ಮಾವಿನಕಾಯಿ ಹಣ್ಣಿನ ಜೊತೆ ಅಪ್ಪಿಮಿಡಿಯನ್ನು ಚಪ್ಪರಿಸುವ ಕಾಲ ಬಂದಿದೆ. ಅಪ್ಪಿ ಮಿಡಿ ಉಪ್ಪಿನಕಾಯಿಯನ್ನು ತಯಾರಿಸುವ ವಿಧಾನವನ್ನು ಹೋಟೆಲ್ ಉದ್ಯಮಿ ಅರುಣ್ ಪ್ರಸಾದ್ ಅವರು ತಮ್ಮ ಕೈರುಚಿಯನ್ನು ಬಾಯಿರುಚಿಯವರಿಗೆ ತೋರಿಸಿಕೊಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…
ನಾನು 200 ಕರ್ಪೂರದ ಅಪ್ಪೆ ಮಿಡಿ (ಕರ್ಪೂರದ ಘಮ) ಖರೀದಿಸಿದ್ದೆ. ಅದನ್ನ ತೊಟ್ಟು ಸಮೇತಾ ಒಣ ಬಟ್ಟೆಯಲ್ಲಿ ಒರೆಸಿ ಕಾಲು ಕೇಜಿ ಉಪ್ಪು ಹೆಂಚಿನಲ್ಲಿ ಸಣ್ಣ ಉರಿಯಲ್ಲಿ ಹುರಿದು ಪುಡಿ ಮಾಡಿ ಗಾಜಿನ ಭರಣಿಯಲ್ಲಿ ಮಿಡಿ ಮತ್ತು ಉಪ್ಪು ಪದರ ಪದರವಾಗಿ ಹಾಕಿಟ್ಟು ಸುಮಾರು 15 ಗಂಟೆ ನಂತರ ಉಪ್ಪಿನಕಾಯಿ ಮಸಾಲೆ ಮಿಶ್ರ ಮಾಡಿದೆ.
ಅಪ್ಪೆಮಿಡಿ ಉಪ್ಪಿನಕಾಯಿ ಮಸಾಲೆ ತಯಾರಿಸುವ ವಿಧಾನ :
1) ಕಾಲು ಕಪ್ ಜೀರಿಗೆ
2) ಕಾಲು ಕಪ್ ಸಾಸಿವೆ
3) 2 ಟೀಬಲ್ ಸ್ಪೂನ್ ಮೆಂತೆ ಪ್ರತ್ಯೇಕವಾಗಿ ಸಣ್ಣ ಉರಿಯಲ್ಲಿ ಹುರಿದು ಪುಡಿ ಮಾಡಿಕೊಂಡು ಕಾಲು ಕಿಲೋ ಮೆಣಸಿನ ಪುಡಿ ಜೊತೆ ಸೇರಿಸಿ.
ಒಗ್ಗರಣೆಗೆ ಕೊಬ್ಬರಿ ಎಣ್ಣೆ , ಸಾಸಿವೆ, ಇಂಗು, ಮೆಂತೆ ಸೇರಿಸಿ ಹುರಿದು ತಣ್ಣಗೆ ಮಾಡಿ ಅದಕ್ಕೆ ಮೇಲಿನ ಮಸಾಲೆ ಸೇರಿಸಿ ಕಲೆಸಿ. ಅದಕ್ಕೆ ಭರಣಿಯಲ್ಲಿನ ಮಾವಿನ ಮಿಡಿ ಮತ್ತು ಉಪ್ಪು ಮಿಶ್ರಣದಿಂದ ಉಂಟಾದ ನೀರು ಹಾಕಿ ಕಲೆಸಿ. ನಂತರ ಮಾವಿನ ಮಿಡಿ ಹಾಕಿ ಚೆನ್ನಾಗಿ ಮಸಾಲೆ ಹಿಡಿಯುವಂತೆ ಮಿಶ್ರ ಮಾಡಿ ಭರಣಿಗೆ ತುಂಬಿಸಿಡಿ. ಎರಡು ಮತ್ತು ನಾಲ್ಕನೆ ದಿನದಲ್ಲಿ ಒಮ್ಮೆ ನೀರಿನಂಶ ಇರದ ಒಣ ಚಮಚದಿಂದ ತಿರುವಿ.
ಒಂದು ವಾರದ ನಂತರ ಅಪ್ಪೆ ಮಿಡಿ ಉಪ್ಪು ಮಸಾಲೆ ಜೊತೆ ಸೇರಿ ಚಟ್ಟಾಗಿ ಸ್ವಾದ ಭರಿತ ಮಲೆನಾಡಿನ ಪಾರಂಪರಿಕ ಮಾವಿನ ಅಪ್ಪೆಮಿಡಿ ತಯಾರಾಗಿ ಉಪ್ಪಿನಕಾಯಿ ಸವಿಯಲು ಸಿದ್ದ. ನೀರು ತಾಗದಿದ್ದ ಹಾಗೆ ಬಳಸಿದರೆ ಒಂದು ವರ್ಷ ಕಾಲ ಬಾಳಿಕೆ ಬರುತ್ತದೆ.
- ಅರುಣ್ ಪ್ರಸಾದ್ – ಹೋಟೆಲ್ ಉದ್ಯಮಿ, ಲೇಖಕರು
