ಬೇವು ಬೆಲ್ಲವಂತೆ, ನೋವುಗಳೆಲ್ಲ ಬೇವಂತೆ, ನಲಿವುಗಳೆಲ್ಲ ಸವಿಯಾದ ಬೆಲ್ಲವಂತೆ…ಕವಿ ಜ್ಯೋತಿ ಕುಮಾರ್.ಎಂ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಜ್ಯೋತಿ ಕುಮಾರ್. ಎಂ (ಜೆ.ಕೆ) ಇವರು ಓದಿದ್ದು ಎಮ್ ಎಸ್ಸಿ ಎಮ್ ಇಡಿ. ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು. ಸದ್ಯ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಗುತ್ತಿದುರ್ಗದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಹವ್ಯಾಸಿ ಬರಹಗಾರರಾಗಿದ್ದು,ಪ್ರಸ್ತುತ ಇವರ ಬರಹಗಳು ನಾಡಿನ ಹೆಸರಾಂತ ಪತ್ರಿಕೆಗಳಾದ ಹಾಯ್ ಬೆಂಗಳೂರು, ಮಂಗಳ ನಿಮ್ಮೆಲ್ಲರ ಮಾನಸ, ಜೀವನಾಡಿ ಪತ್ರಿಕೆ, ಬುಕ್ ಬ್ರಹ್ಮ, ಸಂಗಾತಿ, ಕೆಂಡಸಂಪಿಗೆ, ಮಿಂಚುಳ್ಳಿ, ಪಂಜು ಮ್ಯಾಗಝೀನ್, ಪ್ರತಿಲಿಪಿ, ಮಾಮ್ಸ್ ಪ್ರೆಸ್ಸೋ ಇವುಗಳಲ್ಲಿ ಪ್ರಕಟವಾಗಿವೆ.
ಯುಗಾದಿಯಂತೆ,
ಯುಗದ ಆದಿಯಂತೆ
ನವ ಸಂವತ್ಸರದ
ಆರಂಭವಂತೆ,
ಹೊಸದೆ ಪಂಚಾಗವಂತೆ,
ನವ ನವೀನ ವಸ್ತ್ರವಂತೆ.
ಬೇವು ಬೆಲ್ಲವಂತೆ,
ನೋವುಗಳೆಲ್ಲ
ಬೇವಂತೆ,
ನಲಿವುಗಳೆಲ್ಲ
ಸವಿಯಾದ ಬೆಲ್ಲವಂತೆ.
ಎಣ್ಣೆ ಸ್ನಾನವಂತೆ,
ಮೋಜಿಗಾಗಿಯೆ
ಹಲವು ಆಟಗಳಂತೆ.
ತೇರಿಗೆ ಕಾತರಿಸುವ
ಮಕ್ಕಳಂತೆ,
ಗಿಡ ಮರ ಬಳ್ಳಿಯಲಿ
ಹೊಸ ಚಿಗುರಂತೆ,
ಘಮಲ ಹೂವಂತೆ.
ಕಂಠವ ಬಿಗಿದಿದ್ದ
ಕೋಗಿಲೆಯ ಕೊರಳಲಿ
ಹೊಸ ಹಾಡಂತೆ,
ಸವಿ ಗಾನವಂತೆ.
ತಳಿರಂತೆ
ತೋರಣವಂತೆ,
ಪ್ರಕೃತಿಯೆ
ಬಸಿರಿಗಾಗಿ
ಕಾದ ಹೆಣ್ಣಂತೆ,
ಸಿಂಗಾರಗೊಂಡಿರುವಳಂತೆ.
ಕಾಮನ
ಬಿಲ್ಲೇರಿ
ಮಳೆರಾಯ
ಬರುವನಂತೆ.
ಸವಿ ಪಾಯಸವು
ಹೋಳಿಗೆಯಂತೆ.
ಪಶ್ಚಿಮಾಗಸದ
ಎಳೆಯ
ಚಂದಿರನ
ದರ್ಶನ
ಭಾಗ್ಯವಂತೆ.
ರಾಶಿ ಫಲದ
ಪಠಣವಂತೆ,
ಶ್ರವಣವಂತೆ.
ಇಲ್ಲಿಂದ
ಎಲ್ಲವೂ ಹೊಸದಂತೆ,
ಹಳೆಯ ಕಷ್ಟ
ಕಳೆಯುವುದಂತೆ.
ಹೊಸದೆ
ಒಲವು
ಒಲಿಯುವುದಂತೆ,
ಎದೆಯ
ಹಾಡಾಗುವುದಂತೆ.
- ಜ್ಯೋತಿ ಕುಮಾರ್.ಎಂ (ಜೆ.ಕೆ.).
