ನೂರರ ನೋಟು ಉದಯನ ಕಿಸೆಯಿಂದ ಹೊರಬಂತು. ಮತ್ತೆ ಏನೇನೋ ನುಡಿದಳು ಕೊರವಂಜಿ. ಕೊನೆಗೆ, ನೋಟು ಎರಡಾಗಬಾರದು ಮೂರು ಮಾಡು. ಇನ್ನೊಂದು ದೊಡ್ಡ ನೋಟು ಸೇರಿಸು, ನಾನೇನೂ ಒಯ್ಯುವುದಿಲ್ಲ, ಚಿಂತೆ ಮಾಡಬೇಡ ಎಂದಳು. ಇವನ ಮುಖ ಕೆಂಪಾಗತೊಡಗಿತ್ತು. ಬೆವರು ಒರೆಸುತ್ತಾ ಅತ್ತಿತ್ತ ನೋಡಿದ.ಮುಂದೇನಾಯಿತು ಡಾ.ಅಜಿತ ಹರೀಶಿ ಅವರ ಈ ಕತೆಯನ್ನು ತಪ್ಪದೆ ಮುಂದೆ ಓದಿ…
ಉದಯನ ಮೊಬೈಲ್ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಡ್ರೈವಿಂಗ್ ಮಾಡುವಾಗ ಆತ ಫೋನ್ ಎತ್ತದ ನೇಮ ಇಟ್ಟುಕೊಂಡವನು. ಕಾಲ್ ಮಾಡಿದವ ಶೆಟ್ಟಿ, ಜೀವದ ಗೆಳೆಯ. ಮುಂದೆ ಸರ್ಕಲ್ ನಲ್ಲಿ ಸಿಗ್ನಲ್ ಬಿದ್ದಿತ್ತು. ಗಾಡಿ ಸೈಡಿಗೆ ಹಾಕಿದ ಉದಯ, ಶೆಟ್ಟಿಯೊಂದಿಗೆ ಮಾತನಾಡಲು ತೊಡಗಿದ. ಆಗ ಇವನ ಬದಿಯ ಡೋರ್ ನ ಬಳಿ ಹೆಂಗಸೊಬ್ಬಳು ಪ್ರತ್ಯಕ್ಷವಾಗಿದ್ದಳು.
ಆತ ಅವಳನ್ನು ಒಮ್ಮೆ ಗಮನಿಸಿದ. ಮೈತುಂಬಾ ಹಚ್ಚೆಯಿಂದ ಅಲಂಕಾರ, ಢಾಳಾದ ಬಣ್ಣದ ಸೀರೆ ಕುಬುಸ, ವಾಲಿಸಿ ಕಟ್ಟಿದ ತುರುಬು, ಕಾಲಕಡಗ, ಮೂಗಿಗೆ ಮುಕುರ, ತಲೆಗೆ ದುಪ್ಪಟಿ ಹಾಗೂ ಬುಟ್ಟಿ, ಆ ಬುಟ್ಟಿಯಲ್ಲಿ ಯಲ್ಲಮ್ಮ ದೇವಿಯಿರುವ ಚೌಕಾಕಾರದ ಚಿಕ್ಕ ಪೆಟ್ಟಿಗೆ, ಕೈಯಲ್ಲಿ ಉದ್ದವಾದ ಕೋಲು ಹಿಡಿದು ನಿಂತಿದ್ದಳು.
ಇಂವ ಚಿಲ್ಲರೆ ಇಲ್ಲ ಎಂದು ಹೇಳಿ ಕಳಿಸಲು ನೋಡಿದ. ಅವಳು ನಿಂತಲ್ಲಿಂದ ಕದಲಿಲ್ಲ. ಮೊಬೈಲ್ ನಲ್ಲಿ ಮಾತನಾಡುತ್ತಲೇ ಬಗ್ಗಿ ಡ್ಯಾಶ್ ಬೋರ್ಡ್ ನಲ್ಲಿ ಸಿಕ್ಕ ಐದು ರೂಪಾಯಿ ನಾಣ್ಯವನ್ನು ಹಾಕಿದ. ಕೊರವಂಜಿ, ಕೈಯಲ್ಲಿ ಕುಂಕುಮ ಹಿಡಿದು, ಅವನ ಕರೆ ಮುಗಿಯುವವರೆಗೆ ಕಾಯುತ್ತಲೇ ಇದ್ದಳು. ಉದಯ ಕುಂಕುಮವನ್ನು ಪಡೆದು ಆದಷ್ಟು ಬೇಗ ಅವಳನ್ನು ಸಾಗಹಾಕಲು ನೋಡಿದ.ಅಣ್ಣಾ ಒಂದು ದೊಡ್ಡ ನೋಟು ಕೊಡು ಕುಂಕುಮ ಹಚ್ಚಿ ಕೊಡ್ತೀನಿ ಎಂದಳು. ನಡೀ ನಡೀ ಎನ್ನುವಂತೆ ಕೈ ಮಾಡಿ ತೋರಿಸಿದರೂ ಪ್ರಯೋಜನಕ್ಕೆ ಬರಲಿಲ್ಲ.
ನೀನೇನೂ ನನ್ನ ಕೈಯಲ್ಲಿ ಕೊಡಬ್ಯಾಡ. ನೋಟ ನಿನ್ನ ಕೈಯಲ್ಲಿ ಇಟ್ಗೋಳಪ್ಪಾ ಎಂದಳು. ಉದಯ ಹುಶಾರಿಯಿಂದ ಐವತ್ತು ರೂಪಾಯಿಯ ನೋಟು ತೆಗೆದುಕೊಂಡು ಕೈಯಲ್ಲಿ ಬಿಗಿಯಾಗಿ ಹಿಡಿದುಕೊಂಡ. ಅವಳು ಕುಂಕುಮ ಸವರಿ ಒಳ್ಳೆಯ ದಿನಗಳು ಬಹಳ ದೂರದಲ್ಲಿ ಇಲ್ಲ. ಆತುರ ಪಡಬೇಡ, ಒಳ್ಳೆಯದಾಗುತ್ತದ ಎಂದಳು. ಆ ನೋಟನ್ನು ಇವನ ಕೈಯಲ್ಲಿ ಇರುವಂತೆಯೇ ಮಡಚಿದಳು. ಇದಕ್ಕೆ ಇನ್ನೊಂದು ದೊಡ್ಡ ನೋಟು ಸೇರಿಸು ಎಂದಳು. ಉದಯ ಕೊಸರಾಡಿದ. ಸರಿದಿಕೋ ಹೊರಟೆ ಅಂತ ಇಗ್ನೀಷನ್ ತಿರುವಿದ. ದೇವಿಯೇ ಮುಂದು ನಿಂತಾಳ, ಕಾಲಲ್ಲಿ ಒದ್ದು ಹೋಗಬೇಡ, ಕನಕ ವೃಷ್ಟಿ ಆಗತೈತಿ ಎಂದಳು.

ನೂರರ ನೋಟು ಉದಯನ ಕಿಸೆಯಿಂದ ಹೊರಬಂತು. ಮತ್ತೆ ಏನೇನೋ ನುಡಿದಳು ಕೊರವಂಜಿ. ಕೊನೆಗೆ, ನೋಟು ಎರಡಾಗಬಾರದು ಮೂರು ಮಾಡು. ಇನ್ನೊಂದು ದೊಡ್ಡ ನೋಟು ಸೇರಿಸು, ನಾನೇನೂ ಒಯ್ಯುವುದಿಲ್ಲ, ಚಿಂತೆ ಮಾಡಬೇಡ ಎಂದಳು.
ಇವನ ಮುಖ ಕೆಂಪಾಗತೊಡಗಿತ್ತು. ಬೆವರು ಒರೆಸುತ್ತಾ ಅತ್ತಿತ್ತ ನೋಡಿದ. ಜಗತ್ತು ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಐದು ನೂರರ ಒಂದು ನೋಟನ್ನು ಪರ್ಸಿನಿಂದ ತೆಗೆದುಕೊಂಡ. ಯಾವ ಕಾರಣಕ್ಕೂ ಇವಳಿಗೆ ಕೊಡಕೂಡದು. ಇನ್ನೊಮ್ಮೆ ಮತ್ತೆ ನೋಟನ್ನು ಕೇಳಿದರೆ, ತೆಗೆಯದೇ ಕಾರು ಚಲಾಯಿಸಿಕೊಂಡು ಹೋಗುವುದೆಂದು ತೀರ್ಮಾನಿಸಿದ. ಅವಳು ಮೂರಕ್ಕೆ ಮುಕ್ತಾಯ ಮಾಡಿದಳು. ಮಣ ಮಣಗುಟ್ಟಿದಳು. ಯಲ್ಲಮ್ಮಂಗೆ ಖುಷಿಯಾಯಿತು ಎಂದಳು. ನಿನಗೆ ನೆಮ್ಮದಿ ದೊರಕುತ್ತದೆ, ಸದ್ಯದಲ್ಲಿಯೇ ಮದುವೆಯಾಗುತೈತಿ ಎಂದಳು. ‘ಸರಿ ಬರಲಾ’ ಎನ್ನುತ್ತಾ, ಇಬ್ಬರ ಮಧ್ಯೆ ಆಚೀಚೆ ಆಗುತ್ತಿದ್ದ ಚಂಚಲ ಲಕ್ಷ್ಮಿಯನ್ನು ತುಸು ನಾಜೂಕಾಗಿ ಎಳೆದ.
‘ದೇವಿ ನಾಲ್ಕು ಜನರಿಗೆ ಅನ್ನ ಕಾಣಿಸು ಅಂತ ನಿನಗೆ ಹೇಳ್ತಿದೆ’ ಎಂದಳು, ಕೊರವಂಜಿ ಕಣ್ಣು ಮೇಲೆ ಸೇರಿಸುತ್ತಾ. ಅವಳ ಕೈ ಹಿಡಿತ ಬಲವಾಯಿತು. ಉದಯನ ಬೆವರಿದ ಕೈಯಿಂದ ನೋಟುಗಳು ಜಾರಿದವು. ಅವನಿಗೆ ಅದನ್ನು ಹಿಡಿಯುವ ಮನಸ್ಸಾಗಲಿಲ್ಲ. ಆ ತಕ್ಷಣ ಅವಳು ಮತ್ತೆ ಮತ್ತೆ ಕೇಳಿದಳು, ‘ಬೇಜಾರು ಮಾಡಿಕೊಂಡು ಕೊಡಬೇಡ, ಪ್ರೀತಿಯಿಂದ ಕೊಡು, ನನಗೂ, ನಿನಗೂ ದಕ್ಕುವುದಿಲ್ಲ. ಯಲ್ಲವ್ವಗೆ ನಾಕು ಸೇರು ಅಕ್ಕಿ ನೈವೇದ್ಯ ಮಾಡೋದು, ಎಲ್ಲಾ ನಿನ್ನ ಒಳ್ಳೆಯದಕ್ಕೆ’ ಎಂದಳು.
ಆತನಿಗೆ ಇನ್ನು ನಿಲ್ಲುವ ಮನಸ್ಸಾಗಲಿಲ್ಲ. ಗಾಡಿ ಎಬ್ಬಿಸಿದ. ಅವಳ ಮೇಲೆ, ತನ್ನ ಮೇಲೆ ಸಿಟ್ಟು ಬಂತು. ವಾಹನವು ವೇಗವನ್ನು ಪಡೆದುಕೊಂಡಂತೆ ತಣ್ಣನೆಯ ಗಾಳಿ ಬೀಸತೊಡಗಿತು. ತಂಪಾದ ಮನಸ್ಸು ಆಕೆಯ ಟ್ರಿಕ್ ಬಗ್ಗೆ ಆಲೋಚಿಸಹತ್ತಿತು. ಅವನ ಮುಖದ ಮೇಲೊಂದು ನಸುನಗು ಉದಯಿಸಿತು.
- ಡಾ.ಅಜಿತ ಹರೀಶಿ
