ನಾಟಕಕಾರ ವೆಂಕಟೇಶ ಹುಣಶೀಕಟ್ಟಿ ಅವರ ‘ಮೂಕ ಪ್ರೇಕ್ಷಕರು’ ನಾಟಕದ ಕೃತಿಯಲ್ಲಿ ಒಟ್ಟು 132 ಪುಟಗಳಿದ್ದು, ಈ ಕೃತಿಯ ಕುರಿತು ಕಿರಣ್ ಭಟ್ ಹೊನ್ನಾವರ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಮೂಕ ಪ್ರೇಕ್ಷಕರು
ಲೇಖಕರು : ವೆಂಕಟೇಶ ಹುಣಶೀಕಟ್ಟಿ
ಪ್ರಕಾರ : ಕನ್ನಡ ನಾಟಕಗಳು
ಜವಾರಿ ಗಮ್ಮತ್ತು.
ಲೇಖಕರಾದ ವೆಂಕಟೇಶ ಹುಣಶೀಕಟ್ಟಿ ಅವರು ಹೊನ್ನಾವರ ಕಾಲೇಜಿನಲ್ಲಿ ಭೌತರಸಾಯನಶಾಸ್ತ್ರದ ಪ್ರಾಧ್ಯಾಪಕರಾಗಿದ್ದವರು. ಸದ್ಯ ಬೆಳಗಾವಿ ಜಿಲ್ಲೆಯ ಹಲಗತ್ತಿ ಗ್ರಾಮದಲ್ಲಿ ನೆಲೆಸಿದ್ದಾರೆ. ಎಂಭತ್ತರ ದಶಕದಲ್ಲಿಯೇ ತಮ್ಮ ಕವನಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಿತರಾದವರು. ನಿರಂತರವಾಗಿ ವಿವಿಧ ಪ್ರಕಾರದ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಎಂಭತ್ತರ ಆಚೆಯ ಈ ಹರೆಯದಲ್ಲೂ ಬರೆಯುತ್ತ, ಯುವ ಮನಸುಗಳ ಜೊತೆ ಸಂವಾದಿಸುತ್ತಲೇ ಇವರು ಮೂವತ್ತಕ್ಕೂ ಹೆಚ್ಚು ಪ್ರಕಟಿತ ಕೃತಿಗಳ ಒಡೆಯ ಹುಣಶೀಕಟ್ಟಿಯವರು.
ಇತ್ತೀಚಿನ ನಾಟಕಗಳ ಪುಸ್ತಕ ʼಮೂಕ ಪ್ರೇಕ್ಷಕರುʼ ಇದು ಮೂರು ನಾಟಕಗಳ ಗುಚ್ಛ. ʼಮೂಕ ಪ್ರೇಕ್ಷಕರುʼ ಎಲ್ಲರೂ ನಮ್ಮವರೇʼ ಮತ್ತು ʼಅಳಿಯನ ಅವಾಂತರʼ. ಮೊದಲ ಎರಡೂ ನಾಟಕಗಳು ಗ್ರಾಮ್ಯ ಪರಿಸರದಲ್ಲಿ ಹುಟ್ಟಿದವಾದರೆ ಕೊನೆಯದು ಕಾಲೇಜು ಹುಡುಗರ ಹುಡುಗಾಟಿಕೆಯ ನಾಟಕ.

ಮೊದಲನೆಯ ನಾಟಕ ʼಮೂಕ ಪ್ರೇಕ್ಷಕರುʼ, ಊರ ಗೌಡನೊಬ್ಬನ ಠೇಂಕಾರದ ಕತೆ. ಒಂದು ಚಿಕ್ಕ ಊರು. ಊರಿಗೊಬ್ಬ ಗೌಡ. ಆತನ ನಿರಂತರ ಶೋಷಣೆ. ರೈತನೊಬ್ಬನ ಮಗಳ ಮೇಲಿನ ಅತ್ಯಾಚಾರ, ಅದನ್ನು ವಿರೋಧಿಸುವ ಊರಿನ ವಿದ್ಯಾವಂತ ಯುವಕರ ಪಡೆ, ರಾಜಧಾನಿಯ ವರೆಗೂ ವಿಸ್ತರಿಸುವ ಊರ ರಾಜಕೀಯ ಹೀಗೆ ಸಾಗುವ ನಾಟಕ ಕೊನೆಯಲ್ಲಿ ರೆಬೆಲ್ ಹುಡುಗರ ಎದೆಯ ಕಿಚ್ಚಿನ ಸುಡುವಿಕೆಯೊಂದಿಗೆ ಮುಗಿಯುತ್ತದೆ. ಸರಳವಾದ ರಂಗಸಜ್ಜಿಕೆಯನ್ನಿಟ್ಟುಕೊಂಡು ಅಭಿನಯಿಸಬಹುದಾದ ಈ ನಾಟಕದ ಹೆಚ್ಚುಗಾರಿಕೆ ಅದರ ಭಾಷೆ. ಉತ್ತರ ಕರ್ನಾಟಕದ ಆಡು ಭಾಷೆ ಪ್ರಭಾವಶಾಲಿಯಾಗಿ ಬಳಕೆಯಾಗಿದೆ. ಭರಪೂರ್ ಜವಾರಿ ಶಬ್ದಗಳಿವೆ ಇಲ್ಲಿ. ಅಷ್ಟೇ ಸಹಜವಾದ ಹರಿಯುವಿಕೆಯೂ ಇದೆ.
ಇನ್ನು ʼಎಲ್ಲರೂ ನಮ್ಮವರೇʼ ಕೂಡ ಹಳ್ಳಿಯ ನೆಲದ ಕಥೆಯೇ. ಆದರೆ ಇದು ಹಳ್ಳಿಯ ರೇಷನ್ ಅಂಗಡಿಯ ಸುತ್ತ ಸುತ್ತುತ್ತದೆ. ರೇಷನ್ ಅಂಗಡಿಯ ಹಗರಣಗಳು. ಅಲ್ಲಿಯ ನೌಕರರ ದರ್ಪ. ʼವಿಜಯʼ ನೆಂಬ ಬಡ ಹುಡುಗನೊಬ್ಬ ಇವರ ಅಟಾಟೋಪ ದಿಂದ ಹೈರಾಣಾಗಿ ಹೋದಾಗ, ಆತನ ಗೆಳೆಯ ಸಂಗಣ್ಣ ಆತನಿಗೆ ಸಹಾಯ ಮಾಡುತ್ತಾನೆ. ʼಎಲ್ಲರೂ ನಮ್ಮವರೇʼ ಎಂದು ಸಾರುತ್ತಾನೆ. ಇಪ್ಪತ್ನಾಲ್ಕು ಪುಟಗಳ ಚಿಕ್ಕ ನಾಟಕ ಇದು. ಇಲ್ಲೂ ಭಾಷೆಯೇ ಮುಂದು.

ಇನ್ನು ಕಾಲೇಜು ಹುಡುಗರ ಹುಡುಗಾಟಿಕೆಯ ʼಅಳಿಯನ ಅವಾಂತರʼ ನಾಟಕ ಹಾಸ್ಯ ನಾಟಕ. ಲವ್ವು, ಲವ್ ಲೆಟರ್ ಅಧ್ವಾನ ಹೀಗೆ ಸಾಗುವ ಕಥೆ. ಇಲ್ಲಿ ಮೊದಲೆರಡೂ ನಾಟಕಗಳಿಗಿಂತ ಭಿನ್ನವಾದ ಕನ್ನಡಾಂಗ್ಲ ಭಾಷೆಯ ಮೂಲಕ, ಭಾಷೆಯ ಆಟದ ಮೂಲಕ ಲವಲವಿಕೆಯ ವಾತಾವರಣ ಮೂಡಿಸಲು ಹುಣಶೀಕಟ್ಟಿಯವರು ಯತ್ನಿಸುತ್ತಾರೆ. ಈ ಮೂಲಕ ಕನ್ನಡ ನಾಟಕಗಳ ಜಗತ್ತಿಗೆ ಈ ಪುಸ್ತಕ ಗಮನಾರ್ಹ ಪ್ರವೇಶ ಪಡೆಯುತ್ತದೆ.
- ಕಿರಣ್ ಭಟ್ ಹೊನ್ನಾವರ – ರಂಗಕರ್ಮಿ, ರಂಗ ಸಂಘಟಕರು, ಕಲಾವಿದರು, ನಿರ್ದೇಶಕರು, ಬರಹಗಾರರು, ಹೊನ್ನಾವರ
