ಅನುಸೂಯ ಜಹಗೀರದಾರ ಅವರ ಮೂರು ಕೃತಿಗಳು

ಅನುಸೂಯ ಜಹಗೀರದಾರ ಅವರ ಮೂರು ಕೃತಿಗಳ  ಕುರಿತು ಖ್ಯಾತ ಕಾದಂಬರಿಕಾರರು ಮತ್ತು ಕವಿಗಳಾದ ಡಾ.ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

೧. ಒಡಲ ಬೆಂಕಿ ಬೆಲೆ ರೂ. ೬೦/-
೨. ಆತ್ಮಾನುಸಂಧಾನ ರೂ. ೧೦೦/-
೩. ನೀಹಾರಿಕೆ ರೂ. ೧೦೦/-

ಪುಸ್ತಕಗಳಿಗಾಗಿ :

ಗುರು ಪ್ರಕಾಶನ
ಕೋಟೆ, ಕೊಪ್ಪಳ ೫೮೩ ೨೩೧
ಮೊ. ೯೪೪೯೩೧೦೯೫೫

ಬಹುಮುಖ ಪ್ರತಿಭೆಯ ಅನುಸೂಯ ಜಹಗೀರದಾರ ಕೊಪ್ಪಳದವರು. ಸರಕಾರಿ ಪ್ರೌಢ ಶಾಲೆ ಕೊಪ್ಪಳದಲ್ಲಿ ಕನ್ನಡ ಶಿಕ್ಷಕರಾಗಿರುವ ಇವರು ಹಿಂದೂಸ್ತಾನಿ ಸಂಗೀತ ಕಲಾವಿದೆ, ಕವಯತ್ರಿ, ಗದ್ಯ ಬರಹಗಾರರು, ಕನ್ನಡ ಪರ ವಿವಿಧ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿಯೂ, ಕೆಲವು ಸಂಸ್ಥೆಗಳ ಅಧ್ಯಕ್ಷ, ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದವರು. ಕರ್ಕಿ ಪ್ರಶಸ್ತಿ, ಕಾವ್ಯಶ್ರೀ ಪ್ರಶಸ್ತಿ, ಕುವೆಂಪು ರಾಜ್ಯ ಕಾವ್ಯ ಪುರಸ್ಕಾರ, ಕೊಪ್ಪಳ ಜಿಲ್ಲಾ ರಾಜ್ಯೋತ್ಸವ ಪುರಸ್ಕಾರ, ಕೊಪ್ಪಳ ಜಿಲ್ಲಾ ಮಹಿಳಾ ಒಕ್ಕೂಟ ಪುರಸ್ಕಾರ, ಸಂಯುಕ್ತ ಕರ್ನಾಟಕ ಯುಗಾದಿ ಕಾವ್ಯ ಸ್ಪರ್ಧೆ ಪ್ರಶಸ್ತಿ, ಉತ್ತಮ ವಿಶೇಷ ಶಿಕ್ಷಕಿ ರಾಜ್ಯ ಪ್ರಶಸ್ತಿ…ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಹಾಗೆಯೇ ಆಕಾಶವಾಣಿ, ದೂರದರ್ಶನ, ಅನೇಕ ರಾಜ್ಯ, ಜಿಲ್ಲಾ ಕವಿಗೋಷ್ಠಿಗಳಲ್ಲಿ, ಹಲವು ಉತ್ಸವಗಳಲ್ಲಿ ಕವನ ವಾಚನ ಮಾಡಿ ಇವರು ಹೆಸರು ವಾಸಿಯಾದವರು.

ಅನಸೂಯಾ ಜಹಗೀರದಾರ ಅವರು ಇದುವರೆಗೂ ನಾಲ್ಕು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾರೆ. 2014 ರಲ್ಲಿ “ಒಡಲ ಬೆಂಕಿ” ಶೀರ್ಷಿಕೆಯ ಕವನ ಸಂಕಲನ, 2021 ರಲ್ಲಿ “ಆತ್ಮಾನುಸಂಧಾನ” ಎನ್ನುವ ಶೀರ್ಷಿಕೆಯಡಿಯಲ್ಲಿ ಗಜಲ್ ಸಂಕಲನ ಮತ್ತು “ನೀಹಾರಿಕೆ” ಶೀರ್ಷಿಕೆಯಡಿಯಲ್ಲಿ ಹನಿಗವಿತೆಗಳ ಸಂಕಲಗಳನ್ನು ಹೊರತಂದಿದ್ದಾರೆ. ಇವರ “ಒಡಲ ಬೆಂಕಿ” ಗೆ ಡಾ. ಡಿ.ಎಸ್. ಕರ್ಕಿ ಕಾವ್ಯ ಪ್ರಶಸ್ತಿ ದೊರಕಿದೆ.

“ಒಡಲ ಬೆಂಕಿ” ಕವನ ಸಂಕಲನದಲ್ಲಿನ ಕವಿತೆಗಳಲ್ಲಿ ಮುಖ್ಯವಾಗಿ ಆಧುನಿಕ ಎನ್ನಿಸಿಕೊಳ್ಳುವ ಇಂದಿನ ಯುಗದಲ್ಲೂ ಮಹಿಳೆ ಎದುರಿಸುತ್ತಿರುವ ಕೌಟುಂಬಿಕ ದಬ್ಬಾಳಿಕೆ, ಸಾಮಾಜಿಕ ಅನ್ಯಾಯಗಳು, ಧಾರ್ಮಿಕ ಒತ್ತಡಗಳು, ಪರಂಪರಾಗತ ಶೋಷಣೆ ಮುಂತಾದ ವಸ್ತುಗಳನ್ನು ಹೊಂದಿದ್ದು ಅವುಗಳ ವಿರುದ್ಧ ಸಶಕ್ತವಾಗಿ ಧ್ವನಿ ಎತ್ತುವ ಕವನ ಸಂಕಲನವಾಗಿದೆ. ತಮ್ಮ ಸುತ್ತಲಿನ ಸಮಾಜದಲ್ಲಿ ಆಳವಾಗಿ ಬೇರು ಬಿಟ್ಟಿರುವ ಸ್ವಾರ್ಥ, ವಂಚನೆ, ಜಾತೀಯತೆ, ಭ್ರಷ್ಟಾಚಾರ ಮುಂತಾದವುಗಳ ಕುರಿತು ಇಲ್ಲಿ ಕವಯತ್ರಿ ಕವಿತೆಗಳ ಮೂಲಕ ಅಸಮಾಧಾನ ಎತ್ತುತ್ತಾರೆ. ಮಹಿಳೆ ಪ್ರಾಚೀನ ಕಾಲದಿಂದಲೂ ತ್ಯಾಗದ ಹೆಸರಿನಲ್ಲಿಯೇ ಶೋಷಣೆಗೆ ಒಳಗಾಗುತ್ತ ಬಂದವಳು. ‘ಇನ್ನೆಷ್ಟು ತ್ಯಾಗಿಯಾಗುತ್ತೀಯೇ?’ ಕವಿತೆಯ ಕೆಲ ಸಾಲುಗಳನ್ನು ಗಮನಿಸ ಬಹುದು :

ಇನ್ನೆಷ್ಟು ತ್ಯಾಗಿಯಾಗುತ್ತೀಯೇ?
ಸ್ವಾರ್ಥಿಯಾಗಿ ಬಿಡು
ನಿನ್ನತನವ ಬಿಂಬಿಸಿ ಬಿಡು..
ಬಲಿದಾನದಲ್ಲಿಯೇ ಬಲಿಪಶುವಾಗಿ
ನಿರಂತರ ಕಳೆದದ್ದೇ ಬಂತು
ಈಗಿಲ್ಲ ಬಿಡು ಸ್ವಂತಿಕೆ ಪ್ರದರ್ಶಿಸಿ ಬಿಡು
ಸಮಾನತೆ ಗಳಿಸಿ ಬಿಡು..
ಕಣ್ಣೀರ ತೊಡೆದು ಬಿಡು
ಕಳೆದ ಕಾರಿರುಳ ಮರೆತು ಬಿಡು…

ಜಹಾಗೀರದಾರ ಅವರ ಈ ಸಂಕಲನದ ಕವಿತೆಗಳಲ್ಲಿ ಹಲವು ಈ ದೇಶದಲ್ಲಿ ಆಗಾಗ ನಡೆಯುತ್ತಿರುವ ಸ್ತ್ರೀಯರ ಮೇಲಿನ ಲೈಂಗಿಕ ದೌರ್ಜನ್ಯಗಳು, ಬಲತ್ಕಾರಗಳು, ಪ್ರಮುಖವಾಗಿ ಮುಗ್ಧ ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಹಿಂಸೆಗಳ ಕುರಿತು ತಮ್ಮ ವಿಷಾದ ಮತ್ತು ಹತಾಶೆಗಳನ್ನು ಒಳಗೊಂಡಿವೆ.

“ಮತ್ತೊಂದು ರಕ್ಕಸೀ ಕೃತ್ಯ” ಕವಿತೆಯ ಕೆಲ ಸಾಲುಗಳನ್ನು ಗಮನಿಸ ಬಹುದು :

ಇನ್ನೆಷ್ಟು ಬಾಲೆಯರು
ಬಲಿಯಾಗುತ್ತಾರೋ?
ಸಮಾಜದ ಕ್ರೌರ್ಯಕ್ಕೆ
ರಕ್ಕಸೀ ಕೃತ್ಯಕ್ಕೆ..

ರಾಕ್ಷಸರ ಕೈಗಳಿಗೆ
ನಲು ನಲುಗಿ ಮುದುಡಿ
ಅರಳಬಲ್ಲ ಮೊಗ್ಗಿನ
ದಳಗಳೆಲ್ಲ ಉದುರಿ
ಒಂದೊಂದೇ ಚದುರಿ
ಹರಿಯುತ್ತವೆ ತುಂಡು ತುಂಡಾಗಿ
ಹಸಿ ಮಾಂಸದ ಮುದ್ದೆಯಾಗಿ..

ಏನೇ ಬರೆದರೂ, ಎಷ್ಟೇ ಬರೆದರೂ ಮಹಿಳೆಯರು ಮುಕ್ತವಾಗಿ, ತಮಗೆ ತೋಚಿದ್ದನ್ನು ಬರೆಯಲಾರರು ಎಂಬ ಒಂದು ಆರೋಪವಿದೆ, ಸಾಹಿತ್ಯ ವಲಯದಲ್ಲಿ. ಅವರು ಮುಕ್ತವಾಗಿ ಬರೆದರೆ ಎಲ್ಲಿ ಜನ ತಮ್ಮನ್ನು ಕನಿಷ್ಠವಾಗಿ ಕಾಣುತ್ತಾರೆ ಮತ್ತಿತರ ಆರೋಪಗಳಿಗೆ ಹೆದರಿ ಬರೆಯುತ್ತಾರೆ ಅಂತ. ಉದಾ: ಕೆಲ ಬಣ್ಣ ಕೆಲ ಕೋಮಿನವರ ಗುತ್ತಿಗೆ, ಕೆಲ ಜಾತಿ ಸೂಚಕ ಕಸುಬು ಕೆಲವರ ಗುತ್ತಿಗೆ ಮುಂತಾಗಿ ನಿರ್ಭಿಡೆಯಿಂದ ಬರೆಯಲಾಗುವುದಿಲ್ಲ ಅಂತ ಮಹಿಳೆಯರು ಗಾಸಿಪ್ ಗಳಿಗೆ ಹೆದರಿ ಮುಕ್ತವಾಗಿ ಬರೆಯಲಾಗುತ್ತಿಲ್ಲ ಎಂಬ ಅನಿಸಿಕೆಯೂ ಉಂಟು. ಅಂತೆಯೇ ಬರೆಯ ಬೇಕಿರುವುದನ್ನು ಸಂಸ್ಕರಿಸಿಯೇ ಬರೆಯುತ್ತಾರೆ ಎನ್ನುವ ಆರೋಪಕ್ಕೆ ಪೂರಕವಾಗಿ ಈ ಸಂಕಲನದಲ್ಲಿ ಒಂದು ಕವಿತೆ ಇದೆ.. ಅದರ ಶೀರ್ಷಿಕೆ “ಆತಂಕವಾದಿಗಳು” ಅಂತ. ಅದರ ಕೆಲ ಸಾಲುಗಳು ಹೀಗಿವೆ :

ಸ್ವಚ್ಛಂದವಾಗಿ ಬರೆಯಲಾಗುವುದಿಲ್ಲ ನಮಗೆ
ನಾವೆಲ್ಲ ಆತಂಕವಾದಿಗಳು ಒಳಗೊಳಗೆ
ಸಮಾಜ ಸಮುದಾಯದ ಗೆರೆಗಳ ಆತಂಕ
ಧರ್ಮ-ಕೋಮಿನ ಛಲದ ಆತಂಕ
ನೋವು ನಿಟ್ಟುಸಿರುಗಳ ಭಯದ ಆತಂಕ.

ಗಜಲ್ ಉರ್ದು ಸಾಹಿತ್ಯದಲ್ಲಿ ಕಾವ್ಯರಾಣಿ ಎಂದು ಕರೆಯಿಸಿಕೊಂಡಿದ್ದು ಈ ಪ್ರಕಾರ ಈಚೆಗೆ ಕನ್ನಡ ಸಾಹಿತ್ಯದಲ್ಲೂ ಜನಪ್ರಿಯವಾಗುತ್ತಿದೆ. ರಾಯಚೂರಿನ ಶಾಂತರಸರ ಹೆಸರು ಕಳೆದ ಕೆಲವು ದಶಕಗಳ ಹಿಂದೆ ಖ್ಯಾತಿ ಹೊಂದಿತ್ತು. ಅವರನ್ನು ಕನ್ನಡದ ಗಾಲಿಬ್ ಎಂದೂ ಕರೆಯಲಾಗಿದೆ. ಕನ್ನಡದಲ್ಲಿ ಈಗ ಹಲವರು ಗಜಲ್ ಗಳನ್ನು ಬರೆಯುತ್ತಿದ್ದು ಅವರ ಸಮೂಹದಲ್ಲಿ ಈಗ ಅನುಸೂಯಾ ಜಾಗೀರದಾರ ಸೇರಿ ಹೋಗಿದ್ದಾರೆ. ಅವರ ಪ್ರಕಟಿತ ಕೃತಿ “ಆತ್ಮಾನುಸಂಧಾನ” ದಲ್ಲಿ ೬೦ ಗಜಲ್ ಗಳಿವೆ. ಗಜಲ್ ಕಾವ್ಯಕ್ಕೆ ಇಂತಹುದೇ ವಿಷಯ ಎಂಬುದು ಇಲ್ಲ. ಈ ಪ್ರಕಾರದ ಆರಂಭಿಕ ರಚನೆಗಳಲ್ಲಿ ಸಾಂಪ್ರದಾಯಿಕತೆ ಇದ್ದರೂ, ಕ್ರಮೇಣ ಪ್ರೀತಿ, ವಿರಹ, ಶೃಂಗಾರ, ವಿಪ್ರಲಂಬ ಶೃಂಗಾರ, ಮೈಖಾನಾ, ಬಸಂತ್ ಬಹಾರ ಮೊದಲಾದವುಗಳೂ ವಸ್ತುವಾಗುತ್ತಿವೆ.

ಜಹಗೀರದಾರ ಅವರ ಇನ್ನೊಂದು ಪ್ರಕಟಿತ ಹನಿಗವಿತೆಗಳ ಕೃತಿ “ನೀಹಾರಿಕೆ” ಯಲ್ಲಿ ಹಲವು ಸಣ್ಣ ಸಣ್ಣ ಕವಿತೆಗಳಿವೆ. ನೀಹಾರಿಕೆ ಎನ್ನುವ ಶೀರ್ಷಿಕೆಯಲ್ಲಿ ಬರೆದ ಒಂದು ಕಿರುಗವಿತೆ ಹೀಗಿದೆ :

ಹಗಲಿನಲ್ಲಿ
ಕಾಣದ
ಇರುಳಿನಲ್ಲಿ
ಮಿನುಗುವ
ಅರ್ಧ ಸತ್ಯ..


  • ಡಾ.ಲಕ್ಷ್ಮಣ ಕೌಂಟೆ – ಖ್ಯಾತ ಕಾದಂಬರಿಕಾರರು, ಕವಿಗಳು, ಕಲಬುರ್ಗಿ 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading