ಅನುಪರ್ವ ಪುಸ್ತಕ ಪರಿಚಯ – ಗೀತಾ ಜಿ ಹೆಗಡೆ ಕಲ್ಮನೆ

ಯುದ್ಧಾನಂತರದ ಕಥೆ, ಕುರುವಂಶ ಹೇಗೆ ಮುಂದುವರೆಯಿತು, ನಿಯೋಗ ಪದ್ಧತಿ ಮತ್ತು ಮಹಾಭಾರತ ಬರೆದ ವ್ಯಾಸ ಮಹರ್ಷಿಗಳ ಬಗ್ಗೆ ಮಾಹಿತಿ ತಿಳಿದಿದ್ದು ಅನುಪರ್ವ ಪುಸ್ತಕದಿಂದ. ಈ ಪುಸ್ತಕ ಬರೆದವರು ಡಾ.ಲಕ್ಷ್ಮಣ ಕೌಂಟೆ ಅವರು. ಪುಸ್ತಕದ ಕುರಿತು ಲೇಖಕಿ ಗೀತಾ ಜಿ ಹೆಗಡೆ ಕಲ್ಮನೆ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಅನುಪರ್ವ
ಪ್ರಕಾರ : ಐತಿಹಾಸಿಕ ಕಾದಂಬರಿ.
ಲೇಖಕರು : ಡಾ.ಲಕ್ಷ್ಮಣ ಕೌಂಟೆ
ಪ್ರಕಾಶಕರು : ಧಾತ್ರಿ ಪುಸ್ತಕ
ಪುಸ್ತಕದ ಬೆಲೆ : 350/-
ಮೊಬೈಲ್ : 9880807864

ಲೇಖಕರು ಹೇಳುತ್ತಾರೆ ; ಅವರು ಬರೆದ “ಅನುಪರ್ವ” ಪುಸ್ತಕ ಖ್ಯಾತ ಸಾಹಿತಿ ಎಸ್ ಎಲ್ ಭೈರಪ್ಪನವರ “ಪರ್ವ”ಕ್ಕೆ ಪರ್ಯಾಯವಲ್ಲ ಎಂದು. ಈಗೊಂದು ವರ್ಷದ ಹಿಂದೆಯೇ ಲೇಖಕರಿಂದ ತರಿಸಿಕೊಂಡ ಈ ಪುಸ್ತಕ ಓದಿ ಮುಗಿಸಲು ಬರೋಬ್ಬರಿ ಒಂದು ತಿಂಗಳು ತೆಗೆದುಕೊಂಡೆ. 584 ಪುಟಗಳ ಈ ಬೃಹತ್ ಐತಿಹಾಸಿಕ ಪುಸ್ತಕ ಒಂದೇ ಸಮನೆ ಓದಲು ಸಾಧ್ಯ ಆಗೋದೂ ಇಲ್ಲ. ಹಾಗೆ ಓದಿದ ಪುಟಗಳನ್ನೇ ಮತ್ತೆ ಮತ್ತೆ ಓದಿ ಮನನ ಮಾಡಿಕೊಂಡ ಹೊರತೂ ಓದುತ್ತ ಹೋದಂತೆ ವಿಷಯ, ವ್ಯಕ್ತಿ, ಘಟನೆ ಇತ್ಯಾದಿ ಕಲಸುಮೇಲೋಗರ ಆಗಿಬಿಡುತ್ತತ್ತು.

ಸಂಪೂರ್ಣ ಮಹಾಭಾರತದ ಕಥೆಯನ್ನು ಆಳವಾಗಿ ಅಭ್ಯಾಸ ಮಾಡಿ ಲೇಖಕರು ಈ ಪುಸ್ತಕ ಬರೆದಿದ್ದಾರೆ. ನಾನು ಹೈಸ್ಕೂಲ್ ಹೋಗುತ್ತಿದ್ದ ಸಮಯದಲ್ಲಿ ಸಂಪೂರ್ಣ ಮಹಾಭಾರತದ ಕಥೆಯನ್ನು ನನ್ನ ಅಜ್ಜಿಗೆ ದಿನಾ ಸಾಯಂಕಾಲ ಓದಿ ಹೇಳುವಾಗ ಯಕ್ಷಗಾನ ಪ್ರಿಯಳಾದ ಅಜ್ಜಿ ಯಕ್ಷಗಾನ ಸನ್ನಿವೇಶದಲ್ಲಿ ಬರುವ ಕಥೆಯೊಂದಿಗೆ ತುಲನೆ ಮಾಡಿ ನನಗೆ ವಿವರಿಸುತ್ತಿದ್ದಳು. ಚಿಕ್ಕ ವಯಸ್ಸಿನಲ್ಲಿ ಅಷ್ಟೊಂದು ಅರ್ಥ ಆಗುತ್ತಿರಲಿಲ್ಲ. ಮತ್ತೆ ಓದುವ ಆಸಕ್ತಿ ಇತ್ತು. ಈಗ ದಕ್ಕಿತು.

ವಿಧುರನು ತೀರ್ಥಯಾತ್ರೆಯನ್ನು ಮುಗಿಸಿಕೊಂಡು ಹಿಂದಿರುಗುವಷ್ಟರಲ್ಲಿ ಅಣ್ಣ ತಮ್ಮಂದಿರಾದ ಕೌರವರು ಪಾಂಡವರು ರಾಜ್ಯಕ್ಕಾಗಿ ಹದಿನೆಂಟು ದಿನಗಳ ಕಾಲ ಯುದ್ಧ ಮಾಡುತ್ತಿದ್ದ ಸನ್ನಿವೇಶ, ಯುದ್ಧ ಮುಗಿದ ನಂತರ ರಣರಂಗದಲ್ಲಿ ಸತ್ತುಬಿದ್ದು ನಾರುತ್ತಿರುವ ಹೆಣಗಳು, ರಕ್ತದೋಕುಳಿ, ಹದ್ದುಗಳ ರೌದ್ರಾವತಾರ, ಕೆಟ್ಟ ವಾಸನೆ… ಲಕ್ಷ ಲಕ್ಷ ಹೆಂಗಸರು ತಮ್ಮ ಮಕ್ಕಳನ್ನು, ಗಂಡಂದಿರನ್ನು, ಸಂಬಂಧಿಕರನ್ನು, ಒಡಹುಟ್ಟಿದ ಅಣ್ಣ ತಮ್ಮಂದಿರನ್ನು ಕಳೆದುಕೊಂಡು ಪರಿತಪಿಸುವ ಸನ್ನಿವೇಶ ಇತ್ಯಾದಿ ಇತ್ಯಾದಿ ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಓದುತ್ತ ಸ್ಥಬ್ಧವಾಗುತ್ತದೆ ಮನ.

ಸಾಮೂಹಿಕ ವಿನಾಶದ ಯುದ್ಧಕ್ಕೆ ಕೃಷ್ಣ ತಂತ್ರಗಳನ್ನು ಹೆಣೆದಿರಬಹುದೇ… ಹಾಗೆ ಮುಂದುವರೆಯುತ್ತ ಯುದ್ಧದಲ್ಲಿ ಕುರುವಂಶದ ಗಂಡಸರು ಮಕ್ಕಳೆಲ್ಲ ಮಡಿದು ಧೃತರಾಷ್ಟ್ರ ಮತ್ತು ಗಾಂಧಾರಿ ಇಬ್ಬರೂ ಮಡಿದವರ ಬಗ್ಗೆ ದುಃಖಪಡುತ್ತ ಕೌರವ ವಂಶ ಇಲ್ಲಿಗೇ ನಿಂತು ಹೋಗುವುದಲ್ಲಾ ಎಂದು ವ್ಯಥೆ ಪಡುತ್ತಾರೆ. ಆಗ ನಿಯೋಗ ಪದ್ಧತಿಯಿಂದ ಸೊಸೆಯಂದಿರು ಮಕ್ಕಳನ್ನು ಪಡೆದಿದ್ದು…ವ್ಯಾಸ ಮಹರ್ಷಿಗಳ ಕುರಿತು ಅನೇಕ ಮಾಹಿತಿಗಳು, ಕರ್ಣನ ಹುಟ್ಟಿನ ಗುಟ್ಟು ರಣರಂಗದಲ್ಲಿ ಅನಾವರಣವಾದ ಸನ್ನಿವೇಶ, ಭೀಷ್ಮ ಪಿತಾಮಹನ ಪ್ರತಿಜ್ಞೆಯ ಬಗ್ಗೆ ಉಲ್ಲೇಖ….ಪಾಂಡವರ ಜನನದ ವೃತ್ತಾಂತ… ಅರ್ಜುನನ ಪಾಂಡಿತ್ಯ ಹಾಗೂ ಅವನ ಚರಿತ್ರೆ…ದ್ರೌಪದಿ ತನ್ನ ಐವರು ಗಂಡಂದಿರ ಬಗ್ಗೆ ವಿವರಿಸುವ ಪರಿ… ಪಗಡೆಯಾಟದಲ್ಲಿ ಎಲ್ಲವನ್ನೂ ಪಣಕ್ಕಿಟ್ಟು ಕೊನೆಗೆ ದ್ರೌಪದಿಯ ವಸ್ತ್ರಾಪಹರಣ ಸನ್ನಿವೇಶದಲ್ಲಿ ಅವಳು ಪರಿತಪಿಸಿ ಆಡುವ ಒಂದೊಂದು ಮಾತೂ ….. ಹೀಗೆ ಇಡೀ ಮಹಾಭಾರತ ಕಥೆಯನ್ನು ಸ್ಪುಟವಾಗಿ ಬರೆದಿದ್ದಾರೆ.

ಕೊನೆಯಲ್ಲಿ ಲಕ್ಷೋಪಲಕ್ಷ ಹೆಣಗಳು ರಣರಂಗದಲ್ಲಿ ಕೊಳೆಯುತ್ತಿರುವಾಗ ಮಡಿದವರ ಅಂತ್ಯ ಸಂಸ್ಕಾರ ಹೇಗಾಯಿತು ಎಂಬುದು ಕೂಡಾ ಬರೆದಿದ್ದಾರೆ. ಈ ಪುಸ್ತಕವನ್ನು ಕೊಂಡು ಓದಿದಲ್ಲಿ ಕೂಲಂಕಷವಾಗಿ ಪ್ರತಿಯೊಂದು ವೃತ್ತಾಂತ ತಿಳಿಯಲು ಸಾಧ್ಯ. ಏಕೆಂದರೆ ಅಷ್ಟು ದೀರ್ಘವಾಗಿದೆ ಮಹಾಭಾರತದ ಕಥೆ ಅನುಪರ್ವ ಪುಸ್ತಕದಲ್ಲಿ.

ಯುದ್ಧಾನಂತರದ ಕಥೆ, ಕುರುವಂಶ ಹೇಗೆ ಮುಂದುವರೆಯಿತು, ನಿಯೋಗ ಪದ್ಧತಿ ಮತ್ತು ಮಹಾಭಾರತ ಬರೆದ ವ್ಯಾಸ ಮಹರ್ಷಿಗಳ ಬಗ್ಗೆ ಮಾಹಿತಿ ಇವೆಲ್ಲ ತಿಳಿದಿದ್ದು ಈ ಪುಸ್ತಕದ ಓದಿನಲ್ಲಿ.

ಇಂತಹ ಅತ್ಯುತ್ತಮವಾದ ಪುಸ್ತಕವನ್ನು ಸಾಹಿತ್ಯ ಲೋಕಕ್ಕೆ ನೀಡಿದ ಲೇಖಕರಿಗೆ ಮತ್ತಷ್ಟು ಪುಸ್ತಕ ಬರೆಯಲು ಆಯುಷ್ಯ, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಸರ್.


  • ಗೀತಾ ಜಿ ಹೆಗಡೆ ಕಲ್ಮನೆ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW