‘ಮುಂಬೈ ಸ್ವ-ಗತ’ ಕೃತಿ ಪರಿಚಯ

ಮುಂಬೈ ಕುರಿತು ಬರೆಯುವುದು ಎಂದರೆ ಆನೆಯನ್ನು ಕುರುಡರು ಬಣ್ಣಿಸಿದಂತೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ಕೊಡುತ್ತದೆ. ಆದ್ದರಿಂದ ಇದೇ ಮುಂಬೈ ಎಂದು ಯಾರೂ ಖಚಿತವಾಗಿ ಹೇಳಲಾರರು. ಲೇಖಕ ಸಾ.ದಯಾ ಅವರ ‘ಮುಂಬೈ ಸ್ವ-ಗತ’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ: ಮುಂಬೈ ಸ್ವ-ಗತ:
ಲೇಖಕರು : ಸಾ. ದಯಾ
ಪ್ರಕಾಶನ : ಮಡಿಲು ಪ್ರಕಾಶನ

ಗೆಳೆಯರಾದ ಸಾ.ದಯಾ ನನಗೆ ಸದಾ ವಿಸ್ಮಯ. ಕಳೆದ ಮೂರು ದಶಕಗಳಿಂದ ಅವರ ಬೆಳವಣಿಗೆಯನ್ನು ಹತ್ತಿರದಿಂದ ನೋಡುತ್ತಾ ಬಂದಿರುವ ನನಗೆ, ಅವರು ಇಟ್ಟ ಹೆಜ್ಜೆಗಳು ತೊಟ್ಟ ರೂಪಗಳು ಅನಂತ. ಕವಿ, ಕತೆಗಾರ, ನಾಟಕಕಾರ,ರಂಗಕಲಾವಿದ, ನಿರ್ದೇಶಕ, ಸಂಘಟಕ , ಅಂಕಣಕಾರ ಈ ಎಲ್ಲದರ ಹಿಂದೆ ಇರುವುದು ಅವರ ಸೂಕ್ಷ್ಮ ಸಂವೇದನಾಶೀಲತೆ. ಅವರ ಈ ಹೊಸ ಅಂಕಣಗಳ ಸಂಕಲನ ಮುಂಬೈ ಸ್ವ-ಗತ ಕೂಡ ಇದಕ್ಕೆ ಸಾಕ್ಷಿ.

ಮುಂಬೈ ಕುರಿತು ಬರೆಯುವುದು ಎಂದರೆ ಆನೆಯನ್ನು ಕುರುಡರು ಬಣ್ಣಿಸಿದಂತೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ಅನುಭವ ಕೊಡುತ್ತದೆ. ಆದ್ದರಿಂದ ಇದೇ ಮುಂಬೈ ಎಂದು ಯಾರೂ ಖಚಿತವಾಗಿ ಹೇಳಲಾರರು. ಮುಂಬೈ ಹೆಸರಿನಲ್ಲಿ ಕನ್ನಡದಲ್ಲೇ ಹಲವಾರು ಪುಸ್ತಕಗಳು ಬಂದಿವೆ. ಬಹುಶಃ ೧೯೭೨ ರಲ್ಲಿ ಪ್ರಕಟವಾದ ಸನದಿಯವರ ಮುಂಬೈ ಮಳೆ, ಪ್ರೊಫೆಸರ್ ಜೋಶಿಯವರ ಅದೇ ಹೆಸರಿನ ಹರಟೆಗಳ ಸಂಕಲನ, ಲಂಕೇಶ್ ಪತ್ರಿಕೆಯಲ್ಲಿ ಮುಂಬೈ ಡೈರಿ ಬರೆಯುತ್ತಿದ್ದ ಉಮಾರಾವ್ , ನಂತರ ಅದನ್ನು ಮುಂದುವರೆಸಿದ ನನ್ನ ಶಿಷ್ಯೆ ಡಾ.ಎನ್.ವಿ.ರೇಖಾ( ಹೆಸರುಗಳು ಇಲ್ಲ)

ಇಂಗ್ಲಿಷ್ ನಲ್ಲಿ ಬಂದ ಸುಕೇತ್ ಮೆಹ್ತಾ ಅವರ ಮ್ಯಾಕ್ಸಿಮಮ್ ಸಿಟಿ ಮುಂಬೈ , ಗೀತಾಂಜಲಿ ಸಾಲ್ಯಾನ್ ಅವರ ಹಿಸ್ಟರಿ ಆಫ್ ಮುಂಬೈ ಕನ್ನಡಿಗಾಸ್ ಮಹಾಪ್ರಬಂಧ ಇತ್ಯಾದಿ.
ಮೇಲೆ ಉಲ್ಲೇಖಿಸಿದ ಕೆಲವು ಕೃತಿಗಳ ಹಿನ್ನೆಲೆಯಲ್ಲಿ ಈ ಕೃತಿಯನ್ನು ಇಟ್ಟು ನೋಡಿದಾಗ ಇದರ ಸಾಧನೆ ಮತ್ತು ಮಿತಿಗಳ ಮನವರಿಕೆಯಾಗುತ್ತದೆ. ಈ ಕೃತಿ ಮೊದಲು ನನ್ನ ಶಿಷ್ಯ ಮತ್ತು ಅವರ ಗೆಳೆಯ ಬಶೀರ್ ಅವರ ವಾರ್ತಾಭಾರತಿಯಲ್ಲಿ ನಾಲ್ಕು ವರ್ಷಗಳ ಕಾಲ ನಿರಂತರವಾಗಿ ವಾರಕ್ಕೆ ಒಂದರಂತೆ ಅಂಕಣಗಳಾಗಿ ಪ್ರಕಟವಾದವು. ಈಗ ಈ ಹೊತ್ತಗೆಯ ರೂಪ ತಾಳಿದೆ. ಅದಕ್ಕಾಗಿ ಅವರಿಗೆ ಮೊದಲು ಅಭಿನಂದನೆಗಳು.

ಈ ಕೃತಿಯ ವೈಶಿಷ್ಟ್ಯಗಳು :

  • ದಕ್ಷಿಣ ಕನ್ನಡದ ಬೇರುಗಳು ಮತ್ತು ಅವು ಮುಂಬೈನಲ್ಲಿ ಚಿಗುರುಗಳಾದ ಅನಾವರಣ.
  • ಒಮ್ಮೆ ಮತೀಯ ಸೌಹಾರ್ದತೆಯ ದ್ಯೋತಕವಾಗಿದ್ದ ದಕ್ಷಿಣ ಕನ್ನಡ ಇಂದು ಮತಬ್ರಾಂತಿಯ ಗೂಡಾಗಿ ಪರಿಣಮಿಸಿದ್ದು, ಅದಕ್ಕೆ ವ್ಯತಿರಿಕ್ತವಾಗಿ ಈ ಕೃತಿ ಮತೀಯ ಸೌಹಾರ್ದತೆಯ ದಾಖಲೆ ಆಗಿದೆ. ಅದಕ್ಕೆ ಅಲ್ಲಿಂದ ಇಲ್ಲಿಗೆ ಬಂದು ನೆಲೆಸಿದ ಕ್ರೈಸ್ತ ,ಮುಸ್ಲಿಂ ಬಾಂಧವರ ಬದುಕು ಮತ್ತು ಸಾಧನೆ ಸಾಕ್ಷಿ.ಅವರ ಸಾಧನೆಗಳನ್ನು ಇಲ್ಲಿ ಅನಾವರಣ ಮಾಡಲಾಗಿದೆ.
  • ಭಾಷಾ ಬಾಂಧವ್ಯ: ಕನ್ನಡ ಮರಾಠಿ; ಯಕ್ಷಗಾನದಲ್ಲಿ, ನಾಟಕದಲ್ಲಿ ಪಾತ್ರ ವಹಿಸಬೇಕಾದವರು ಒಂದು ವಾರ ಇರುವಾಗ. ಕೈ ಎತ್ತಿದಾಗ, ಕೈ ಹಿಡಿದು ಆ ಪಾತ್ರ ವಹಿಸಲು ಮುಂದೆ ಬಂದ ಮರಾಠಿಗರು. ಕರ್ನಾಟಕ ಸಂಘದ ಕಾವ್ಯೋತ್ಸವದ ಮೂಲ ಪರಿಕಲ್ಪನೆ ಮರಾಠಿ ಕವಿಗಳು ,ಅದರ ಯಶಸ್ಸಿಗೆ ಕಾರಣಕರ್ತರು ಅವರೇ, ಸಹಕಾರ ಸಂಘದ್ದು. ಅದೊಂದು ನಭೂತೋ ನ ಭವಿಷ್ಯತಿ ಕಾರ್ಯಕ್ರಮ.ಕನ್ನಡ ಕೂಲಿಕಾರರ ನೆರವಿಗೆ ನಿಂತ ಡಾ.ದತ್ತಾ ಸಾಮಂತ್.
  • ವ್ಯಕ್ತಿ ಕೇಂದ್ರಿತ: ಮುಂಬೈ ಕನ್ನಡ ಲೋಕವನ್ನು ಸಮೃದ್ಧಗೊಳಿಸಿದ ,ಹಲವರ ವ್ಯಕ್ತಿತ್ವದ ಅನಾವರಣ ಇಲ್ಲಿದೆ. ಅದು ತೊಂಬತ್ತರ ಹರೆಯದ ಉಭಯ ಭಾಷಾ ಲೇಖಕಿ , ಕ್ರಿಯಾಶೀಲ ವ್ಯಕ್ತಿತ್ವದ ಡಾ.ಸುನೀತಾಶೆಟ್ಟಿ ಇರಬಹುದು , ಎಂಬತ್ತೇಳರ ಹರೆಯದ ಯಕ್ಷಗಾನದ, ಅದ್ಭುತ ಸಂಘಟಕ,ಹೆಚ್.ಬಿ.ಎಲ್. ರಾಯರಿರಬಹುದು, ಬಿಪಿನ್ ಫುಟ್ ಬಾಲ್ ನ ಸುರೇಂದ್ರ ಕರ್ಕೇರಾ ಇರಬಹುದು, ಏಕೈಕ ಕನ್ನಡ ಪುಸ್ತಕಗಳ ಅಂಗಡಿಯ ವಿದ್ಯಾನಿಧಿ ಎಂ.ಎಸ್.ಕೋಟ್ಯಾನ್ ಇರಬಹುದು , ರಾಷ್ಟ್ರೀಯ ಖ್ಯಾತಿಯ ಸದಾನಂದ ಸುವರ್ಣ, ಆಕಾಶವಾಣಿಯಲ್ಲಿನ ಕನ್ನಡ ವಿಭಾಗದ ಬಿ.ಎ.ಸನದಿ ಇರಬಹುದು ಇತ್ಯಾದಿ ಇವರೆಲ್ಲ ಮುಂಬೈನಲ್ಲಿ ಕನ್ನಡದ ಮುಖವಾಣಿಗಳು.
  • ಸಮುದಾಯ ಕೇಂದ್ರಿತ: ಮುಂಬೈಗೆ ಮೊದಲು ಕಾಲಿಟ್ಟು ರಾತ್ರಿ ಶಾಲೆಯ ಕನ್ನಡ ಶಿಕ್ಷಣಕ್ಕೆ ನಾಂದಿ ಹಾಡಿದ ಮೊಗವೀರರು, ಬಿಲ್ಲವರು, ಬಂಟರು ಬ್ರಾಹ್ಮಣರು, ವಿಶ್ವಕರ್ಮರು, ದೇವಾಡಿಗ, ಮುಂತಾದವರು ಮುಂಬೈ ಬೆಳವಣಿಗೆಗೆ ತಮ್ಮ ದೇಣಿಗೆ ಇತ್ತಿದ್ದಾರೆ.

  • ಸಂಘಟನಾ ಕೇಂದ್ರಿತ: ಮೇಲೆ ಉಲ್ಲೇಖಿಸಿದ ಸಮುದಾಯದವರು ಸಂಘಟಿತರಾಗಿ ತಮ್ಮ ತಮ್ಮ ಸಂಘಟನೆಗಳನ್ನು ಹುಟ್ಟುಹಾಕಿದರು. ಅದರ ಫಲವಾಗಿ ಇಂದು ಮೊಗವೀರ ವ್ಯವಸ್ಥಾಪಕ ಮಂಡಳಿ, ಬಿಲ್ಲವರ ಅಸೋಸಿಯೇಶನ್, ಗೋಕುಲ , ದೇವಾಡಿಗ ಸಂಘ, ವಿಶ್ವ ಕರ್ಮ ಸಂಘ ಮುಂತಾದವು ಅಸ್ತಿತ್ವಕ್ಕೆ ಬಂದು ಕ್ರಿಯಾಶೀಲವಾಗಿವೆ.
  • ಶೈಕ್ಷಣಿಕ ಕೇಂದ್ರಗಳು: ಇವರೆಲ್ಲ ಹುಟ್ಟು ಹಾಕಿದ ರಾತ್ರಿ ಶಾಲೆಗಳು, ಹಗಲು ಶಾಲೆಗಳು, ಖಾಸಗಿ ಶಾಲೆಗಳು, ಕನ್ನಡ ಭವನ, ಕಾಲೇಜುಗಳು, ವಿ.ವಿ.ದ ಕನ್ನಡ ವಿಭಾಗ ಇವು ಕನ್ನಡ ಶಿಕ್ಷಣ ಪ್ರಸಾರದ ಕಾರ್ಯಕ್ರಮದಲ್ಲಿ ತೊಡಗಿವೆ.ಇವುಗಳಿಂದ ಹೊರಬಂದ ಸಾವಿರಾರು ವಿದ್ಯಾರ್ಥಿಗಳು ಮುಂಬೈನಲ್ಲಿ ಕನ್ನಡದ ಕಟ್ಟೋಣದಲ್ಲಿ ಅನನ್ಯ ಪಾತ್ರ ವಹಿಸಿದ್ದರ ಅನಾವರಣ ಇಲ್ಲಿ ಇದೆ.
  • ವಾಣಿಜ್ಯ ಕೇಂದ್ರಗಳು: ಇವುಗಳನ್ನು ಸಹಕಾರಿ ಬ್ಯಾಂಕ್ ಗಳು, ಕ್ರೆಡಿಟ್ ಕೋಪರೇಟಿವ್ ಸೊಸೈಟಿ ಗಳು, ಎಂದು ವಿಭಾಗ ಮಾಡಬಹುದು. ಅವುಗಳಲ್ಲಿ ಶಾಮರಾವ್ ವಿಠಲ ಕಾಯ್ಕಿಣಿ ಸಹಕಾರಿ ಬ್ಯಾಂಕ್ , ಮೊಗವೀರ ಬ್ಯಾಂಕ್ , ಅಭ್ಯುದಯ ಬ್ಯಾಂಕ್,ಆರ್.ಎಸ್, ಕೋಪರೇಟಿವ್ ಬ್ಯಾಂಕ್ ಮಾತೃಭೂಮಿ ಕ್ರೆಡಿಟ್ ಸೊಸೈಟಿ, ಜಯಲಕ್ಷ್ಮೀ ಕ್ರೆಡಿಟ್ ಸೊಸೈಟಿ, ಇತ್ಯಾದಿಗಳು ಸೇರಿ ತಮ್ಮ ಸಮುದಾಯದ ಜೊತೆಗೆ ಇತರರಿಗೂ ಸೇವೆಯನ್ನು ಸಲ್ಲಿಸುತ್ತಿವೆ.
  • ಹಿಜಿರಾ ಸಮುದಾಯದವರು ಎದುರಿಸುವ ಸವಾಲುಗಳು ಅವರ ನೆರವಿಗೆ ನಿಂತು, ಅವರ ಅಸ್ಮಿತೆ ತಂದುಕೊಟ್ಟ ಬಿ.ಆರ್. ಶೆಟ್ಟಿಯವರ ಸಾಹಸಗಾಥೆಯ ಅನಾವರಣ ಈ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ.
  • ಸಾಂಸ್ಕೃತಿಕ ಸಂಸ್ಥೆಗಳು: ಮುಂಬೈ ಕರ್ನಾಟಕ ಸಂಘದ ಏಳು( ರಾತ್ರಿ ಶಾಲೆಯ ವಿದ್ಯಾರ್ಥಿಗಳಾದ ವರದರಾಜ ಆದ್ಯ, ಸದಾನಂದ ಶೆಟ್ಟಿ)ಬೀಳುಗಳು,( ಬೀಳಿಗೆ ಕಾರಣ ಕರ್ತರಾದವರ ಕುರಿತು ಸಕಾರಣವಾದ ಸಿಟ್ಟು) ನವೋದಯ ಕನ್ನಡ ಸಂಘ, ಡೊಂಬಿವಲಿ ಕರ್ನಾಟಕ ಸಂಘ, ನವಿ ಮುಂಬಯಿ ಕನ್ನಡ ಸಂಘದ ಇತ್ಯಾದಿಗಳು ನಿರಂತರವಾಗಿ ತಮ್ಮ ಸದಸ್ಯ ಬಾಂಧವರು ಮತ್ತು ಇತರರಿಗೆ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಪ್ರಸಾರಕಾರ್ಯದಲ್ಲಿ ತೊಡಗಿವೆ.
  • ಮುಂಬೈ ಕನ್ನಡ ರಂಗಭೂಮಿ: ಮುಂಬೈ ಕನ್ನಡ ರಂಗಕಲಾವಿದರು, ನಾಟಕಕಾರರು, ಕಲಾ ಭಾರತಿಯ ಕೊಡುಗೆ.

  • ಮುಂಬೈ ಕನ್ನಡ ಪತ್ರಿಕೋದ್ಯಮ ನಡೆದು ಬಂದ ದಾರಿ, ಮಹಾರಾಷ್ಟ್ರ ಕನ್ನಡ ಪತ್ರಕರ್ತರ ಸಂಘ ಅದರ ಕಾರ್ಯದರ್ಶಿ ರೋನ್ಸ್ ಬಂಟ್ವಾಳ ಮಹತ್ವದ ಪಾತ್ರ.
  • ಧಾರಾವಿಯ ಕನ್ನಡ ಶಾಲೆ, ಕನ್ನಡಿಗರು , ಅವರ ಕನ್ನಡ ಕೈಂಕರ್ಯದ ಅನಾವರಣ.
  • ಮುಂಬೈ ಮುಖ್ಯ ಧಾರೆಯಾದ ಕನ್ನಡಿಗರ ಹೋಟೆಲ್ ಗಳು, ಅವುಗಳಿಗೆ ಅಂಟಿದಂತೆ ಇರುವ ಪಾನ್ ವಾಲಾಗಳು ಕೊರೊನಾ ಕಾಲದಲ್ಲಿ ಇವರೆಲ್ಲ ಎದುರಿಸಿದ ಸವಾಲುಗಳು, ಮರಾಠಿಯವರಿಂದ ಮೊದಲು ಸಂಘರ್ಷ ನಂತರದ ಸಾಮರಸ್ಯಗಳ ಅನಾವರಣ.
  •  ಕಾರ್ಮಿಕ ಸಂಘಟನೆಗಳು ಮತ್ತು ಅವುಗಳ ಕನ್ನಡ ನೇತಾರರು: ಪಿ.ಡಿ.ಮೆಲ್ಲೋ, ದಿನಕರ ದೇಸಾಯಿ ,ಜಾರ್ಜ್ ಫರ್ನಾಂಡಿಸ್, ಪದ್ಮನಾಭ ಶೆಟ್ಟಿ, ಶರದ್ ರಾವ್ ಮುಂತಾದವರ ಹೋರಾಟ , ಸಂಘಟನೆಯಲ್ಲಿ ಅವರ ಸಕ್ರಿಯ ಪಾತ್ರಗಳ ವಿವರಗಳು ದಾಖಲಾಗಿವೆ.
  • ನ್ಯಾಯಾಧೀಶರು ಮತ್ತು ನ್ಯಾಯವಾದಿಗಳು: ಅಂತಾರಾಷ್ಟ್ರೀಯ ಖ್ಯಾತಿಯ ಬಿ.ಎನ್, ಶ್ರೀ ಕೃಷ್ಣ , ಹೆಚ್, ಸುರೇಶ್, ನ್ಯಾಯವಾದಿ ಕುದ್ರೋಳಿ ಕರ್ನಾಟಕ ಸ್ಪೋರ್ಟ್ಸ್ ಕ್ರೀಡಾಂಗಣ, ಪ್ರಕಾಶ್ ಶೆಟ್ಟಿ ಮುಂತಾದವರು ಸಾಧನೆಗಳನ್ನು ನಿರೂಪಿಸಲಾಗಿದೆ.
  • ಕೆಲವರ ಕುರಿತು ನ್ಯಾಯವಾದ ಸಿಟ್ಟನ್ನು ವ್ಯಕ್ತಪಡಿಸಿದರೂ ಅವರ ಹೆಸರುಗಳನ್ನು ಉಲ್ಲೇಖಿಸದೆ ಅವರ ಮಾನ ಕಾಪಾಡಿದ್ದಾರೆ.
  • ರಾತ್ರಿ ಶಾಲೆಯ ಸಂಘಟನೆಗಳು ರಾತ್ರಿ ಶಾಲೆ ವಿದ್ಯಾರ್ಥಿಗಳ ಸಲುವಾಗಿ ವಹಿಸಿದ ಅಪೂರ್ವ ಪಾತ್ರದ ಮೇಲೆ ಬೆಳಕು ಚೆಲ್ಲುತ್ತದೆ.
  • ಸಾಹಿತ್ಯ ಪ್ರಕಾಶನದ ಸಾಹಸಗಾಥೆ, ಸಾಹಿತ್ಯ ಚರ್ಚೆಗೆ ಅಡ್ಡೆಗಳು ಸಾಧನಾ ವಠಾರದಿಂದ( ಇದರಲ್ಲಿ ಪಾಲ್ಗೊಂಡ ಒಳನಾಡಿನ ಸಾಹಿತಿಗಳು)ಪ್ರೊಫೆಸರ್ ಜೋಶಿಯವರ ಮನೆ ಮನೆಗೆ ಸಾಹಿತ್ಯದವರೆಗೆ, ಶಿವರಾಮ ಕಾರಂತರ ಮುಂಬೈ ಅಂಟಿದ ನಂಟು – ನನ್ನ ಎಲ್ಲಾ ಹೊಸ ಪ್ರಯೋಗಗಳಿಗೆ ‌ಮುಂಬೈ ಆಡುಂಬೊಲ- ಅಲ್ಲಿನ ಕನ್ನಡಿಗರ ಪ್ರೋತ್ಸಾಹದಿಂದ ಸಾಧ್ಯವಾಯಿತು ” – ಉದ್ಗಾರ.: ೨೦;ಪ್ರತಿ ಅಂಕಣದ ನಂತರ ತಮಗೆ ಮಾಹಿತಿ ಇತ್ತವರ ಹೆಸರುಗಳನ್ನು ಉಲ್ಲೇಖಿಸಿರುವುದು ಅವರ ಪ್ರಾಮಾಣಿಕತೆಗೆ ಸಾಕ್ಷಿಯಾಗಿದೆ.ಅವುಗಳಲ್ಲಿ ನನ್ನ , ಸಂಗಾತಿಯ ಹೆಸರುಗಳು ಸೇರ್ಪಡೆ ಆಗಿದೆ.ಕೃತಜ್ಞತೆ.

    ಇವರು ಪ್ರಾರಂಭಿಸಿದ ಈ ಪರಂಪರೆಯನ್ನು ಈಗ ನನ್ನ ಶಿಷ್ಯೆ ಕಲಾಭಾಗ್ವತ್ ವಿಶ್ವವಾಣಿಯಲ್ಲಿ ಮುಂಬೈ ಕುರಿತು ಅಂಕಣ ಬರೆಯುವ ಮೂಲಕ ಮುಂದುವರಿಸುತ್ತಿದ್ದಾರೆ.
    ಮಿತಿಗಳು:

  • ಮೈಸೂರು ಕನ್ನಡಿಗರ, ಸಂಸ್ಥೆಗಳ ಸಾಧನೆಗಳ ಉಲ್ಲೇಖ ಇಲ್ಲ. ಮೈಸೂರು ಅಸೋಸಿಯೇಷನ್,ಜಿ.ವಿ ರಂಗಸ್ವಾಮಿ, ಮೈಸೂರು ಪ್ರಿಂಟಿಂಗ್ ಪ್ರೆಸ್ , ಮೈಸೂರು ಕೆಫೆ, ಮೈಸೂರು ಕಾಲೋನಿ.
  • ಹೆಸರುಗಳ ಉಲ್ಲೇಖದಲ್ಲಿ ಏಕರೂಪತೆಯನ್ನು ಕಾಯ್ದುಕೊಂಡು ಬಂದಿಲ್ಲ. ಬಿ.ಎಂ.ಕೃಷ್ಣ ಎಂದು ತಪ್ಪು ಬರೆಯಲಾಗಿದೆ.
  • ಪುನರುಕ್ತಿಗಳು; ವ್ಯಕ್ತಿಗಳು, ಸಂಸ್ಥೆಗಳ ಹೆಸರುಗಳು ಹಲವು ಬಾರಿ ಪುನರುಕ್ತಿಗೊಂಡಿವೆ. ಕುದ್ರೋಳಿ, ಸುರೇಶ್.
  • ಹಲವು ಲಿಪಿ ಸ್ಖಾಲಿತ್ಯಗಳು ಉಳಿದುಕೊಂಡಿವೆ. ಮೇಲೆ ಉಲ್ಲೇಖಿಸಿದ ಅವರ ಈ ಕೃತಿಯ ವೈಶಿಷ್ಟ್ಯಗಳ ನಡುವೆ ಇವು ಗೌಣ. ಇಂತಹ ಮಹತ್ವದ ಅಂಕಣಗಳನ್ನು ಒಟ್ಟಿಗೆ ತಂದು ಪುಸ್ತಕ ರೂಪದಲ್ಲಿ ಪ್ರಕಟಿಸಿದ, ಮತ್ತು ನನಗೆ ಕಳಿಸಿಕೊಟ್ಟ ಗೆಳೆಯರಾದ ಸಾ.ದಯಾ ಅವರಿಗೆ ಅಭಿನಂದನೆಗಳು. ಮುಂಬೈ ಕನ್ನಡಿಗರಿಗೆ ಹಿಡಿದ ಈ ಮುಂಬೈ ಸ್ವ-ಗತವೆಂಬ ಕನ್ನಡಿಯಲ್ಲಿ ತಮ್ಮನ್ನು ತಾವೇ ನೋಡಿಕೊಳ್ಳಬಹುದು.

  • ರಘುನಾಥ್ ಕೃಷ್ಣಮಾಚಾರ್ – ಲೇಖಕರು,  ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW