೇನೂ ಪ್ರತಿಕ್ರಿಯೆ ಬಾರದ್ದನ್ನು ಕಂಡವನೇ ನಿಧಾನಕ್ಕೆ ಶುರು ಮಾಡಿದ್ದ. “ನಿಜ ಹೇಳಬೇಕೆಂದರೆ ನಿಮ್ಮ ಈ ಗಂಭೀರ ನಿಲುವೇ ನನ್ನನ್ನು ಆಕರ್ಷಿಸಿದ್ದು. ನಿಮ್ಮ ದುಂಡಗಿನ ಆಕರ್ಷಕ ಮುಖಕ್ಕೆ ಈ ಕಪ್ಪು ಜೋಡಿ ಕಂಗಳ ಸೊಬಗು ಚೆನ್ನಾಗಿ ಒಪ್ಪುತ್ತದೆ. ನಿಮ್ಮ ತುಟಿ ಸ್ವಲ್ಪ ಬಿರಿದರೂ ಮಿಂಚಿ ಮರೆಯಾಗುವ ಗುಳಿಗಳು ನನ್ನನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ನಿಮ್ಮ ಸುಂದರ ಕೇಶರಾಶಿ ನನಗೆ ಹುಚ್ಚು ಹಿಡಿಸುತ್ತಿದೆ. ನಿಮ್ಮದು ಬಣ್ಣಿಸಲಾಗದ ಅದ್ಭುತ ಸೌಂದರ್ಯ!!!” ಸುತ್ತ-ಮುತ್ತಲಿನ ಪರಿವೆಯಿಲ್ಲದೇ ಒಂದೇ ಸಮನೆ ನನ್ನ ಸೌಂದರ್ಯದ ಗುಣಗಾನ ಮಾಡುತ್ತಿದ್ದಾಗ ಕಸಿವಿಸಿಗೊಂಡ ನಾನು ಮತ್ತಷ್ಟು ಕಿಟಕಿಯ ಪಕ್ಕ ಒತ್ತರಿಸಿ ಕೂತಿದ್ದೆ. ಇದು ಆತನಿಗೆ ಅಸಹನೀಯವೆನಿಸಿತೋ ಏನೋ, ಮತ್ತೆ ಮಾತನಾಡದೇ ಸುಮ್ಮನಾಗಿದ್ದ. ಟೈಲರಿಂಗ್ ಶಾಪ್ ನೆದುರು ಬಸ್ಸು ನಿಂತಾಗ ನನಗಿಂತ ಮೊದಲೇ ಇಳಿದವನು , ನಾನೂ ಇಳಿದು ಆತನನ್ನು ದಾಟಿ ಮುಂದೆ ಹೋಗುವಷ್ಟರಲ್ಲಿ, ತಟ್ಟನೆ ನನ್ನ ತೋಳು ಹಿಡಿದು ನಿಲ್ಲಿಸಿದ್ದ. ನಾನು ಸಿಟ್ಟಿನಿಂದ ಕಣ್ಣು ಕೆಕ್ಕರಿಸಿ ನೋಡಿದಾಗ ತನ್ನ ಹಿಡಿತ ಸಡಿಲಿಸಿ ಮೆದು ಸ್ವರದಲ್ಲಿ, “ಕ್ಷಮಿಸಿ, ನಾನು ಇಷ್ಟೆಲ್ಲ ಮಾತನಾಡಿದ್ರೂ ನೀವೇನೂ ಮಾತಾಡಲೇ ಇಲ್ಲ. ಇರ್ಲಿ ಬಿಡಿ, ನಿಮ್ಮ ಹೆಸರೇನೆಂದು ಕೇಳಬಹುದೇ?” ಎಂದಾಗ ಅದುವರೆಗೂ ಹತ್ತುತ್ತಿದ್ದ ಜನರನ್ನು ತನ್ನ ಹೊಟ್ಟೆಯಲ್ಲಿ ತುಂಬಿಸಿಕೊಳ್ಳುತ್ತಾ ಇನ್ನೂ ನಿಂತೇ ಇದ್ದ ಬಸ್ಸಿನತ್ತ ನನ್ನ ಕಣ್ಣು ಹೊರಳಿಸಿದ್ದೆ. ಆತನೂ ನನ್ನ ದೃಷ್ಟಿಯನ್ನೇ ಹಿಂಬಾಲಿಸಿದಾಗ ನನ್ನ ಹೆಸರನ್ನೇ ಹೋಲುತ್ತಿದ್ದ ಜಾಹೀರಾತಿನ ಬೋರ್ಡ್ ರಾರಾಜಿಸುತ್ತಿದ್ದುದನ್ನು ಕಂಡ ಆತ ಕಣ್ಣರಳಿಸಿ, “ನಿಮ್ಮ ಹೆಸರು ಆಶಿಕಾನಾ?” ಎಂದಾಗ ಹೌದೆಂಬಂತೆ ನಕ್ಕು ತಲೆಯಾಡಿಸಿದ್ದೆ. “ಓಹ್…ಸ್ವೀಟ್ ನೇಮ್…!!! ಉದ್ಗರಿಸಿದ ಆತ ಒಮ್ಮೆಲೇ ನನ್ನನ್ನು ಸಮೀಪಿಸಿದವನೇ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ, “ಆಶಿಕಾ….ಐ ಲವ್ ಯು…ನಾನು ನಿಮ್ಮನ್ನು ತುಂಬಾ ಪ್ರೀತಿಸ್ತಿದ್ದೀನಿ, ಅಷ್ಟು ಮಾತ್ರವಲ್ಲ ನಾನು ನಿಮ್ಮನ್ನು ವಿವಾಹವಾಗ ಬಯಸುತ್ತೇನೆ.” ಮೆಲ್ಲಗೆ ಪಿಸುಗುಟ್ಟಿದ್ದ. ನಾನು ಆ ಭಾವಪೂರ್ಣ ಕಂಗಳ ಮೋಡಿಗೆ ಒಂದು ಕ್ಷಣ ಮೈಮರೆತರೂ ತಕ್ಷಣ ವಾಸ್ತವಕ್ಕೆ ಬಂದು ಏನೊಂದೂ ಉತ್ತರಿಸದೇ ಬಿರುಸಿನ ಹೆಜ್ಜೆಯಿಕ್ಕುತ್ತಾ ಆತನಿಗೆ ಬೆನ್ನು ಮಾಡಿ ನಡೆದಿದ್ದೆ. ಸೂರಜ್ ಕಣ್ಣರಳಿಸಿ ನೋಡುತ್ತಲೇ ಇದ್ದ, ಬಸ್ಸು ಯಾವಾಗಲೋ ಹೊರಟು ಹೋಗಿತ್ತು.
ಆ ದಿನ ಸಂಜೆ ಮನೆ ತಲುಪಿದವಳೇ ಅಡುಗೆ ಕೆಲಸ ಪೂರೈಸಿ, ಅಮ್ಮನಿಗೆ ಗಂಜಿ ಕುಡಿಸಿದಾಗ ಅವರು ನನ್ನನ್ನು ತಬ್ಬಿ ಅಳುವ ದೃಶ್ಯ ಪುನರಾವರ್ತನೆಯಾಗಿತ್ತು. ಅಮ್ಮನ ತಲೆದಡವಿ, ಕಣ್ಣೀರೊರೆಸಿ ಸಂತೈಸಿದ್ದೆ. ಔಷಧಿ ಕುಡಿದ ಆಕೆ ದಿಂಬಿಗೊರಗಿದ ತಕ್ಷಣ ನಿದ್ದೆ ಹೋಗಿದ್ದರು. ಆದರೆ ನನಗೆ ನಿದ್ದೆ ಬರದೇ ಹೊರಳಾಡುತ್ತಿದ್ದೆ. ಸೂರಜ್ ಸುಂದರ ಸ್ಪುರದ್ರೂಪಿ ಯುವಕ. ನನ್ನನ್ನು ಕಂಡೊಡನೆ ಆತನ ಕಣ್ಣಗಳಲ್ಲಿನ ಹೊಳಪು ಮರೆಯಲಾಗುತ್ತಿಲ್ಲ. ಒಳ್ಳೆಯ ಮಾತುಗಾರ ಕೂಡಾ. ‘ನಾನೂ ಒಳಗಿಂದೊಳಗೇ ಅವನನ್ನು ಪ್ರೀತಿಸುತ್ತಿರುವೆನೇ?’ ಬಲವಂತವಾಗಿ ಮನದಲ್ಲಿದ್ದುದನ್ನೆಲ್ಲಾ ಕೊಡವಿ ಪಕ್ಕಕ್ಕೆ ಮಗ್ಗಲಾಗಿದ್ದೆ. ತಕ್ಷಣ ಒಂದು ನಿರ್ಧಾರಕ್ಕೆ ಬಂದು ಪೆನ್ನು – ಕಾಗದ ಹಿಡಿದು ಸ್ವಲ್ಪ ಹೊತ್ತು ಗೀಚಿ ಮುಚ್ಚಿಟ್ಟು, ಮತ್ತೆ ಹಾಸಿಗೆಗೊರಗಿ ನಿದ್ರಿಸುವ ವ್ಯರ್ಥ ಪ್ರಯತ್ನ ಮಾಡುತ್ತಾ ಹೆಣಗಾಡುತ್ತಿದ್ದೆ. ಅಂತೂ ಇರುಳು ಕಳೆದು ಬೆಳಗಾಗಿತ್ತು.

ಬೆಳಿಗ್ಗೆ ಎಲ್ಲಾ ಕೆಲಸ ಮುಗಿಸಿ ರಾತ್ರಿ ಬರೆದಿಟ್ಟಿದ್ದ ಪತ್ರವನ್ನು ಶಾಮಣ್ಣನವರಿಗೆ ಕೊಟ್ಟು ವಾಪಾಸಾಗಿದ್ದೆ. ತಲೆಕೂದಲು ಬಾಚಿಕೊಳ್ಳುತ್ತಿದ್ದಾಗ ಮತ್ತೆ ಸೂರಜ್ ನ ಮಾತು ನೆನಪಾಗಿ ಹೊರೆಗೂದಲನ್ನೊಮ್ಮೆ ನಯವಾಗಿ ನೇವರಿಸಿದ್ದೆ. ಕಡಿವಾಣವಿಲ್ಲದ ಕುದುರೆಯಂತೋಡುವ ಮನವನ್ನು ಶಪಿಸುತ್ತಾ, ಅವಸರವಸರವಾಗಿ ಜಡೆ ಹೆಣೆದುಕೊಂಡು ತಿಳಿನೀಲಿ ಸೀರೆಯುಟ್ಟು, ಅದೇ ಬಣ್ಣದ ರವಿಕೆ ತೊಟ್ಟು ಹಣೆಗೊಂದು ಬಿಂದಿ ಅಂಟಿಸಿ ಚಪ್ಪಲಿ ಮೆಟ್ಟಿ ಮುಗ್ಧ ಮಗುವಿನಂತೆ ಇನ್ನೂ ಮಲಗಿಯೇ ಇದ್ದ ಅಮ್ಮನನ್ನು ಎಬ್ಬಿಸಲೆತ್ನಿಸದೇ, ಮಂಚದ ಹತ್ತಿರವಿದ್ದ ಸ್ಟೂಲ್ ನಲ್ಲಿ ಗಂಜಿ ಮತ್ತು ಔಷಧಿ ಮುಚ್ಚಿಟ್ಟು ಹೊರಟಿದ್ದೆ. ಹೊರಡುವ ಮೊದಲು ಇನ್ನೊಮ್ಮೆ ಕಣ್ಣುಗಳು ‘ರೂಪಸಿ’ ಎಂದು ಸಾರಿದ ಕನ್ನಡಿಯನ್ನು ದಿಟ್ಟಿಸಿದಾಗಲೂ ದೀರ್ಘ ನಿಟ್ಟುಸಿರೊಂದು ಹೊರಟಿತ್ತು.
ಮುಂಬಾಗಿಲೆಳೆದುಕೊಂಡು ಹೊರಬಂದಾಗ ಶಾಮಣ್ಣನವರೂ ಜೊತೆಗೂಡಿದ್ದರು. ನನ್ನನ್ನು ನೋಡಿದ ಅವರ ಕಣ್ಣುಗಳಲ್ಲಿನ ಮೆಚ್ಚುಗೆಯ ದೃಷ್ಟಿ ಕಂಡೊಡನೆ ಸಮಾಧಾನವೆನಿಸಿತ್ತು. ಕಾಲು ದಾರಿಯಲ್ಲಿ ಸಾಗುತ್ತಿದ್ದಾಗಲೂ ಅವರು ಮೌನವಾಗಿದ್ದರು. ಬಸ್ಸು ತಂಗುದಾಣ ತಲುಪಿದ್ದ ಹತ್ತು ನಿಮಿಷಗಳಿಗೆ ಬಸ್ಸು ಬಂದಿತ್ತು. ಬಸ್ಸು ಹತ್ತಿ ನನ್ನ ಕಣ್ಣುಗಳು ಸೂರಜ್ ಗಾಗಿ ಅರಸಿದ್ದವು. ಕೊನೆಯ ಸೀಟಿನಲ್ಲಿದ್ದವನು ಎದ್ದು ನಿಂತಾಗ ನಾನು ಮಾಮೂಲಿನಂತೆ ಖಾಲಿ ಸೀಟಲ್ಲಿ ಕಿಟಕಿಯ ಪಕ್ಕ ಕೂತಿದ್ದೆ. ಶಾಮಣ್ಣನವರು ನಾನು ಕುಳಿತ ಸೀಟಿನ ಹಿಂದಿನ ಸೀಟಲ್ಲೇ ಕುಳಿತರು. ಪಕ್ಕದಲ್ಲೇ ಬಂದು ಕೂತ ಸೂರಜ್ “ನಾನು ತುಂಬಾ ವಾಚಾಳಿ, ಆದರೆ ನೀವು ಮಾತಾಡ್ತಾನೇ ಇಲ್ಲ…..ಎಷ್ಟು ದಿನಗಳಿಂದ ಯಾವ ರೀತಿ ಪ್ರಯತ್ನಿಸಿದರೂ ನೀವು ಮಾತಾಡ್ಲೇ ಇಲ್ಲ. ನೀವಿವತ್ತು ತುಂಬಾ ಚೆನ್ನಾಗಿ ಕಾಣಿಸ್ತಿದ್ದೀರಿ! ಪ್ಲೀಸ್…ಏನಾದ್ರೂ ಮಾತಾಡಿ…” ಅನ್ನುವಷ್ಟರಲ್ಲಿ, ಹಿಂದಿನಿಂದ ” ಸೂರಜ್….ಇಲ್ಲಿ ಬನ್ನಿ, ಕುಳಿತುಕೊಳ್ಳಿ” ಎಂದು ಶಾಮಣ್ಣನವರು ತನ್ನ ಪಕ್ಕ ಕುಳಿತುಕೊಳ್ಳುವಂತೆ ಆಹ್ವಾನಿಸಿದಾಗ ಅಪರಿಚಿತರು ತನ್ನ ಹೆಸರಿಂದ ಕರೆದಾಗ ಬೆಚ್ಚಿಬಿದ್ದವನು ” ತಾವು?” ಎಂದು ತಬ್ಬಿಬ್ಬಾಗಿ ತೊದಲಿದ್ದ.
ಸೂರಜ್ ಒಮ್ಮೆ ನನ್ನೆಡೆ ತೀಕ್ಷ್ಣವಾಗಿ ನೋಡಿ ಶಾಮಣ್ಣನವರ ಜೊತೆ ಕುಳಿತಾಗಲೂ ನಾನು ಸ್ಥಿತಪ್ರಜ್ಞಳಂತಿದ್ದೆ. ಶಾಮಣ್ಣನವರು ಆತನೊಂದಿಗೆ ಮಾತನಾಡಲು ಆರಂಭಿಸಿದ್ದರು, ” ನಾನು ಶಾಮಣ್ಣ, ಆಶಿಕಾಳ ಹಿತಚಿಂತಕ. ಈಕೆ ಹಾಗೂ ಈಕೆಯ ತಾಯಿ ನನ್ನ ಮನೆಯ ಪಕ್ಕದಲ್ಲೇ ವಾಸವಾಗಿದ್ದಾರೆ. ತಂದೆಯಿಲ್ಲದ ಹುಡುಗಿ ನನ್ನ ಟೈಲರಿಂಗ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಚಿಕ್ಕಂದಿನಿಂದಲೂ ತುಂಬಾ ಸ್ವಾಭಿಮಾನಿ. ಈಕೆಯ ಸೌಂದರ್ಯ ನೋಡಿ ನಿಮ್ಮಂತೆ ವಿವಾಹವಾಗಲು ಮುಂದೆ ಬಂದವರು ಹಲವರು. ಆದರೆ ಈಕೆಯ ಕಥೆ ತಿಳಿದ ಕೂಡಲೇ ದೂರವಾಗುತ್ತಾರೆ. ನೀವು 8-10 ದಿನಗಳಿಂದ ಈಕೆಗೆ ಪರಿಚಿತರಂತೆ. ಎಲ್ಲವನ್ನೂ ನನಗೊಂದು ಪತ್ರದ ಮೂಲಕ ಆಶಿಕಾ ತಿಳಿಸಿದ್ದಳು. ಹೌದು, ಈಕೆ ಕೇವಲ ಬರೆಯಬಲ್ಲಳು, ಮಾತನಾಡಲಾರಳು. ಈಕೆ ಹುಟ್ಟಿನಿಂದಲೇ ಮೂಕಿ. ಇದನ್ನು ತಿಳಿದೂ ಈಕೆಯನ್ನು ನೀವು ವಿವಾಹವಾಗಲು ಮುಂದೆ ಬರುವಿರೆಂದರೆ ನನಗೆ ತುಂಬಾ ಸಂತೋಷ….” ಎಂದು ನಿಲ್ಲಿಸಿ ಆತನ ಉತ್ತರಕ್ಕಾಗಿ ಕಾದಾಗ ಆದ ಆಘಾತದಿಂದ ಒಮ್ಮೆಲೇ ಚೇತರಿಸಿಕೊಂಡ ಸೂರಜ್ ತಟ್ಟನೆ ಎಚ್ಚೆತ್ತು, ” ಕ್ಷಮಿಸಿ ಸರ್….ನನಗೆ ಇವೆಲ್ಲ ತಿಳಿದಿರಲಿಲ್ಲ. ನಾನು ಒಪ್ಪಿದರೂ ನಮ್ಮಮ್ಮ ಒಪ್ಪಲಾರರು….” ಎಂದು ಮೆಲ್ಲನುಸುರಿ ಸೀಟಿನಿಂದೆದ್ದು ತನ್ನ ಸ್ಟಾಪ್ ಬರುವ ಮೊದಲೇ ಇಳಿದು ಹೋಗಿದ್ದ. ಶಾಮಣ್ಣನವರ ಮುಖದಲ್ಲಿ ನೋವಿನೆಳೆಯಿತ್ತು. ‘ ಸೂರಜ್…..ನೀನೂ ಹತ್ತರಲ್ಲಿ ಹನ್ನೊಂದನೆಯವನಾದೆಯಲ್ಲ’ ಎಂದು ನನ್ನಲ್ಲೇ ನಾನು ವಿಷಾದದ ನಗೆ ನಕ್ಕಿದ್ದೆ. ಇದಾವುದರ ಅರಿವೂ ಇಲ್ಲದ ಬಸ್ಸು ತನ್ನ ಪಾಡಿಗೆ ತಾನು ಧೂಳೆಬ್ಬಿಸುತ್ತಾ ಓಡುತ್ತಿತ್ತು. ಮಂಜಾಗುತ್ತಿದ್ದ ನನ್ನ ಕಣ್ಣೆದುರು ಸದಾ ನನ್ನನ್ನು ತಬ್ಬಿ ಅಳುವ ಅಮ್ಮನ ಮುಖ ಧುತ್ತೆಂದು ನಿಂತಿತ್ತು.
- ಸ್ಮಿತಾ ಬಲ್ಲಾಳ್ (ಅಸ್ಮಿತೆ)
