ʻಯೋಳ್ತೀನ್ ಕೇಳಿʼ ಪುಸ್ತಕ ನಾನು ಓದಿದ ಈ ಪುಸ್ತಕಗಳಲ್ಲೇ ವಿಭಿನ್ನವಾಗಿದೆ ಅಂತ ಅನ್ನಿಸಿತು. ಮೈಸೂರಿಗೆ ಅಂಟಿಕೊಂಡಂತೆ ಇರುವ ʻಆಯರವಳ್ಳಿʼ ಅಥವಾ ಚಾಮರಾಜನಗರ ಜಿಲ್ಲೆಯ ಬದಲಾವಣೆ ಮಾತ್ರ ಇದರ ಭಾಗವಾಗಿಲ್ಲ. ಲೇಖಕಿ ಕುಸುಮಾ ಆಯರಹಳ್ಳಿ ಅವರ ಕೃತಿ ಕುರಿತು ಲೇಖಕ ಮಾಕೋನಹಳ್ಳಿ ವಿನಯ್ ಮಾಧವ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ನಾನು ಹುಟ್ಟಿ, ಮೊದಲ ಐದು ವರ್ಷ ಬೆಳೆದದ್ದು ಕೊಡಗಿನ ಶುಂಠಿಕೊಪ್ಪ ಮತ್ತು ಪಾಲಿಬೆಟ್ಟದಲ್ಲಿ. ನನ್ನ ಅಣ್ಣನ ಚೇಷ್ಟೆ ಮತ್ತು ಹುಟ್ಟುತ್ತಲೇ ನಾನಿದ್ದ ತೂಕದ ಪರಿಣಾಮವಾಗಿ, ನನ್ನನ್ನು ಹೆಚ್ಚಾಗಿ ನೋಡಿಕೊಂಡಿದ್ದು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಪಿಳೈ ಎನ್ನುವ ಮಲಯಾಳಿಯ ತಾಯಿ. ಹಾಗೆಯೇ, ಹೆಚ್ಚಿನ ಸಮಯ ಕಳೆಯುತ್ತಿದ್ದದ್ದು, ಪಕ್ಕದ ಮೇಕೂರಿನ ಪುಲಿಯಂಡ ಕುಟುಂಬದ ಪೊನ್ನಪ್ಪ ಮತ್ತು ಲಲಿತಾಂಟಿಯ ಮನೆಯಲ್ಲಿ ಅಥವಾ ಅವರ ಮಕ್ಕಳಾದ ದಿವ್ಯ ಮತ್ತು ಬೋಪಣ್ಣನವರ ಜೊತೆಯಲ್ಲಿ. ನನ್ನನ್ನು ಮೊದಲು ಎತ್ತಿ ಆಡಿಸಿದ ದಿವ್ಯಾಳನ್ನು ನನ್ನ ಮಗಳಿಗೆ ನಾನು ಪರಿಚಯಿಸಿದ್ದು: ʻಇವಳೇ ನಿನ್ನ ಮೊದಲ ಸೋದರತ್ತೆ. ನನ್ನ ಮೊದಲ ಅಕ್ಕ.ʼ
ಈ ಪರಿಸರದಲ್ಲಿ ಬೆಳೆದ ನಾನು ಹಚ್ಚಾಗಿ ಮಲಯಾಳಂ ಮತ್ತು ಕೊಡವ ಭಾಷೆ ಮಾತನಾಡುತ್ತಿದ್ದೆನೇ ಹೊರತು, ಕನ್ನಡವಲ್ಲ. ಐದನೇ ವಯಸ್ಸಿಗೆ ಸಕಲೇಶಪುರಕ್ಕೆ ಬರುವ ಹೊತ್ತಿಗೆ ನಾನು ಮಾತನಾಡುವ ಕನ್ನಡ ಯಾರಿಗೂ ಅರ್ಥವಾಗುತ್ತಲೇ ಇರಲಿಲ್ಲವಂತೆ. ಕ್ಲಾಸಿನಲ್ಲೂ ಕಷ್ಟ ಪಡುತ್ತಿದ್ದದ್ದು ಈಗಲೂ ಅಸ್ಪಷ್ಟವಾಗಿ ನೆನಪಿದೆ.
ಇಂಗ್ಲಿಷ್ ನಲ್ಲಿ ʻDielectʼ ಎನ್ನುವುದಕ್ಕೆ ಸಮಾನಾಂತರ ಪದ ಹುಡುಕುವುದು ಕಷ್ಟ. ನಮ್ಮ ಭಾಷೆಯಳನ್ನು ಮಾತನಾಡುವ ವಿಭಿನ್ನ ಶೈಲಿಗಳಿಗೆ ʻDielectʼ ಎಂದು ಹೇಳುತ್ತಾರೆ. ಹಾಗಾಗಿ, ನನ್ನ ಮೊದಲ ʻDielectʼ ನಲ್ಲಿ ಮಲಯಾಳಂ ಮತ್ತು ಕೊಡವ ಭಾಷೆಯ ಪ್ರಭಾವ ಗಾಢವಾಗಿತ್ತು ಎಂದು ಕಾಣುತ್ತದೆ. ಚಿಕ್ಕ ವಯಸ್ಸಾದ್ದರಿಂದ, ಬಹಳ ಬೇಗ ಸಕಲೇಶಪುರದ ಕನ್ನಡಕ್ಕೆ ಒಗ್ಗಿಕೊಂಡಿದ್ದೆ.

ಅಲ್ಲಿಂದ ಮುಂದೆ ಅಣ್ಣನಿಗೆ (ಅಪ್ಪ) ಅರಕಲಗೂಡು ತಾಲ್ಲೂಕಿನ ಕೇರಳಾಪುರಕ್ಕೆ ವರ್ಗವಾಯಿತು. ಮಲೆನಾಡು ಕನ್ನಡಕ್ಕೂ, ಬಯಲು ಸೀಮೆಯ ಕನ್ನಡಕ್ಕೂ ಉಚ್ಚಾರದಲ್ಲಿ ಬಹಳಷ್ಟು ವ್ಯತ್ಯಾಸವಿತ್ತು. ಅಲ್ಲಿನ ಸರ್ಕಾರಿ ಶಾಲೆಗೆ ಸೇರಿದ ನಾನು, ಬಯಲು ಸೀಮೆ ಕನ್ನಡ ಮಾತನಾಡಲು ಆರಂಭಿಸಿದಾಗ ಅಮ್ಮನಿಗೆ ತಲೆ ಬಿಸಿಯಾಗಲು ಶುರುವಾಯಿತು. ʻಹೋಗ್ಲಾ… ಬಾರ್ಲಾʼ ಅನ್ನೋ ಭಾಷೆ ಮಾತನಾಡಿದಾಗಲೆಲ್ಲ ಮನೆಯಲ್ಲಿ ಬೈಸಿಕೊಳ್ಳುತ್ತಿದ್ದೆ. ಎರಡು ವರ್ಷಗಳ ನಂತರ ಮೈಸೂರಿಗೆ ಓದಲು ಹೋದಾಗ ಅಮ್ಮನಿಗೆ ಎಷ್ಟೋ ನಿರಾಳವಾಗಿದ್ದು ಸುಳ್ಳಲ್ಲ.
ಈ ʻDielectś ಬಗ್ಗೆ ನನಗೆ ತಿಳುವಳಿಕೆ ಬರೋಕೆ ಶುರುವಾಗಿದ್ದೇ ಮೈಸೂರಿನಲ್ಲಿ. ನಮಗೆ ಮೊದಲು ಹೇಳಿದ್ದು, ಕನ್ನಡದಲ್ಲಿ ಎರಡೇ ʻDielectsʼ ಇವೆ ಎಂದು. ಒಂದು ನಯವಾದ ಹಳೇ ಮೈಸೂರು ಕನ್ನಡ ಮತ್ತು ಎರಡನೇಯದು ಗಂಡು ಭಾಷೆಯಾದ ಧಾರವಾಡ ಕನ್ನಡ ಎಂದು. ಆದರೆ, ಮೈಸೂರಿನಲ್ಲೇ ಎಷ್ಟು ಕನ್ನಡ ಇದೆ ಎಂದು ಗೊತ್ತಾದಾಗ, ಈ ʻDielectsʼ ಬಗ್ಗೆ ಸ್ವಲ್ಪ ಜಿಜ್ಞಾಸೆ ಉಂಟಾಗಲು ಆರಂಭವಾಯಿತು.
ಮೈಸೂರಿನ ಅರಮನೆ ಸುತ್ತ-ಮುತ್ತ, ಯಾದವಗಿರಿಯವರೆಗಿನ ಕನ್ನಡ ಕೇಳಿದರೆ, ಯಾವುದೋ ಕಾವ್ಯವನ್ನು ಓದಿದ ಹಾಗಿರುತ್ತದೆ. ʻಏನು ರಾಯರೇ? ಎಷ್ಟು ಸೊಗಸಾಗಿ ಮಾತನಾಡಿದಿರಿ ನೀವು?ʼ ಎಂದು ಹೇಳುತ್ತಾರೆ. ಅದರ ಪಕ್ಕದಲ್ಲೇ ಬರುವ ಒಂಟಿಕೊಪ್ಪಲು, ತೊಣಚಿ ಕೊಪ್ಪಲು, ಕೆ.ಜಿ.ಕೊಪ್ಪಲು ಕನ್ನಡ, ಮಂಡ್ಯದ ಕನ್ನಡವಾಗಿರುತ್ತದೆ. ಇನ್ನು ಈ ಕಡೆ ಲಷ್ಕರ್ ಮೊಹಲ್ಲಾ, ಬಂಬೂ ಬಜಾರ್ ಕಡೆಗೆ ಬಂದರೆ, ನಮ್ಮ ಸಾಬರ ಕನ್ನಡ ಶುರುವಾಗುತ್ತದೆ. ʻಅದೂ… ಇಸ್ಕಿ ನಾಯಿದೂಕಿ ಬಂದ್ರಲ್ಲಾ… ನಮ್ ಪರ್ವೇಜ್ ದೂಕಿ ಅದಕ್ಕೆ ಹೊಡೀತುʼ ಅಂತ ಉರ್ದು ಮಿಶ್ರಿತವಾಗಿ ಇರುತ್ತದೆ. ಹೇಳಿ ಕೇಳಿ, ಉರ್ದು ಹುಟ್ಟಿದ್ದೇ ಲಷ್ಕರ್ (ಸೈನ್ಯ)ಕ್ಕಾಗಿ ಮತ್ತು ಸೈನ್ಯದಿಂದ. ಸ್ವಲ್ಪ ಸಂತ ಫಿಲೋಮಿನಾ ಚರ್ಚ್ ಕಡೆ ಬಂದರೆ, ʻವಾಟ್ ಮ್ಯಾನ್? ಈಗ ಬಂದ್ಯಾ ಮ್ಯಾನ್?ʼ ಎಂದು ರಾಗವಾಗಿ ಕನ್ನಡ ಶುರು ಮಾಡುತ್ತಾರೆ. ಏಕೆಂದರೆ, ಇದು ಬ್ರಿಟಿಷರ ಕೊಡುಗೆ.
ಆದರೆ, ಅರಮನೆಯಿಂದ ಬಲಕ್ಕೆ – ಅಂದರೆ ನಂಜನಗೂಡು, ಹೆಗ್ಗಡದೇವನ ಕೋಟೆ ರಸ್ತೆಯಲ್ಲಿ ಒಂದು ಕಿಲೋಮೀಟರ್ ಹೋದ ತಕ್ಷಣವೇ ಶುರುವಾಗುತ್ತದೆ – ʻನಾ ಯೋಳ್ದೆ… ನೀ ಕ್ಯೋಳಕ್ಕಿಲ್ಲʼ ಅನ್ನೋ ಅಚ್ಚ ಚಾಮರಾಜನಗರ ಭಾಷೆ. ಇವೆಲ್ಲ ಇರೋದು ನಮ್ಮ ಸಂಸ್ಕೃತಿ ರಾಜಧಾನಿಯಾದ ಮೈಸೂರಿನಲ್ಲೇ ಹೊರತು, ಇನ್ನೆಲ್ಲೂ ಅಲ್ಲ.
ಹಾಗೂ, ಹೀಗೂ, ಇಷ್ಟೊಂದು ಕನ್ನಡಗಳ ಮಧ್ಯೆ ಐದು ವರ್ಷ ಕಳೆದು, ಕಾರ್ಕಾಳಕ್ಕೆ ಬಂದ ತಕ್ಷಣ, ʻಏಂಥ ಸಾವು ಮಾರಾಯ?ʼ ಅನ್ನೋ ಮಂಗಳೂರು ಕನ್ನಡ ಕೇಳಿದೆ. ಎಷ್ಟೋ ವರ್ಷಗಳ ಕಾಲ ಮಂಗಳೂರು ಕನ್ನಡ ಒಂದೇ ಎಂದುಕೊಂಡಿದ್ದೆ. ಆಮೇಲೆ ಗೊತ್ತಾಗಿದ್ದು ನನಗೆ. ಅಲ್ಲಿ ಕುಂದಾಪ್ರ ಕನ್ನಡ ಮತ್ತು ಹವ್ಯಕ ಕನ್ನಡ ಎನ್ನೋ ಇನ್ನೂ ಎರಡು ʻDielectsʼ ಇವೆ ಅಂತ.
ಹಾಗೆ ನೋಡಿದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಮಾತನಾಡುವ ಕನ್ನಡಕ್ಕೂ, ತೀರ್ಥಹಳ್ಳಿಯಲ್ಲಿ ಮಾತನಾಡುವ ಕನ್ನಡಕ್ಕೂ ಸುಮಾರು ವ್ಯತ್ಯಾಸ ಬರುತ್ತದೆ. ಹೌದು ಎನ್ನುವ ಪದವನ್ನು ತೀರ್ಥಹಳ್ಳಿಯಲ್ಲಿ ಇತ್ತೀಚಿನವರೆಗೂ, ʻಹೌದೇ ಸೈʼ ಎಂದು ಹೇಳುತ್ತಿದ್ದರು. ಚಿಕ್ಕಮಗಳೂರಿನ ಬಯಲುಸೀಮೆ ಕನ್ನಡಕ್ಕೂ ಮತ್ತು ಮಲೆನಾಡು ಪ್ರದೇಶದ ಕನ್ನಡಕ್ಕೂ ಬಹಳ ವ್ಯತ್ಯಾಸ ಬರುತ್ತದೆ. ತುಳು ಭಾಷೆಯ ಪ್ರಭಾವ ಇರುವ ಮಲೆನಾಡಿನಲ್ಲಿ, ʻಅಲ್ ಕಣಾʼ, ʻಅಲ್ ಕಣೀʼ, ಯಾನಾ? ಹೋಗಾನೇನಾ? ಎಂದೆಲ್ಲಾ ಮಾತನಾಡುತ್ತಿದ್ದೆವು. ಈಗ ನಿಧಾನವಾಗಿ ಈ ಕನ್ನಡ ಕಣ್ಮರೆಯಾಗುತ್ತಿದೆ.
ಕೊಡಗಿನಲ್ಲೂ ಅಷ್ಟೆ. ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಸ್ವಲ್ಪ ಮಲಯಾಳಂ ಮತ್ತು ಕೊಡವ ಭಾಷೆ ಪ್ರಭಾವ ಇರುವುದು ಕಾಣುತ್ತದೆ. ಹಾಗೆಯೇ, ಅರೆ ಭಾಷೆ ಸಂಪೂರ್ಣ ಬೇರೆಯಾಗಿಯೇ ಮಾತನಾಡುತ್ತಾರೆ. ಇನ್ನು ಎರವರ ಕನ್ನಡ ಅವರಿಗೇ ಅರ್ಥವಾಗುವ ಹಾಗೆ ಇರುತ್ತದೆ.
ಮೊದಲು, ಉತ್ತರ ಕರ್ನಾಟಕದಲ್ಲೆಲ್ಲಾ ಮಾತನಾಡುವುದು ಧಾರವಾಡ ಕನ್ನಡ ಎಂದು ತಿಳಿದಿದ್ದ ನನಗೆ, ನಿಧಾನವಾಗಿ ಹೈದರಾಬಾದ್ ಕರ್ನಾಟಕದ ಕನ್ನಡದಲ್ಲಿ ಉರ್ದು ಪ್ರಭಾವ ಎದ್ದು ಕಂಡರೆ, ಬೆಳಗಾವಿ ಕಡೆಯಲ್ಲಿ ಮರಾಠಿ ಪ್ರಭಾವ ಕಾಣುತ್ತದೆ. ಬಳ್ಳಾರಿ ಕಡೆಯಲ್ಲಿ ತೆಲುಗಿನ ಪ್ರಭಾವ ಗಾಢವಾಗಿರುತ್ತದೆ.
ಆದರೆ, ಇತ್ತೀಚೆಗೆ ಹೆಚ್ಚಿನ ಜನಗಳಿಗೆ ತಮ್ಮ ʻDielctsʼ ಬಗ್ಗೆ ಕೀಳರಿಮೆ ಬಂದಂತೆ ಕಾಣುತ್ತದೆ. ಮೊದಲೇ ಕನ್ನಡದ ಬಗ್ಗೆ ಕೀಳರಿಮೆ ಇದ್ದು, ಇಂಗ್ಲಿಷ್ ನಲ್ಲೇ ಮಾತನಾಡಲು ಹೊರಡುವ ಕನ್ನಡಿಗರಿಗೆ, ತಮ್ಮ ʻDielectʼ ಬಗ್ಗೆ ಹೆಮ್ಮೆ ಇರುವ ಸಾಧ್ಯತೆ ಕಡಿಮೆ ಎಂದು ನನಗನ್ನಿಸುತ್ತದೆ.
ಏಕೆಂದರೆ, ಹೊಸ ಪೀಳಿಗೆಯ ಎಲ್ಲಾ ತಂದೆ ತಾಯಿಯಂದಿರೂ ಸಹ ತಮ್ಮ ಮಕ್ಕಳು ನಾಲ್ಕು ಜನಗಳ ಮಧ್ಯೆ ತಲೆ ಎತ್ತಿ ತಿರುಗಬೇಕಾದರೆ, ಇಂಗ್ಲಿಷ್ ನಲ್ಲಿ ಮಾತನಾಡಬೇಕು ಎನ್ನುವ ಭ್ರಮೆಯಲ್ಲಿ ಇದ್ದಾರೆ. ನಮ್ಮೂರಲ್ಲಿ, ಎಷ್ಟೇ ಕಷ್ಟವಾದರೂ ಸಹ, ತಮ್ಮ ಮಕ್ಕಳನ್ನು ಕಾನ್ವೆಂಟ್ ಗಳಿಗೆ ಕಳುಹಿಸುತ್ತಾರೆಯೇ ಹೊರತು, ಸುಮಾರು ಮೂವತೈದು ವರ್ಷಗಳಿಂದ, ಶೇ. ತೊಂಬತ್ತೊಂಬತ್ತರಷ್ಟು ಫಲಿತಾಂಶ ಕೊಡುತ್ತಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಲು ಯಾರೂ ಮುಂದೆ ಬರುತ್ತಿಲ್ಲ. ಇನ್ನು ಸ್ವಲ್ಪ ದಿನಗಳಲ್ಲಿ ಈ ಶಾಲೆಯನ್ನು ಮುಚ್ಚಬೇಕಾಗಬಹುದು.

ಇವೆಲ್ಲಾ ನನ್ನ ತಲೆಯಲ್ಲಿ ಹಾದು ಹೋಗಿದ್ದು, ಕುಸುಮಾ ಆಯರವಳ್ಳಿ ಬರೆದ ʻಯೋಳ್ತೀನ್ ಕೇಳಿʼ ಎಂಬ ಪುಸ್ತಕದಲ್ಲಿ ಬರುವ ʻಭಾಷೆ ಎಂಬ ನದಿಯ ಹರಿವುʼ ಲೇಖನವನ್ನು ಓದುತ್ತಾ ಹೋದಂತೆ. ಕನ್ನಡವನ್ನು ಉಳಿಸಬೇಕು ಎನ್ನುವವರು, ಯಾವ ಕನ್ನಡವನ್ನು? ಎಂದು ಪ್ರಶ್ನೆ ಮಾಡುವಷ್ಟು ಚಿಂತೆಗೆ ಹಚ್ಚಿತು ಈ ಲೇಖನ. ಏಕೆಂದರೆ, ನಾನು ಹುಟ್ಟಿ-ಬೆಳೆದ ಪರಿಸರಗಳಲ್ಲಿ, ಮಾತನಾಡಿದ ಕನ್ನಡ ಭಾಷೆಯಲ್ಲಿ ಎಂದೂ ಏಕತಾನವಿರಲಿಲ್ಲ.
ಕುಸುಮಾಳನ್ನು ಮೊದಲನೇ ಸಲ ನೋಡಿದಾಗಲೇ ಏನೋ ವಿಶೇಷ ಅನ್ನಿಸಿತ್ತು. ನಿಲ್ಲಿಸಿದರೆ ಸಿನೆಮಾ ನಟ ದರ್ಶನ್ ಸೊಂಟಕ್ಕೂ ಬರದ, ನನ್ನ ಜೊತೆ ಯಾವತ್ತೂ ಎತ್ತರದ ಧ್ವನಿಯಲ್ಲಿ ಮಾತನಾಡದ ಈ ಹುಡುಗಿಯನ್ನು ʻಲೇಡಿ ದರ್ಶನ್ʼ ಅಂತ ಯಾಕೆ ತಮಾಷೆ ಮಾಡ್ತೀನಿ ಅನ್ನೋದು ನನಗೇ ಅರ್ಥವಾಗದ ವಿಷಯ. ಅವಳೂ ಅದನ್ನು ತಲೆಗೆ ಹಾಕಿಕೊಳ್ಳದೆ, ಸಿಕ್ಕಿದಾಗಲೆಲ್ಲ ಗೌರವದಿಂದಲೇ ಮಾತನಾಡುತ್ತಾಳೆ.
ಅವಳು ಬರೆದ ʻದಾರಿʼ ಕಾದಂಬರಿ ನನಗೆ ಬಹಳ ಇಷ್ಟವಾಗಿತ್ತು. ನಗರೀಕರಣದ ಅಂಚಿನಲ್ಲಿ ನಿಂತ ಊರಿನ ಕಥೆ, ಅತ್ತ ಹಳ್ಳಿಯ ಕಟ್ಟುಪಾಡುಗಳನ್ನೂ ಬಿಡಲಾಗದೆ, ಇತ್ತ ನಗರೀಕರಣಕ್ಕೂ ಹೊಂದಿಕೊಳ್ಳಲಾಗದೆ, ನಗರೀಕರಣದ ಎಲ್ಲಾ ಅವಾಂತರಗಳಿಗೆ ಬಲಿಪಶುಗಳಾಗುವ ಹಳ್ಳಿಯ ಕಥೆ. ಸ್ವಲ್ಪ ದಿನಗಳ ಮುಂಚೆ, ಒಂದು ಪುಸ್ತಕದ ಫೋಟೋ ಹಾಕಿ, ʻಇದರ ಬಗ್ಗೆ ನಿಮ್ಮ ಅನಿಸಿಕೆಗೆ ಕಾಯುತ್ತಿದ್ದೇನೆʼ ಎಂದು ವಾಟ್ಸಾಪ್ ಸಂದೇಶ ಕಳುಹಿಸಿ ಸುಮ್ಮನಾಗಿದ್ದಳು. ಆ ಪುಸ್ತಕ ನನ್ನ ಗಮನಕ್ಕೆ ಬಂದಿರಲಿಲ್ಲ. ಆಮೇಲೆ ಗೊತ್ತಾಗಿದ್ದು, ಇದು ಆಕೆಯ ಲೇಖನಗಳ ಸಂಕಲನ ಮತ್ತು ಎರಡನೇ ಮುದ್ರಣವನ್ನು ಗೆಳೆಯ ರತೀಶ್ ತಮ್ಮ ಹರಿವು ಬುಕ್ಸ್ ಮೂಲಕ ಹೊರ ತಂದಿದ್ದಾರೆ ಎಂದು.
ಪುಸ್ತಕ ಓದಿ ಮುಗಿಸಿದಾಗ ಅನ್ನಿಸಿದಿಷ್ಟು ʻಮೊದ್ಲು, ಅವ್ಳ್ ಯೋಳಿದ್ಲು, ನಾ ಕ್ಯೋಳ್ದೆ, ಈಗ ನಾ ಯೋಳ್ತೀನಿ, ಅವ್ಳ್ ಕ್ಯೋಳ್ತಾಳೆ…
ಬದಲಾವಣೆಗಳು ನಮ್ಮ ಪೀಳಿಗೆಗೆ ಅಂಟಿದ ಶಾಪವೋ ಅಥವಾ ನಮ್ಮ ಸ್ವಯಾಂಕೃತ ಅಪರಾಧವೋ? ನನಗಂತೂ ಗೊತ್ತಿಲ್ಲ. ನಾವು ಹುಟ್ಟಿ ಬೆಳೆದ ಊರು, ಪರಿಸರ, ಭಾಷೆ, ಸಂಸ್ಕೃತಿ ಎಲ್ಲವನ್ನೂ ಕಳೆದುಕೊಂಡು, ಏನೋ ಸಾಧಿಸಿದೆವು ಎಂದು ಎದೆಯುಬ್ಬಿಸಿ ಹೇಳುತ್ತಾ, ಕಳೆದುಕೊಂಡ ವಿಷಾದವನ್ನು ಎದೆಯೊಳಗೇ ಹುಗಿದಿರಿಸಿ, ಕೃತಕ ನಗುವನ್ನು ಚೆಲ್ಲುವವರು ನಾವು. ಅಲ್ಲೊಬ್ಬರು, ಇಲ್ಲೊಬ್ಬರು ಮಾತ್ರ ಧೈರ್ಯವಾಗಿ ಬರೆಯುತ್ತಾರೆ ಅಥವಾ ಮಾತನಾಡುತ್ತಾರೆ. ಆದರೆ, ಇದೊಂಥರಾ ಏಕ ಮುಖ ಸಂಚಾರ ಎನ್ನುವುದು ಎಲ್ಲರಿಗೂ ಗೊತ್ತು. ನಮ್ಮ ವಯಸ್ಸಿನಂತೆ, ಹಿಂದುರುಗಲಾಗದ ಪ್ರಪಂಚ…
ನಮ್ಮ ಪರಿಸರ ಬದಲಾವಣೆಗಳ ಬಗ್ಗೆ ಮೊದಲು ಓದಿದ್ದು ನನಗೆ ಹೈಸ್ಕೂಲಿನಲ್ಲಿ ಇದ್ದ ಒಂದು ಪಾಠದ ಮೂಲಕ – ʻಈಗಿನ ನನ್ನೂರುʼ. ಟೆಲಿವಿಷನ್, ಮೊಬೈಲ್ ಗಳು ಬರುವ ಮುಂಚೆಯೇ ಇಂತಹ ಬದಲಾವಣೆಗಳು ನಡೆಯುತ್ತಿದ್ದವು ಅಂದ ಮೇಲೆ, ಈಗಿನ ಬದಲಾವಣೆಗಳು ಅನಿವಾರ್ಯ ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ಬಹಳಷ್ಟು ಜನ ತಾವು ನೋಡಿದ ಬದಲಾವಣೆಗಳ ಬಗ್ಗೆ ಬರೆದಿದ್ದಾರೆ. ಅದರಲ್ಲಿ ಬಹಳ ಇಷ್ಟವಾಗಿದ್ದು Fathima Raliya Hejamady ಬರೆದಿದ್ದ ʻಕಡಲು ನೋಡಲು ಹೋದ ಹುಡುಗಿʼ ಪುಸ್ತಕ. ಅದರಲ್ಲಿ ಆಕೆ ಕೊಟ್ಟಿದ್ದ ಒಂದು ಶೀರ್ಷಿಕೆ — ʻಕುರುಕ್ಷೇತ್ರದ ಉನ್ಮಾದವೂ, ಬೃಂದಾವನದ ಕೊಳಲೂʼ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದು ಹೋಗಿದೆ.
ʻಯೋಳ್ತೀನ್ ಕೇಳಿʼ ಪುಸ್ತಕ ನಾನು ಓದಿದ ಈ ಪುಸ್ತಕಗಳಲ್ಲೇ ವಿಭಿನ್ನವಾಗಿದೆ ಅಂತ ಅನ್ನಿಸಿತು. ಮೈಸೂರಿಗೆ ಅಂಟಿಕೊಂಡಂತೆ ಇರುವ ʻಆಯರವಳ್ಳಿʼ ಅಥವಾ ಚಾಮರಾಜನಗರ ಜಿಲ್ಲೆಯ ಬದಲಾವಣೆ ಮಾತ್ರ ಇದರ ಭಾಗವಾಗಿಲ್ಲ. ಇದರಲ್ಲಿ ಒಂದು ಅವ್ಯಕ್ತ ಆತ್ಮ ಅಡಕವಾಗಿದೆ ಅಂತ ಅನ್ನಿಸಿತು. ಒಂದೊಂದು ಪಾತ್ರಗಳನ್ನು ಎಲ್ಲಿಂದಲೋ ಹೆಕ್ಕಿ ತಂದಂತೆ ಭಾಸವಾಗಲು ಶುರುವಾಯಿತು.
ಒಂದೊಂದೂ ವಿಭಿನ್ನ ಕಥೆಗಳೇ. ಗುರುಬಸವಿ, ತಾಳಿ, ಮರಿ, ಮಾದವಮ್ಮ, ಮುದ್ದಯ್ಯ ಮುಂತಾದವರು ಪಾತ್ರಗಳಾಗಿ ಕಾಡಿದರೆ, ತಾಳಿ, ಅನ್ನ, ಚಕ್ರವ್ಯೂಹ, ಸುನಾಮಿ ಮುಂತಾದವೆಲ್ಲ ಹೃದಯದಲ್ಲಿ ಮೆಲ್ಲಗೆ ಸೂಜಿಯಲ್ಲಿ ಚುಚ್ಚಿದಂತೆ ಅನ್ನಿಸುತ್ತದೆ. ಎಲ್ಲಾ ಕಥೆಯೊಳಗೆ ಕುಸುಮಾ ಹೊಕ್ಕು ಹೊರಬರುವ ಪರಿ ನನಗೆ ಬಹಳ ಇಷ್ಟವಾಯಿತು. ಹೆಣ್ಣು ಮಕ್ಕಳಿಗೆ ʻಬಸವಿʼ ಅನ್ನೋ ಬೈಗುಳ ನಮ್ಮ ಕಡೆಯೂ ಉಪಯೋಗಿಸುತ್ತಾರೆ. ಅದರ ಹಿಂದೆ ಇದೇ ಕಥೆ ಇದೆಯೋ, ಅಥವಾ ಬೇರೆ ಕಥೆಯೋ ನನಗೆ ಗೊತ್ತಿಲ್ಲ…
ಈ ಪುಸ್ತಕದ ಪ್ರತೀ ಲೇಖನವನ್ನೂ ವಿಶ್ಲೇಷಿಸುತ್ತಾ ಹೋದರೆ, ಇನ್ನೊಂದು ಪುಸ್ತಕವಾಗುತ್ತದೆ. ಆದರೆ, ಇದನ್ನು ಓದುವ ಮಜಾ ಹಾಳಾಗುತ್ತದೆ…
- ಮಾಕೋನಹಳ್ಳಿ ವಿನಯ್ ಮಾಧವ್
