ನಗುವಿಗೇಕೆ ಔತಣ ಎಂದು ನೀವೆಲ್ಲಾ ಹೇಳದಿರಿ, ನಗುವೇ ನಮ್ಮ ಜೀವ ಸಮಾನ… ಕವಿಯತ್ರಿ ಗೀತಾ ಜಿ ಹೆಗಡೆ ಕಲ್ಮನೆ ಅವರ ನಗುವಿನ ಕುರಿತು ಬರೆದ ಸುಂದರ ಕವನವನ್ನು ತಪ್ಪದೆ ಓದಿ…
ನಗು ಅಂದರೆ ಹೀಗಲ್ಲಾ
ಕಣ್ಣು ತುಂಬಿ ಬರಬೇಕು
ಗಿಕಿಗಿಕಿ ನಗುವೆಲ್ಲ
ಅಕ್ಕಪಕ್ಕವೂ ಹಬ್ಬಿ
ಎಲ್ಲರ ಮನದಲ್ಲಿ
ಗುಲ್ಲೆಬ್ಬಿಸಿ ನುಗ್ಗಬೇಕು.
ನಗು ಎಂದರೆ
ಹೀಗಲ್ಲವೇ ಅಲ್ಲಾ
ನಗುವಿಗೇಕೆ ಔತಣ
ಎಂದು ನೀವೆಲ್ಲಾ ಹೇಳದಿರಿ
ನಗುವೇ ನಮ್ಮ ಜೀವ ಸಮಾನ.
ಎದೆಯ ತುಂಬ ನಗು
ಹೃದಯವಿಲ್ಲ ಭಾರ
ಜೀವನೋತ್ಸಾಹ ಚೈತನ್ಯ
ಮತ್ತದೇ ನಗು ಬಾರಿ ಬಾರಿ
ಪವಡಿಸಲಿ ಕಾಲುಚಾಚಿ.
ನಗುವಿನಾಂತರದ ನಗು
ಧುಮ್ಮಿಕ್ಕುವ ಪರಿಗೆ
ಬಿದ್ದೂ ಬಿದ್ದು ನಕ್ಕುಬಿಡಿ
ಹೊಟ್ಟೆ ಬಿರಿಯುವಂತೆ
ಉಂಡಷ್ಟು ತೇಗಿ.
ನಗು ಜೀವ, ಭಾವ, ಜಗತ್ತು
ನಗುವೇ ಜೀವದ ಸೆಲೆ
ಬೆಸುಗೆ ಆದರೆಷ್ಟು ಚೆನ್ನ
ಆಗ ಬದುಕೊಂದು
ಸುಂದರ ವೃಂದಾವನ.
- ಗೀತಾ ಜಿ ಹೆಗಡೆ ಕಲ್ಮನೆ
