ಬಾಲ್ಯದಿಂದಲೂ ತೆರೆಯ ಮೇಲೆ ನಿಮ್ಮದೇ ಸಿನಿಮಾಗಳನ್ನು ನೋಡುತ್ತಾ ಬಂದಿದ್ದೇನೆ. ಈಗ ಪೋಷಕ ನಟನಾಗಿ ನಿಮ್ಮನ್ನೂ ನೋಡುತ್ತಿದ್ದೇನೆ. ಅಂದಿನಿಂದ ಇಂದಿನವರೆಗೂ ನಿಮ್ಮ ನಟನೆಯನ್ನು ಹಂತ ಹಂತವಾಗಿ ನೋಡುತ್ತಾ ನಾನು ಬೆಳೆದವಳು. ನೀವು ಚಿತ್ರರಂಗದಲ್ಲಿದ್ದು ೫೦ ವರ್ಷಗಳೇ ಆಗಿರಬಹುದು. ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದೀರಿ. ನಾವುಗಳು ಸಹ ನಿಮ್ಮ ಸಿನಿಮಾ ನೋಡಿ ಕೇ-ಕೇ ಹಾಕಿ ನಕ್ಕಿದ್ದೀವಿ, ಸಂತೋಷ ಪಟ್ಟಿದ್ದೀವಿ. ಆದರೆ ನಿಮ್ಮ ನಟನೆಯಲ್ಲಿನ ಉತ್ಸಾಹ ಮತ್ತು ನಿಮ್ಮನ್ನು ನೀವು ನಟನೆಯಲ್ಲಿ ತೊಡಗಿಸಿಕೊಂಡ ರೀತಿಗೆ ನನ್ನದೊಂದು ಸಲಾಂ.
ನಿಮಗೆ ಬೇರೆ ಕಲಾವಿದರ ಹಾಗೆ ಅಭಿಮಾನಿ ಸಂಘಗಳು ಇರದೇ ಇರಬಹುದು ಅಥವಾ ಯಾವುದೇ ಫ್ಯಾನ್ಸಿ ಹೆಸರುಗಳನ್ನೂ ಅಭಿಮಾನಿಗಳು ನಿಮಗೆ ಕೊಟ್ಟಿರದೆ ಇರಬಹುದು. ಆದರೆ ನೀವು ನನ್ನ ಮೆಚ್ಚಿನ ನಟರಲ್ಲಿ ಒಬ್ಬರು. ನಿಮ್ಮ ಪ್ರತಿಯೊಂದು ಸಿನಿಮಾ ನೋಡಿದ್ದೇನೆ. ಖುಷಿಪಟ್ಟಿದ್ದೇನೆ. ಎಲ್ಲಾ ತರದ ಪಾತ್ರಗಳನ್ನೂ ನಿಭಾಯಿಸ ಬಲ್ಲ ಮಾoತ್ರಿಕ ಶಕ್ತಿ ನಿಮ್ಮಲ್ಲಿದೆ.
ನಿಮ್ಮ ಮತ್ತು ನಿಮ್ಮ ಸಹೋದರ ಶಂಕರ ನಾಗ್ ಜೋಡಿಯಾಗಿ ನಟಿಸಿದ ‘ಮಾಲ್ಗುಡಿ ಡೇಸ್’ ನನ್ನ ಅಚ್ಚು ಮೆಚ್ಚಿನ ಧಾರಾವಾಹಿ. ನೀವು ಹೇಗೆ ಅಭಿನಯದಲ್ಲಿ ನನಗೆ ಅಚ್ಚುಮೆಚ್ಚೊ ಹಾಗೆ ನಿಮ್ಮ ಸಹೋದರ ಶಂಕರ ನಾಗ್ ಕೂಡ ನನಗೆ ಅಚ್ಚುಮೆಚ್ಚು. ನಿಮ್ಮಿಬ್ಬರ ಜೋಡಿ ಇತರ ಅಣ್ಣ- ತಮ್ಮಂದಿರಿಗೆ ಮಾದರಿಯಾಗಿತ್ತು. ನಿಮ್ಮ ಜೋಡಿಗೆ ಯಾರ ಕೆಟ್ಟ ಕಣ್ಣು ಬಿತ್ತೋ ಕಾಣೆ ಶಂಕರನಾಗ್ ನಿಮ್ಮಿಂದ ಮತ್ತು ನಮ್ಮಿಂದ ದೂರವಾದರು.ಶಂಕರನಾಗ್ ಒಂದು ವೇಳೆ ಈಗ ಬದುಕಿದ್ದರೆ ನಿಮ್ಮ ಜೋಡಿಯನ್ನು ಸದೆ ಬಡಿಯಲು ಯಾರಿಂದಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟು ಅತ್ಯುತ್ತಮ ಕಲಾವಿದರನ್ನು ಒಳಗೊಂಡ ಕುಟುಂಬ ನಿಮ್ಮದು.
ನೀವು ನಟಿಸಿರುವ ‘ನಾ ನಿನ್ನ ಬಿಡಲಾರೆ’ ಚಿತ್ರ ಈಗಲೂ ನೆನಪಿಸಿಕೊಂಡರೆ ಬೆವರಿಳಿಯುತ್ತದೆ. ಆ ಚಿತ್ರದಲ್ಲಿ ನಿಮ್ಮ ಅಭಿನಯ ನಮ್ಮನ್ನೆಲ್ಲಾ ನಡುಗಿಸಿ ಬಿಟ್ಟಿತ್ತು. ಆ ಚಿತ್ರವನ್ನು ಮೊದಲು ಬಾರಿಗೆ ನಾನು ನೋಡಿದಾಗ ನನಗೆ ಕೇವಲ ಏಳು ವರ್ಷ ವಯಸ್ಸು. ಚಿತ್ರ ನೋಡಿ ರಾತ್ರಿಯೆಲ್ಲಾ ಅಮ್ಮನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದನ್ನು ಅಮ್ಮ ಆಗಾಗ ನಿಮ್ಮನ್ನು ಪರದೆ ಮೇಲೆ ನೋಡಿದಾಗ ಹೇಳುತ್ತಲೇ ಇರುತ್ತಾಳೆ. ಆ ಚಿತ್ರ ನನಗೆ ‘ಎಂದೂ ಮರೆಯಲಾರೆ’ ಆಗಿಹೋಯಿತು. ಇನ್ನೂ ‘ಬೆಂಕಿಯ ಬಲೆ’ ಚಿತ್ರದಲ್ಲಿನಿಮ್ಮ ನಾಯಕಿ ಲಕ್ಷ್ಮಿಯವರಿಗೆ ಕೊಟ್ಟ ಕಾಟ ನೋಡಿ ನಾನು ನಿಮ್ಮನ್ನೂ ಸಿಕ್ಕಾಪಟ್ಟೆ ದ್ವೇಷಿಸಿದ್ದೆ. ಅದೇ ‘ಗಣೇಶನ ಮದುವೆ’, ‘ಗೌರಿ ಗಣೇಶ’ ಚಿತ್ರದಲ್ಲಿ ನಿಮ್ಮ ನಟನೆ ಸೂಪರ್. ಈ ಸಿನಿಮಾದಲ್ಲಿ ನಮ್ಮನ್ನು ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದೀರಿ. ಅದೇ ‘ಬೆಳಂದಿಗಳ ಬಾಲೆ’ ಚಿತ್ರವನ್ನು ನೋಡಿದಾಗ ಧಾರಾಕಾರವಾಗಿ ಅಳಿಸಿದ್ದೀರಿ. ಈತ್ತೀಚಿಗಿನ ‘ಮುಂಗಾರ ಮಳೆ’,’ಗೋಧಿ ಬಣ್ಣ ಸಾಧಾರಣ ಮೈಕಟ್ಟು ‘ ಇತ್ಯಾದಿಗಳಲ್ಲಿನಿಮ್ಮ ನಟನೆ ವಿಭಿನ್ನವಾಗಿದೆ. ನೀವು ಒಬ್ಬ ಹೀರೋಯಿಸಂ ಚಿತ್ರವನಷ್ಟೇ ಅಲ್ಲದೆ ಎಲ್ಲಾ ತರದ ಪಾತ್ರಗಳ ಮಾಡಿ ಸೈ ಅನಿಸಿಕೊಂಡಿದ್ದೀರಿ. ನಮ್ಮನ್ನು ರಂಜಿಸುವಲ್ಲಿ ಹಿಂದೆ ಸರಿದಿಲ್ಲ.
ಇಲ್ಲಿ ನಿಮ್ಮ ಸಿನಿಮಾಗಳಲ್ಲಿ ತಕ್ಕ ಜೋಡಿ ಆಗಿ ನಟಿಸಿದ ದಕ್ಷಿಣ ಭಾರತದ ನಟಿ ಲಕ್ಷ್ಮಿಯವರ ಬಗ್ಗೆ ಎರಡು ಮಾತು ಹೇಳಲೇ ಬೇಕು. ಪರದೆ ಮೇಲೆ ನಿಮ್ಮ ಜೋಡಿ ನೋಡಿದ ಎಷ್ಟೋ ಜನರಿಗೆ ನಿಜ ಜೀವನದಲ್ಲೂ ನಿಮ್ಮಿಬ್ಬರನ್ನು ಗಂಡ-ಹೆಂಡತಿ ಎಂದು ನಂಬಿದ್ದು ಇದೆ. ಅಷ್ಟರ ಮಟ್ಟಿಗೆ ನಿಮ್ಮಿಬ್ಬರ ನಡುವಿನ ಕೆಮಿಸ್ಟ್ರಿ ಪರದೆ ಮೇಲೆ ನೋಡಿದ್ದೇವೆ. ನಿಮ್ಮ ಜೋಡಿ ನೋಡಲು ಸಂತೋಷ ಪಡುತ್ತಿದ್ದೆವು.
ನಿಮ್ಮ ಸಾಧನೆಗೆ ಸಿಕ್ಕ ಗೌರವ ಮತ್ತು ಪ್ರಶಸ್ತಿಯತ್ತ ಬಂದರೆ ನಾ ನಿನ್ನ ಬಿಡಲಾರೆ, ಬರ, ಹೆಂಡತಿಗೆ ಹೇಳ್ಬೇಡಿ,ಉದ್ಭವ, ಗೌರಿಗಣೇಶ ಮತ್ತು ಗೋಧಿ ಬಣ್ಣ ಸಾಧಾರಣ ಮೈ ಕಟ್ಟು ಸಿನಿಮಾದ ನಟನೆಗಾಗಿ ದಕ್ಷಿಣ ಭಾರತದ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಆರು ಬಾರಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ಐದು ಬಾರಿ ಗೆದ್ದ ಕೀರ್ತಿ ನಿಮ್ಮದು.
ಆದರೆ ನಿಮ್ಮ ನಟನೆಗೆ ಈಗಾಗಲೇ ಪದ್ಮಶ್ರೀ, ಪದ್ಮಭೂಷಣ ಅಥವಾ ಡಾಕ್ಟರೇಟ ಸಲ್ಲಬೇಕಿತ್ತು. ಅದು ಇನ್ನೂ ಬಂದಿಲ್ಲವಲ್ಲಾ ಎನ್ನುವ ಬೇಸರ ನನಗೂ ಇದೆ. ನಿಮಗೆ ಈಗ ೬೯ ವರ್ಷ ವಯಸ್ಸು. ಆದಷ್ಟು ಬೇಗ ಈ ಪ್ರಶಸ್ತಿಗಳು,ಗೌರವಗಳು ನಿಮ್ಮ ಕೈ ಸೇರಲಿ ಎನ್ನುವುದು ನನ್ನ ಆಶಯ.