‘ಬೆಳದಿಂಗಳ ಬೆಳಕ ಹರೀತು’ ಕೃತಿ ಪರಿಚಯ

ಥೇಟ್ ಹುಣ್ಣಿಮೆ ಬೆಳದಿಂಗಳ ಹಂಗ ಇಡೀ ಪುಸ್ತಕದಲ್ಲಿ ಬೇಂದ್ರೆ ಅಜ್ಜನ ಹೊಳಪು ತಟಕೂ ಕಮ್ಮಿಯಾಗದಂಗ ಬಿಚ್ಚಿಡ್ತಾ ಹೋಗ್ಯಾರ ಡಾ ಎಚ್ ಎಸ್ ಸತ್ಯನಾರಾಯಣ ಮೇಸ್ಟ್ರು. ಲೇಖಕ ಸಿದ್ದರಾಮ ತಳವಾರ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಬೇಂದ್ರೆ ಅಂತಂದ್ರ ನೆಂಪಾಗೂದು ಧಾರವಾಡ ನಾನೆಂದೂ ಬೇಂದ್ರೆ ಅಜ್ಜನ್ನ ನೋಡೇ ಇಲ್ಲ. ಈ ಹಾಡು ಪಾಡು ಮೊದಲಿಂದಾನೂ ಮೈಗೆ ಅಂಟಿಕೊಂಡ ಮಣ್ಣಾಗಿತ್ತೇ ವಿನಃ ಮೈಯೊಳಗಿನ ರಕ್ತದಂಗ ಇದ್ದಿರಲಿಲ್ಲ. ಮನಿಯೊಳಗ ಅಜ್ಜ ಹಲಗಿ ಬಾರಿಸ್ತಿದ್ದ ಅಪ್ಪ ಹಾರ್ಮೋನಿಯಂ ನುಡಿಸ್ತಿದ್ದ ಕಾಕಂದಿರು ತಬಲ ಡಗ್ಗಾ ಅಂತ ಬಾರಿಸೋರು ಸಣ್ಣ ವಯಸ್ಸಿನ್ಯಾಗ ಹಾಡು ಹಾರ್ಮೋನೀಯಂ ಇದೆಲ್ಲ ನನಗ ಬಾಳಂದ್ರ ಬಾಳ ಸಲೀಸಾಗಿ ಒಲದ ಬಂತು. ಆಗೆಲ್ಲ ನೀ ಹಿಂಗ ನೋಡಬ್ಯಾಡ ನನ್ನ ತಿರುಗಿ ನಾ ಹ್ಯಾಂಗ ನೋಡಲಿ ನಿನ್ನ… ಇದ ಹಾಡನ್ನ ಹಾರ್ಮೋನಿಯಂ ಒಳಗ ಬಾರಿಸ್ತಿದ್ರ ದುಃಖ ಒತ್ತರಿಸಿ ಬರ್ತಿತ್ತು. ಈ ಹಾಡ ಬರೆದಿದ್ದು ಇದ ಬೇಂದ್ರೆ ಅಜ್ಜ ಅಂತ ಗೊತ್ತಾಗಾಕ ಹತ್ತ ವರ್ಷ ಬೇಕಾತು.

ಓದು ಬರವಣಿಗೆ ಕೂಡ ಸಣ್ಣ ವಯಸಿನ್ಯಾಗ ರೂಢಿ ಆಗಿತ್ತು ಪತ್ರ ಬರಿಯೋದು ಭಜನಾ ಕ್ಯಾಸೆಟ್ ಕೇಳಿ ಬರದ ಕೊಡೋದು ಮಾಡ್ತಿದ್ವಿ ಹಿಂಗಾಗಿ ಚೊಲೋ ಧಾಟಿ ಮನಸಿಗಿ ಹಿಡಿಸಿತಂದ್ರ ಅದಕ ಹೊಂದುವಂಗ ಹತ್ತ ಸಾಲು ಬರದು ಅದನ ಆವತ್ತಿನ ರಾತ್ರಿ ಭಜನಾದೊಳಗ ಹಾಡಿ ಸೈ ಅನ್ನಿಸಿಕೊಳ್ತಿದ್ವಿ.

ಸಾಲಿ ಪುಸ್ತಕದಾಗ ಇರೋ ಹಾಡು ಪಾಠಗಳನ್ನ ಬರದೋರ‌ ಬಗ್ಗೆ ಮಾಸ್ತರಗೋಳು ಅಷ್ಟ ಆಸಕ್ತಿ ತೋರಿಸಿ ಹೇಳ್ತಿರಲಿಲ್ಲ ನಾವೂ ಕೇಳ್ತಿರಲಿಲ್ಲ. ನಿಧಾನಕ್ಕೆ ಅದನ ಬರದೋರ‌ ಹೆಸರು ಓದಿಸ್ತಿದ್ರು ಆದರ ಅವರೆಲ್ಲ ಸತ್ತಿರಬೇಕ ಅಂತ ಅಂದ್ಕೊಂಡ ವಯಸ್ಸದು. ಆ ಮ್ಯಾಲ ಗೊತ್ತಾಗಿದ್ದು ಕೆಲವರು ಬದಕ್ಯಾರ ನೋಡಾಕ ಸಿಗ್ತಾರ ಅಂತ.‌ ಆಗ ನೋಡ್ಬೇಕಲಾ ಅಂತ ಅನ್ಸಿದ್ದು ಬೇಂದ್ರೆ ಅಜ್ಜ. ಇಲ್ಲ ಅಂದೆ ಮ್ಯಾಗ ಎಲ್ಲಿ ಹುಡುಕೋದು ಆ ಅಸಮಾಧಾನ ಇತ್ತೀಚೆಗೆ ಕೆಲವು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಸಮಾಧಾನ ಆಗಿತ್ತು.

ಹೇಳಿದ್ದು ಕೇಳಿದ್ಜು…

ಈ ವ್ಯಕ್ತಿ ಚಿತ್ರಣ ಬರೆಯೋದು ಅಂದ್ರ ಡಾ ಎಚ್ ಎಸ್ ಸತ್ಯನಾರಾಯಣ ಮೇಷ್ಟ್ರಿಗೆ ಒಂದು ಕಪ್ ಕಾಫಿ ಕುಡಿದಷ್ಟೇ ಸುಲಭ ಏನೋ ಅನ್ನಿಸ್ತದ.‌ಅಂತ ದೊಡ್ಡ ಕವಿಯನ್ನು ಹಾಂ… ಅನ್ನೂದ್ರಾಗ ಅಗದೀ ಸಾಮಾನ್ಯ ಓದುಗನಿಗೂ ತಿಳಿಯೂ ಹಂಗ ಕಣ್ಮುಂದ ಬರೂ ಹಂಗ ಚಿತ್ರಿಸೂದೈತಲ್ಲ ಅದ ಭಾರಿ ನಾಜೂಕಿನ ಕೆಲಸ. ಆ ಕೆಲಸ ಅವರಿಗೆ ಮಾತ್ರ ಸುಲಭ ಸಾಧ್ಯ ಏನೋ. ಅದರ ಹಿಂದಿನ ಆ ಓದು ಅವರ ಅಧ್ಯಯನ ಅದೂ ಕಷ್ಟದ ಕೆಲಸಾನ ಸರಿ. ಈ ಹಿಂದೆ ‘ತೇಜಸ್ವಿ’ ಅವರ ಕುರಿತು ಇಂಥದ್ದೊಂದು ಪುಸ್ತಕ ಕೈಗಿಟ್ಟಿದ್ದರು.

ಬೆಳುದಿಂಗಳ ನೋಡ…

ಥೇಟ್ ಹುಣ್ಣಿಮೆ ಬೆಳದಿಂಗಳ ಹಂಗ ಇಡೀ ಪುಸ್ತಕದಲ್ಲಿ ಬೇಂದ್ರೆ ಅಜ್ಜನ ಹೊಳಪು ತಟಕೂ ಕಮ್ಮಿಯಾಗದಂಗ ಬಿಚ್ಚಿಡ್ತಾ ಹೋಗ್ಯಾರ. ಬೇಂದ್ರೆ ಅಜ್ಜನ ಬಾಳಷ್ಟ ಅಂತೆ ಕಂತೆ ಸುದ್ದಿಗಳು ಎಲ್ಲೋ ಕೇಳಿದ ಓದಿದ ನೆಂಪಾದ್ರೂ ಎಲ್ಲಾ ಒಂದ ಕಡೆ ಜೋಡಿಸಿ ಒಂದ ಅಲ್ಬಮ್ ಥರ ಕೈಗಿಟ್ಟಾಗ ಆಗೂ ಖುಷಿನ ಬ್ಯಾರೆ. ಅಂತ ಸಾಹಸ ಮಾಡಿದ ಮೇಷ್ಟ್ರು ಮತ್ತವರ ಪುಸ್ತಕ ಬೇಂದ್ರೆ ಅಜ್ಜನ ಬಾಳಷ್ಟ ಮಜಲುಗಳನ್ನು ಅಷ್ಟ ಮಜಬೂತಾಗಿ ಮೆಲುಕು ಹಾಕೂವಂಗ ಮಾಡ್ಯಾರ.

ಚಂಪಾ ಅವರ ಜೊತಿ ನಡೆದ ಜಗಳ ಬಾಳ ಇಂಟ್ರಸ್ಟಿಂಗ್ ಈ ಬಗ್ಗೆ ನಾನೂ ಒಂದ ಸಲಾ ಯೂಟ್ಯೂಬ್ ಲ್ಲಿ ಕೇಳಿದ್ದೆ. ಬೇಂದ್ರೇ ದೊಡ್ಡ ಕವಿ ಆದರ ಬಾಳ ಸಣ್ಣ ಮನುಷ್ಯ ಅಂದಿದ್ರು. ಇಲ್ಲಿ ಅದರ ಬಗ್ಗೆನೂ ದಾಖಲಾಗ್ಯದ. ಇದನ ಓದಿದಾಗ ಅದು ನೆಂಪಾತು. ಆಮ್ಯಾಕ ಅವರ ಸಂಕ್ರಾಂತಿ ಪತ್ರಿಕೆ ಮನೆಗೆ ತರಿಸ್ಕೊಂಡಿದ್ದೆ.

ಹೀಂಗ ಬಾಳಷ್ಟ ಬೇಂದ್ರೆ ಅಜ್ಜನ ಸುದ್ದಿಗಳು ಇದರಾಗ ಇದಾವ. ಪೂರಾ ಅಜ್ಜನ ತಿಳಿಸಲಿಕ್ಕಂದ್ರೂ ಅಜ್ಜ ಹೀಂಗಿದ್ದ ಅಂತ ಇಂಟ್ರೆಸ್ಟ್ ಹುಟ್ಟಿಸೋದಂತೂ ಪಕ್ಕಾ. ಇಂಥದ್ದೊಂದು ಪುಸ್ತಕ ಪ್ರಕಟಿಸಿದ ಅಮೂಲ್ಯ ಪುಸ್ತಕ ದವರಿಗೂ ಬರೆದ ಸತ್ಯನಾರಾಯಣ ಮೇಷ್ಟ್ರಿಗೂ ಧನ್ಯವಾದಗಳು

ಪುಸ್ತಕ ಭಾಳ ಚಂದ ಬಂದದ ಓದ್ರಿ ಓದಿಸ್ರಿ….

ಬೆಳುದಿಂಗಳ ನೋಡ..


  • ಸಿದ್ದರಾಮ ತಳವಾರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading