ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೯೧ ರಷ್ಟು ಅಂಕ ಗಳಿಸಿರುವ ಪವಿತ್ರಾ.
ಅಪ್ಪ ಮನೆ-ಮನೆಗೆ ಹಾಲು ಹಾಕುತ್ತಾರೆ. ಅಮ್ಮ ಪುಟ್ಟ ಅಂಗಡಿ ನಡೆಸುತ್ತಾರೆ. ಇವರ ಮುದ್ದಿನ ಮಗಳೇ ಪವಿತ್ರಾ.
ನಾವು ಏಳುವ ಸಮಯ ಹಿಂದೆ-ಮುಂದೆ ಆಗಬಹುದು. ಆದರೆ ಹಾಲೂ… ಎನ್ನುವ ಧ್ವನಿ ಮಾತ್ರ ಸರಿಯಾಗಿ ಆರು ಗಂಟೆಗೆ ಕೇಳಿಸುತ್ತದೆ. ಆ ಧ್ವನಿ ಮತ್ಯಾರದೋ ಅಲ್ಲ. ನಮ್ಮ ಮನೆಗೆ ನಿತ್ಯ ಹಾಲು ಹಾಕುವ ಪರಮೇಶ್ವರಪ್ಪನವರದು. ಇವರ ಶ್ರಿಮತಿ ಬಸಮ್ಮ. ಬಸಮ್ಮ ತಮ್ಮ ಮನೆ ಕೆಲಸದ ಜೊತೆಗೆ ಮನೆಗೆ ಹೊಂದಿಕೊಂಡಿರುವ ಚಿಕ್ಕದಾದ ಅಂಗಡಿ ನೋಡಿಕೊಳ್ಳುವ ಜವಬ್ದಾರಿ. ಅಂಗಡಿಯ ಬಿಡುವಿನ ಸಮಯದಲ್ಲಿ ಮಧ್ಯಾಹ್ನದ ಹೊತ್ತು ಇತರೆ ಕಂಪನಿ ಉದ್ಯೋಗಿಗಳ ಊಟದ ಜವಾಬ್ದಾರಿಯನ್ನು ಸಹ ಈ ದಂಪತಿ ತಗೆದುಕೊಂಡಿದ್ದಾರೆ.
ಹೀಗೆ ಗಂಡ-ಹೆಂಡತಿಯಿಬ್ಬರೂ ಬಡತನದಿಂದ ಹೊರಗೆ ಬರಲು ಐದಾರು ಕೆಲಸಗಳ ಜವಾಬ್ದಾರಿಯನ್ನು ತಮ್ಮ ತಲೆಯ ಮೇಲೆ ಹಾಕಿಕೊಂಡು ಹಗಲಿರುಳು ಕಷ್ಟಪಟ್ಟು ದುಡಿಯುತ್ತಿದ್ದಾರೆ. ಈ ದಂಪತಿಗಳು ಶ್ರಮಜೀವಿಗಳು. ಇವರಿಗೆ ತಕ್ಕ ಏಕೈಕ ಪುತ್ರಿ ಪವಿತ್ರಾ. ಓದಿನಲ್ಲಿ ಪವಿತ್ರಾ ಸದಾ ಮುಂದು. ಮೊನ್ನೆಯಷ್ಟೆ ಪ್ರಕಟವಾದ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶದಲ್ಲಿ ಶೇಕಡಾ ೯೧ ರಷ್ಟು ಅಂಕಗಳಿಸಿದ್ದು, ಶಾಲೆಗೆ ಮೊದಲಿಗಳಾಗಿದ್ದಾಳೆ. ಈಗ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ.
ಪವಿತ್ರಾಳ ಕುಟುಂಬ ಇರುವುದು ಪ್ರತಿಷ್ಠೆಯ ಕುಮಾರನ್ಸ್ ಶಾಲೆಯ ರಸ್ತೆಯ ಬದಿಯಲ್ಲಿ. ಚಿಕ್ಕದಾದ ಬಾಡಿಗೆ ಮನೆ. ಹಾಗಂತ ಈಕೆ ಓದಿದ್ದು ಕುಮಾರನ್ಸ್ ಶಾಲೆಯಲ್ಲಿ ಅಲ್ಲ. ಡಿ.ಪಿ.ಎಸ್ ಅಥವಾ ಎನ್.ಪಿ.ಎಸ್ ನಂತಹ ದುಬಾರಿ ಶಾಲೆಗಳಲ್ಲೂ ಅಲ್ಲ. ಇವರ ಮನೆಯಿಂದ ರಸ್ತೆಗುಂಟ ಅರ್ಧ ಕಿ.ಮೀ. ದೂರ ಹೋದರೆ ಪುಟ್ಟದಾದ ಒಂದು ಸ್ಕೂಲು. ಹೆಸರು ಚೇತನಾ ಪಬ್ಲಿಕ್ ಸ್ಕೂಲ್. ಇದು ಬಡವರ ಮಕ್ಕಳು ಓದುವ ಶಾಲೆ. ಆರು ಕೊಠಡಿಗಳಿಂದ ಆರಂಭವಾದ ಶಾಲೆ ಇತ್ತೀಚೆಗಷ್ಟೇ ಹದಿನಾಲ್ಕು ಕೊಠಡಿಗಳಿಗೇರಿದೆ. ಶಾಲೆಗೆ ಹೊಂದಿ ಒಂದು ಪುಟ್ಟದಾದ ಮೈದಾನ ಬಿಟ್ಟರೇ ಈ ಶಾಲೆಯಲ್ಲಿ ಇತರೆ ಹೈ-ಫೈ ಶಾಲೆಯಲ್ಲಿ ಇರುವಂತೆ ಸ್ವಿಮ್ಮಿಂಗ್, ಬಾಸ್ಕೇಟ್ ಬಾಲ್ ಗ್ರೌಂಡ್, ಕ್ರಿಕೆಟ್ ಗ್ರೌಂಡ್ ಗಳ ವ್ಯವಸ್ಥೆಗಳಿಲ್ಲ. 4೦x 6೦ ರ ನಿವೇಶನದಲ್ಲಿ ಕಟ್ಟಿರುವ ಮೂರು ಅಂತಸ್ತಿನ ಶಾಲೆಯಿದು.
ದೊಡ್ಡ ದೊಡ್ಡ ಶಾಲೆಯಲ್ಲಿ ತಮ್ಮ ಮಕ್ಕಳು ಓದಿದರೆ ಮಾತ್ರ ಅವರ ಭವಿಷ್ಯ ಉಜ್ವಲ ಆಗುತ್ತದೆ ಎನ್ನುವ ಭ್ರಮೆ ಎಷ್ಟೋ ಜನರಿಗೆ ಇರುತ್ತದೆ. ಆದರೆ ಮಕ್ಕಳ ಭವಿಷ್ಯವನ್ನು ಯಾವುದೇ ದೊಡ್ಡ ದೊಡ್ಡ ಶಾಲೆಗಳು ನಿಧ೯ರಿಸುವುದಿಲ್ಲ. ಓದಲು ಬೇಕಿರುವುದು ದೊಡ್ಡ ಶಾಲೆಯಲ್ಲ. ಶ್ರದ್ಧೆ, ಏಕಾಗ್ರತೆ ಇದ್ದರೆ ಸಾಕು ಎನ್ನುವುದಕ್ಕೆ ಪವಿತ್ರಾ ಮಾದರಿಯಾಗಿದ್ದಾಳೆ. ಯಾವುದೇ ಟ್ಯೂಷನ್‌ಗೆ ಹೋಗಲಿಲ್ಲ. ಟ್ಯೂಶನ್ನಿಗೆ ಕಳಿಸುವ ಶಕ್ತಿಯೂ ಅಪ್ಪ-ಅಮ್ಮನಿಗೆ ಇಲ್ಲ. ಏನಿದ್ದರೂ ಶಾಲೆಯಲ್ಲಿ ಏನು ಹೇಳಿಕೊಡುತ್ತಾರೋ ಅಷ್ಟೇ ನಮಗೆ ದಕ್ಕುವುದು. ಅಲ್ಲಿ ಹೇಳಿಕೊಟ್ಟ ಪಾಠವನ್ನೇ ಏಕಾಗ್ರತೆಯಿಂದ ಕೇಳುತ್ತಿದ್ದೆ. ಕೇಳಿದ್ದನ್ನು ಮನೆಯಲ್ಲಿ ಕೂತು ನನ್ನಲ್ಲೇ ಪ್ರಶ್ನೆ ಹಾಕಿಕೊಳ್ಳುತ್ತಾ ನಾನೇ ಉತ್ತರಿಸಿಕೊಳ್ಳುತ್ತಿದ್ದೆ. ಇದು ನನಗೆ ಹೆಚ್ಚು ಅಂಕ ಗಳಿಸಲು ನೆರವಾಯಿತು ಎಂದು ಪವಿತ್ರಾ ಹೇಳುತ್ತಾಳೆ.
ಓದಿನ ಬಿಡುವಿನಲ್ಲಿ ಅಪ್ಪ-ಅಮ್ಮನ ದುಡಿಮೆಗೆ ಕೈ ಜೋಡಿಸುವ ಪವಿತ್ರಾ ಮುಂದೆ ವಿಜ್ಞಾನ ವಿಷಯವನ್ನು ತೆಗೆದುಕೊಳ್ಳುವ ಆಸಕ್ತಿ ತೋರಿಸಿದ್ದಾಳೆ. ಮಗಳ ಮೇಲೆ ಬಡತನದ ನೆರಳು ಬೀಳದಂತೆ, ಬರುವ ಕಷ್ಟಗಳನ್ನು ತಾವೇ ಅನುಭವಿಸಿ, ಮಗಳ ಆಸೆಗೆ ಅಪ್ಪ-ಅಮ್ಮ ಕೈ ಜೋಡಿಸಿದ್ದಾರೆ. ಪವಿತ್ರಾಳ ಭವಿಷ್ಯ ಉಜ್ಜಲವಾಗಿರಲಿ ಎಂದು ನಾವೆಲ್ಲರೂ ಆಶಿಸೋಣ.
#ಆಕತನಯಸ