‘ಪಿಂಜರ’ ಸಿನಿಮಾದ ಸುತ್ತ

ಹಲವಾರು ಸಿನಿಮಾಗಳು, ಓದಿದ ಪುಸ್ತಕಗಳು ಈಗಲೂ ನೆನಪಿನಲ್ಲಿ ಮಾಸಿಯೇ ಇಲ್ಲ. ಕೆಲವು ವರ್ಷಗಳ ಹಿಂದೆ ನಾನೊಂದು ಸಿನಿಮಾ ನೋಡಿದ್ದೆ ಆ ಸಿನಿಮಾದ ಹೆಸರು ‘ಪಿಂಜರ’. ಈ ಸಿನಿಮಾದ ಕಥೆ ತುಂಬಾ ಶಕ್ತಿಶಾಲಿಯಾಗಿತ್ತು ಎಂದು ತಮ್ಮ ಅಭಿಪ್ರಾಯವನ್ನು ಲೇಖಕಿ ಶೈಲಜಾ ಹಾಸನ ಅವರು ಓದೂರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೆಲವೊಂದು ವಿಚಾರಗಳು, ಕೆಲವೊಂದು ಘಟನೆಗಳು ಎಷ್ಟೆ ವರ್ಷಗಳು ಕಳೆದರೂ ಮನಸ್ಸಿನಿಂದ ಮರೆಯಾಗಿರುವುದೇ ಇಲ್ಲಾ. ಹಾಗೆ ಕೆಲವೊಂದು ಚಲನಚಿತ್ರಗಳು ನೋಡಿ ಅದೆಷ್ಟೇ ವರ್ಷಗಳಾಗಿದ್ದರೂ ನೆನ್ನೆ ಮೊನ್ನೆ ನೋಡಿರುವಂತೆ ಭಾಸವಾಗಿರುತ್ತದೆ. ಅಂತಹ ಹಲವಾರು ಸಿನಿಮಾಗಳು, ಓದಿದ ಪುಸ್ತಕಗಳು ಈಗಲೂ ನನ್ನ ನೆನಪಿನಿಂದ ಮಾಸಿಯೇ ಇಲ್ಲ.
ಕೆಲವು ವರ್ಷಗಳ ಹಿಂದೆ ನಾನೊಂದು ಸಿನಿಮಾ ನೋಡಿದ್ದೆ. ಆ ಸಿನಿಮಾದ ಹೆಸರು ‘ಪಿಂಜರ’. ಆವತ್ತು ಚಾಲ್ತಿಯಲ್ಲಿದ್ದ ನಟಿ ಊರ್ಮಿಳಾ ನಾಯಕಿಯಗಿ ಆ ಚಿತ್ರದಲ್ಲಿ ನಟಿಸಿದ್ದಳು.

ಮನೋಜ್ ವಾಜಪೇಯ್ ಆ ಚಿತ್ರದ ಪ್ರಮುಖ ಪಾತ್ರದಲ್ಲಿದ್ದ. ಪಂಜಾಬಿನ ಹಳ್ಳಿಯೊಂದರ ಸಂಪ್ರದಾಯ ಕುಟುಂಬದ ಹಿರಿಯ ಮಗಳು ನಾಯಕಿ. ಪಟ್ಟಣದಲ್ಲಿ ಓದುತ್ತಿರುವ ಸುಶಿಕ್ಷಿತ ಮನೆತನದ ಯುವಕನೊಂದಿಗೆ ಅವಳ ಮದುವೆ ನಿಶ್ಚಯವಾಗಿರುತ್ತದೆ. ಆತನ ತಂಗಿಯನ್ನು ನಾಯಕಿಯ ತಮ್ಮನಿಗೆ ಮದುವೆ ಮಾಡಲು ನಿರ್ಧರಿಸಿರುತ್ತಾರೆ. ನಾಯಕಿ ಭಾವಿ ಪತಿಯ ಕನಸು ಕಾಣತ್ತಿರುತ್ತಾಳೆ. ಅದೇ ಊರಿನಲ್ಲಿ ಯುವಕನೊಬ್ಬ ನಾಯಕಿಯನ್ನು ತುಂಬಾ ಇಷ್ಟ ಪಟ್ಟಿರುತ್ತಾನೆ. ಆದರೆ ನಾಯಕಿಗೆ ಅವನ ಮೇಲೆ ಮನಸ್ಸಿರುವುದಿಲ್ಲ. ಒಂದು ದಿನ ಆ ಯುವಕ ನಾಯಕಿಯನ್ನು ಹೊತ್ತು ಕೊಂಡು ಹೋಗಿ ಬಲವಂತವಾಗಿ ಮದುವೆಯಾಗಲು ಸಿದ್ದತೆ ನಡೆಸಿರುತ್ತಾನೆ. ಬಂಧನದಲ್ಲಿದ್ದ ನಾಯಕಿ ಅಲ್ಲಿಂದ ತಪ್ಪಿಸಿ ಕೊಂಡು ತನ್ನ ಮನೆಗೆ ಬರುತ್ತಾಳೆ. ಆದರೆ ಸಂಪ್ರದಾಯಸ್ಥ ಅವಳ ಹೆತ್ತವರು ಅವಳನ್ನು ಮನೆಗೆ ಸೇರಿಸುವುದಿಲ್ಲ. ಈಗಾಗಲೇ ಅವಳು ಮನೆ ಬಿಟ್ಟು ಹಲವಾರು ದಿನಗಳೇ ಕಳೆದು ಹೋಗಿವೆ,’ ನಾಯಿ ಮುಟ್ಟಿದ ಮಡಿಕೆಯಂತೆ ಈಗ ನೀನು, ನಿನ್ನನ್ನು ಮನೆಗೆ ಸೇರಿಸಿ ಕೊಂಡರೆ ನಿನ್ನ ತಂಗಿಯರಿಗೆ ಭವಿಷ್ಯವಿಲ್ಲ. ದಯವಿಟ್ಟು ಹೋರಟು ಹೋಗು’ ಅಂತ ಅವಳ ಹೆತ್ತ ತಾಯಿ ಕೈ ಮುಗಿದು ಬೇಡಿಕೊಳ್ಳುತ್ತಾಳೆ. ಅಲ್ಲಿಗೆ ತನ್ನ ಪಾಲಿಗೆ ತನ್ನ ಮನೆ ಬಾಗಿಲು ಮುಚ್ಚಿತೆಂದು ದುಃಖದಿಂದ ಸಾಯಲು ಹೋರಟಾಗ, ಅವಳ ಹಿಂದೆಯೇ ಬಂದಿದ್ದ ಅವಳನ್ನು ಮೆಚ್ಚಿದ್ದ ಯುವಕ ಸಾಯಲು ಬಿಡದೆ ಮನೆಗೆ ಕರೆದೊಯ್ದು ತನ್ನ ಧರ್ಮಕ್ಕೆ ಮತಾಂತರಿಸಿ ಮದುವೆಯಾಗುತ್ತಾನೆ. ಭಾರತ ಮತ್ತು ಪಾಕೀಸ್ತಾನ ವಿಭಜನೆಯಾದಾಗ ನಾಯಕಿಯನ್ನು ತನ್ನೊಂದಿಗೆ ಪಾಕಿಸ್ತಾನಕ್ಕೆ ಕರೆದೊಯ್ದ ಸುಖವಾಗಿ ಇರಿಸಿಕೊಳ್ಳುತ್ತಾನೆ.

ತನ್ನ ಬದುಕು ಹೀಗಾಗಿ ಹೋಯಿತಲ್ಲ ಅನ್ನೋ ನೋವು ಸದಾ ಅವಳನ್ನು ಕಾಡುತ್ತಿದ್ದರೂ ,ತನ್ನ ಹಣೆಬರಹವೇ ಹೀಗೀರುವಾಗ ಯಾರ‍್ಯೇನು ಮಾಡಲು ಸಾಧ್ಯ ಎಂದು ಕೊಂಡು ತನ್ನವರನ್ನೂ , ತನ್ನ ದೇಶವನ್ನು ಮರೆತು ಅವಳು ತನ್ನ ಗಂಡ ಮಕ್ಕಳು ಅಂತ ನೆಮ್ಮದಿಯಿಂದ ಇರುವಾಗಲೇ, ಮತ್ತೆ ಹಿಂದು ಮುಸ್ಲಿಂ ಗಲಾಟೆ ಶುರುವಾಗುತ್ತದೆ. ಆ ಸಂದರ್ಭದಲ್ಲಿ ಹಿಂದು ಯುವತಿಯೊಬ್ಬಳನ್ನು ಹೊತ್ತುಕೊಂಡು ಬಂದು ತನ್ನ ಮನೆಯ ಅಕ್ಕ ಪಕ್ಕದಲ್ಲಿ ಮುಚ್ಚಿಟ್ಟಿರುವ ವಿಷಯ ತಿಳಿದ ನಾಯಕಿ ಆ ಹುಡುಗಿಯನ್ನು ಕಾಪಾಡಿ ಗಂಡನ ಸಹಕಾರದಿಂದ ಅವಳನ್ನು ತನ್ನವರನ್ನು ಸೇರಿಸಲು ನೆರವಾಗುತ್ತಾಳೆ. ಅವಳು ಬೇರಾರು ಆಗಿರದೆ ತನ್ನ ಸಹೋದರನ ಹೆಂಡತಿ ಅಂದರೆ ನಾಯಕಿಜೊತೆ ನಿಶ್ಚಿತಾರ್ಥವಾಗಿದ್ದವನ ತಂಗಿ ಎಂದು ತಿಳಿದಾಗ ಒಂದೆಡೆ ಸಂತಸ , ಮತ್ತೊಂದೆಡೆ ವಿಶಾದ, ಒಂದೆಡೆ ನೋವು, ಈ ಭಾವಗಳ ಸಮ್ಮಿಶ್ರಣದಿಂದ ನಾಯಕಿ ಬಳಲಿ ಹೋಗುತ್ತಾಳೆ. ತನಗೊದಗಿದ ಗತಿ ತನ್ನ ನಾದಿನಿಗೆ ಒದಗಲಿಲ್ಲ ಅನ್ನೊ ಸಮಾಧಾನದಿಂದ ಸಹೋದರನಿಗೆ ಅವನ ಸತಿಯನ್ನು ಒಪ್ಪಿಸುತ್ತಾಳೆ. ಸಹೋದರಿ ಬದುಕಿದ್ದಾಳೋ, ಇಲ್ಲವೊ ಎಂಬುದನ್ನೇ ತಿಳಿಯದಿದ್ದ ಸಹೋದರ ಅಕ್ಕನನ್ನು ಅಲ್ಲಿ ಕಂಡು ಭಾವೋದ್ವೇಗಗೊಳಗಾಗುತ್ತಾನೆ . ಎಲ್ಲಾ ವಿಚಾರ ತಿಳಿದು ಸಹೋದರ ತಮ್ಮೊಂದಿಗೆ ಭಾರತಕ್ಕೆ ಬಂದು ಬಿಡಲು ಸಹೋದರಿಯನ್ನು ಒತ್ತಾಯಿಸುತ್ತಾನೆ. ಆದರೆ ಪ್ರೀತಿಯ ಗಂಡನನ್ನು, ಮಕ್ಕಳನ್ನು ಬಿಟ್ಟು ಬರಲು ಸಿದ್ದವಿಲ್ಲದ ನಾಯಕಿ ದುಃಖದಿಂದ ಮತ್ತು ವಿಷಾದದಿದಲೇ ವಿದಾಯ ಹೇಳುತ್ತಾಳೆ.

ಈ ಸಿನಿಮಾ ನನ್ನ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿತ್ತು. ಸಿನಿಮಾದ ಕಥೆ ತುಂಬಾ ಶಕ್ತಿಶಾಲಿಯಾಗಿತ್ತು. ನಾಯಕಿಯಾಗಿ ಊರ್ಮಿಳಾ ಅಸಹಾಯಕ ಹೆಣ್ಣಾಗಿ, ಬದುಕು ಬಂದಂತೆ ಸ್ವೀಕರಿಸ ಬೇಕು ಅನ್ನೋ ಮನೋಭಾವನೆಯಿಂದ ತನ್ನನ್ನು ಕದ್ದೊಯ್ದವನೊಂದಿಗೆ, ತನ್ನ ಕನಸುಗಳನ್ನು ನುಚ್ಚು ನೂರು ಮಾಡಿದವನೊಂದಿಗೆ. ತನ್ನನ್ನು ಮತಾಂತರ ಮಾಡಿದವನೊಂದಿಗೆ ,ತನ್ನನ್ನು ಬಲವಂತವಾಗಿ ಮದುವೆಯಾದವನೊಂದಿಗೆ, ತನ್ನ ಹೆತ್ತವರನ್ನು, ತನ್ನ ಒಡಹುಟ್ಟಿದವರನ್ನು ಶಾಶ್ವತವಾಗಿ ದೂರ ಮಾಡಿದವನೊಂದಿಗೆ ಮನದೊಳಗೆ ಯಾವ ದ್ವೇಷವನ್ನು, ತಿರಸ್ಕಾರವನ್ನೂ ಇಟ್ಟುಕೊಳ್ಳದೆ ಒಬ್ಬ ಒಳ್ಳೆಯ ಮಡದಿಯಾಗಿ .ಅವನ ಮಕ್ಕಳಿಗೆ ಪ್ರೀತಿಯ ತಾಯಿಯಾಗಿ ಮುಸ್ಲಿಂ ಮಹಿಳೆಯಾಗಿ ಬದಲಾಗಿ ಪರಿಪೂರ್ಣ ಹೆಣ್ಣಾಗಿ ಅದ್ಭುತ ಅಭಿನಯ ನೀಡಿದ್ದಾರೆ. ನಾಯಕಿಯ ಬದುಕಿನಲ್ಲಿ ಖಳನಯಕನಂತೆ ಬಂದರೂ, ನಂತರ ತನ್ನೇಲ್ಲ ಪ್ರೀತಿಯನ್ನು ತೋರಿ ಒಳ್ಳೆ ಗಂಡನಾಗಿ ಅವಳು ಮಾಡುವ ಎಲ್ಲಾ ಕೆಲಸಗಳಿಗೂ ಒತ್ತಾಸೆ ನೀಡುವ ಪತಿಯಾಗಿ, ಅದರಲ್ಲೂ ಅವಳ ಸಹೋದರ ತಮ್ಮೊಂದಿಗೆ ತಮ್ಮ ದೇಶಕ್ಕೆ ಬಂದು ಬಿಡುವಂತೆ ಬಲವಂತಿಸುತ್ತಿದ್ದಾಗ, ಎಲ್ಲಿ ತನ್ನ ಪ್ರಿಯ ಪತ್ನಿ ತನ್ನನ್ನು ತೊರೆದು ಹೋಗಿ ಬಿಡುವಳೊ ಎಂಬ ಆತಂಕದಿಂದ ಅಸಹಾಯಕತೆಯಿಂದ ನಿಲ್ಲುವ ಅಭಿನಯ ಹೃದಯಸ್ಪರ್ಶಿಯಾಗಿತ್ತು. ಹಾಗಾಗಿ ಆ ಸಿನಿಮಾ ಈಗಲೂ ಮನಸ್ಸಿನಲ್ಲಿ ನಿಂತು ಬಿಟ್ಟಿದೆ. ಇಂತಹ ಸಿನಿಮದ ಶಕ್ತಿಶಾಲಿ ಕಥೆ ಭಾರತದ ಹೆಸರಾಂತ ಲೇಖಕಿ ಅಮೃತ ಪ್ರೀತಮ್‌ರವರದ್ದು.


  • ಶೈಲಜಾ ಹಾಸನ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW