‘ನಳಚರಿತೆ’ ಪುಸ್ತಕ ಪರಿಚಯ : ಚನ್ನಕೇಶವ ಜಿ ಲಾಳನಕಟ್ಟೆ

ವಾಸ್ತವ ಸ್ಥಿತಿಗತಿಗಳಲ್ಲಿ ಮದುವೆಯಾಗಿ ಮರುದಿನವೆ ಸತಿ ಪತಿಗಳು ದೂರವಾಗಿರುವ ಸಾವಿರಾರು ಘಟನೆಗಳನ್ನು ಓದಿದ್ದೇವೆ ಹಾಗೂ ಕೇಳಿದ್ದೇವೆ. ಸಣ್ಣ ಕಾರಣಕ್ಕೆ ಮುನಿಸು ಬಂದರು ವಿಚ್ಛೇದನ ಪಡೆದಿರುವ ದೃಶ್ಯಗಳನ್ನು ನೋಡಿದ್ದೇವೆ. ಈ ಕೃತಿಯು ಕಲಿಯುಗದ ಸ್ಪೂರ್ತಿಯ ಕಥೆಯಾಗಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೆ ಮೊದಲ ಬಾರಿಗೆ ಶರ ಷಟ್ಪದಿಯಲ್ಲಿ ನಳ ದಮಯಂತಿಯರ ಕಥಾ ಹಂದರವಿರುವ ಖಂಡಕಾವ್ಯವನ್ನು ಚನ್ನಕೇಶವ ಜಿ ಲಾಳನಕಟ್ಟೆ ಅವರು ಪ್ರಸ್ತುತ ಪಡಿಸುತ್ತಿದ್ದಾರೆ.

ಪುಸ್ತಕ: ನಳಚರಿತೆ
ಲೇಖಕರು : ಚನ್ನಕೇಶವ ಜಿ ಲಾಳನಕಟ್ಟೆ
ಬೆಲೆ : ೧೮೦.೦೦
ಪ್ರಕಾಶಕರು : ಸುಮಾ ಪ್ರಕಾಶನ
ಖರೀದಿಗಾಗಿ : 9731111234

ಬಂಧುಗಳೆ ತಮ್ಮೆಲ್ಲರಿಗೂ ಒಂದು ಶುಭ ಸುದ್ದಿ ತಂದಿದ್ದೇನೆ. ವಾಸ್ತವ ಸ್ಥಿತಿಗತಿಗಳಲ್ಲಿ ಮದುವೆಯಾಗಿ ಮರುದಿನವೆ ಸತಿ ಪತಿಗಳು ದೂರವಾಗಿರುವ ಸಾವಿರಾರು ಘಟನೆಗಳನ್ನು ಓದಿದ್ದೇವೆ ಹಾಗೂ ಕೇಳಿದ್ದೇವೆ. ಸಣ್ಣ ಕಾರಣಕ್ಕೆ ಮುನಿಸು ಬಂದರು ವಿಚ್ಛೇದನ ಪಡೆದಿರುವ ದೃಶ್ಯಗಳನ್ನು ನೋಡಿದ್ದೇವೆ.

ಸಂಸಾರದೊಳು ಸಮರಸವಿದ್ದರೆ ಆನಂದ ಸಾಗರ
ಸ್ವಲ್ಪ ಅಲೆಗಳೆದ್ದು ಕದಡಿದಾಗ ದುಃಖದ ಆಗರ.

ಎಂತಹ ಘೋರ ಕಷ್ಟಗಳನ್ನು ಅನುಭವಿಸಿಯೂ ದೂರವಾಗದೆ ಹತ್ತಿರವಾದ ಒಂದು ಅಮರ ಪ್ರೇಮಕಥೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇನೆ. ಈ ಕಥೆ ಸತ್ಯಯುಗದಿಂದ ಕಲಿಯುಗದ ವರೆಗೆ ಸ್ಪೂರ್ತಿಯಾಗುವ ಕಥೆಯಾಗಿದ್ದು ಕನ್ನಡ ಸಾಹಿತ್ಯ ಚರಿತ್ರೆಯಲ್ಲೆ ಮೊದಲ ಬಾರಿಗೆ ಶರ ಷಟ್ಪದಿಯಲ್ಲಿ ನಳ ದಮಯಂತಿಯರ ಕಥಾ ಹಂದರವಿರುವ ಖಂಡಕಾವ್ಯವನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತಿದ್ದೇನೆ.

 

ಈ ಮಹಾಕಾವ್ಯವನ್ನು ಮೊದಲು ಸೂತಮುನಿಗಳು ಅಗಸ್ತ್ಯರಿಗೂ ಹಾಗೂ ಇತರ ಮುನಿಗಳಿಗೂ, ಕೃತಾಯುಗದಲ್ಲಿ ರಾಮನಿಗೆ ಅಗಸ್ತ್ಯ ಮುನಿಗಳು ಹಾಗೂ ವನವಾಸದಲ್ಲಿ ಕಷ್ಟಪಡುತಿದ್ದಾಗ ರೋಮಶ ಮುನಿಗಳು ಪಾಂಡವರಿಗೂ ತಿಳಿಸಿದ ಈ ಕಾವ್ಯವನ್ನು ನಾನು ತಾಯಿ ಸರಸ್ವತಿ, ಹಾಗೂ ಕನಕದಾಸರ ಕೃಪೆಯಿಂದ ನಿಮ್ಮ ಮುಂದೆ ಈ ಕಥೆಯನ್ನು ಇಡುತಿದ್ದೇನೆ.

ಹಾಗಿದ್ರೆ ಈ ಕಥೆ ಏಕೆ ಓದಬೇಕು?

೧. ನಳಚರಿತೆ ಅಮರಪ್ರೇಮ ಕಾವ್ಯವಾಗಿರುವುದರಿಂದ ಪ್ರತಿಯೊಬ್ಬರೂ ಓದಲೇಬೇಕು.
೨.ಮೊದಲ ಬಾರಿಗೆ ಶರ ಷಟ್ಪದಿಯಲ್ಲಿ ಖಂಡಕಾವ್ಯ.
೩. ಸತಿಪತಿಗಳ ವಿರಹ ಭಾವದ ತುಡಿತ ಮಿಡಿತಗಳು.
೪. ಕಾವ್ಯದಲ್ಲಿ ನವರಸಗಳನ್ನು ಕಾಣಬಹುದು.
೫. ಶಾಲಾ ಮಕ್ಕಳಿಗೂ ಯಾವುದೇ ಪದಕೋಶವಿಲ್ಲದೆ ಓದ ಬಹುದಾಗಿದೆ.
೬. ಎಲ್ಲಾ ಯುಗಗಳಲ್ಲೂ ಎಲ್ಲ ರಾಜರಿಗೂ ಸ್ಪೂರ್ತಿಯಾದ ಕಥೆ.
೭. ಹಾಡಿದರೆ ಗಾಯನ, ಓದಿದರೆ ವಾಚನ.
೮. ಎಷ್ಟೇ ಕಷ್ಟಗಳಿದ್ದರೂ ಪತಿಯೇ ಪರದೈವವೆಂಬ ಹೆಣ್ಣಿನ ಭಾವ ಮಿಡಿತ.
೯. ಹೆಂಡತಿ ತನ್ನಿಂದ ಕಷ್ಟಪಡುತ್ತಾಳೆಂಬ ನಳರಾಜನ ಮನೋ ಮಹೋನ್ನತ ಭಾವ.
೧೦. ಜೂಜು ಎಷ್ಟು ಕೆಟ್ಟದ್ದು ಎಂದು ತೋರಿಸಿದ ಕಥೆ.
ಹೀಗೆ ಹಲವಾರು ವಿಷಯಗಳು ಈ ಕಥಾ ಸಾಗರದಲ್ಲಿ ತಮ್ಮೆಲ್ಲರಿಗೂ ಓದಲು ಸಿಗುತ್ತವೆ.

ದಮಯಂತಿಯ ಚೆಲುವಿನ ವರ್ಣನೆಯ ಪದ್ಯಗಳು

ನಳನೃಪನೋಲಗ-
ದೊಳು ತಾ ಕುಳಿತಿರೆ
ತಿಳಿಸಿದ ಬ್ರಾಹ್ಮಣ ವಾರ್ತೆಯನು
ಹೊಳಪಲಿ ಚಂದ್ರಿಕೆ
ಬಿಳುಪಲಿ ನೈದಿಲೆ
ಬಳುಕುವ ನಡುವಿನ ಭೀಮಸುತೆ ||೬||

ಸುರಪತಿ ತನುಜೆಯ
ಬೆರೆಸಿಹ ಚೆಲುವೆಯೆ
ಮರೆಸಿಹ ಚೆಲುವೆಯು ದಮಯಂತಿ
ಬರೆಹದಲಿಳಿಸಲು
ಸುರಿವವು ಸಾಲ್ಗಳು
ಹರಿವವು ಕವಿಗಳ ಪದಪಂಕ್ತಿ ||೭||

ವಿದರ್ಭ ರಾಜ್ಯದ ವರ್ಣನೆಯ ಚರಣ

ಹೆಬ್ಬಾಗಿಲಿನಲಿ
ಹಬ್ಬಿದೆ ಚೆಲುವಿನ
ನಿಬ್ಬೆರಗಾಗುವ ಕುಸುರಿಗಳು
ಇಬ್ಬನಿ ಹನಿಗಳು
ತಬ್ಬುತ ತೃಣಗಳ
ಮಬ್ಬನು ಸರಿಸುತ ಹೊಳೆದಿಹವು ||೭೧||

ಕಲಿ ಇಂದ್ರನನ್ನು ದೋಷಿಸುವ ಪದ್ಯ

ಎಲೆಲೆಲೊ ಶತಮಖ
ಬಲಹೀನನುನೀ
ನಳನಿಗೆ ದಮಯಂತಿಯ ಕೊಟ್ಟೆ
ಇಳೆಯೊಳು ನರಪತಿ-
ಗೊಳಿತನು ಬಯಸುತ
ಬಲಪಡಿಸಿರುವೆಯ ಹೇ ಮೂಢ ||೧೧೫|

ನಳರಾಜ ಕಾಡಿನಲ್ಲಿರುವಾಗ ಕಾಡಿಗೆ ಬೆಂಕಿ ಬಿದ್ದ ಸಂದರ್ಭ

ಮುನಿದಿರಲನಲನು
ಬನವೇ ಕರಗಿತು
ಚಣದೊಳು ಬಡಬಾನಲದೊಳಗೆ
ಕನಲಿದ ನಳ ಕಾ-
ನನದೊಳು ನಡೆದಿರೆ
ದನಿಯನು ಕೇಳಿದ ನರಳುವುದ||೨೨೫||

ಉರಗಪತಿ ನಳಮಹಾರಾಜನನ್ನು ಕಾಪಡೆಂದು ಗೋಗರೆದ ಪರಿ

ಕನಿಕರ ತೋರುತ-
ಲನಲನ ಕಿಚ್ಚೊಳು ಕಾಪಾಡು
ಸನಿಹಕೆ ತೆರಳುತ
ವಿನಯದಿ ಫಣಿ ರಾ-
ಜನ ನಳ ಕಾಪಾಡಿದನಲ್ಲೆ||೨೩೦||

ಸರ್ಪ ಕಚ್ಚಿದಾಗ ನಳನ ದೇಹದಲ್ಲಾದ ಬದಲಾವಣೆ

ಅಡ್ಡದ ಮೋರೆಯ
ಗಿಡ್ಡನೆ ರೂಪವು
ದೊಡ್ಡನೆ ಹೊಟ್ಟೆಯು ಬಂದಿಹುದು
ಗೊಡ್ಡಿನ ದೇಹವು
ದಡ್ಡನ ಚರ್ಯೆಯ-
ಳೊಡ್ಡಿದ ಭಾವಕೆ ಬದಲಾದ||೨೩೩||

ಉದುರಿದ ರೋಮವು
ಚದುರಿದ ಕೇಶವು
ಮೆದು ಮೈಯಾಯ್ತು ಕುರೂಪದೊಳು
ಹೃದಯದಿ ಮರುಗುತ
ವಿಧಿಯೊದಗಿದ ಪರಿ
ಬೆದರುತ ನಳನೃಪ ದುಃಖಿಸಿದ ||೨೩೪||

ಉರಗಪತಿ ನಳಮಹಾರಾಜನನ್ನು ಸಂತೈಸಿದ ಪರಿ

ಉರಗದ ರೂಪವ
ತೊರೆಯುತ ಸರ್ಪವು
ನರರೂಪದೊಳಗೆ ಕಾಣಿಸಿತು
ಧರೆಪನೆ ನಿನಗಿದು
ವರವನು ಕೊಟ್ಟಿಹೆ
ಮರುಗುವುದನು ನೀ ತೊಡೆಯೆನುತ||೨೩೫||

ಹೀಗೆ ಪ್ರತಿಯೊಂದು ಚರಣವು ನಿಮ್ಮನ್ನು ಮುಂದಿನ ಭಾಗಕ್ಕೆ ಕಾತರದಿಂದಿರುವಂತೆ ಮಾಡುತ್ತದೆ. ಸುಮಾ ಪ್ರಕಾಶನದ ವತಿಯಿಂದ ಈ ಕಾವ್ಯ ತೆರಗಿಳಿಯುತ್ತಿದೆ. ಹಾಗಿದ್ರೆ ಈ ಪುಸ್ತಕ ಹೊರ ಬರುವ ವರೆಗೂ ತಾವು ಕಾಯಲೇ ಬೇಕು. ಈಗಾಗಲೆ ಮುದ್ರಣವಾಗಿ ಬಿಡುಗಡೆಗೆ ಸಿದ್ದವಾಗಿದೆ. ನಳ ಚರಿತೆ ಪುಸ್ತಕದ ಪ್ರತಿಗಳಿಗಾಗಿ ಕೆಳಗಿನ ಮೊಬೈಲ್ ನಂಬರ್ ಗೆ ನಿಮ್ಮ ವಿಳಾಸ ವಾಟ್ಸಪ್ ಮೂಲಕ ಕಳಿಸಿ.


  • ಆಕೃತಿ ಕನ್ನಡ

 

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading