ಮೀನುಗಾರಿಕೆಗೆ ಹೋಗಲಿಕ್ಕೆ ಮುಂಜಾನೆ ೩.೩೦ ಕ್ಕೇ ಎದ್ದು ಸಜ್ಜಾಗುತ್ತಿದ್ದಳು ಪ್ರಾಪ್ತಿ ಮೆಂಡನ್. ಐದು ಗಂಟೆಯ ಹೊತ್ತಿಗೆ ಕಡಲ ತೀರದಲ್ಲಿ ದೋಣಿ ಬಿಸುತ್ತಿದ್ದಳು, ಮೀನುಗಾರಿಕೆಯೆಂದರೆ ಆಕೆಗೆ ಏನೋ ರೋಮಾಂಚನಕೊಡುತ್ತಿತ್ತು. ಪ್ರಾಪ್ತಿ ಮೆಂಡನ್ ಅವರ ಸಾಹಸಗಾಥೆಯನ್ನು ಲೇಖಕರಾದ ಬಾಣಾವರ ಶಿವಕುಮಾರ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಮಂಗಳೂರಿನ ಹಳೆ ಬಂದರು ದಕ್ಕೆಯಿಂದ ಪಲ್ಗುಣಿ ನದಿಯನ್ನು ಬೋಟಿನಲ್ಲಿ ದಾಟಿದರೆ ಸಿಗುವ ಪುಟ್ಟ ಊರು ಬೆಂಗರೆ. ಹಳೆ ಬಂದರು ದಕ್ಕೆಯಿಂದ ಹಾಗೂ ಬೆಂಗರೆಯ ತೀರದಿಂದ ಪರ್ಶಿಯನ್ ಬೋಟ್, ಟ್ರಾಲ್ ಬೋಟ್, ಸಾಂಪ್ರದಾಯಿಕ ರಾಣಿ ಬಲೆ ದೋಣಿಗಳು ಸೇರಿ ನಾಲ್ಕು ಸಾವಿರಕ್ಕೂ ಹೆಚ್ಚು ದೋಣಿಗಳು ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ಹೋಗುತ್ತವೆ. ಅವುಗಳಲ್ಲಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಆಳ ಸಮುದ್ರ ಮೀನುಗಾರಿಕೆಗೆ ಕಡಲಿಗೆ ತೆರಳುತ್ತಾರೆ. ಅಷ್ಟೂ ಪುರುಷರ ನಡುವೆ ಕಾಣಸಿಗುವ ಏಕೈಕ ನಾರಿ ಪ್ರಾಪ್ತಿ ಮೆಂಡನ್.
ಕಣ್ಣು ಹಾಯಿಸಿದಷ್ಟೂ ಕಾಣುವ ಕಡಲು, ದಿನವಿಡೀ ಕಾಡುವ ಸುಡು ಬಿಸಿಲು, ಮಳೆಗಾಲದಲ್ಲಿ ಭೋರ್ಗರೆಯುವ ಮಳೆ, ಅಲ್ಲೋಲ ಕಲ್ಲೋಲ ಸೃಷ್ಟಿಸುವ ತೂಫಾನ್, ಅಳಿವೆ ಬಾಗಿಲು ಬಳಿ ಧುತ್ತೆಂದು ಏಳುವ ಅಲೆಗಳು… ಕಡಲಿನಲ್ಲಿ ಈ ಎಲ್ಲ ಕಷ್ಟಗಳನ್ನೂ ಮೀನುಗಾರರು ಎದುರಿಸಬೇಕು. ದೇಹದಿಂದ ಬಸಿಯುವ ಬೆವರು, ಕಾಡುವ ಹರಿವುಗಳನ್ನೆಲ್ಲ ಸಹಿಸಿಕೊಳ್ಳಬೇಕು. ಕ್ಷಣ ಕ್ಷಣವೂ ಜೀವವನ್ನು ಪಣಕ್ಕಿಟ್ಟು ಪ್ರತಿಕೂಲ ಹವಾಮಾನದೊಂದಿಗೆ ಸೆಣಸಾಡಬೇಕು. ಯಾವ ಸೌಕರ್ಯವೂ ಇಲ್ಲದ ರಾಣಿ ಬಲೆ ಸಾಂಪ್ರದಾಯಿಕ ದೋಣಾಗಳಲ್ಲಿ ಮೀನುಗಾರಿಕೆ ನಡೆಸುವುದು ಇನ್ನೂ ತ್ರಾಸದಾಯಕ. ಈ ದೋಣಿಗಳಲ್ಲಿ ಮೀನುಗಾರಿಕೆಗೆ ತೆರಳಲು ಕೆಲ ಪುರಷರೂ ಹಿಂದೆ ಮುಂದೆ ನೋಡುತ್ತಾರೆ. ಆದರೆ ಪ್ರಾಪ್ತಿಗೆ ಇದ್ಯಾವ ಅಂಜಿಕೆಯೂ ಇಲ್ಲ. ಸೌಕರ್ಯವಿರುವ ಪರ್ಸಿಯನ್ ಬೋಟ್’ಗಿಂತಲೂ ರಾಣಿ ಬಲೆಯ ಪುಟ್ಟ ದೋಣಿಗಳಲ್ಲಿ ಕಡಲ ಮೀನುಗಾರಿಕೆ ನಡೆಸುವುದೆಂದರೆ ಈ ಯುವತಿಗೆ ಪಂಚಪ್ರಾಣ. ಕಡಲಿನಲ್ಲಿ ಏಳೆಂಟು ತಾಸು ಕಳೆಯುವಾಗ ಜಲಭಾದೆ ತೀರಿಸಿಕೊಳ್ಳುವುದು ಇನ್ನೊಂದು ಸಮಸ್ಯೆ. ಆ ಬಗ್ಗೆಯೂ ಈಕೆ ತಲೆ ಕೆಡಿಸಿಕೊಂಡವಳೇ ಅಲ್ಲ.

ಜಯಪ್ರಕಾಶ್ ಮೆಂಡನ್ ಮತ್ತು ಕಲಾವತಿ ಜೆ. ದಂಪತಿಗಳ ಮಗಳಾದ ಪ್ರಾಪ್ತಿ ಮೀನುಗಾರರ ಕುಟುಂಬದ ಕೂಸಾಗಿದ್ದರೂ ಬೆಳೆದಿದ್ದು ಸೌಕರ್ಯಗಳಿದ್ದ ಮನೆಯಲ್ಲಿ ಕಲಿತದ್ದು ಕಾನ್ವೆಂಟಿನಲ್ಲಿ ಹೊಟ್ಟೆಯ ಪಾಡಿಗೆ ಮುಂಜಾನೆ ಬೇಗನೆ ಎದ್ದು ಮೀನುಗಾರಿಕೆಗೆ ಹೋಗುವ, ಸುಡು ಬಿಸಿಲಿಗೆ ದಿನವಿಡೀ ಮೈಯ್ಯೊಡ್ಡಿ ಬೆವರು ಬಸಿಯುವ ಅನಿವಾರ್ಯ ಈಕೆಗೆ ಇರಲಿಲ್ಲ. ಕುಟುಂಬದ ಹಿರಿಯರ ಬಾಯಲ್ಲಿ ಕಡಲಿನ ಸಾಹಸಗಾಥೆಗಳನ್ನು ಕೇಳುತ್ತಿದ್ದರಿಂದಲೋ ಏನೋ, ಆಳ ಸಮುದ್ರಕ್ಕೆ ತೆರಳುವ ತುಡಿತ ಎಳವೆಯಲ್ಲೇ ಮೂಡಿತು.
೧೩ನೇ ವಯಸ್ಸಿನಲ್ಲೇ ತಂದೆಯ ಜೊತೆ ಕಡಲಿಗೆ ಮೀನುಗಾರಿಕೆಗೆ ತೆರಳುವ ಸಾಹಸ ಮಾಡಿದ್ದಳು. ಕಡಲಲ್ಲಿ ಗಂಟೆಗಟ್ಟಲೆ ಕಳೆದರೂ ‘ಸೀ ಸಿಕ್’ನೆಸ್’ ಕಾಡಲಿಲ್ಲ. ಆಕೆಯ ಕಡಲಿನ ಹುಚ್ಚು ಮತ್ತಷ್ಟು ಹೆಚ್ಚಾಯಿತು. ಸೂರ್ಯ ಉದಯಿಸುವವರೆಗೂ ಮಲಗಿರುತ್ತಿದ್ದ ಹುಡುಗಿಗೆ ಆ ಬಳಿಕ ನಿದ್ದೆಯೇ ಹತ್ತಲಿಲ್ಲ. ಮೀನುಗಾರಿಕೆಗೆ ಹೋಗಲಿಕ್ಕೆ ಮುಂಜಾನೆ ೩.೩೦ ಕ್ಕೇ ಎದ್ದು ಸಜ್ಜಾಗುತ್ತಿದ್ದಳು. ಐದು ಗಂಟೆಯ ಹೊತ್ತಿಗೆ ಕಡಲ ತೀರದಲ್ಲಿ ಹಾಜರ್. ದೋಣಿ ನಡೆಸುವುದು, ಬಲೆ ಬೀಸುವುದು, ಬಲೆ ಎಳೆಯುವುದು, ಬಲೆಗೆ ಬಿದ್ದ ಮೀನುಗಳನ್ನು ದೋಣಿಯಲ್ಲಿ ತುಂಬುವುದು, ಬಗೆಬಗೆಯ ಮೀನುಗಳನ್ನು ವಿಂಗಡಿಸಿ ಟ್ರೇಗಳಲ್ಲಿ ತುಂಬುವುದು,ದಕ್ಕೆಗೆ ದೋಣಿ ಮರಳಿದ ನಂತರ ಮೀನನ್ನು ದೋಣಿಯಲ್ಲಿ ಇಳಿಸುವುದು, ದಕ್ಕೆಯಲ್ಲಿ ಮೀನಿನ ಹರಾಜಿಗೆ ನಿಲ್ಲುವುದು… ಈ ಎಲ್ಲ ಕೆಲಸಗಳಿಗೂ ಈಕೆ ಸೈ.
ಜೂನ್ ಜುಲೈ ತಿಂಗಳಲ್ಲಿ ೧೦ ಹೆಚ್.ಪಿ. ಗಿಂತ ಹೆಚ್ಚು ಸಾಮರ್ಥ್ಯದ ಎಂಜಿನ್’ನ ದೋಣಿಗಳು ಮೀನುಗಾರಿಕೆ ನಡೆಸಲು ವಿರೋಧವಿರುತ್ತದೆ. ಸಾಂಪ್ರದಾಯಿಕ ದೋಣಿಗಳ ಮೀನುಗಾರಿಕೆಯ ಭರಾಟೆ ಮಳೆಗಾಲದ ಈ ಅವಧಿಯಲ್ಲಿ ಜಾಸ್ತಿ. ಆದರೆ, ಆಗ ಪ್ರತಿದಿನವೂ ಪ್ರತಿಕೂಲ ಹವಾಮಾನ. ಯಾವಾಗ ತೂಫಾನ್ ಏಳುತ್ತದೆ ಎಂದು ಊಹಿಸಲಾಗದು. ಜೋರಾಗಿ ಮಳೆ ಸುರಿಯುವಾಗ ಕಡಲಿನಲ್ಲಿ ನಾಲ್ಕೈದು ಮೀಟರ್ ಅಂತರದಲ್ಲಿರುವ ದೋಣಿಯೂ ಕಾಣಿಸದಂತಹ ವಾತಾವರಣ. ಇಂತಹ ಕಷ್ಟಕರ ಸನ್ನಿವೇಶದಲ್ಲಿ ರಾಣಿ ಬಲೆಯ ದೋಣಿಯಲ್ಲಿ ಮೀನುಗಾರಿಕೆ ನಡೆಸುವುದೆಂದರೆ ಪ್ರಾಪ್ತಿಗೆ ಎಲ್ಲಿಲ್ಲದ ಪ್ರೀತಿ.

“ಮೀನುಗಾರಿಕೆಗೆ ಹೋದಾಗ ಕೆಲವೊಮ್ಮೆ ತೀರಾ ಹಸಿವಾಗುತ್ತಿತ್ತು. ನಾಡದೋಣಿ ಮೀನುಗಾರಿಕೆಯೆಂದರೆ ನನಗೆ ಏನೋ ರೋಮಾಂಚನ. ಮೀನುಗಾರಿಕೆಗೆ ಹೋಗುವಾಗ ಮುಂಜಾನೆ ಮೂರುವರೆಗೆ ಏಳುತ್ತೇನೆ. ಕಲ್ಲಿನಿಂದ ಮರಳುವಾಗ ತಡವಾದರೂ ಚಿಂತೆಯಿಲ್ಲ. ಬೇರೆ ಸಮಯ ಬಿಸಿಲಿಗೆ ಹೋದರೆ ಕಪ್ಪಾಗುತ್ತೇನೆ ಎಂಬ ಭಯ ಇರುತ್ತೆ. ಆದರೆ ಕಡಲಿಗೆ ಹೋಗುವಾಗ ನನಗೆ ಅದರ ಪರಿವೆಯೇ ಇರದು. ವಿಶಾಲ ಸಮುದ್ರದಲ್ಲಿ ದೋಣಿಯಲ್ಲಿ ಸಾಗುವಾಗ ಮುಕ್ತ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ” ಎಂದು ಅನುಭವ ಹಂಚಿಕೊಳ್ಳುತ್ತಾರೆ ಪ್ರಾಪ್ತಿ.
ಮೀನುಗಾರಿಕೆಯ ಅನನ್ಯ ಅನುಭವಗಳನ್ನೆಲ್ಲ ತನ್ನದಾಗಿಸಿಕೊಂಡಿರುವ ಪ್ರಾಪ್ತಿ ಮೀನುಗಾರರ ಸಮುದಾಯದ ಕಷ್ಟ – ನಷ್ಟಗಳನ್ನೂ ಚೆನ್ನಾಗಿ ಬಲ್ಲರು. ಮೀನುಗಾರಿಕೆಯ ವಿಷಯದಲ್ಲೇ ಪದವಿ (ಬಿ.ಎಂ.ಎಸ್.ಸಿ.) ಮತ್ತು ಸ್ನಾತಕೋತ್ತರ ಪದವಿ (ಎಂ.ಎಫ್.ಎಸ್.ಸಿ.) ಪಡೆದಿದ್ದಾರೆ. ಈ ವಿಷಯದಲ್ಲೇ ಪಿ.ಹೆಚ್.ಡಿ. ಅಧ್ಯಯನ ಕೈಗೊಳ್ಳುವ, ಸುಸ್ಥಿರ ಮೀನುಗಾರಿಕೆ ಕುರಿತು ಸಂಶೋಧನೆ ನಡೆಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.
“ಮಹಿಳೆಯರ ಎಲ್ಲ ರಂಗಗಳಲ್ಲೂ ಛಾಪು ಮೂಡಿಸಿದ್ದಾರೆ. ಆದರೆ ೨೧ ನೇ ಶತಮಾನದಲ್ಲೂ ಕಡಲ ಮೀನುಗಾರಿಕೆಯಲ್ಲಿ ಮಾತ್ರ ಮಹಿಳೆಯರು ಭಾಗವಹಿಸುತ್ತಲೇ ಇಲ್ಲ. ಮಹಿಳೆಯರೇ ಸೇರಿ ತಂಡ ಕಟ್ಟಿಕೊಂಡು ಕಡಲಿನಲ್ಲಿ ಮೀನುಗಾರಿಕೆ ನಡೆಸುವ ದಿನಗಳನ್ನು ಕಾಣುವಾಸೆ ನನ್ನದು. ಇಂತಹ ಮಹಿಳೆಯರ ಸಂಖ್ಯೆ ಜಾಸ್ತಿಯಾಗಬೇಕು. ಇದನ್ನು ಸಾಕಾರ ಗೊಳಿಸಲು ನನ್ನಿಂದ ಆದಷ್ಟು ಪ್ರಯತ್ನ ಮಾಡುತ್ತೇನೆ” ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಪ್ರಾಪ್ತಿ.
- ಬಾಣಾವರ ಶಿವಕುಮಾರ್ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು
