ಡಾ ಕೆ ಎನ್ ಲಾವಣ್ಯಪ್ರಭಾ ಅವರ ಅರ್ಥಪೂರ್ಣ ಕವನ ಸಂಕಲನವೇ “ನದಿ ಧ್ಯಾನದಲ್ಲಿದೆ”. ಈ ಕೃತಿಯ ಕುರಿತು ನವೀನ್ ಮಂಜುನಾಥ್ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ನದಿ ಧ್ಯಾನದಲ್ಲಿದೆ
ಲೇಖಕರು: ಡಾ ಕೆ ಎನ್ ಲಾವಣ್ಯಪ್ರಭಾ, ಮೈಸೂರು
ಪ್ರಕಾರ : ಕವನ
ಕಳೆದ ವಾರ ಅಂಚೆ ಮೂಲಕ ನನ್ನ ಕೈ ಸೇರಿದ ಕವನ ಸಂಕಲನದ ಪುಸ್ತಕ “ನದಿ ಧ್ಯಾನದಲ್ಲಿದೆ” ಒಮ್ಮೆಲೆ ಮುಖಪುಟವ ನೋಡಿ ಶೀರ್ಷಿಕೆ ಓದಿದಾಗ ನನ್ನೊಳಗೆ ಹೊಸ ಆಶ್ಚರ್ಯ..!? ಆ ಶೀರ್ಷಿಕೆ ಎಷ್ಟೊಂದು ಚೆಂದವಾಗಿದೆ. ವಾಹ್ಹ್..! ಸೂಪರ್ ಟೈಟಲ್ ಅನಿಸಿತು, ನದಿ ಧ್ಯಾನದಲ್ಲಿದೆ ಎಷ್ಟು ಚೆನ್ನಾಗಿದೆ ಶೀರ್ಷಿಕೆ, ಮನದೊಳಗೆ ಈ ಶೀರ್ಷಿಕೆಯ ಓದಿದಾಗ ಮನದೊಳಗೆ ಅನಿಸಿದ್ದು ಹೌದಲ್ವ…!? ನದಿ ಧ್ಯಾನದಲ್ಲಿದೆ ಈ ಪ್ರಕೃತಿ, ಮರ, ಗಿಡ, ಬಳ್ಳಿ, ಹೂವು, ಕಾಡು ಜಲಪಾತ ಬೆಟ್ಟ, ಗುಡ್ಡ ಎಲ್ಲ ಮೌನವಹಿಸಿ ಎಲ್ಲವು ಧ್ಯಾನದಲ್ಲಿದೆ, ಆದರೆ ಮನುಷ್ಯ ಮಾತ್ರ ತುಂಬ ಡಿಸ್ಟಬ್ ಆಗಿದ್ದಾನೆ, ಹೀಗೆ ಮನವು ಇಡೀ ಭೂಮಿಯನ್ನು ಒಂದು ಸುತ್ತು ಹಾಕಿಕೊಂಡು ಬಂದು ನಿಂತಂತೆ ಆಯಿತು. ನಿಜಕ್ಕು ನದಿ ಧ್ಯಾನದಲ್ಲಿದೆ ಈ ಶೀರ್ಷಿಕೆ ನನ್ನ ಮನವ ಎಳೆದು ತಂದು ಓದಲು ಪ್ರಾರಂಭಿಸಿತು.

ಕವಿತೆ ಶೀರ್ಷಿಕೆ “ಪ್ರಾರ್ಥನೆ”
ಹೊತ್ತಿ ಉರಿಯುವ ಸಂಕಷ್ಟದಲ್ಲೂ
ಒಳಗೊಂದು ತಣ್ಣೀರಿನ ನದಿ ಹರಿಸು
ಸುತ್ತಮುತ್ತಲಿನ ಜನ ಸೇತುವೆ ಕಟ್ಟಿಕೊಳ್ಳಲಿ,
ಪರಮಪಾಪಿಗಳ ಲೋಕದಲ್ಲಿ
ಒಳಗೊಂದು ಕೊಳಲನಿರಿಸು
ಸುತ್ತಲಿನ ಜನ ಪರಿಶುದ್ಧವಾಗಲಿ,
ಗೆದ್ದು ಬೀಗುವ ಹೊತ್ತಿನಲ್ಲೂ
ಒಳಗೊಂದು ಸುತ್ತಿಗೆ ಬಚ್ಚಿಡು
ಸುತ್ತಮುತ್ತಲಿನ ಜನ ಅಹಂಗೀಡಾಗದಿರಲಿ,
ಕ್ಷೋಭೆಗೀಡಾದ ಕತ್ತಲಲ್ಲೂ
ಒಳಗೊಂದು ಸವಿಗನಸನಿಡು
ಸುತ್ತಮುತ್ತಲಿನ ಜನ ಪ್ರಶಾಂತ ನಿದ್ರಿಸಲಿ,
ಸಾವಿನರಮನೆಯಲ್ಲೂ
ಒಳಗೊಂದು ಉಸಿರನ್ನಿಡು
ಸುತ್ತಮುತ್ತಲಿನ ಜನ ಮತ್ತೆ ಮತ್ತೆ ಬದುಕಲಿ,
ಮಧುರ ಕ್ಷಣಗಳಲ್ಲೂ ಕಠಿಣ ಕಾಲದಲ್ಲೂ
ನನ್ನೊಳಗೊಂದು ಪ್ರಾರ್ಥನೆ ಸದಾ ಇರಿಸು
ಸುತ್ತಮುತ್ತಲಿನ ಹೃದಯದೊಳಗೆ
ಎಲ್ಲಾ ಕಾಲಕ್ಕು ಚೈತನ್ಯ ಜಾಗೃತಗೊಳಿಸು.
ವರ್ತಮಾನ ಕಾಲಕ್ಕೆ ತುಂಬ ಆಪ್ತವಾಗಿದೆ ಈ ಕವಿತೆ ಮನುಷ್ಯ ಕಲಿಬೇಕು, ಮನುಷ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು, ಆದರೆ ಮನುಷ್ಯ ಒಳ್ಳೆಯದನ್ನು ಮಾಡೋಕೆ ಅವನು ಸಿದ್ದನಿಲ್ಲ ಇಲ್ಲಿ, ಮನುಷ್ಯ ಇನ್ನೊಬ್ಬರ ಭಾವನೆಗಳನ್ನು ಕೊಂದು ಬದುಕುವುದರಲ್ಲಿ ಹೆಚ್ಚು ಸುಖ ಕಂಡುಕೊಳ್ಳುತ್ತಿದ್ದಾನೆ, ಅದರಲ್ಲಿ ಅವನು ಆನಂದನ ಅನುಭವಿಸುತ್ತಿದ್ದಾನೆ. ಈ ಭೂಮಿ ಮೇಲೆ ಎಷ್ಟೊಂದು ಒಳ್ಳೆಯದು ಇದೆ ಅಂತ ಈ ಕವನ ಸಂಕಲನ ಪುಸ್ತಕ ಓದಿದರೆ ತಿಳಿಯುತ್ತೆ, ಇಂತಹ ಉತ್ತಮ ಕವಿತೆಗಳ ಅರ್ಥಪೂರ್ಣ ಸಾಲುಗಳು ಎಲ್ಲ ಕವಿತೆಗಳಲ್ಲೂ ಕಾಣಸಿಗುತ್ತವೆ ಹೇಳಲು ಹೊರಟರೆ ಇಡೀ ಪುಸ್ತಕದ ಕವಿತೆಯನ್ನೆ ನಾನು ಪ್ರಕಟಿಸಬೇಕಾಗುತ್ತದೆ. ಹಾಗಾಗಿ ಕವಿತೆಯ ಓದಿ ನೀತಿಯ ಅರಿತು ತಿಳಿದು ಬಾಳಿದರೆ ಇಂತಹ ಅಕ್ಷರಕ್ಕು ಒಂದು ಸಾರ್ಥಕತೆ ಸಿಗುತ್ತದೆ. ತುಂಬ ಕವಿತೆಗಳು ನನ್ನನ್ನು ತುಂಬ ಆವರಿಸಿದೆ ಎಲ್ಲವು ಇಷ್ಟವಾಗಿದೆ, ಇಂದು ಪ್ರಕಟಿಸಿದರೆ ಅ ಕವಿತೆಯನ್ನೂ ಹೇಳಬೇಕಿತ್ತು ಎಂದು ಅನಿಸುತ್ತದೆ, ಹಾಗಾಗಿ ಒಂದೆರಡು ಕವಿತೆ ಸಾಲುಗಳ ಹೇಳುತ್ತ ನನ್ನ ಬರವಣಿಗೆಯ ನಿಲ್ಲಿಸುತ್ತೇನೆ.

ಗುಲಾಬಿ ಗಿಡ
ಕೊನೆಯ ಸಾಲು
ಗುಲಾಬಿ ಗಿಡ ಬೆಳೆಯುವುದೆಂದರೆ
ಸುಮ್ಮನೇ ಅಲ್ಲ ನೋಡು
ಕುಸುರಿ ಕಲೆಯ ಸೂಕ್ಷ್ಮ ಧ್ಯಾನ ಗೊತ್ತಿದ್ದರೇ ಸೈ
ಅದಕ್ಕೆ ಹೇಲಕುತ್ತೇನೆ ಕೇಳು,
ಪ್ರೇಮವೆಂದರೆ ಏನೆಂದುಕೊಂಡೆ ಗೆಳೆಯಾ..?
ಬರೀ ಗುಲಾಬಿಯಾ..?
ಊಹೂಂ, ಇಡೀ ಗುಲಾಬಿಗಿಡ.
ನದಿ ಹರಿಯುತ್ತಲೇ ಇದೆ:-
ನಿಮ್ಮ ಸಂಶಯ, ವ್ಯಂಗ್ಯ, ತಿರಸ್ಕಾರದ
ಆಚೆಗೂ ನದಿ ಹರಿಯುತ್ತಲೇ ಇದೆ
ನಿರಂತರ ಶಾಂತ ಪ್ರಶಾಂತ ಪ್ರೇಮ ಚಿತ್ತ,
ನಿಮ್ಮನ್ನು ನಂಬಿಸುವ ಹುನ್ನಾರ ಕಿಂಚಿತ್ತೂ ಇಲ್ಲ
ನಂಬಿದವರ ಎದೆಯಿಂದ ಎದೆಗೆ
ಊರಿಂದ ಊರಿಗೆ ಕಾಲದಿಂದ ಕಾಲಕ್ಕೆ
ತನ್ನ ಪಾಡಿಗೆ ತಾನು ಹರಿಯುವ
ನದಿ ಧ್ಯಾನದಲ್ಲಿದೆ.
ನನಗೆ ಈ ಕವಿತೆಯ ಒಂದು ಸಾಲು ಸತ್ಯದ ಬಾಗಿಲು ತೆರೆಸಿದಂತೆ ಆಯಿತು
ಕವಿತೆ
ಬೆತ್ತಲಾಗದೆ ಬಯಲಿಲ್ಲ
“ಬಿಟ್ಟುಕೊಡುವುದೇ ಇಟ್ಟುಕೊಳ್ಳುವ ಮರ್ಮ”
ನಿಜಕಾವ್ಯದ ಸಾಲು
ದುಡುಕಿದರೆ ದಕ್ಕುವುದೇ ಕವಿತೆ..?
ಅರ್ಧಬೆಂದದ್ದು ಅಡುಗೆಯೇ ಹೇಳಿ..?
ಹೆಜ್ಜೆ ಜೊತೆಗೆಂದು ಹೆಜ್ಜೆ
ನಿಧಾನ ಹೊರಳಿ ಹುಡುಕಾಡಬೇಕು.
ಇಂತಹ ಅನೇಕ ಕವಿತೆಗಳು ಇಡೀ ಪುಸ್ತಕದ ತುಂಬ ತುಂಬಿಕೊಂಡ ಒಂದು ಅರ್ಥಪೂರ್ಣ ಕವನ ಸಂಕಲನವೇ “ನದಿ ಧ್ಯಾನದಲ್ಲಿದೆ”.
- ನವೀನ್ ಮಂಜುನಾಥ್
