ಕಿರಣಾ ಮದುವೆಯಾಗಿ ಬಂದಾಗ ಮನೆ ಕೆಲಸ ಮಾಡಲು ಭಯವಾಗುತ್ತಿತ್ತು, ಭಯದಲ್ಲಿಯೇ ಆತುರಾತುರವಾಗಿ ಕೆಲಸ ಮಾಡುತ್ತಿದ್ದರಿಂದ ಕಿರಣಾ ಸೊರಗಿ ಹೋಗಿದ್ದಳು. ಮುಂದೆ ಅತ್ತೆ ಮನೆಯಲ್ಲಿ ಹೇಗೆ ಬದುಕಿದಳು, ಹರಿಹರ ಬಿ ಆರ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…
ಕಿಶೋರ ತನ್ನ ಹೆಂಡತಿ ಕಿರಣಾಳಿಗೆ ಯಾವಾಗಲೂ ಭಯ ತುಂಬಿದ ವಾತಾವರಣದ ಸೃಷ್ಟಿಯಾಗುತ್ತದೆ. ಇದರಿಂದಾಗಿ ಮನೆಯ ಎಲ್ಲ ಕೆಲಸ ಮಾಡುವಾಗಲೂ ‘ಕೆಲಸ ಮಾಡುತ್ತಿದ್ದವರಿಗೆ ಇನ್ನಷ್ಟು ಕೆಲಸ ಹುಟ್ಟಿಕೊಳ್ಳುತ್ತಲೇ ಇರುತ್ತದೆ’ ಎಂದು ಭಾಸವಾಗಿ ಮನೆಯ ಯಾವುದೇ ಕೆಲಸ ಮಾಡಬೇಕಾದರೂ ದುಗುಡ ತುಂಬಿದ ಮನದಿಂದಲೇ ಮಾಡುತ್ತಿದ್ದಳು. ಎಲ್ಲಲ್ಲೂ ಚೆಲ್ಲಾಪಿಲ್ಲಿಯಾಗಿ ಮಾಡಿದ್ದ ಮನೆಯ ಬೇರೆ ಸದಸ್ಯರ ಮೇಲೆ ಕೋಪ ಬರುವಂತಾಗುತ್ತಿತ್ತು.
ಈ ವಿಷಯವನ್ನು ಕಿಶೋರನಲ್ಲಿ ಹೇಳಿಕೊಂಡಾಗ, “ಮನೆಯವರೆಲ್ಲರೂ ಒಳ್ಳೆಯವರೇ ಯಾರಿಗೂ ಏನೂ ಹೇಳುವುದು ಬೇಡ. ಇದನ್ನೆಲ್ಲ ಸಹಿಸಿಕೊಂಡು ನಾವೂ ಒಳ್ಳೆಯವರಾಗಿರೋಣ. ಬರೇ ಆರು ಜನ ಇರೋದು ಅಪ್ಪ, ಅಮ್ಮ, ಅಣ್ಣ, ಅತ್ತಿಗೆ, ನಾನು ಮತ್ತೆ ನೀನು ಅಷ್ಟೇ. ಬೇಕಾದರೆ ನಾನೂ ನಿನಗೆ ಕೈ ಜೋಡಿಸಿ ಕೆಲಸವನ್ನು ಕಡಿಮೆ ಮಾಡಿಕೊಳ್ಳೋಣ.” ಎಂದು ಹೇಳಿದ್ದವನು ಎರಡು ವಾರ ಶಿಸ್ತಿನ ಸಿಪಾಯಿಯಂತೆ ಮಾಡಿದ. ನಂತರ ಬರಬರುತ್ತಾ ಕೆಲಸ ಕಡಿಮೆ ಮಾಡುತ್ತಾ ತನ್ನ ಸಹಾಯ ಹಸ್ತವನ್ನು ಬಿಟ್ಟೇಬಿಟ್ಟ.
ಒಮ್ಮೆ ಅತ್ತೆ ನಗುನಗುತ್ತಾ ಕಿರಣಾಳನ್ನು ಪ್ರೀತಿಯಿಂದ ಮಾತನಾಡಿಸಿದರು. ಏನಾಯಿತೋ ಏನೋ ಅಡುಗೆಮನೆ ಎನ್ನುವುದನ್ನು ಮರೆತು ಮತ್ತು ಅತ್ತೆ ಎನ್ನುವುದನ್ನೂ ಮರೆತು, ಅಮ್ಮನ ಬಳಿ ಹೇಳಿಕೊಳ್ಳುವಂತೆಯೇ ತನ್ನ ಅತ್ತೆಯ ಬಳಿ ತನ್ನ ಕಷ್ಟವನ್ಮೆಲ್ಲ ಹೇಳಿಕೊಂಡಳು.
“ನಿನ್ನ ಕಷ್ಟ ನನಗೆ ಅರ್ಥವಾಗತ್ತೆ. ಇನ್ನು ಮೇಲೆ ನಾನು ನೀನೂ ಸೇರಿ ಕೆಲಸ ಮಾಡೋಣ ಬಾ”. ಎಂದು ನುಡಿದರು.

ಫೋಟೋ ಕೃಪೆ :google
“ಬೇಡ ಅತ್ತೆ. ನಾನೊಬ್ಬಳೇ ಮಾಡುತ್ತೇನೆ. ನೀವು ಮನಸ್ಸು ಮಾಡಿದರೆ ಓರಗಿತ್ತಿಯಿಂದ ಸಹಾಯ ಸಿಗಬಹುದೇನೋ ಎಂದು ಕೇಳಿದೆ ಅಷ್ಟೇ”
“ಅದೇನೋ ನಿನ್ನ ಕಂಡರೆ ಪ್ರೀತಿ. ನೀನು ಸೊಸೆಯಾಗಿ ಬರುವ ಮೊದಲು ಅವಳಿದ್ದರೂ ನಾನೊಬ್ಬಳೇ ಎಲ್ಲ ಕೆಲಸ ಮಾಡಿಕೊಂಡು ಹೋಗುತ್ತಿದ್ದೆ. ಈಗ ಆರೋಗ್ಯದಿಂದಿದ್ದು ಮೊದಲಿನಂತೆ ಚೇತರಿಸಿಕೊಂಡಿದ್ದೇನೆ. ಅವಳ ಬಗ್ಗೆ ಯೋಚಿಸದಿರು ಮತ್ತು ಕೇಳದಿರು. ಸುಮ್ಮನಾಗು. ನಾವಿಬ್ಬರೂ ಕೆಲಸ ಮಾಡಿಕೊಂಡು ಹೋಗೋಣ ಬಾ.”
ಮತ್ತೆ ಸಹನೆಗಳ ಕಟ್ಟೆ ಒಡೆಯುತ್ತಾ ಬಂದು ತನ್ನ ದುಃಖವನ್ನು ನುಂಗಿಕೊಳ್ಳತೊಡಗಿದಳು. ಇನ್ನು ಎಲ್ಲರ ಮೇಲೂ ಕೂಗಾಡುವುದರಿಂದ ಲೇಸಿಲ್ಲವೆಂದು ಸುಮ್ಮನಿರಲು ಪ್ರಯತ್ನಿಸಿದಳು. ಆದರೂ ಬಿರುನುಡಿಗಳು ಅಭ್ಯಾಸ ಬಲದಂತೆಯೋ ಅಥವಾ ಗೊತ್ತಿಲ್ಲದೆಯೋ ಮುಂದುವರೆಯುತ್ತಿತ್ತು.
ಇದನ್ನೆಲ್ಲ ಕಂಡ ಅತ್ತೆ ಒಮ್ಮೆ ಕಿರಣಾಳನ್ನು ಕರೆದು ಮಾರನೇ ದಿನಕ್ಕಾಗಿ ಸಾಧ್ಯವಾದಷ್ಟು ಸಿದ್ಧ ಮಾಡಿ, ಮನೆಯ ಜನ ಹೆಚ್ಚಾದುದರಿಂದ ಬಟ್ಟೆ ಶುದ್ಧಗೊಳಿಸುವ ಯಂತ್ರವನ್ನು ತರಿಸಿ, ಇದಕ್ಕಾಗಿ ಮಧ್ಯಾಹ್ನದ ಸಮಯ ಆರಿಸಿಕೊಂಡರು. ಇನ್ನು ಸ್ವಲ್ಪ ದಿನಗಳ ನಂತರ ಮಿಕ್ಸಿಯನ್ಮು ಕೊಂಡರು. ಹೀಗೆ ನಿತ್ಯೋಪಯುಕ್ತ ಯಂತ್ರಗಳನ್ನು ತರಿಸುತ್ತಿದ್ದರು.
ಸೊಸೆಗೆ “ಮೊದಲು ನೀನು ಶುಚಿಯಾಗಿ ನಂತರ ದೇವರ ಪೂಜೆ ಮಾಡು. ವಿಶ್ರಾಂತಿಯಿಂದ ದೈಹಿಕ ಚಟುವಟಿಕೆಗೆ ಹೇಗೆ ಸಹಾಯವಾಗತ್ತೋ ಹಾಗೇ ದೇವರ ಪೂಜೆ ಮತ್ತು ಜಪದಿಂದ ಮನಸೋಲ್ಲಾಸವಾಗತ್ತೆ. ಅಂದರೆ ಇವೆಲ್ಲ ಕ್ರಮಬದ್ಧವಾದ ಕೆಲಸಗಳಿಗೆ ಭಕ್ತಿ, ಶ್ರದ್ಧೆ, ಏಕಾಗ್ರತೆ, ಜಾಗೃತಾವಸ್ಥೆ, ಮುಖ್ಯ ಎಂಬುದನ್ನು ತಿಳಿಸಿದರು. ಹಾಗೂ ಇವುಗಳಿಂದ ಸಹನೆ, ಆಯಾಸ ಪರಿಹಾರ, ಎಲ್ಲ ರೀತಿಯ ಶಕ್ತಿಗಳ ವೃದ್ಧಿ ಇತ್ಯಾದಿಗಳನ್ನು ವಿವರಿಸಿ, ದಿನ ನಿತ್ಯವೂ ಮಾಡಿಕೊಂಡು ಹೋಗುವಂತೆ ಹೇಳಿದರು.

ಫೋಟೋ ಕೃಪೆ :google
ಈ ಎಲ್ಲ ಸತತ ಅಭ್ಯಾಸಗಳಿಂದ ಅತ್ತೆ ಹೇಳಿದ್ದಂತೆ ಮಾಡಿದಾಗ, ಒಬ್ಬಳೇ ಎಲ್ಲ ಕೆಲಸವನ್ನು ಮಾಡಿಕೊಂಡು ಹೋಗುವಂತಹ ಮನಸ್ಥೈರ್ಯ ಆತ್ಮವಿಶ್ವಾಸ ಹೆಚ್ಚಾಗತೊಡಗಿತು. ಮೊದಲಿಗೆ ಇದ್ದ ಕೂಗಾಟದಿಂದ ದುಗುಡಗಳಿಂದ ಹೆಚ್ಚು ಶಕ್ತಿ ವ್ಯಯಿಸುತ್ತಿದ್ದುದು ಈಗ ಗಮನಕ್ಕೆ ಬಂದಿತು. ಮನಕ್ಕೆ ಏನೋ ಒಂದು ರೀತಿಯ ಆನಂದ ಸಿಗುವಂತಾಯಿತು.
ಏಳು ದಿನ ಅತ್ತೆ ಅವರ ಬಂಧುಗಳ ಕಡೆ ಮದುವೆ ಕಾರ್ಯಕ್ರಮವಿದ್ದುರಿಂದ ಹೊರಟು ಹೋದರು. ಮನೆಯಲ್ಲಿ ಕೆಲಸ ಮಾಡುವವರ ಗುಂಪಿನಲ್ಲಿ ಕಿರಣಾ ಮತ್ತೆ ಒಬ್ಬಳೇ ಆಗಿ ಉಳಿದು ಆರಾಮಾಗಿ ಕೆಲಸವನ್ನೆಲ್ಲ ನಿಭಾಯಿಸಿದಳು. ಕಿಶೋರ ತನ್ನ ಹೆಂಡತಿಯ ಮೊಗ ನೋಡಿ ಮದುವೆಯ ದಿನ ನೋಡಿದ್ದವಳಂತೆಯೇ ಲವಲವಿಕೆಯಿಂದ ಚೇತೋಹಾರಿಯಾಗಿದ್ದ ಅವಳನ್ನು ಬಿಗಿದಪ್ಪಿದ. ಅವಳನ್ನು ಅಮ್ಮ ಭಾಗವಹಿಸಿದ್ದ ಮದುವೆ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದ. ಕಿರಣಾ ಅತ್ತೆಯನ್ನು ಕಂಡಾಕ್ಷಣ ಓಡೋಡಿ ಹೋಗಿ ಅಳುತ್ತಾ (ಆನಂದಬಾಷ್ಪವೆಂದು ತಿಳಿಯಿರಿ) ಕಾಲುಗಳಿಗೆರಗಿ “ಅತ್ತೆ, ನೀವು ನನ್ನ ಭಾಗಕ್ಕೆ ದೇವರು.” ಎಂದು ಹೇಳುತ್ತಿರುವಾಗ, ಅತ್ತೆ ಅವಳನ್ನು ಹಿಡಿದೆಬ್ಬಿಸಿ, ಅವಳನ್ನು ತಬ್ಬುತ್ತಾ, “ನನಗೂ ನಿನ್ನಂತಹ ಸ್ಥಿತಿ ಒದಗಿದ್ದಾಗ ನನ್ನ ನಾದಿನಿಯರು ನಾನು ನಿನಗೆ ಹೇಳಿಕೊಟ್ಟಿದ್ದಂತೆಯೇ ಹೇಳಿಕೊಟ್ಟಿದ್ದರು. ದೇವರು ಇದ್ದಾನೆ ಎಂಬುದನ್ನು ತೋರಿಸಿಕೊಟ್ಟವರಿಗೆ ನಾನು ಅಂದು ನಮಿಸಿದ್ದರೂ ಇಂದಿಗೂ ಅವರನ್ನು ಸ್ಮರಿಸುತ್ತಿರುತ್ತೇನೆ. ಈಗ ಹೋಗಿ ತಿಂಡಿ ತಿಂದು ಬಾ ಅಮೇಲೆ ಮಾತಾಡೋಣ” ಎಂದರು.
ಕಿರಣಾ ಚಿಕ್ಕ ಮಕ್ಕಳಂತೆ ಕಣ್ಣೀರು ಹರಿಸುತ್ತಿದ್ದರೂ ನಸುನಗುತ್ತಾ ಕಿಶೋರನ ಕೈಹಿಡಿದು ಹೋಗುತ್ತಿದ್ದಳು. ಇತ್ತೀಚಿನ ಹೆಂಡತಿ ಕಳೆ ಕಳೆಯಿಂದ ಕೂಡಿದ್ದವಳಾಗಿ ಆರೋಗ್ಯದಿಂದಿರುವ ಹಿಂದಿನ ಗುಟ್ಟು ಈಗ ಅರಿವಾಗಿ ಅಮ್ಮನ ಮೇಲೆ ಕಿಶೋರನಿಗೂ ದೇವ ಭಾವ ಮೂಡಿತು. ಎಂದೂ ನಮಸ್ಕಾರ ಮಾಡದ ಅವನು ಆನಂದ ತಂದ ಈ ಅನುಭವ ಕ್ಷಣವ ನೆನೆಸಿ ನಮಿಸುವಂತಾಯಿತು.
“ಅಕ್ಷಂತಲ ಬರಹ”
- ಹರಿಹರ ಬಿ ಆರ್
