ಕಾಡಿಲ್ಲದೇ ನಾಡಿಲ್ಲ. ಭೂಭಾಗದಲ್ಲಿರುವ ವಿಸ್ಮಯಗಳಲ್ಲಿ ದಟ್ಟ ಕಾನನವೂ, ಅದರಲ್ಲಿನ ಅಸಂಖ್ಯ ಜೀವ ಸಂಕುಲಗಳೂ ಸೇರಿವೆ. ಮಾನವ ಜೀವಿ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಆದರೆ ಪ್ರಕೃತಿ ಮತ್ತು ಜೀವ ಜಗತ್ತಿನ ಜೊತೆ ಹೊಂದಿಕೊಂಡು ಬದುಕುವುದರಲ್ಲಿ ಮಾನವನ ಒಳಿತು ಅಡಗಿದೆ ಗಿರಿಮನೆ ಶ್ಯಾಮ ರಾವ್ ಅವರು ‘ಕಾಡು ತಿಳಿಸಿದ ಸತ್ಯಗಳು’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಕಾಡು ತಿಳಿಸಿದ ಸತ್ಯಗಳು.
ಲೇಖಕರು: ಗಿರಿಮನೆ ಶ್ಯಾಮ ರಾವ್.
ಗಿರಿಮನೆ ಪ್ರಕಾಶನ ಸಕಲೇಶಪುರ.
ಮುದ್ರಣದ ವರ್ಷ: ೨೦೨೦ & ೨೦೨೧.
ಪುಟ:೨೨೪.
ಬೆಲೆ: ರೂ. ೨೦೦.
ಈ ಕಾದಂಬರಿಯ ಲೇಖಕರಾದ ಗಿರಿಮನೆ ಶ್ಯಾಮರಾವ್ ಅವರು ಮಲೆನಾಡಿನ ರೋಚಕ ಕಥೆಗಳು ಎಂಬ ಹೆಸರಲ್ಲಿ ಬರೆದ ಬಹಳಷ್ಟು ವೈಚಾರಿಕ ಕಾದಂಬರಿಗಳಲ್ಲಿ ಇದು ಭಾಗ-೧೨ ನೆಯದಾಗಿದೆ.
ಶ್ರೀವತ್ಸ ಒಬ್ಬ ಬರಹಗಾರ. ಏಕತಾನತೆಯ ದಿನಗಳ ಬದಲಾವಣೆಗಾಗಿ ಸ್ವಲ್ಪ ಕಾಲ ಕಾಡಲ್ಲಿ ದಿನ ಕಳೆಯಲು ಯೋಚಿಸಿದಾಗ ಅವನ ಪತ್ನಿ ವಸುಧಾಳಿಗೆ ಕಾಡೆಂದರೆ ಭಯ ಕಾಡಿದರೂ ತಾನೂ ಪತಿಯೊಂದಿಗೆ ಹೊರಟಿದ್ದಳು. ಅವರಿಬ್ಬರೂ ಮಗಳು ಚಿತ್ರಾಳನ್ನು ಅಜ್ಜಿಯ ಬಳಿ ಬಿಟ್ಟು, ಪ್ರಕೃತಿಯೊಂದಿಗೆ ಮಾನವ ಸಂಬಂಧದ ಬದುಕನ್ನು ಗಮನಿಸುತ್ತಾ, ಅನ್ವೇಷಣೆಗೆ ಮುಂದಾಗಿದ್ದರು.

ಮೊದಲು ಕಾಫೀ ತೋಟದ ಮಾಲೀಕನಾದ ಸ್ನೇಹಿತ ಸುಂದರನನ್ನು ಭೇಟಿಯಾಗಿ ಈ ಬಗ್ಗೆ ಹೇಳಿದಾಗ…. ಅವನು ಕಾಡಿನ ಬಗ್ಗೆ ಮಾಹಿತಿಯುಳ್ಳ ತನ್ನ ಮನೆಯ ಆಳು
‘ಕಾಡುಸಿದ್ಧ’ ಎಂಬಾತನನ್ನು ಅವರ ಸಹಾಯಕನನ್ನಾಗಿ ಕಳಿಸಿದ್ದ. ಕಾರಿನಲ್ಲಿ ಅಗತ್ಯ ಸಲಕರಣೆಗಳನ್ನು ತುಂಬಿಸಿ ಕೊಂಡು ಅವರು ಶಿರಸಿಯ ಬಳಿಯ ‘ಯಾಣ’ ಕ್ಕೆ ಬರುತ್ತಾರೆ.
ದಟ್ಟ ಅಡವಿಯಲ್ಲಿ ಲಕ್ಷಾಂತರ ಕಲ್ಲುಗಳಿಂದ ಆವೃತವಾಗಿ ಪ್ರಾಕೃತಿಕವಾಗಿಯೇ ನಿರ್ಮಿತವಾದ ಆ ಬೆಟ್ಟ ಅಲ್ಲಿರುವ ಶಿವನ ದೇವಾಲಯ, ಅಲ್ಲಿ ಭಕ್ತಿಯ ಪರಾಕಾಷ್ಠೆ ತಲುಪಿದ ಜನರ ಮೂಢತೆ ಇವುಗಳ ಬಗ್ಗೆ ಚರ್ಚಿಸುತ್ತಾ, ಅಂದು ಅಲ್ಲಿಯೇ ವಾಸ್ತವ್ಯ ಮಾಡುತ್ತಾರೆ. ಧರ್ಮಸ್ಥಳದ ಹತ್ತಿರವಿರುವ ಮಂಗಳೂರು ಸೀಮೆಗೆ ಹತ್ತಿರವಿರುವ ಪಶ್ಚಿಮ ಘಟ್ಟದಲ್ಲಿ ಕಲ್ಪನೆಗೂ ಮೀರಿದ ಕೀಟ ಹಾಗೂ ಜೀವಿಗಳಿವೆ. ಮಳೆ ಸುರಿದಂತೆ ಸುರಿಯುವ ಮಂಜು, ಹಕ್ಕಿಗಳ ಕಲರವ ಹರಿವ ಹಳ್ಳ ಇವೆಲ್ಲಾ ಸುಂದರ ದೃಶ್ಯಗಳನ್ನು ಕಣ್ತುಂಬಿ ಕೊಳ್ಳುತ್ತಾ, ಸಿದ್ಧನೊಂದಿಗೆ ಶ್ರೀವತ್ಸ ಹೆಜ್ಜೆ ಹಾಕುತ್ತಿದ್ದರೆ, ವಸುಧಾ ಅವರನ್ನು ಹಿಂಬಾಲಿಸುತ್ತಿದ್ದಳು.
ಸಮಯವನ್ನು ಕರಾರುವಕ್ಕಾಗಿ ತಿಳಿಸುವ ಕೆಲವು ಪಕ್ಷಿಗಳನ್ನು ನೋಡುತ್ತಾ ಬದುಕಲು ಬೇಕಾದ ಸಾಮಾನ್ಯ ಜ್ಞಾನವನ್ನು ಭಾಗವಂತನೇ ಅವಕ್ಕೆ ಕರುಣಿಸಿದ್ದಾನೆ ಎಂದು ಮಾತಾಡಿ ಕೊಂಡರು. ಹಾದಿಯಲ್ಲಿ ಹೊಟ್ಟೆಪಾಡಿಗೆ ಬೇಕಾದ ಹಣಕ್ಕಾಗಿ ತಾನು ಜಿಂಕೆ ಕೊಂಬು, ಚರ್ಮ, ಬೆತ್ತ, ಸತ್ತ ಆನೆದಂತ, ಕೂದಲು, ನವಿಲು ಗರಿ, ಜೇನು ಮುಂತಾದವುಗಳಿಗಾಗಿ ಹತ್ತಾರು ಬಾರಿ ಕಾಡಿಗೆ ಬಂದ ಸುದ್ದಿಯನ್ನು ರೋಚಕವಾಗಿ ಸಿದ್ಧ ಅವರಿಗೆ ಬಿತ್ತರಿಸುತ್ತಿದ್ದ.
ದಾರಿಯಲ್ಲಿ ಕೊಡಗು ಮೂಲದ ಗೆಳತಿ ಅನಿತಾಳ ನೆನಪಾಗಿ ಅರಣ್ಯದ ಮಧ್ಯೆ ಇರುವ ಅವರ ಮನೆಗೆ ಹೋಗುತ್ತಾರೆ. ಅನಿತಾಳ ಗಂಡ ಸೋಮಯ್ಯ ಕಾಡು ಪ್ರಾಣಿಗಳು, ಮದ ಬಂದು ಹುಚ್ಚಾಗಿ ವರ್ತಿಸುವ ಆನೆಗಳು ತೋಟಕ್ಕೆ ಹಾವಳಿ ಮಾಡುವುದು,ಹೆಚ್ಚು ತಿನ್ನುವ ಆನೆಗಳಿಗೆ ದಿನವೊಂದಕ್ಕೆ ಮುನ್ನೂರು ಕೆ.ಜಿ ಹೊಟ್ಟೆಗೆ ಬೇಕು, ಅಲ್ಲಿ ಕಳ್ಳ ಭಟ್ಟಿ ಕಾಸುವ ಮನುಷ್ಯರು ಆನೆಗೂ ಅದರ ಚಟ ಹಿಡಿಸಿ, ತಮ್ಮ ಜೊತೆ ಅದರ ಬದುಕನ್ನೂ ಹಾಳು ಮಾಡುತ್ತಾರೆ ಎನ್ನುತ್ತಾರೆ. ಬೆಟ್ಟದ ಮೇಲೆ ಹುಟ್ಟುವ ಕಣಿವೆ ಹಳ್ಳದ ನೀರಿನ ಬಗ್ಗೆ ಹೀಗೆ ಇನ್ನಷ್ಟು ಮಾಹಿತಿಗಳನ್ನು ಅವರಿಗೆ ತಿಳಿಸಿದಾಗ…ಕೇಳಿ ಆಶ್ಚರ್ಯವಾಗಿತ್ತು.

ಉದ್ದೇಶ ಪೂರ್ವಕವಾಗಿ ಯಾವ ಪ್ರಾಣಿಯೂ ತೊಂದರೆ ಮಾಡುವುದಿಲ್ಲ. ಮನುಷ್ಯ ಅವರಿಗೆ ಕೋಪ ಬರುವಂತೆ ಮಾಡಿದರೆ ಮಾತ್ರ ಅವು ತಿರುಗಿ ಬೀಳುತ್ತವೆ. ನಿಸರ್ಗದೊಡನೆ ಜೀವ ಸಂಕುಲಗಳು ಹೊಂದಿ ಕೊಂಡ ರೀತಿ, ಸಸ್ಯ ಮರ ಗಿಡಗಳು ಹಾಗೂ ಸಕಲ ಜೀವರಾಶಿಯ ವಂಶಾಭಿವೃದ್ಧಿ ಇವೆಲ್ಲದರ ಜೊತೆ ಮಲೇರಿಯಾ ಕಾಟದಿಂದ ಅಂದಿನ ಕಾಲದ ಜನರು ಕಾಡಲ್ಲೂ ಕಟ್ಟಿದ ಮಾಲೇರಮ್ಮನ ಗುಡಿಯ ಬಗ್ಗೆ ಕರಿಯ ತಿಳಿಸುತ್ತಾನೆ.
ಆಗ ಅಜ್ಞಾನವೇ ಭಯಕ್ಕೆ ಕಾರಣ. ಜನರ ಮೂಢನಂಬಿಕೆಗಳ ವಿಧಾನ ಬೇರೆ ರೀತಿಯದಾಗಿದ್ದರೂ ಇಂದಿಗೂ ಅದು ಕಡಿಮೆಯಾಗಿಲ್ಲ ಎಂದು ಶ್ರೀವತ್ಸನಿಗೆ ಅನಿಸುತ್ತದೆ. ಪೂಜೆ ಎಂದರೆ ಸತ್ಕಾರ. ಗಾಳಿ- ನೀರು ಬೆಂಕಿ ಆಕಾಶಗಳನ್ನು ನಾವು ಸುಸ್ಥಿತಿಯಲ್ಲಿಟ್ಟರೆ ಅದಕ್ಕಿಂತ ದೊಡ್ಡ ಪೂಜೆ ಬೇರೊಂದಿಲ್ಲ. ಪ್ರಕೃತಿ ಮಳೆಯ ಮೂಲಕ ತನ್ನನ್ನು ತಾನೇ ಶುದ್ಧೀಕರಿಸಿ ಕೊಳ್ಳುತ್ತದೆ. ಕಾಡಿನ ಜೊತೆಗೆ ಪೂರಕವಾಗಿ ಬದುಕಿದರೆ ಆ ಸಮತೋಲನದಲ್ಲಿ ಸುಖವಿದೆ. ಎನ್ನುವ ವಿಚಾರವಂತಿಕೆ ಎಲ್ಲರಲ್ಲೂ ಬೆಳೆಯ ಬೇಕಿದೆ. ಎಂಬ ಶ್ರೀವತ್ಸನ ಅಭಿಪ್ರಾಯ ಇಲ್ಲಿ ಎಲ್ಲರದ್ದೂ ಆಗಬೇಕು.
ವೈಜ್ಞಾನಿಕತೆ ಹಾಗೂ ಅಜ್ಞಾನ ಹೀಗೆ ಎಲ್ಲಾ ಸಮಸ್ಯೆಗಳ ವಿದ್ಯಮಾನಗಳಿಗೂ ಇಲ್ಲಿ ಸಮಂಜಸವಾದ ಉತ್ತರವಿದೆ. ಪೂರ್ವಾಗ್ರಹ ಧೋರಣೆ ಬಿಟ್ಟು ಯಾವುದು ಸತ್ಯವೋ ಅದನ್ನು ಮಾತ್ರ ನಂಬುವ ಮಟ್ಟದ ಪ್ರಬುದ್ಧತೆಯನ್ನು ನಾವು ಮುಟ್ಟ ಬೇಕು ಎನ್ನುವ ಲೇಖಕರ ಚಿಂತನೆಯ ಆಶಯ ಮೆಚ್ಚುಗೆಯೆನಿಸಿತು. ಜ್ಞಾನದ ಆಗರವೇ ಆಗಿರುವ ಈ ಕಾದಂಬರಿಯಲ್ಲಿ ಶ್ರೀವತ್ಸ ಮತ್ತು ವಸುಧಾ ಕಾಡಿನ ದಾರಿಯಲ್ಲಿನ ಪರಿಚಿತ ಸ್ನೇಹಿತರ ಪಾತ್ರಗಳ ಜೊತೆಯ ಮಾತುಕತೆಯ ಮೂಲಕ ಹೇಳಿರುವ ರೀತಿ ಇಷ್ಟವಾಗುತ್ತದೆ.
ಇಲ್ಲಿ ಕೃಷಿಕರ ಬದುಕಿನ ಚಿತ್ರಣವಿದೆ. ಮಣ್ಣು ಕುಸಿತ,ಮಳೆ ಪ್ರವಾಹದಲ್ಲಿ ಬೆಳೆನಾಶವಾಗುವ ಸಂಕಟವಿದೆ. ಅಭಿವೃದ್ಧಿ ಹೆಸರಲ್ಲಿ ಗುಡ್ಡ ಬೆಟ್ಟ ಅಗೆದು ಮಾಡುವ ಹೆದ್ದಾರಿಗಳಿಂದ ಹಂತ ಹಂತವಾಗಿ ಪರಿಸರ ನಾಶವಾಗುವ ವಿವರವಿದೆ. ನಾವು ಸುತ್ತಲ ಪ್ರಕೃತಿಯನ್ನು ತರ್ಕ ಮತ್ತು ವಾಸ್ತವದಿಂದ ನೋಡಿದಾಗ ಏನೆಲ್ಲಾ ಸತ್ಯ ಗೋಚರವಾಗುತ್ತದೆ ಎಂಬುದೇ ಇದರಿಂದ ತಿಳಿದ ಒಳಾರ್ಥವಾಗಿದೆ. ವೈವಿಧ್ಯತೆ ಜಗತ್ತಿನ ನಿಯಮ. ಒಂದು ವರ್ಷದ ಅವಧಿಯ ಸಂಶೋಧನೆಯಲ್ಲಿ ಅವರಿಗೆ ಕಾಡು ತಿಳಿಸಿದ ಸತ್ಯವೇನು?… ಎಂಬ ಕಥಾವಸ್ತು ಹೊಂದಿದ ಈ ಪುಸ್ತಕ ಸಂಗ್ರಹ ಯೋಗ್ಯವಾಗಿದೆ.
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ಅಗಮ್ಯ’ ಕೃತಿ ಪರಿಚಯ
- ‘ಯಾವ ನಾಳೆಯೂ ನಮ್ಮದಲ್ಲ’ ಕೃತಿ ಪರಿಚಯ
- ‘ದೀಪದ ಮಲ್ಲಿಯರು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
