ಮುಗ್ಧ ಬರವಣಿಗೆಗೊಂದು ಕನ್ನಡಿ ಗಿರಿಜವ್ವನ ಮಗ

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬಾಲ್ಯಸ್ಮೃತಿ

ಪ್ರಕಾಶಕರುಃ ಡಾ. ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ, ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಗದಗ- ೫೮೨ ೧೦೧

ಪುಟಗಳುಃ ೨೩೮ ಬೆಲೆಃ ರೂ.೧೭೫ ಪ್ರಕಟಣೆಃ ೨೦೧೮

***

ಪ್ರತಿಯೊಬ್ಬ ಮನುಷ್ಯನ ಜೀವನದ ಹಿಂದೆ ಒಂದು ಆಗಾಧ ಚರಿತ್ರೆ ಇರುತ್ತದೆ. ಕಹಿ-ಸಿಹಿ ನೆನಪುಗಳ ಸರಮಾಲೆ ಇರುತ್ತದೆ. ಆದರೆ ಅದನ್ನು ಸ್ವೀಕಾರ ಮಾಡಿ ಅರಗಿಸಿಕೊಳ್ಳುವವರ ಸಂಖ್ಯೆ ತುಂಬ ಕಡಿಮೆ. ಹೀಗೆ ಬಂದದ್ದನ್ನು ಹಾಗೆ ಮರೆತು ಬಿಡುವವರೇ ಹೆಚ್ಚು. ತಮ್ಮ ಬಗ್ಗೆ ಬರೆದುಕೊಳ್ಳುವುದೆಂದರೆ ಕಹಿಯನ್ನು ಆಚೆಯಿಟ್ಟು ಸಿಹಿಯನ್ನು ಮಾತ್ರ ಮೆಲ್ಲುವುದು ವಾಡಿಕೆ. ತಾವು ಓದಿದ್ದು, ಕೆಲಸ ಮಾಡಿದ್ದು, ಬೇಕಾದರೆ ಒಂದಷ್ಟು ಗೆಳೆಯರು, ತಾವು ಬರೆದದ್ದು, ಗಳಿಸಿದ ಮಾನ-ಸನ್ಮಾನಗಳು, ತನಗೆ ಅರ್ಹತೆ ಇದ್ದರೂ ಬಾರದ ಪ್ರಶಸ್ತಿಗಳು ಹೀಗೆ ಒಂದಷ್ಟು ಚೌಕಟ್ಟು ಹಾಕಿಕೊಂಡು ಅದರಲ್ಲೇ ಗಿರಕಿ ಹೊಡೆಯುವವರೇ ಹೆಚ್ಚು. ಆದರೆ ಸೂಕ್ಷ್ಮ ಮನಸ್ಸಿನ ಒಬ್ಬ ಲೇಖಕ ಬದುಕನ್ನು ನೋಡುವ ರೀತಿಯೇ ಬೇರೆ ತೆರನಾಗಿರುತ್ತದೆ.

ಡಾ. ಸಿದ್ಧಲಿಂಗ ಪಟ್ಟಣ ಶೆಟ್ಟಿಯವರು ಕನ್ನಡದ ಪ್ರಖ್ಯಾತ ಕವಿಗಳು, ನಾಟಕಕಾರರು, ವಿಮರ್ಶಕರು, ಅತ್ಯುತ್ತಮ ವಾಗ್ಮಿಗಳೂ ಆಗಿದ್ದಾರೆ. ಸಹೃದರೂ, ಸಾಹಿತ್ಯ ಪ್ರೀತಿಯುಳ್ಳವರೂ ಆದ ಅವರಿಗೆ ನಾಡಿನಾದ್ಯಂತ ಅಭಿಮಾನಿಗಳಿದ್ದಾರೆ. ಇದೀಗ ಅವರು ತಮ್ಮ ಬಾಲ್ಯದ ಸ್ಮೃತಿಗಳು ಸೇರಿ ತಮ್ಮ ಜೀವನದ ಹಲವು ಘಟನೆಗಳನ್ನು ನೆನಪಿಸಿಕೊಂಡು ಒಂದು ಪುಸ್ತಕ ಬರೆದಿದ್ದಾರೆ. ಅದೇ ‘ಗಿರಿಜವ್ವನ ಮಗ.’

ಗಿರಿಜವ್ವ ಎಂಬುದು ಪಟ್ಟಣಶೆಟ್ಟಿಯವರ ತಾಯಿಯ ಹೆಸರು. ಒಬ್ಬ ವ್ಯಕ್ತಿಯ ಜೀವನದಲ್ಲಿ ತಾಯಿಗಿಂತ ಮಿಗಿಲಾದ ದೇವರೂ ಇಲ್ಲ. ದಿಕ್ಕೂ ಇಲ್ಲ. ಮನುಷ್ಯ ಎಲ್ಲವನ್ನೂ ಮರೆಯಬಹುದು. ಆದರೆ ಮೊದಲ ಮುತ್ತು, ಹಾಗೂ ಮೊದಲ ತುತ್ತು ಕೊಟ್ಟ ಆ ವಾತ್ಸಲ್ಯ ಮಯಿಯನ್ನು ಮರೆಯಲು ಸಾಧ್ಯವಿಲ್ಲ. ಮರೆತವನು ಮನುಷ್ಯನೂ ಅಲ್ಲ. ತಾಯಿಯ ಅಕ್ಕರತೆ, ಮಮತೆ, ವಾತ್ಸಲ್ಯ, ರಕ್ಷಣೆ, ನೆನಪುಗಳು ಉಸಿರಾಗಿ ಎಲ್ಲರೆದೆಯಲ್ಲಿ ಇರಬೇಕು. ಆ ನೆನಪೇ ಒಂದು ಕಾವ್ಯ. ಆ ನೆನಪೇ ಒಂದು ಸಾಹಿತ್ಯ. ಪಟ್ಟಣಶೆಟ್ಟಿಯವರ ಈ ಪುಸ್ತಕ ಓದುತ್ತಿದ್ದಂತೆ ಅವರ ಆಪ್ತ ಬರವಣಿಗೆ ನಮ್ಮನ್ನು ಅವರೊಂದಿಗೇ ಬದುಕಿನ ಶೆಳೆತಕ್ಕೆ ಎಳೆದೊಯ್ದು ಬಿಡುತ್ತದೆ. ಯಾಕಂದರೆ ನಮ್ಮ ಬದುಕಿನಲ್ಲೂ ಗಿರಿಜವ್ವ ಎಂಬ ತಾಯಿ ಇದ್ದಾಳೆ. ಗುರುಪಾದಪ್ಪ ಎಂಬ ಸೋದರ ಮಾವ ಇದ್ದಾನೆ. ಪತ್ತಾರ ಮಾಸ್ತರರಿದ್ದಾರೆ. ಮನಗುಂಡಿ, ಯಾದವಾಡ, ಮಲ್ಲಿಗವಾಡ ಊರುಗಳಿವೆ. ಊರ ಹಬ್ಬಗಳು, ಅಲ್ಲಿಯ ಸಾಂಸ್ಕೃತಿಕ ಜಗತ್ತು ಇದೆ. ಎಲ್ಲವನ್ನೂ ಓದುತ್ತ ಹೋದಂತೆ ನಾವು ನಮ್ಮ ಬದುಕಿನ ಜಗತ್ತಿಗೇ ಇಳಿದು ಬಿಡುತ್ತೇವೆ. ಆತ್ಮ ಕತೆಗಳನ್ನು ಬರೆಯಬೇಕೆಂದವರು ಒಮ್ಮೆ ಈ ಪುಸ್ತಕವನ್ನು ಓದಬೇಕು. ಬರೆಯದವರೂ ಇದನ್ನೊಮ್ಮೆ ಓದಿ ತಮ್ಮ ಬದುಕಿನ ಪುಟಗಳ ಸಾಲನ್ನು ಇಲ್ಲೇ ಹುಡುಕಿಕೊಳ್ಳಬಹುದು.

ಬಾಲ್ಯದಲ್ಲಿಯೇ ಅಪ್ಪನನ್ನು ಕಳೆದುಕೊಂಡ ಅವರು ಅವ್ವ ಗಿರಿಜವ್ವನ ಸೆರಗಿನಡಿ ಬದುಕು ಕಟ್ಟಿಕೊಂಡ ರೀತಿ, ಅವ್ವ ತನಗಾಗಿ ಪಡಬಾರದ ಕಷ್ಟಗಳನ್ನು ಎದುರಿಸಿದ ವಿವರಗಳನ್ನು ಇಲ್ಲಿ ತುಂಬ ಸಹಜವಾಗಿ, ಭಾವಪೂರ್ಣವಾಗಿ ಬರೆದಿದ್ದಾರೆ ಪಟ್ಟಣಶೆಟ್ಟರು. ಅತ್ಯಂತ ಸಹಜವಾಗಿ, ಸರಳವಾಗಿ ಅಷ್ಟೇ ಆಪ್ತತೆಯಿಂದ ನಿರೂಪಿಸಿದ್ದಾರೆ.

ಬದುಕು ನಮ್ಮನ್ನು ಕಾಡಬೇಕು. ಕಾಡಿದಷ್ಟೂ ಅನುಭವದ ಸೆಲೆ ಇಮ್ಮಡಿಸುತ್ತದೆ. ತಾನು ಎಲ್ಲಿಂದ ಬಂದೆ? ಹೇಗೆ ಬಂದೆ?. ಏನಾದೆ? ಯಾಕಾದೆ? ಎಂಬುದರ ಬೆನ್ನು ಹತ್ತಿ ಹೋಗುವುದೇ ಒಬ್ಬ ಶೋಧನಾ ಶೀಲ ಬರಹಗಾರನು ಬರೆಯಬಹುದಾದ ಸಂಗತಿಗಳು. ಇಂದು ಪ್ರಾಮಾಣಿಕ ಬರವಣಿಗೆ ಕಾಣುವುದು ಅಪರೂಪ. ಅದರಲ್ಲೂ ತನ್ನ ಬಗ್ಗೆ ಅಷ್ಟು ನಿಷ್ಠರಾಗಿ, ಲೋಪವಿಲ್ಲದೆ ಬರೆದುಕೊಳ್ಳುವ ತುಡಿತ ಇರುವ ಲೇಖಕರು ಇನ್ನೂ ಕಡಿಮೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟರು ಇದಕ್ಕೆ ಅಪವಾದವಾಗಿದ್ದಾರೆ. ಓದಲೇಬೇಕಾದ ಪುಸ್ತಕ.

– ಹೂಲಿ ಶೇಖರ್‌

***

ಬೆನ್ನುಡಿಯಿಂದ…

ಕವಿ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಬಾಲ್ಯದ ಸ್ಮೃತಿಗಳನ್ನು ಒಳಗೊಂಡಿರುವ ಗಿರಿಜವ್ವನ ಮಗ ಬಹು ಮುಖ್ಯ ಸಾಂಸ್ಕೃತಿಕ, ಸಾಹಿತ್ಯಕ, ಕೃತಿ. ಪಟ್ಟಣ ಶೆಟ್ಟರ ಆತ್ಮಕಥನದ ಪೂರ್ವಾರ್ಧವಾಗಿರುವ ಈ ಬರವಣಿಗೆ ಅವರ ಅನುಭವ-ನೆನಪುಗಳಿಗೆ ಮಾತ್ರ ಸೀಮಿತವಾಗಿಲ್ಲ. ಒಂದು ಕಾಲಘಟ್ಟದ ಬದುಕು, ಜನಜೀವನ, ಪರಿಸರ, ವಸ್ತು-ವಿಷಯಗಳು ಇಲ್ಲಿ ವಿಭಿನ್ನ ಮತ್ತು ವಿಶಿಷ್ಠ ರೀತಿಯಲ್ಲಿ ಅನಾವರಣಗೊಂಡಿವೆ. ಜೊತೆಗೆ ಅವ್ವ ಗಿರಿಜವ್ವನ ಕುರಿತಾದ ಪ್ರೀತಿ, ಆರ್ದ್ರತೆ, ಕಾಳಜಿಗಳು ಸಹಜವಾಗಿ ಮೈದಾಳಿವೆ.

ಗ್ರಾಮೀಣ ಪ್ರದೇಶದ ಒಂದು ಕಾಲಮಾನದ ಸಾಂಸ್ಕತಿಕ ದಾಖಲೆಯಾಗಿರುವ ಈ ಕೃತಿಯಲ್ಲಿ ಅನೇಕ ಘಟನೆಗಳು, ವಿವರಗಳು ಚಿತ್ರವತ್ತಾಗಿ ಮೂಡಿ ಬಂದದ್ದು ಮೆಲುಕು ಹಾಕುವಂತಿವೆ. ಬಾಲ್ಯದ ತೀಕ್ಷ್ಣ ಗ್ರಹಿಕೆಯು ಅಷ್ಟೇ ತಾಜಾ ಆಗಿ ಅಕ್ಷರಕ್ಕೆ ಇಳಿದು ಬಂದದ್ದು ಅನನ್ಯ. ಉತ್ತರ ಕರ್ನಾಟಕದ ಸಹಜ ಲಯದ ಸೊಗಸು ಓದುಗರ ಅಂತರಂಗವನ್ನು ತಟ್ಟುತ್ತದೆ.

ದೇಸೀ ಭಾಷೆಯ ನುಡಿಗಟ್ಟು ಜನಪದ ಜೀವನ ಶೈಲಿಯನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಅಪರೂಪದ ಪದಗಳ ಬಳಕೆ ಗಮನ ಸೆಳೆಯುವಂತಿದೆ. ಸರಾಗವಾಗಿ ಓದಿಸಿಕೊಂಡು ಹೋಗುವ ಲವಲವಿಕೆ ಓದುಗರನ್ನು ಪಟ್ಟಣಶೆಟ್ಟರ ಬಾಲ್ಯದ ಲೋಕಕ್ಕೆ ಸೆಳೆದೊಯ್ಯುತ್ತದೆ. ಅವರ ನೆನಪ ಗಂಧರ್ವರು ಪದಗಳ ಲಾಸ್ಯದಲ್ಲಿ ಮಿಂದು ಎದ್ದಂತೆ ಭಾಸವಾಗುತ್ತದೆ.

 

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW