‘ಪಶ್ಚಿಮ ಸೂರಿಗಳು’ ಪುಸ್ತಕ ಪರಿಚಯ – ರಘುನಾಥ್ ಕೃಷ್ಣಮಾಚಾರ್

ಕೆ. ಸತ್ಯನಾರಾಯಣ ಅವರ ‘ಪಶ್ಚಿಮ ಸೂರಿಗಳು’ ಕಾದಂಬರಿ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಪಶ್ಚಿಮ ಸೂರಿಗಳು
ಲೇಖಕರು : ಕೆ. ಸತ್ಯನಾರಾಯಣ
ಪ್ರಕಾರ : ಕಾದಂಬರಿ
ಪ್ರಕಾಶನ : ಸಪ್ನಾ
ಬೆಲೆ : ೨೪೦.೦೦

ಡಿ.ವಿ.ಜಿ ಯವರ “ಸಾಹಿತ್ಯಕ್ಕೆ ಸ್ವದೇಶೀ ವ್ರತ ಇಲ್ಲ”- ಎಂಬ ಮಾತಿಗೆ ವ್ಯಾಖ್ಯಾನದಂತೆ ಈ ಸಂಕಲನ ಇದೆ. ಲೇಖಕರೆ ಸೂಚಿಸುವಂತೆ ಇದು ಕನ್ನಡೇತರ ಲೇಖಕರ ಕುರಿತು ಬರೆದ ಲೇಖನಗಳ ಸಂಗ್ರಹ.

ಆದರೂ ಇದರಲ್ಲಿ ಬರುವ ಬಹುತೇಕ ಲೇಖನಗಳನ್ನು ಕನ್ನಡ ಓದುಗರು, ಲೇಖಕರು ಏನನ್ನು ಇವರಿಂದ ಕಲಿಯಬಹುದು ಎಂಬ ಪ್ರಧಾನ ಕಾಳಜಿಯನ್ನು ಹೊಂದಿದೆ. ಕೆಲವು ವೇಳೆ ಕನ್ನಡ ಮತ್ತು ಇತರ ಲೇಖಕರ ಕೃತಿಗಳಿಗೂ ಇರುವ ಸಂಬಂಧಾಂತರದ ಚರ್ಚೆಯನ್ನು ಮಾಡಲಾಗಿದೆ. ಇಲ್ಲಿನ ಬಹುತೇಕ ಲೇಖಕರನ್ನು ಅವರ ಇಂಗ್ಲಿಷ್ ಅಥವಾ ಕನ್ನಡ ಅವತರಣಿಕೆಯಲ್ಲಿ ನಾಲ್ಕು ದಶಕದ ಹಿಂದೆ ನಾವು ಕನ್ನಡ ಸ್ನಾತಕೋತ್ತರ ಅಧ್ಯಯನದ ಸಂದರ್ಭದಲ್ಲಿ ಓದಿದ ಭಾಗ್ಯ ನಮ್ಮದು.

ಲೇಖಕರಿಗೆ ಪ್ರಿಯವಾದ ಟಾಲ್ ಸ್ಟಾಯ್ ಅವರ ಅನ್ನಾಕೆರಿನಿನಾ, ಫಾದರ್ ಸೆರ್ಗಿಯಸ್ ಗಳನ್ನು ಓದಿದ ಅದನ್ನು ಕುರಿತು ಬರೆದ ಭಾಗ್ಯ ನನ್ನದು. ಅದರಂತೆ ಕಾಮುನ ‘ಅನ್ಯ’- outsider ನ್ನು ಕೂಡ. ಹೀಗೆ ಸಾಹಿತ್ಯದ ವಿದ್ಯಾರ್ಥಿಗಳಾದ ಭಾಷಾ ಬಂಧನವಿಲ್ಲದೆ ವಿಶ್ವ ಸಾಹಿತ್ಯಕ್ಕೆ ತೆರದು ಕೊಳ್ಳುವ ಅವಕಾಶವನ್ನು ನಮ್ಮ ಕನ್ನಡ ಅಧ್ಯಯನ ಕೇಂದ್ರ ಒದಗಿಸಿ ನಮ್ಮನ್ನು ಕೂಪಮಂಡೂಕಗಳಾಗದಂತೆ ಕಾಪಾಡಿತು.

ಆದರೆ ಇಲ್ಲಿನ ವಿಶೇಷವೆಂದರೆ ನಮ್ಮ ಹಾಗೆ ಸಾಹಿತ್ಯದ ವಿದ್ಯಾರ್ಥಿಯಲ್ಲದ ಈ ಲೇಖಕ , ಈ ವಿಶ್ವಸ್ಥ ದೃಷ್ಟಿ ಕೋನವನ್ನು ಬೆಳೆಸಿಕೊಂಡು, ಅನ್ಯಾನ್ಯ ಸಾಹಿತ್ಯ ಕೃತಿಗಳಿಗೆ ತನ್ನನ್ನು ಒಡ್ಡಿಕೊಂಡಾಗ ಉಂಟಾದ ಸ್ಪಂದನಗಳನ್ನು ದಾಖಲಿಸಿ ಅದರ ಪ್ರಯೋಜನ ಓದುಗರಿಗೆ ಆಗುವಂತೆ ಮಾಡಿರುವುದು.

ಇಲ್ಲಿನ ಬರಹಗಳನ್ನು ಭಾರತ ಕೇಂದ್ರಿತ ಬರಹಗಾರರ ಬರಹಗಳು ಮತ್ತು ಇತರ ಎಂದು ವಿಭಾಗ ಮಾಡಬಹುದು. ಇಲ್ಲಿ ಬರುವ ನೈಪಾಲ್, ಜಂಪಾ ಲಹರಿ, ಬಾಬರ್, ಅಮಿತಾಬ್ ಘೋಷ ಮುಂತಾದವರ ಬರಹಗಳು ಇದಕ್ಕೆ ನಿದರ್ಶನ. ಅವರು ತಲೆಮಾರಿನ ಹಿಂದೆಯೇ ಬೇರೆ ದೇಶಗಳಿಗೆ ಹೋಗಿ ಅಲ್ಲಿ ನೆಲೆಸಿದರು, ಅವರ ಬರಹಗಳ ಮೂಲ ಬೇರು ಇಲ್ಲಿಯದೆ.

ನೈಪಾಲ್ ಅವರ ಕಾದಂಬರಿ ಮತ್ತು ಪ್ರವಾಸ ಬರಹಗಳು, ಅದರಂತೆ ಜಂಪಾಲಹರಿ ಅವರ ಲೋ ಲ್ಯಾಂಡ್ ಕಾದಂಬರಿ ಕೂಡ ಇದಕ್ಕೆ ಉತ್ತಮ ನಿದರ್ಶನ. ಇಲ್ಲಿ ಅವರು ಚಿತ್ರಿಸುವ ಬದಲಾಗುತ್ತಿರುವ ಭಾರತೀಯ ಸಮಾಜದ ಪಲ್ಲಟಗಳನ್ನು.ಮತ್ತು ವಲಸೆಗಾರರ ಸವಾಲುಗಳನ್ನು. “ಅಲ್ಲಿರುವುದು ಸುಮ್ಮನೆ ಇಲ್ಲಿರುವುದು ನಮ್ಮ ಮನೆ .” ಇದು ಮೊದಲ ತಲೆಮಾರಿನ ವಾಸ್ತವವಾದರೆ, ಮುಂದಿನ ತಲೆಮಾರಿನ ಸಮಸ್ಯೆ ” ಯಾವುದು ನಮ್ಮ ಮನೆ” ?ಎನ್ನುವುದೆ ಆಗಿದೆ. ಅವರು ಎಲ್ಲಿಯೂ ಸಲ್ಲದವರಾಗಿ ಹೋದ ಸಂಕಟ ಅವರದು.

ಇದಲ್ಲದೆ ಬೆಂಗಾಲಿಯ ಅಮಿತಾಭ್ ಘೋಷ್ ಅವರ ಮಹತ್ವದ ಪ್ರವಾಸ ಕಥನದ ವೈಶಿಷ್ಟ್ಯಗಳನ್ನು ವಿವರವಾಗಿ ಪರಿಶೀಲಿಸಿದ್ದಾರೆ. ಹಾಗೆ ನೋಡಿದರೆ ಭಾರತದಲ್ಲಿ ಜನಿಸಿದ ಆರ್ವೆಲ್ ರನ್ನು ಕೂಡ ಭಾರತೀಯ ಲೇಖಕರೆಂದೇ ಪರಿಗಣಿಸಬಹುದು. ನೇರವಾಗಿ ಭಾರತದ ಕುರಿತು ಬರೆಯದಿದ್ದರೂ. ಅವರ ಆನೆಯ ಶೂಟಿಂಗ್ ಪ್ರಬಂಧದ ಸಂವೇದನಾ ಶೀಲತೆಯ ಮಹತ್ವದ ಅನಾವರಣ ಮಾಡಿದ್ದಾರೆ. ಅವರ ಕಾದಂಬರಿಗಳ ವಿವರಗಳು, ಪತ್ರಕರ್ತರಾಗಿ ಅವರ ಸಾಧನೆಗಳನ್ನು ಉಲ್ಲೇಖ ಮಾಡಿದ್ದಾರೆ ಅದರಿಂದ ನಮ್ಮ ಕನ್ನಡ ಲೇಖಕರು ಕಲಿಯಬೇಕಾದ ಪಾಠದ ಕುರಿತು ನಮ್ಮ ಗಮನ ಸೆಳೆದಿದ್ದಾರೆ. ಪ್ರಭುತ್ವದ ವಿರುದ್ಧ ಹೊಂದಿರಬೇಕಾದ ಖಚಿತವಾದ ನಿಲುವನ್ನು ಕುರಿತು.

‘ಎವರೆಸ್ಟ್’ ಕಾದಂಬರಿಯ ಲೇಖಕ ಪಾಶ್ಚಾತ್ಯನಾದರೂ ವಸ್ತುವಿನ ದೃಷ್ಟಿಯಿಂದ ಅದನ್ನು ಭಾರತೀಯ ಎಂದು ಪರಿಗಣಿಸಬಹುದು. ರಷ್ಯಾದ ಇಬ್ಬರು ಲೇಖಕರ ಕುರಿತು ಇಲ್ಲಿ ನಾಲ್ಕು ಲೇಖನಗಳು ಇವೆ. ಮೂರು ಟಾಲ್ಸ್ಟಾಯ್ ಕುರಿತು. ಒಂದು ದಾಸ್ತೊವಸ್ಕಿಯ ನಿಲುವುಗಳ ಕುರಿತು. ಪ್ರಭುತ್ವ ಮತ್ತು ಚರ್ಚ್ ಪ್ರಭುತ್ವಗಳ ಕುರಿತು ಕಟು ಟೀಕೆಗೆ ಟಾಲ್ಸ್ಟಾಯ್ ಪ್ರಸಿದ್ಧನಾದರೆ , ದಾಸ್ತೊವಸ್ಕಿ ಅವುಗಳ ಪರವಾಗಿ ಸಾಮ್ರಾಜ್ಯ ಶಾಹಿಯ ನಿಲುವನ್ನು ತಳೆಯುವುದು ಒಂದು ವೈರುದ್ಯವಾಗಿದೆ. ಲೇಖಕರು ಇದರ ಕಡೆ ಗಮನ ಹರಿಸಿಲ್ಲ. ಟಾಲ್ಸ್ಟಾಯ್ ನ ಅನ್ನಾಕೆರಿನಿನಾದ ಕಿಟ್ಟಿ ಮಗುವಿಗೆ ಹಾಲೂಡಿಸುವ ಪ್ರಸಂಗದ ಅನನ್ಯತೆಯ ಅನಾವರಣ ಮಾಡಿದ್ದಾರೆ. ಅದನ್ನು ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ನಲ್ಲಿ ಅದಕ್ಕೆ ಸಂವಾದಿಯಾಗಿ ಬರುವ ಪ್ರಸಂಗದ ಉಲ್ಲೇಖ ಮಾಡಿದ್ದಾರೆ. ಒಳಗೆ ದೇವಮ್ಮ ಹೊರಗಿನ ಜಗತ್ತಿಗೆ ವಿದ್ಯಮಾನಗಳಿಂದ ವಿಚಲಿತಳಾಗದ ದಿವ್ಯತೆ ಯನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಹೊರಗೆ ‌ನಡೆವ ಕ್ರೌರ್ಯ ಮತ್ತು ಒಳಗಿನ ವಾತ್ಸಲ್ಯ ಇವುಗಳ ಒಂದರ ಬದಿಗೆ ಒಂದನ್ನು ಇಡುವ ಮೂಲಕ ಸಾಧಿಸಿದ ಪ್ಯಾರಡಾಕ್ಸನ್ನು ಟಾಲ್ಸ್ಟಾಯ್ ನ ಕಿಟ್ಟಿಯ ಮೇಲೆ ಉಲ್ಲೇಖ ಮಾಡಿದ ಪ್ರಸಂಗದಲ್ಲಿ ಕಾಣಲಾಗದು. ತನ್ನಷ್ಟಕ್ಕೆ ತಾನೇ ಅದು ಅನನ್ಯ ಪ್ರಸಂಗವಾದರೂ. ಮಾರ್ಕೆಸ್ ನ one hundred years of solitude ಕೃತಿ ಯನ್ನು ಎ.ಎನ್. ಪ್ರಸನ್ನ ಅವರು ಅನುವಾದ ಮಾಡಿದ್ದು ಅದರ ಅವಲೋಕನ ಮಾಡಿ ಕೆಲವು ಕಡೆ ಕನ್ನಡಕ್ಕೆ ಒಗ್ಗದ ಬರಹ ಎಂದು ಅದರ ಮಿತಿಯನ್ನು ಗುರುತಿಸಿದ್ದಾರೆ. ಅದಕ್ಕೆ ಉದಾಹರಣೆಗಳನ್ನು ಕೊಡಬಹುದಾಗಿತ್ತು. ಕಾರ್ಲಮಾರ್ಕ್ಸನ ಪ್ರಸ್ತುತ ತೆಯನ್ನು ಕುರಿತು ಇಲ್ಲಿ ಒಂದು ಬರಹವಿದೆ. ಸಾಹಿತ್ಯದ ವಿದ್ಯಾರ್ಥಿಯಲ್ಲದ ಲೇಖಕರೊಬ್ಬರ ಈ ಬರಹಗಳು ಅವರ ವೈವಿಧ್ಯಮಯ ಸಾಹಿತ್ಯಾಸಕ್ತಿಗೆ, ಆರೋಗ್ಯಕರ ನಿಲುವು ಗಳಿಗೆ ಇಲ್ಲಿನ ಬಹುತೇಕ ಬರಹಗಳು ಸಾಕ್ಷಿ ನುಡಿಯುತ್ತವೆ.

ಇಲ್ಲಿನ ಮಿತಿಯನ್ನು ಸೂಚಿಸುವುದಾದರೆ ಒಂದೇ ವಿಷಯದ ಪುನರುಕ್ತಿ ಹಲವು ಲೇಖನಗಳಲ್ಲಿ ಕಾಣಬಹುದು. ನಿದರ್ಶನ ಟಾಲ್ಸ್ಟಾಯ್ ಅವರ ಅನ್ನಾಕೆರಿನಿನಾ ಕುರಿತು ಬರೆದದ್ದು. ಅದರಂತೆ ಉಳಿದ ಕೆಲವು ಲೇಖಕರ ಬರಹಗಳಿಗೂ ಇದು ಅನ್ವಯಿಸುತ್ತದೆ. ಅಲ್ಲದೆ ಹಲವಾರು ಮುದ್ರಣ ದೋಷಗಳು ಇವೆ.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW