ತಾಯಂದಿರು ಸ್ವಾರ್ಥಿಗಳಾಗಬೇಡಿ, ಸಂಕಟ ಎಷ್ಟೇಯಿದ್ದರೂ ಒಬ್ಬ ‘ತಾಯಿ’ ಮಕ್ಕಳಿಗಾಗಿ ಬದುಕುವುದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕಷ್ಟ – ಸುಖ ಎರಡು ಜೀವನದ ಅಂಗ. ಕಷ್ಟ ಬಂದ ಮೇಲೆ, ಅದರ ಬೆನ್ನಲ್ಲೇ ಸುಖ ಬಂದೇ ಬರುತ್ತದೆ. ಯಾವುದು ಶಾಶ್ವತ ಅಲ್ಲಾ. ಬಂದ ಕಷ್ಟವನ್ನು ಧೈರ್ಯದಿಂದ ಎದುರಿಸಿ. ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅವರ ಸ್ಪೂರ್ತಿದಾಯಕ ಮಾತು ತಪ್ಪದೆ ಮುಂದೆ ಓದಿ…
‘ಮಾನವ ಜನ್ಮ ದೊಡ್ಡದು’. ಈ ದೊಡ್ಡ ಜೀವನದಲ್ಲಿ ಸಾವು, ನೋವು, ಸುಖ, ದುಃಖ, ಏಳು ಬೀಳು, ಆತ್ಮೀಯರ ಅಗಲಿಕೆ, ಅವಮಾನ ಅಪಮಾನ, ಸನ್ಮಾನ ಎಲ್ಲವೂ ಇಲ್ಲಿ ಸಹಜ. ನಾವು ಊಹಿಸಲಾರದಂತಹ ತಿರುವುಗಳು ನಮ್ಮನ್ನು ಹಾದುಹೋಗಿಬಿಡುತ್ತವೆ. ಇಂದು ನಾಳೆಯಂತೆ. ನಾಳೆ ನಾಡಿದ್ದಂತೆ ಇರಲು ಸಾಧ್ಯವಿಲ್ಲ. ಕಣ್ ಮುಚ್ಚಿ ಕಣ್ ಬಿಡುವುದರೊಳಗೆ ಏನ್ ಬೇಕಾದರೂ ಆಗಬಹುದು. ಇದೆಲ್ಲವೂ ನಾವು ಒಪ್ಪಿಕೊಳ್ಳಲೇಬೇಕಾದ ಮಾನವ ಜೀವನದ ವಾಸ್ತವಿಕತೆ.
ಒಂದು ಹೆಣ್ಣು ಹುಟ್ಟಿನಿಂದ ತಾನು ನಿರ್ವಹಿಸುವ ಪಾತ್ರಗಳಲ್ಲಿ ‘ತಾಯಿ’ ಪಾತ್ರ ಬಹಳ ಮಹತ್ವದ್ದಾಗಿದೆ. ಮಕ್ಕಳ ಭವಿಷ್ಯದ ದಿನಗಳಿಗಿಂತ ವರ್ತಮಾನದ ದಿನಗಳು ತಮ್ಮ ತಾಯಿಯನ್ನು ಅತ್ಯಂತ ಅಗತ್ಯವಾಗಿ ಬಯಸುತ್ತವೆ. ತಂದೆಯಿಲ್ಲದೆ ಇದ್ದರೂ ಪರವಾಗಿಲ್ಲ ಮಕ್ಕಳ ಪಾಲಿಗೆ ತಾಯಿ ನಿಜಕೂ ಅತೀ ಅವಶ್ಯಕ ಅನಿಸುತ್ತದೆ. ತಂದೆಯ ಅನುಪಸ್ಥಿತಿಯನ್ನು ತಾಯಿ ತಾನೇ ಎಲ್ಲಾ ಆಗಿ ತನ್ನ ಸ್ಥಾನದ ಜವಾಬ್ದಾರಿ ಜೊತೆಗೆ ತಂದೆಯ ಪಾತ್ರವನ್ನು ನಿಭಾಯಿಸಬಲ್ಲ ಶಕ್ತಿ ಸಾಮರ್ಥ್ಯಗಳು ಪ್ರತಿ ಹೆಣ್ಣಿಗಿರುತ್ತದೆ. ಹೆಣ್ಣಿನ ಆತ್ಮಸ್ಥೈರ್ಯವೇ ಅಂತಹದ್ದು.

ಹೀಗಿರುವಾಗ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ ಸಬಲರಿರುವ ಎಷ್ಟೋ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡದ್ದನ್ನು ಕೇಳಿದಾಗ ಅವರ ಸಾವಿಗೆ ಸಂತಾಪ ಸೂಚಿಸುವುದಕ್ಕಿಂತ ಹೆಚ್ಚು ಅವರ ನಿರ್ಧಾರದ ಬಗ್ಗೆ ಬೇಸರವಾಗುತ್ತದೆ . ಅವರ ನಿರ್ಧಾರವನ್ನು ಪ್ರಶ್ನಿಸುವ ಹಕ್ಕು ನಮಗ್ಯಾರಿಗೂ ಇಲ್ಲ. ಆತ್ಮಹತ್ಯೆ ಕ್ಷಮಿಸಲಾರದ ತಪ್ಪು ಅನ್ನುವುದು ನನ್ನ ಅಭಿಪ್ರಾಯ.
ಏಕೆಂದರೆ ನಾವೆಲ್ಲರೂ ನಮ್ಮ ನಮ್ಮ ಜೀವನದ ಬಾಲ್ಯದ ದಿನಗಳನ್ನು ನೆನಪಿಸಿಕೊಳ್ಳೋಣಾ. ಹಸಿವು ಬಡತನ ಅವಮಾನ, ಅಪಮಾನ ಎಲ್ಲವೂ ತಪ್ಪದ ದಿನಚರಿಯಾಗಿದ್ದಂತಹ ಕಡುಕಷ್ಟದ ದಿನಗಳನ್ನು ನಾವು ಕಳೆದಿದ್ದೇವಲ್ಲವೇ? ಒಂದು ವೇಳೆ ಆಗ ನಮ್ಮ ನಮ್ಮ ತಾಯಿಯಂದಿರು ಧೈರ್ಯ ಕಳೆದುಕೊಂಡು ಸಾವನ್ನು ಆಯ್ಕೆಮಾಡಿಕೊಂಡಿದ್ದಿದ್ದರೆ ಇಂದು ನಾವು ಹೀಗೆ ಸುಶಿಕ್ಷಿತರಾಗಿ, ಸುವ್ಯವಸ್ಥಿತ ಬದುಕು ಕಟ್ಡಿಕೊಳ್ಳಲಾಗುತ್ತಿತ್ತೆ? ಒಮ್ಮೆ ಯೋಚಿಸಿ ನೋಡಿ. ಕೊರತೆಗಳಿಂದ, ಸಮಸ್ಯೆಗಳಿಂದ, ಸವಾಲುಗಳಿಂದ ಕೂಡಿದ್ದ ದಿನಗಳನ್ನು ಅದೆಷ್ಟು ಧೈರ್ಯದಿಂದ ಎದುರುಸಿದ್ದಾರಲ್ಲವೆ ಅವರೆಲ್ಲಾ! ನೆನೆದರೆ ಎಲ್ಲಾ ತಾಯಂದಿರಿಗೆ ಸೆಲ್ಯುಟ್ ಮಾಡಬೇಕೆನಿಸುತ್ತದೆ.

ಗಂಡ ಬಿಟ್ಟರೂ, ಸತ್ತರೂ ಎದೆಗುಂದದೆ ಮಕ್ಕಳಿಗಾಗಿ ಹೆಬ್ಬಂಡೆಯಂತೆ ನಿಂತು ನೋವನೆಲ್ಲಾ ನುಂಗಿಕೊಂಡು ಬೇರೆಯವರ ಮನೆಯ ಮುಸುರೆ ತೊಳೆದಾದರೂ ಜೀವನ ಸಾಗಿಸಿದ್ದಾರೆ, ಅತ್ತೆ ಮನೆಯ ಕಿರುಕುಳಕ್ಕೆ ಬೇಸತ್ತರೂ ಮುಂದೆ ನಮಗಾಗಿ ಒಳ್ಳೆಯ ದಿನಗಳು ಬರಬಹುದೆಂದು ತಮಗೆ ತಾವೇ ಧೈರ್ಯ ಹೇಳಿಕೊಂಡು ಮಕ್ಕಳಿಗಾಗಿ ಬದುಕಿ ತೋರಿಸಿದ್ದಾರೆ, ಅಷ್ಡೇಯೇಕೆ ದೈಹಿಕ ನ್ಯೂನತೆಯಿದ್ದರೂ ಅದನ್ನ ಮೆಟ್ಟಿ ಮಕ್ಕಳ ಭವಿಷ್ಯ ರೂಪಿಸಿದವರು ಸಾಕಷ್ಟು ಮಂದಿ ಇದ್ದಾರೆ. ಒಂದು ಆಶ್ಚರ್ಯದ ಸಂಗತಿ ಅಂದರೆ,ಅವರಲ್ಲಿ ಹೆಚ್ಚಿನವರು ಅನಕ್ಷರಸ್ತರೇ ಆಗಿದ್ದಾರೆ. ಇಂದು ನಾವು ಡಬಲ್ ಡಿಗ್ರಿ, ಮಾಸ್ಟರ್ ಡಿಗ್ರಿ, ಡಾಕ್ಟರೇಟ್ ಸಾಲು ಸಾಲು ಪಡೆದರೂ ಅವರ ಆ ಧೈರ್ಯಕೆ, ಬದುಕಿನ ಆ ಬದ್ಧತೆಗೆ ಸಾಟಿಯಾಗಲಾಗುತ್ತಿಲ್ಲ ಎಂಬುದೇ ವಿಪರ್ಯಾಸ.
ದಯಮಾಡಿ ನನ್ನ ಗೆಳತಿಯರಲ್ಲಿ, ಓದುಗರಲ್ಲಿ, ನೆರೆಹೊರೆಯವರಲ್ಲಿ ನಾನು ಕೇಳಿಕೊಳ್ಳುವುದಿಷ್ಡೇ…. ಬದುಕಿನಲ್ಲಿ ಎಂತಹದೇ ಕಷ್ಟ ಬರಲಿ, ಅವಮಾನ ಆಗಲಿ, ನಿಮ್ಮಿಂದ ಆದ, ಆಗದ ತಪ್ಪಿಗೆ ಸಮಾಜ ಛೀ ಥೂ ಅನಲಿ ಜೀವ ಕಳೆದುಕೊಳ್ಳುವ ನಿರ್ಧಾರ ಎಂದೂ ಮಾಡಬೇಡಿ. ಮಕ್ಕಳಿಗಾಗಿ ಬದುಕುವುದನ್ನೆ ಆಯ್ಕೆ ಮಾಡಿಕೊಳ್ಳಿ. ಇಲ್ಲಿ ಯಾವುದು ಶಾಶ್ವತ ಅಲ್ಲಾ. ವಾಸ್ತವವನ್ಜು ಅರ್ಥಮಾಡಿಕೊಳ್ಳಿ. ಮಹಿಳೆಯರಿಗೆ ಸರ್ವೆ ಸಾಮಾನ್ಯವಾಗಿ ಸಮಸ್ಯೆಗಳು ಶುರುವಾಗೋದು ಹದಿಹರೆಯದ ಪ್ರೇಮದ ನಂತರ,ಮದುವೆಯ ನಂತರ, ಇತ್ತೀಚಿಗೆ ವೃತ್ತಿ ಸಲ್ಲಿಸುವ ಕಡೆಯೂ ಸಹ. ಅಲ್ಲಲ್ಲಿ ಆಗುವ ಸಮಸ್ಯೆಗಳನ್ನು, ಸವಾಲುಗಳನ್ನು ಬದುಕಿದ್ದುಕೊಂಡೆ ಎದುರಿಸಿ, ಸುಲಭವಲ್ಲವಾದರೂ ಸತತ ಪ್ರಯತ್ನ ಮಾಡಿನೋಡಿ ಗೆಲುವು ನಿಮ್ಮದೇ ಆಗಿರುತ್ತದೆ.

ಉದಾ: ನೀವು ನಂಬಿ ಪ್ರೀತಿಸಿ ಮದುವೆಯಾದ ಗಂಡನ ಅಕಾಲಿಕ ಸಾವಾದರೆ, ವಾಸ್ತವವನ್ನ ಒಪ್ಪಿಕೊಂಡು ಮಕ್ಕಳ ವರ್ತಮಾನದ ದಿನಗಳಿಗಾಗಿ ಧೈರ್ಯವಾಗಿ ಬದುಕುವುದರತ್ತ ಹೆಜ್ಜೆ ಹಾಕಿ. ಒಂದು ವೇಳೆ ಬದುಕು ನಿಮಗೆ ಕೊಟ್ಟ ನಿಮ್ಮ ಬಾಳಸಂಗಾತಿ ನೀವು ಅಂದುಕೊಂಡಂತೆ ಇಲ್ವಾ. ಅವರೊಟ್ಟಿಗೆ ನಿಮಗೆ ಇರಲು ಸಾಧ್ಯವೇ ಇಲ್ವಾ, ಬೇಡ ಅಂದೆನಿಸಿದಾಗ ಆ ಬಂಧದಿಂದ ಬೇರಾಗಿ ಮಕ್ಕಳಿಗಾಗಿ ಬದುಕಿ. ಆ ಕಾರಣದಿಂದ ಸಾವನ್ನು ಎಂದಿಗೂ ಆಯ್ಕೆ ಮಾಡಿಕೊಳ್ಳಬೇಡಿ. ಬಂಧು ಬಳಗದ ಚುಚ್ಚುಮಾತುಗಳಿಗೆ ತಲೆಕೆಡಿಸಿಕೊಳ್ಳಬೇಡಿ ಕಿವುಡರಾಗಿಬಿಡಿ. ಏಕೆಂದರೆ ನೀವು ಸತ್ತರೆ ಅವರ್ಯಾರು ನಿಮ್ಮ ಮಕ್ಕಳ ಕಷ್ಟಕ್ಕೆ ಆಗರು.
ಹೆಣ್ಣುಮಕ್ಕಳಿದ್ದರಂತೂ ದಯಮಾಡಿ ಸಾವಿನ ಯೋಚನೆಯೇ ಮಾಡಬೇಡಿ. ಏಕೆಂದರೆ ಹೆಣ್ಮನಕೆ ತಾಯಿಯ ಅಪ್ಪುಗೆ, ಸಲಹೆ, ಸಹಕಾರ, ಮಾರ್ಗದರ್ಶನ ಅತಿ ಅಗತ್ಯವಾಗಿ ಬೇಕಾಗಿರುತ್ತದೆ. ಉದಾ: ಮಗಳು ಋತುಮತಿಯಾದಾಗ ತಾಯಿಯ ಇರುವಿಕೆ ಅವಳಿಗೆ ಧೈರ್ಯ ನೀಡುತ್ತದೆ, ಉಳಿದವರು ಅದೆಷ್ಟೇ ಜಾಗೂರುಕರಾಗಿ ನೋಡಿಕೊಂಡರೂ ನಿಮ್ಮ ಸ್ಥಾನವನ್ನ ಅವರಿಂದ ತುಂಬಲಾಗುವುದಿಲ್ಲ! ಇನ್ನೂ ಹದಿಹರೆಯಕೆ ಬಂದಾಗ ತನ್ನಲ್ಲಾದ ತುಮುಲಗಳಿಂದ ಎಡವಿದರೆ ಎಚ್ಚರಿಸಲು ಅಮ್ಮ ಇರಬೇಕಿತ್ತು ಅಂದೆನಿಸುತ್ತದೆ, ಮಗಳು ಓದಿ ದೊಡ್ಡವಳಾದ ಮೇಲೆ ಬದುಕಿನ ಸಂಗಾತಿ ಆಯ್ದುಕೊಂಡು ಸಂಭ್ರಮಿಸುವ ದಿನಗಳಲಿ ಭವಿಷ್ಯದ ಭರವಸೆಗಾಗಿ ಅಮ್ಮ ಇರಬೇಕೆನಿಸುತ್ತದೆ, ನಮ್ಮಂತೆ ಅವಳು ತಾಯಿಯಾಗುವ ಸಮಯದಲ್ಲಂತೂ ನಮ್ಮ ಉಪಸ್ಥಿತಿ ಅತೀ ಅತೀ ಅವಶ್ಯಕವಾಗಿದೆ. ಆದ್ದರಿಂದ ದಯಮಾಡಿ ಯಾರೂ ಸಾವನ್ನು ನೀವಾಗಿಯೇ ಆಯ್ಕೆಮಾಡಿಕೊಳ್ಳಬೇಡಿ. ಬೆಟ್ಟದಂತಹ ಕಷ್ಟ ಬರಲಿ ಬದುಕುವುದನ್ನೇ ಆಯ್ಕೆ ಮಾಡಿಕೊಳ್ಳಿ. ಕಾರಣ ಬದುಕೇ ದೊಡ್ಡದು.
- ಡಿ.ಶಬ್ರಿನಾ ಮಹಮದ್ ಅಲಿ, ಚಳ್ಳಕೆರೆ.
