ಮುದ್ದಣ ಮನೋರಮೆ ಜಗಳ….

ದೇವರು ಇದ್ದಾನೋ ಇಲ್ಲವೋ, ದೇವಸ್ಥಾನಗಳು ಇಲ್ಲದಿದ್ದರೆ ಭಕ್ತಿಯೆಲ್ಲಿ? ಮುದ್ದಣ ಮನೋರಮೆಯ ಮಧ್ಯೆ ನಡೆಯುವ ಚರ್ಚೆಯಿದು. ಇದನ್ನು ಹಿರಿಯ ಸಾಹಿತಿ ಡಾ ಗಿರಿಜಾ ಶಾಸ್ತ್ರಿ ಅವರು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

“ನೋಡು ದೇವಸ್ಥಾನಗಳೇ ಬೇಡ , ಅವು ಯಾಕೆ ಇರಬೇಕು ಅಂತ ಸಿನಿಕನಹಾಗೆ ವಿತ್ತಂಡವಾದ ಮಾಡ್ತೀಯಲ್ಲ? ದೇವಸ್ಥಾನ ಇಲ್ಲದಿದ್ದರೆ ಪಾಂಡುರಂಗನ ಈ ಅದ್ಭುತ ಹಾಡು ಇರುತ್ತಿತ್ತಾ? ಕಲೆ ಸಂಸ್ಕೃತಿ ಉಳಿಯುತ್ತಿತ್ತಾ? ಇನ್ನು ಆ ಮಧುರ ಮೋಹನ ಕೊಳಲು! ಆ ರೊಮ್ಯಾಂಟಿಕ್  ಯಮುನಾ! ಬೃಂದಾವನ! ಇವೆಲ್ಲಾ ಬೇಡಾ ಅಂತೀಯ?”

“ಅಂದರೆ, ಪಾಂಡುರಂಗನ್ನ ದೇವಸ್ಥಾನದೊಳಗೆ ಕಟ್ಟಿಹಾಕ್ತೀಯಾ?”

“ಕಟ್ಟಿ ಹಾಕೋದಲ್ಲ, ಅವನನ್ನು ಹಿಡಿಯೋಕ್ಕಾದರೂ ಬೇಕಲ್ಲ ಮೊದಲ ಮೆಟ್ಟಿಲು”

“ಅವನನ್ನು ಯಾಕೆ ಹಿಡೀಬೇಕು…? ಮೆಟ್ಟಿಲ ಮೇಲೇ ಕೂತ್ಕೊಂಡು ಜಗಳ ಆಡ್ತಾ ಇದ್ದೀವಿ ಅಷ್ಟೇ! ಇನ್ನು ಹಿಡಿಯೋದೆಲ್ಲಿ? ಕೊಳಲನ್ನು ಬೃಂದಾವನದಲ್ಲೇ ಎಂದೋ ಬಿಸಾಕಿದ್ದಾಯಿತು. ಈಗ ಹಿಡಿದಿರುವುದು ಪಾಂಚಜನ್ಯ! ಕೇವಲ ಪಾಂಚಜನ್ಯ ಅಷ್ಟೇ!

ಅವನ ನೆಪದಲ್ಲಿ ಲಾಗಾಯ್ತಿನಿಂದ ಜನರ ಕಗ್ಗೊಲೆ ಆಗಿದೆ, ಹಿಂಸೆ ಆಗಿದೆ. ಜನ ತಪ್ಪು ದಾರೀಲಿ ನಡೀತಾರೆ. ಅವನನ್ನು ನಂಬದವರಿಂದ ಆಗಿರುವ ಅಪಾಯಕ್ಕಿಂತ ನಂಬಿರುವವರಿಂದ ಆಗಿರುವ ಅನಾಹುತ, ಅಪಾಯಗಳೇ ಹೆಚ್ಚು, ಅವನ ದೇವರನ್ನು ಕಂಡರೆ ಇವನಿಗಾಗೋಲ್ಲ, ಇವನದ್ದನ್ನು ಕಂಡರೆ ಅವನಿಗಾಗೋಲ್ಲ. ಅನ್ಯದೈವದ ಆರಾಧಕನ ಕಿವಿ. ಮೂಗು ಗಂಟಲು ಕೊಯ್ಯಿ. ಅವನದು ಕುಲ ದೈವ ಎಂದೆಲ್ಲಾ …ಇದೆಲ್ಲಾ ಬೇಕಾ?”

“ನಿಜ ನಿನ್ನ ಮಾತು ಒಪ್ಪಿದೆ. ದಾರಿಯನ್ನು, ದೇವರನ್ನು ಜನ ದುರ್ಬಳಕೆ ಮಾಡಿಕೊಂಡಿದ್ದಾರೆ. ದೇವರನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡಿದ್ದಾರೆ. ಹಾಗೆಂದು ಅದು ದಾರಿಯ ತಪ್ಪಾ? ದೇವರ ತಪ್ಪಾ? ಹುಟ್ಡಿನಿಂದ ಸಾಯುವ ತನಕ ನಡೆದು ಹೋಗಲು ಒಂದು ದಾರಿ ಬೇಕಲ್ಲ? ಒಂದು ಅವಲಂಬನ ಬೇಕಲ್ಲ?”

” ಸರಿ. ದಾರಿಯೇನು ನಮ್ಮಪ್ಪನ ಮನೇದಾ?, ನಮ್ಮದೇ ನಿಯಮಗಳನ್ನು ಮಾಡುವುದಕ್ಕೆ? ಎಲ್ಲರಿಗಾಗಿ ಇರುವುದಲ್ಲವಾ? ”

“ಸರಿ ಅವರವರ ದಾರಿಯಲ್ಲಿ ಅವರವರು ನಡೆಯಲಿ ಬಿಡು ನಿನ್ನ ಗಂಟೇನು ಹೋಗುತ್ತೆ”

“ಅದ್ದೇ…ಹಾಗಿಲ್ಲವಲ್ಲ? ಯಾವುದೋ ಕಾಲದಲ್ಲಿ ನಮ್ಮ ದೇವಸ್ಥಾನಗಳನ್ನು ಒಡೆದರು ಅಂತ ಈಗ ಅವರದ್ದನ್ನು ಒಡಿ… ನಾಶಮಾಡು…ಸರಿ..ಯುದ್ಧ ರಕ್ತಪಾತ!!! ನಿನ್ನ ಹತ್ತಿರ ಏನಾದರೂ ರಾಮನ ಬರ್ತ್ ಸರ್ಟಿಫಿಕೇಟ್ ಇದೆಯಾ?. ಅವನು ಇಲ್ಲೇ ಹುಟ್ಟಿದ್ದಾ ಅಂತ ಹೇಳೋದಕ್ಕೆ? ಹಿಂದೆ ಏನೋ ಅನಾಹುತ ನಡೆದುಹೋಯಿತು! ಅದಕ್ಕೆ ಈಗೇನು? “ನೀನು ಸ್ವಲ್ಪ ಸರಿದುಕೋ ನಿನ್ನ ಮಗ್ಗುಲಲ್ಲೇ ನಾನೂ ನನ್ನ ದೇವಸ್ಥಾನ ಕಟ್ಟಿಕೋತೀನಿ” ಅಂತಾ ಯಾಕೆ ಯಾರಿಗೂ ಎನಿಸಬಾರದು ? ಎಷ್ಟೊಂದು ದೇವಸ್ಥಾನಗಳು ಹಾಗೆಯೇ ಅಕ್ಕಪಕ್ಕ, ಒಂದರೊಳಗೊಂದು ಇಲ್ಲ?

ಅದೂ ಅಲ್ಲದೆ ಅದರೊಳಗೆ ಇಂತಿಂತಹವರು ಮಾತ್ರ ಪ್ರವೇಶ ಮಾಡಬೇಕು ಉಳಿದವರು ಮಾಡಬಾರದು ಎನ್ನುವ ನಾನ್ಸೆನ್ಸ್ ಬೇರೆ….ಅದಕ್ಕೆ ದೇವಸ್ಥಾನಗಳೇ ಇರಬಾರದು…ಎಲ್ಲವನ್ನೂ ಶೌಚಾಲಯಗಳನ್ನಾಗಿ ಪರಿವರ್ತಿಸಿಬಿಡಬೇಕು”

” ಒಳ್ಳೆ ಕತೆ ಆಯಿತಲ್ಲಾ? ಮನೆ ಒಡೆದು ಯಾರೋ ಕಳ್ಳರು ಢಕಾಯಿತರು ನುಗ್ತಾರೆ ಅಂತ ನಾವು ಮನೆ ಕಟ್ಟಿಕೊಳ್ಳದೇ ಇರೋಕ್ಕೆ ಆಗುತ್ತಾ? ನಮ್ಮ ನಮ್ಮ ಸಾಮರ್ಥ್ಯ ಹಾಗೂ ರುಚಿಗೆ ಅನುಗುಣವಾಗಿ ಮನೆ ಕಟ್ಟಿಕೊಳ್ಳುತ್ತೇವೆ. ಚೂರಿ ಇದೆ ಅಂತ ಮೂಗು ಕೊಯ್ದುಕೊಂಡರೆ? ಹಣ್ಣು ತರಕಾರಿ ಕತ್ತರಿಸಿಕೊಳ್ಳಲು ಬೇಕಲ್ವಾ? ಅಂದಹಾಗೆ.
ಆಗೆಲ್ಲಾ ಬರ್ತ್ ಸರ್ಟಿಫಿಕೇಟ್ ಇರಲಿಲ್ಲ. ಇದ್ದದ್ದು ಜಾತಕ. ಅದರಲ್ಲಿ ಹುಟ್ಟಿದ ಸ್ಥಳ ನಮೂದಿಸುತ್ತಿರಲಿಲ್ಲ ಎನಿಸುತ್ತದೆ. ಹುಟ್ಟಿನ ಪ್ರಮಾಣಪತ್ರ ನಮ್ಮ ಕಾಲದಲ್ಲೇ ಇರಲಿಲ್ಲ ಇನ್ನು ರಾಮನ ಕಾಲದಲ್ಲಿ ಇದ್ದೀತಾ?”

“ಮನೆ ನಮ್ಮ ವೈಯಕ್ತಿಕ ಆಸ್ತಿ .ಅದರೊಳಕ್ಕೆ ನಮಗೆ ಇಷ್ಟ ಬಂದವರನ್ನು ಬಿಟ್ಟುಕೊಳ್ಳಬಹುದು. ಆದರೆ ದೇವಸ್ಥಾನ ಹಾಗಲ್ಲ ಅದು ಸಾರ್ವಜನಿಕ ಆಸ್ತಿ. ಅಲ್ಲಿ ಬಿಟ್ಟುಕೊಳ್ಳುವ ಇಟ್ಟುಕೊಳ್ಳುವ ಹಕ್ಕುಯಾರಿಗೂ ಇಲ್ಲ. ಅದರ ಹಕ್ಕು ನಮ್ಮ ಸಂವಿಧಾನದ್ದು ಸಂವಿಧಾನಕ್ಕಿಂತ ದೊಡ್ಡ ದೇವರಿಲ್ಲ”

ಮದುವೆಯಾದ ಹೊಸತರಲ್ಲಿ ನಮ್ಮ ಮನೆಯಲ್ಲಿ ಒಂದು ದೇವರ ಪಟವನ್ನೂ ನಾವು ಇಟ್ಟುಕೊಂಡಿರಲಿಲ್ಲ. ನಾನಂತೂ ಮದುವೆಯಾದ ಹೊಸತರಲ್ಲಿ ಸುಮಂಗಲಿಯರು ಮಾಡುವ ಯಾವುದೇ ವ್ರತಪೂಜೆಯನ್ನು ಮಾಡಿದವಳಲ್ಲ. “ಪತಿಯ ಶ್ರೇಯಸ್ಸಿಗಾಗಿ ಏನೂ ಮಾಡದ ನಾನು ‘ಹೋದರೆ ಸೀದಾ ನೇರವಾಗಿ ನರಕಕ್ಕೇ” ಎಂದು ನಿಷ್ಠಾವಂತ ನನ್ನ ಸೋದರೀ ಬಂಧುಗಳಿಗೆ ಗೆಳತಿಯರಿಗೆ ತಮಾಷೆಯಾಗಿ ಹೇಳಿದ್ದಿದೆ. ಜನ ನಮ್ಮನ್ನು “ಪೂಜೆ ಇಲ್ಲ ,ಪುನಸ್ಕಾರ ಇಲ್ಲ ಇವರು ಬರೀ “ಉ.ಮ.ಹೇ” ಎಂದು ಆಡಿಕೊಂಡಿದ್ದಿದೆ. ಈಗಲೂ ಆಡಿಕೊಳ್ಳುತ್ತಾರೆ.

ಗೆಳತಿ ರೇಣುಕಾ ಮಂಜುನಾಥ್ ನನ್ನ “ಮಾಲಕೌಂಸ್ ನ ಒಳಗೆ ಪಾಂಡುರಂಗ ನ ಕೇಳಿ” ಸ್ಟೇಟಸ್ಸನ್ನು ಹಂಚಿಕೊಳ್ಳುತ್ತಾ “ಸಂಗೀತದಿಂದ ಭಕ್ತಿರಸವೋ ಭಕ್ತಿರಸದಿಂದ ಸಂಗೀತವೋ” ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದಾರೆ. ಸಂಗೀತ ನನಗೆ ಇಷ್ಟ . ಅದು ನನ್ನ ಅಂತರಂಗದ ಭಾಷೆ. ಮೌನ ಅದರ ಆಭರಣ! ಆದರೆ ಭಕ್ತಿ ನನಗೆ ಗೊತ್ತಿಲ್ಲ. ಕಲ್ಲನ್ನು ದೇವರೆಂದು ಕಾಣುವ, ಮತ್ತು ಅದರೊಳಗೆ ತೊಡಗಿಕೊಳ್ಳುವ, ತನ್ಮಯಗೊಳ್ಳುವ ಭಾಗ್ಯ ನನಗಿಲ್ಲ. ಹಾಗೆ ನಿಜವಾಗಿ ತೊಡಗಿಕೊಳ್ಳುವವರ ಬಗ್ಗೆ ಅಸೂಯೆ ಆಗುತ್ತದೆ. ಅಮ್ಮ ಕಣ್ಣು ಮುಚ್ಚಿಕೊಂಡು ಕಾಶೀವಿಶ್ವನಾಥನ ಮುಂದೆ ನಿಂತಾಗ ನಾನು ಅವಳನ್ನೇ ಬೆರಗಿನಿಂದ , ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದೆ.

ಭಕ್ತಿ ಎನ್ನುವುದನ್ನು ನಾನು ಒಂದು ವಸ್ತುನಿಷ್ಠ ದೂರದಿಂದಲೇ ಕಾಣುವವಳು. ಅದರೊಳಗೆ ಅಡಗಿದ ಸ್ವಾತಂತ್ರ್ಯ ಮತ್ತು ಸಮಾನತೆಯ ಪರಿಕಲ್ಪನೆಗಾಗಿ ನನಗೆ ಭಕ್ತಿ ಇಷ್ಟವಾಗುತ್ತದೆ. ಬಾಗುವುದು ಅದರ ಮೂಲ ಗುಣ. ಸಮಾನತೆಯನ್ನು ಸಾಧಿಸಲು ಬಾಗುವುದು ಅನಿವಾರ್ಯ. (De castify). ದೇವರನ್ನು ಬಿಟ್ಟು ಬೇರೆ ಯಾವುದೇ ಯಾಜಮಾನ್ಯವನ್ನು ಧಿಕ್ಕರಿಸುವ ಅವರ ಧಾಷ್ಟ್ಯ ಇಷ್ಟವಾಗುತ್ತದೆ. ನಮ್ಮ ಸಾಮಾಜಿಕ ಅನಿಷ್ಟ ಗಳಿಗೆ ಸೆಡ್ಡುಹೊಡೆದ ರೂಪಕವಾಗಿ ನನಗೆ ಭಕ್ತಿ ಕಾಣಿಸುತ್ತದೆ. ಮಧ್ಯಕಾಲೀನ ಭಕ್ತಿ ಚಳವಳಿ ಆವಿರ್ಭವಿಸಿದ್ದೇ ಸಾಮಾಜಿಕ ಉಬ್ಬಸದಿಂದ. ಸಾಂಸ್ಕೃತಿಕ ಅಪಮೌಲ್ಯಗಳನ್ನು ಸರಿಪಡಿಸುವುದಕ್ಕಾಗಿ.

ದೇವಸ್ಥಾನಗಳೇ ಇಲ್ಲದಿದ್ದರೆ ಇನ್ನು ಭಕ್ತಿಯೆಲ್ಲಿ? ಕನಕ, ನಂದನಾರ್,‌ ಚೋಖಾಮಿಳ, ಮಾದಾರ ಚನ್ನಯ್ಯ ಎಲ್ಲರೂ ಬಯಲಿಗೆ ಬಂದದ್ದು ಆಲಯದ ಮೂಲಕವೇ ಅಲ್ಲವೇ? ಬಯಲು ನಮ್ಮ ಗುರಿ! ದಾರಿಗಳು ಅನೇಕ. ಆದರೆ ಹಾಗೆ ಸಾಗುವ ದಾರಿಯಲ್ಲಿನ ಎಲ್ಲ ಪಥಿಕರನ್ನೂ, ಎಲ್ಲ ದಾರಿಗಳನ್ನೂ ಗೌರವಿಸಬೇಕು, ಸೌಹಾರ್ದ ನಮ್ಮ ಜಪವಾಗಬೇಕು! ದೇವರು ಇದ್ದಾನೆ ಎನ್ನುವುದು ಹೇಗೆ ಒಂದು ನಂಬಿಕೆಯೋ ಇಲ್ಲ ಎನ್ನುವುದೂ ಒಂದು ನಂಬಿಕೆಯೇ! ಅದನ್ನು ಬಹಿರಂಗದಲ್ಲಿ ಯಾರೂ ಯಾರಿಗೂ ಸಾಬೀತು ಪಡಿಸಬೇಕಾಗಿಲ್ಲ , ಅದು ‘ಅಂತರಂಗದ ಸುದ್ದಿ’ಯಾಗಬೇಕು ಎನ್ನುವುದೇ ನನ್ನ ಅಭಿಪ್ರಾಯ.

ಬದುಕಿನ ಸತ್ಯ ಇರೋದೆ ವೈವಿಧ್ಯದಲ್ಲಿ! ambiguityಯಲ್ಲಿ ಅಲ್ಲವೇ?

ಸಹನಾ ಭವತು
ಸಹನೌ ಭುನಕ್ತು
ಸಹವೀರ್ಯಂ ಕರವಾವಹೈ
ತೇಜಸ್ವಿನಾ ಮಧೀತಮಸ್ತು
ಓಂ ಶಾಂತಿಃ ಶಾಂತಿಃ ಶಾಂತಿಃ


  • ಗಿರಿಜಾ ಶಾಸ್ತ್ರಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW