‘ಯೋಗದಾ’ ಪುಸ್ತಕ ಪರಿಚಯ – ಸವಿ (ಸಂಧ್ಯಾ ರಾವ್)

ವಿದ್ಯಾ ಕೆ ಎನ್ ಅವರು ಯೋಗದಾ ಕಾದಂಬರಿ ಕುರಿತು ಸವಿ (ಸಂಧ್ಯಾ ರಾವ್) ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…

ಪುಸ್ತಕ : ಯೋಗದಾ
ಲೇಖಕರು : ವಿದ್ಯಾ ಕೆ ಎನ್
ಪ್ರಕಾಶನ : ಅಯೋಧ್ಯಾ ಪ್ರಕಾಶನ
ಬೆಲೆ : ೨೩೦ .೦೦
ಪುಟ : ೧೯೬ 

ಬಿಡುವಿಲ್ಲದ ಗೃಹಕೃತ್ಯದ ನಡುವೆಯೂ ಸದಾ ಹೊಸತೇನನ್ನೋ ಕಲಿಯುವ ಕುತೂಹಲ ,ಆಕಾಂಕ್ಷೆ ಸೃಜನಶೀಲವಾಗಿ ಯಾವುದಾದರೊಂದರಲ್ಲಿ ಪಾಲ್ಗೊಳ್ಳುವ ಉತ್ಸಾಹ, ವಿವಿಧ ರಂಗಗಳಲ್ಲಿ ನಿರ್ಮಾಣಾತ್ಮಕ ಆಸಕ್ತಿ ಗೆಳತಿ ವಿದ್ಯಾಳ ಸಹಜ ಸ್ವಭಾವ. ಸಾಹಿತ್ಯದೆಡೆಗೆ ವಿಶೇಷ ಒಲವಿರುವ ಇವಳು ಬರವಣಿಗೆಗೆ ಆಯ್ದುಕೊಳ್ಳುವ ವಿಷಯ ಯಾವಾಗಲೂ ವಿಶಿಷ್ಟ ಹಾಗೂ ವಿಭಿನ್ನ. ‘ಭಾವನಾಗಮ್ಯ’ ಎನ್ನುವ ಕೃತಿಯ ಮೂಲಕ ಕಾದಂಬರಿಯ ಲೋಕಕ್ಕೆ ಪಾದಾರ್ಪಣೆ ಮಾಡಿದ ವಿದ್ಯಾಳಿಂದ ಈಬಾರಿ ರಚಿತವಾದದ್ದು *ಯೋಗದಾ* ಎನ್ನುವ ಅಗಾಧ ಹಾಗೂ ಗಂಭೀರ ವಸ್ತುವಿಷಯಗಳನ್ನೊಳಗೊಂಡ ಅನನ್ಯ ಕೃತಿ.

ಹಿಂದೂ ಧರ್ಮ, ವ್ರತಗಳು, ಆಚರಣೆಗಳು ಹಾಗೂ ನಂಬಿಕೆಗಳ ಮೇಲೆ ನಿರಂತರ ಪ್ರಹಾರ, ಅವಹೇಳನ,ಅಪಹಾಸ್ಯಗಳು ನಡೆಯುತ್ತಾ ಬಂದಿದ್ದರೂ (ಕೆಲವೊಮ್ಮೆ ನಮ್ಮವರಿಂದಲೇ!!!!) ಯಾವುದಕ್ಕೂ ಜಗ್ಗದ ಆಧ್ಯಾತ್ಮಿಕ ಹಾದಿಯಲ್ಲಿ ಪ್ರಖರ ಬೆಳಕು ಚೆಲ್ಲುವ *ವಸುಧೈವ ಕುಟುಂಬಕಂ* ಎನ್ನುವ ಉದಾತ್ತ ಧ್ಯೇಯವನ್ನು ಹೊಂದಿರುವ ಸಕಲ ಚರಾಚರಗಳಲ್ಲೂ ದೈವತ್ವವನ್ನು ಕಾಣುವ ಪರಮಾದ್ಭುತ ಧರ್ಮ ಹಾಗೂ ಸನಾತನ ಸಂಸ್ಕೃತಿ ನಮ್ಮದು.

ಧಾರ್ಮಿಕ ರೀತಿ ರಿವಾಜುಗಳು ವ್ರತ ಇನ್ನಿತರ ಆಚರಣೆಗಳು ಸಾಧಾರಣವಾಗಿ ವಂಶಪಾರಂಪರಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುತ್ತವೆ. ಯೋಗವಿದ್ದರೆ ಹಾಗಲ್ಲದೆಯೂ ಉಪಾಸನೆಯ,ಆರಾಧನೆಯ ಅವಕಾಶ ದೊರಕಿ ಆಧ್ಯಾತ್ಮಿಕ ಔನ್ಯತ್ಯದೆಡೆಗೆ ಸಾಗುವ ಅದೃಷ್ಟವೂ ಇದೆ!!..ಈ ಕೃತಿಯಲ್ಲಿ ಶ್ರೀ ವಿದ್ಯಾ ಭಗವತಿ(ಶ್ರೀಚಕ್ರಯಂತ್ರ )ಶಂಕರ ದೀಕ್ಷಿತರಿಗೆ ಎಣಿಸಿರದ ರೀತಿಯಲ್ಲಿ ಒಲಿದು ಬಂದದ್ದು ಹೀಗೆಯೇ. ಯೋಗ್ಯತೆ ಹಾಗೂ ಯೋಗವಿದ್ದರೆ ಗುರು ಸಿಗುವುದು ಕಷ್ಟವಲ್ಲ ಕಾಣದ ಶಕ್ತಿ ಒಲಿಯುವುದು ಕಠಿಣವಲ್ಲ ಎನ್ನುವುದನ್ನು ಈ ಕಾದಂಬರಿಯ ಮುಖ್ಯಪಾತ್ರ ವಿಷದಪಡಿಸುತ್ತದೆ.

CA ಸುವರ್ಣಾ ದೀಕ್ಷಿತ್ ಎನ್ನಿಸಿಕೊಳ್ಳಲಾಗದ ತನ್ನ ಅಪೂರ್ಣ ಕನಸಿನ ಕುರಿತು ವಿಷಾದ ನಿರಾಸೆ ಹಾಗೂ ಕೊರಗು ದೀಕ್ಷಿತರ ಪತ್ನಿ ಸುವರ್ಣಳಿಗೆ.ಆಗಾಗ ಹಿಂದಿನ ವಿಫಲ ಯತ್ನಗಳ ನೆನಪುಗಳಿಂದ ತುಂಬಿಕೊಳ್ಳುವ ಅವಳ ಕಂಗಳು ನಮ್ಮಂತರಂಗದಲ್ಲಿಯೂ ಏನೋ ತಳಮಳ ಹುಟ್ಟುಹಾಕುತ್ತದೆ ಈಡೇರದ ಕನಸಿನ ಮುಳ್ಳು ಜೀವನಪರ್ಯಂತ ಚುಚ್ಚುವುದು ಸುಳ್ಳಲ್ಲ!!!.ಉಳಿದಂತೆ ಧಾರ್ಮಿಕ ವಿಧಿ ವಿಧಾನಗಳು ಅನುಷ್ಠಾನಗಳು ಹಾಗೂ ಆಚರಣೆಗಳ ಪರಿಚಯ ಹಾಗೂ ಅಭ್ಯಾಸವಿಲ್ಲದೆಯೂ ಮದುವೆಯ ಪೂರ್ವದ ತನ್ನ ನಿರ್ಭಿಡ ವ್ಯಕ್ತಿತ್ವವನ್ನು ಮರೆತು ಪತಿಗೃಹಕ್ಕೆ ತಕ್ಕಂತೆ ಸಾಂಪ್ರದಾಯಿಕವಾಗಿ ಹೊಂದಾಣಿಕೆ ಮಾಡಿಕೊಂಡು ಪತಿಗೆ ಅನುಕೂಲೆಯಾಗಿ ಬದಲಾದ ಸುವರ್ಣಾ ಹೆಣ್ಣು ನೀರಿನಂತೆ ಪಾತ್ರೆಯ ಅಳತೆಗೆ ಹೊಂದಿಕೊಳ್ಳುತ್ತಾಳೆ ಎನ್ನುವುದನ್ನು ನಿರೂಪಿಸುತ್ತಾಳೆ.

ದೀಕ್ಷಿತರ ಹಿರಿಯ ಮಗಳು ಅನಘಾ ಸುಗುಣೆ ಸುಶೀಲೆ. ಮನೆಯ ಧಾರ್ಮಿಕ ಆಚರಣೆ ಅನುಷ್ಠಾನಗಳಲ್ಲಿ ಶ್ರದ್ದಾಭಕ್ತಿ ಇರುವವಳು. ಮುಂದೆ ದೀಕ್ಷಿತರ ಉಪಾಸನಾ ಪರಂಪರೆ ಯನ್ನು ಮುಂದುವರೆಸಿಕೊಂಡು ಹೋಗುವ ಭರವಸೆ ಮೂಡಿಸುವವಳು.ಕಿರಿಯವಳು ಅಭಿಜ್ಞಾ ಕೂಡಾ ಸ್ವಭಾವತಃ ಒಳ್ಳೆಯವಳೇ ಆದರೂ ಸ್ವಲ್ಪ ದಾರ್ಷ್ಟ್ಯ ಪ್ರವೃತ್ತಿಯವಳು.. ಓದಿಗೆಂದು ವಸತಿನಿಲಯದಲ್ಲಿ ಇರುವಾಗ ಸಂಘದೋಷದಿಂದ ದುಶ್ಚಟಕ್ಕೆ ಸಿಲುಕುತ್ತಾಳೆ.ಪೋಷಕರಿಗೆ ಸಮಯಕ್ಕೆ ಸರಿಯಾಗಿ ತಿಳಿದು ಸೂಕ್ತ ಚಿಕಿತ್ಸಾ ಮಾರ್ಗದಿಂದ ಅಪಾಯದಿಂದ ಪಾರಾದುದು ಭಗವತಿಯ ಕೃಪೆ.ತಂದೆ ತಾಯಿಯರು ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಶ್ರೀಮಂತರಾಗಿದ್ದರೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಟ್ಟಿದ್ದರೂ ದುರ್ಬಲ ಗಳಿಗೆಯಲ್ಲಿ ಮನೋನಿಯಂತ್ರಣವಿಲ್ಲದೆ ಹಾದಿ ತಪ್ಪುವ ಮಕ್ಕಳು ಪೋಷಕರಿಗೆ ಪಕ್ಕೆಶೂಲೆ.

ಈ ಕಾದಂಬರಿಯಲ್ಲಿ ಬರುವ ಮತ್ತೊಂದು ಗೌರವಾನ್ವಿತ ಪಾತ್ರವೆಂದರೆ ಅಗ್ನಿಹೋತ್ರಿಗಳಾದ ಕೃಷ್ಣರಾಜ ದೀಕ್ಷಿತರ್.ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆದರೂ ಸನಾತನ ಧರ್ಮ ಪರಂಪರೆ ವೇದ ಶಾಸ್ತ್ರ ಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ ಇವರು ತಮ್ಮ ತಂದೆಯ ಕಾಲಾನಂತರ ಅಗ್ನಿಹೋತ್ರವನ್ನು ಮುಂದುವರೆಸಿಕೊಂಡು ಹೋಗಲು ತಮ್ಮ CA ಪ್ರಮಾಣಪತ್ರವನ್ನೇ ಭಾರತೀಯ ಲೆಕ್ಕ ಪರಿಶೋಧನ ಮಂಡಳಿಗೆ ಒಪ್ಪಿಸಿದ ಕೃತ್ಯ ನಮ್ಮನ್ನು ಚಕಿತಗೊಳಿಸುತ್ತದೆ.ಪಾಂಡಿತ್ಯವೆಂದರೆ ಅಹಂಕಾರವಲ್ಲ ವಿನಯ ಸೌಜನ್ಯ ಹಾಗೂ ಸರಳತೆ ಎನ್ನುವುದಕ್ಕೆ ನಿದರ್ಶನವಾಗುತ್ತಾರೆ ದೀಕ್ಷಿತರ್.

ಶಂಕರ ದೀಕ್ಷಿತರು ಮತ್ತು ಕೃಷ್ಣರಾಜ ದೀಕ್ಷಿತರ್ ಕಾರ್ಪೋರೇಟ್ ಜಗತ್ತಿನಲ್ಲಿದ್ದಾಗ ಕೂಡಾ ವೃತ್ತಿಸಂಬಂಧಿತ ಮಾತನಾಡದೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಚಾರಗಳ ಕುರಿತು ಮಾತನಾಡುತ್ತಾ ಓದುಗರ ಗಮನ ಸೆಳೆಯುತ್ತಾರೆ. ಆಧುನಿಕತೆಗೆ ತೆರೆದುಕೊಳ್ಳುವುದೆಂದರೆ ಪಾರ್ಟಿಗಳ ಹೆಸರಿನಲ್ಲಿ ಮೋಜು ಮಸ್ತಿ ಮಾಡುವುದು ಮಧ್ಯಪಾನ ಮಾಡುವುದು ಎಂದು ಭ್ರಮಿಸಿರುವ ಈ ಮುಂದುವರೆದ ಪ್ರಪಂಚದಲ್ಲಿ ಅಂತಹ ಪಾರ್ಟಿಗಳಿಗೆ ಹೋಗಿಯೂ ಅವರಿಂದ ಒಂದು ಅಂತರವನ್ನು ಕಾಯ್ದುಕೊಂಡು ತಮ್ಮ ತನವನ್ನು ಉಳಿಸಿಕೊಂಡು ಒಂದು ಫ್ರೂಟ್ ಜ್ಯೂಸ್ ನಲ್ಲಿ ಪಾರ್ಟಿ ಮುಗಿಸಿಬರುವ ಇವರಿಬ್ಬರು ಆಧುನಿಕತೆಯೆಂದರೆ ಪಾಶ್ಚಾತ್ಯ ಅನುಕರಣೆಯಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾರೆ.

ಗುರುಗಳಾದ ಸದಾನಂದ ಭಟ್ಟರ ಮೊಮ್ಮಗಳು ಶ್ರೀಕಲಾ ಅಮೇರಿಕೆಯಲ್ಲೇ ಗುರುಗಳನ್ನು ದೊರಕಿಸಿಕೊಂಡು ಶ್ರೀಚಕ್ರ ಉಪಾಸನೆಯ ದೀಕ್ಷೆ ಪಡೆಯುವಂತಾದದ್ದು ಊಹಿಸಲಾರದ ತಿರುವು. ಶ್ರೀವಿದ್ಯಾ ಭಗವತಿ ಯಾರು ಯಾರಿಂದ ಉಪಾಸನೆಗೊಳ್ಳಬೇಕೆಂದು ಅವಳೇ ತೀರ್ಮಾನಿಸುತ್ತಾಳೆ ಹಾಗೂ ಸಂದರ್ಭಗಳನ್ನು ಸೃಷ್ಟಿಸುತ್ತಾಳೆ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಭೀತುಗೊಳ್ಳುತ್ತದೆ.

ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು ತಮ್ಮ ತಮ್ಮ ಜನಾಂಗೀಯ ಗ್ರಾಮ್ಯ ಭಾಷೆಯಲ್ಲೇ ಮಾತನಾಡುವುದು ಕೃತಿಯ ಆಪ್ತತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ..ನಮ್ಮೊಂದಿಗೆ ಘಟಿಸುವ ಘಟನೆಗಳಿಗೆ ಅವಗಡಗಳಿಗೆ ಕೆಡುಕಿಗೆ ನಮ್ಮ ಕರ್ಮಫಲಗಳಷ್ಟೇ ಕಾರಣಗಳಾಗಲೀ ಅದಕ್ಕಾಗಿ ದೇವರನ್ನೋ ನೆರೆಕೆರೆಯವರನ್ನೋ ಅಥವಾ ಇನ್ನಿತರರನ್ನೋ ಹೊಣೆಯಾಗಿಸುವುದು ಮೂರ್ಖತನ ಎನ್ನುವ ಸತ್ಯ ಕಾದಂಬರಿಯುದ್ಧಕ್ಕೂ ವಿದಿತಗೊಳ್ಳುವ ಸಂಗತಿ.

ಅಂತ್ಯದಲ್ಲಿ ಹೇಳುವುದಾದರೆ ಶ್ರಿಚಕ್ರ ಯಂತ್ರದ ಉಪಾಸನೆಯ ವಿಧಿ ವಿಧಾನಗಳನ್ನು ಅತ್ಯಂತ ನಾಜೂಕಾಗಿ ಕೌಟುಂಬಿಕ ವಿದ್ಯಮಾನಗಳ ಸಹಯೋಗದೊಂದಿಗೆ ಲೇಖಕಿ ಹೆಣೆದ ಪರಿ ಸೊಗಸಾಗಿದೆ. ನವರಾತ್ರಿಯ ದಶಮಿಯೂ ಸೇರಿದಂತೆ ಹತ್ತು ದಿನಗಳಿಗೆ ಹತ್ತು ಅಧ್ಯಾಯವಾಗಿ ಪ್ರಸ್ತುತಗೊಳ್ಳುವ ಕಥನ, ಶ್ರೀ ಚಕ್ರ ಉಪಾಸನೆಯ ಕುರಿತು ಜನರಿಗಿರುವ ಮೌಢ್ಯವನ್ನು ಸರಿಸಿ ಅತ್ಯಂತ ಸಾತ್ತ್ವಿಕ ಮಾರ್ಗದಲ್ಲಿಯೂ ವಯೋಲಿಂಗ ಭೇದವಿಲ್ಲದೆ ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ಸರಳವಾಗಿಯೂ ಆಚರಿಸಬಹುದಾದ ಸಾಧ್ಯತೆಯಿದೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ. ಲೇಖಕಿಯ ಕೈಯಿಂದ ಇದೇ ರೀತಿ ಹಲವು ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಅನೇಕ ಅಧ್ಯಯನಶೀಲ ಕೃತಿಗಳು ನಿರಂತರವಾಗಿ ಹೊರಬರಲಿ ಎನ್ನುವ ಆಶಯ…
ಯೋಗದಾ ಆಸಕ್ತರು ಕೊಂಡು ಓದಬಹುದಾದ ಒಂದು ಒಳ್ಳೆಯ ಕೃತಿ.


  • ಸವಿ (ಸಂಧ್ಯಾ ರಾವ್)

 

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW