‘ಕವಿರಾಜ ಮಾರ್ಗದಲ್ಲಿ’ ಪುಸ್ತಕದ ಕುರಿತು

ಕವಿರಾಜ ಅವರ ‘ಕವಿರಾಜ ಮಾರ್ಗದಲ್ಲಿ’ ಪುಸ್ತಕವನ್ನು ಓದಿದರೆ ಬಣ್ಣದ ಲೋಕದ ಮತ್ತೊಂದು ಮುಖದ ಪರಿಚಯವಾಗುತ್ತದೆ. ಈ ಕೃತಿಯ ಕುರಿತು ಖ್ಯಾತ ಸಿನಿ ಪತ್ರಕರ್ತರಾದ ಗಣೇಶ ಕಾಸರಗೋಡು ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಎಲ್ಲಿಂದ ಶುರು ಮಾಡಲಿ ಎನ್ನುವ ಕನ್ಫ್ಯೂಷನ್ ನನ್ನದು. ‘ಕವಿರಾಜ ಮಾರ್ಗದಲ್ಲಿ’ ಪುಸ್ತಕದ ಎಲ್ಲಾ ಅಧ್ಯಾಯಗಳನ್ನು ಓದಿ ಅನಿಸಿದ ಅನಿಸಿಕೆಗೆ ಅಕ್ಷರ ರೂಪ ಕೊಡಲು ಕೂತಿದ್ದೇನೆ.

ಪುಸ್ತಕ : ಕವಿರಾಜ ಮಾರ್ಗದಲ್ಲಿ
ಲೇಖಕರು : ಕವಿರಾಜ್
ಪ್ರಕಾಶನ : ಹರಿವು ಬುಕ್ಸ್ 

ಯಾವುದೇ ಕಾರಣಕ್ಕೂ ಪುಸ್ತಕ ಒಳಗೊಂಡ ವಿವರಗಳಿಗಿಂತ ಈ ನನ್ನ ಮುನ್ನುಡಿ ಅಥವಾ ಹಿತನುಡಿ ಕ್ವಾಲಿಟಿಯಲ್ಲಿ ಕಮ್ಮಿಯಾಗಬಾರದೆನ್ನುವ ಎಚ್ಚರಿಕೆಯನ್ನಿಟ್ಟುಕೊಂಡರೂ ತೂಕದಲ್ಲಿ ಕವಿರಾಜ್ ಅವರೇ ಹೆಚ್ಚು ಎನ್ನುವ ಅನಿಸಿಕೆ ನನ್ನದು. ಇರಲಿ, ಇಲ್ಲಿರುವ ಅಷ್ಟೂ ಅಧ್ಯಾಯಗಳು ಹೃದಯದಿಂದ ಬಸಿದ ಕಜ್ಜಾಯ! ಒಂದಕ್ಕಿಂತ ಒಂದು ಮಿಗಿಲು. ಯಾವುದು ಹೆಚ್ಚು ಯಾವುದು ಕಮ್ಮಿ ಎಂಬುದನ್ನು ವಿಂಗಡಿಸುವುದೇ ಕಷ್ಟಕರ ಕೆಲಸ.

ಅಷ್ಟೊಂದು ಪರಿಪಕ್ವ ನಳಪಾಕ! ಓದುತ್ತಾ ಹೋದಂತೆ ಒಂದು ಹಂತದಲ್ಲಿ ನಾನು ಕವಿರಾಜ್ ಅವರಿಗೆ ಹೀಗೆಂದು ಮೆಸೇಜ್ ಮಾಡಿದೆ : ‘ಒಟ್ಟಿನಲ್ಲಿ ಇದು ಸಿನಿಮಾ ಕಮೋಡಿಟಿ ಕವಿ. ಇಲ್ಲಿ ಎಲ್ಲವೂ ಇವೆ. ಸೆಂಟಿಮೆಂಟ್, ವಿಷಾದ, ಕಾಮಿಡಿ, ಹತಾಶೆ…ವಾಹ್. ಏನುಂಟು, ಏನಿಲ್ಲ? ಭರ್ಜರಿ ಕಮರ್ಷಿಯಲ್ ಸಿನಿಮಾ ಆಗಬಹುದಾದ ಅವಕಾಶ ಈ ಪುಸ್ತಕಕ್ಕಿದೆ. ಯೋಚಿಸಿ ನೋಡಿ, ಯಾವುದೋ ‘ಬುಲ್ ಬುಲ್’ ಯಶಸ್ವೀ ಸಿನಿಮಾ ಆಗಬಹುದಾದರೆ ಇದೊಂದು ರೋಚಕ ಸಿನಿಮಾ ಆಗುವುದರಲ್ಲಿ ಅನುಮಾನವಿಲ್ಲ. ಅರ್ಧ ಓದಿ ಈ ಅಭಿಪ್ರಾಯವನ್ನು ನಿಮ್ಮ ಮುಂದಿಡುತ್ತಿದ್ದೇನೆ…ಸ್ವೀಕರಿಸಿ ಕವಿ…’ – ಇದಕ್ಕೆ ಕವಿರಾಜ್ ಉತ್ತರ : ‘ಸಿನಿಮಾ ಆಗ್ಬಹುದು ಅಂತ ನಂಗೂ ಅನ್ನಿಸ್ತು , ಎಲ್ಲಾ ಘಟನೆಗಳನ್ನು ಒಂದು ಕಥೆಯಾಗಿ ತರೋ ಸವಾಲಿದೆ…’ – ಈ ಸವಾಲನ್ನು ಮೀರಿ ಚಿತ್ರಕಥೆ ಹೆಣೆಯುವ ತಾಕತ್ತು ಕವಿರಾಜ್ ಅವರಿಗಿದೆ ಎಂಬುದನ್ನು ಶೃತಪಡಿಸುತ್ತಾ…

ಒಟ್ಟು 30 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಕೆಲವೊಮ್ಮೆ ಅದೊಂದು ಭೋರ್ಗರೆವ ಜಲಪಾತ, ಮತ್ತೆ ಕೆಲವೊಮ್ಮೆ ಶಾಂತವಾಗಿ ಹರಿವ ಸಾಗರ, ಇನ್ನೂ ಕೆಲವೊಮ್ಮೆ ಅಚ್ಚರಿಗೊಳಿಸುವ ತಿಳಿನೀರ ಕೊಳ! ಉದಾಹರಣೆಗೆ ‘ಎನ್ಕೌಂಟರ್ ವಿದ್ ಮುತ್ತಪ್ಪ ರೈ’ ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ. ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇ ಬೇಕು. ‘ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ’ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ.

‘ಸಾಹಸಸಿಂಹನ ಸನ್ನಿಧಿಯಲ್ಲಿ’ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. ‘ಈ ಮನುಷ್ಯನನ್ನೇಕೆ ದೇವತಾ ಮನುಷ್ಯನನ್ನೋದು?’ ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಆಂಗಲ್’ನಲ್ಲಿ. ‘ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ’ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ…ಅದೊಂದು ಸಸ್ಪೆನ್ಸ್. ಹಾಗೆಯೇ ‘ಸಲಾಂ ಯಶ್ ಭಾಯಿ’, ‘ರಷ್ಮಿಕಾ ಕೃಷ್ಮಿಕಾ ಆಗುವ ಮುನ್ನ’…ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು!

ಕಂಠೀರವ ಸ್ಟುಡಿಯೋ ಯಾವುದು, ಕಂಠೀರವ ಸ್ಟೇಡಿಯಂ ಯಾವುದೆಂದೇ ತಿಳಿಯದೇ ಬೆಂಗಳೂರಿಗೆ ಕಾಲಿಟ್ಟ ಕವಿರಾಜ್ ಇಡಿಯ ಕನ್ನಡ ಚಿತ್ರರಂಗವೇ ಬೆರಗುಗೊಳ್ಳುವಂಥಾ ಗೀತರಚನಕಾರರಾಗಿ ಬೆಳೆಯಬೇಕಿದ್ದರೆ ಅವರೊಳಗಿನ ಧೀಶಕ್ತಿಗೆ ತಲೆ ಬಾಗಲೇ ಬೇಕು. ಬದುಕಿನ ಈ ಪಯಣದಲ್ಲಿ ಎಡವಿದ್ದೆಷ್ಟೋ, ಬಿದ್ದದ್ದೆಷ್ಟೋ, ಎದ್ದದ್ದೆಷ್ಟೋ…ಅವರಿಗೆ ಮಾತ್ರ ಗೊತ್ತು. ಅವುಗಳನ್ನೆಲ್ಲಾ ಒಟ್ಟು ಸೇರಿಸಿ ಘಟನೆಗಳ ಮೂಲಕ ಸಿನಿಮೀಯ ರೀತಿಯಲ್ಲಿ ಹೇಳುವ ಪ್ರಯತ್ನ ಇವರದ್ದು. ಇದರ ಹಿಂದಿನ ಶ್ರಮ, ಶ್ರದ್ಧೆಯನ್ನು ನೀವು ಗಮನಿಸಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದು ಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ.


ನಾನೊಮ್ಮೆ ಶಿವಾನಂದ ಸರ್ಕಲ್ ಬಳಿಯ ಜನಾರ್ಧನ ಹೋಟೆಲಿಗೆ ಹೋಗಿ ಖ್ಯಾತ ಚಿತ್ರ ಸಾಹಿತಿ ಚಿ|ಉದಯಶಂಕರ್ ಅವರನ್ನು ಸಂದರ್ಶಿಸಿದಾಗ ಅವರು ತಮ್ಮ ಹಾಸಿಗೆ ದಿಂಬಿನಡಿ ಅಡಗಿಸಿಟ್ಟಿರುವ ಬೌನ್ಸ್ ಆದ ಚೆಕ್ಕು ಗಳನ್ನು ತೋರಿಸಿ ವಿಷಾದ ವ್ಯಕ್ತಪಡಿಸಿದ್ದನ್ನು ಮರೆಯಲು ಸಾಧ್ಯವೇ? ಆದರೆ ಪುಣ್ಯಕ್ಕೆ ಇಂಥಾ ಅನುಭವ ಕವಿರಾಜ್ ಅವರಿಗೆ ಆಗಿರಲಿಕ್ಕಿಲ್ಲ ಎಂದು ಭಾವಿಸಿದ್ದೇನೆ. ಆ ಕಾಲದ ಚಿತ್ರ ಸಾಹಿತಿಗಳು ಓಡಾಡಲು ಆಟೋರಿಕ್ಷಾವನ್ನು ಬಳಸುತ್ತಿದ್ದುದನ್ನು ಕಣ್ಣಾರೆ ಕಂಡವನು ನಾನು. ಈಗ ಕಾಲ ಬದಲಾಗಿದೆ. ಹೆಚ್ಚಿನ ಚಿತ್ರ ಸಾಹಿತಿಗಳ ಬಳಿ ಕಾರುಗಳಿವೆ. ಕವಿರಾಜ್ ಕೂಡಾ ಕಾರಿನಲ್ಲೇ ಓಡಾಡುವ ಚಿತ್ರ ಸಾಹಿತಿ! ಈ ಮಟ್ಟಕ್ಕೆ ಬರಲು ಅವರು ಪಟ್ಟ ಶ್ರಮವನ್ನು ಕೂಡಾ ಈ ಲೇಖನ ಮಾಲೆಯಲ್ಲಿ ಸೂಚ್ಯವಾಗಿ ಬರೆದಿದ್ದಾರೆ.

ಇವೆಲ್ಲದರ ಜತೆಗೆ ಕವಿರಾಜ್ ಬರೆದ ಟಾಪ್ 10 ಗೀತೆಗಳ ದಾಖಲೆಯೂ ಇದೆ. ಬಣ್ಣದ ಆಕರ್ಷಕ ನೆನಪಿನ ಆಲ್ಬಂ ನಿಜಕ್ಕೂ ಒಂದು ಬೋನಸ್ ಕೊಡುಗೆ. ಒಟ್ಟಿನಲ್ಲಿ ಈ ಪುಸ್ತಕವನ್ನು ಓದಿದರೆ ಬಣ್ಣದ ಲೋಕದ ಮತ್ತೊಂದು ಮುಖದ ಪರಿಚಯದ ಜತೆ ಆರಾಮವಾದ ಉಲ್ಲಾಸಕರ ಸಿನಿಮಾ ಜರ್ನಿ ಮಾಡಿದಂತೆ. ಇಷ್ಟರಲ್ಲೇ ಮುಗಿಯುವುದಿಲ್ಲ, ಕವಿರಾಜ್ ಅವರ ಮತ್ತಷ್ಟು, ಮಗದಷ್ಟು ಅನುಭವಗಳ ಮೂಟೆ ಓಪನ್ ಆಗುವ ಎರಡನೇ, ಮೂರನೇ ಭಾಗ ಕಣ್ಮುಂದೆ ಬರುತ್ತದೆ. ಇಂಥಾ ಆಸಕ್ತಿಕರ ಪುಸ್ತಕಗಳ ಭರಪೂರ ಅಧ್ಯಾಯಗಳನ್ನು ಓದಿ ಸವಿಯಲು ನಾನಂತೂ ಈಗಲೇ ರೆಡಿಯಾಗಿದ್ದೇನೆ, ನೀವೂ ರೆಡಿಯಾಗಿ ಬಿಡಿ…


  • ಗಣೇಶ ಕಾಸರಗೋಡು – ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading