‘ಕೃಷ್ಣೋಪದೇಶ’ ಸಣ್ಣಕಥೆ : ಅಪ್ಪಯ್ಯ ಯಾದವ್

ಮಳೆ ನೀರು ಹರಿಯುವಾಗ ತಾನು ಮುಂದೆ ಎಲ್ಲಿ ಹೋಗಿ ಸೇರುತ್ತೇನೆ ಎನ್ನುವುದು ಅದಕ್ಕೆ ಗೊತ್ತಿರುವುದಿಲ್ಲ. ಹಾಗೆ ನಾವೆಲ್ಲರೂ ಎಲ್ಲೋ ಹುಟ್ಟಿ, ಎಲ್ಲೋ ಬೆಳೆಯುತ್ತೇವೆ.ದೇಶದ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕುತ್ತೇವೆ. ಬಡವ ನಿಕೃಷ್ಟನೂ ಅಲ್ಲ ಶ್ರೀಮಂತ ಉತ್ಕೃಷ್ಟನೂ ಅಲ್ಲ, ಅವರವರ ಪ್ರಯತ್ನದ ಫಲ ಅವರವರ ಭವಿಷ್ಯವನ್ನು ನಿರ್ಧರಿಸುತ್ತದೆ. ಕತೆಗಾರ ಅಪ್ಪಯ್ಯ ಯು ಯಾದವ್ ಅವರ ಸಣ್ಣಕತೆಯನ್ನು ತಪ್ಪದೆ ಮುಂದೆ ಓದಿ…

ಪಾಪ..ರಾಜು..ಆ ಪಾರ್ಕಿನಲ್ಲಿ ಯಾರೂಹೆಚ್ಚಾಗಿ ಓಡಾಡದ ಕಡೆ ಒಂದು ಮರದಬುಡದಲ್ಲಿಟ್ಟಿದ್ದ ಕಲ್ಲು ಮಂಚದಲ್ಲಿಕೂತು ಏನೋ ಯೋಚಿಸುತ್ತ ಸುಮ್ಮನೆ ಕುಳಿತಿದ್ದ, ಅವನ ಮನಸ್ಸಿನಲ್ಲಿ ಅಲೆ ಅಲೆಯಾಗಿ ಎದ್ದ ಯಾವುದೋ ಯೋಚನೆಯೊಂದು ತನ್ನ ಸ್ಥಿಮಿತವನ್ನು ಕಳೆದುಕೊಳ್ಳುವಂತೆ ಮಾಡಿತ್ತು.

ನಾನ್ಯಾಕೆ ಹೀಗೆ? ಇಷ್ಟೊಂದು ಜನ ಗಂಡು ಮಕ್ಕಳು ಹೆಣ್ಣು ಮಕ್ಕಳು, ವಯಸ್ಕರು ಈ ಪಾರ್ಕೊಳಗೆ ಎಷ್ಟು ಸಂತೋಷದಿಂದ ಒಬ್ಬರಿಗೊಬ್ಬರು ಹರಟುತ್ತ ನಗುತ್ತ ಖುಷಿ ಖುಷಿಯಾಗಿ ಸುತ್ತುತ್ತಿದ್ದಾರೆ. ನಾನು ಮಾತ್ರ ಯಾಕೆ ಹೀಗೆ ?? ಬಡವನಾಗಿ ಯಾಕೆ ಹುಟ್ಟಿದೆ? ನನ್ನೊಂದಿಗೆ ಓದಿದವರೆಲ್ಲ ಶ್ರೀಮಂತರ ಮಕ್ಕಳು, ದಿನಾಲೂ ಶಾಲೆಗೆ ಕಾರಲ್ಲೆ ಬರುತ್ತಾರೆ. ಪರ್ಸು ತುಂಬ ಜೇಬಿನಲ್ಲಿ ಹಣ ಇಟ್ಟಿರುತ್ತಾರೆ, ಬಗೆಬಗೆಯ ತಿಂಡಿಗಳನ್ನ ತಗೊಂಡು ತಿಂತಾರೆ, ಅವರ ಬಟ್ಟೆ ಬರೆಕೂಡ ಎಷ್ಟು ದುಬಾರಿಯವು, ಅವರ ಜತೆ ಇರುವುದಾಗಲಿ ಮಾತಾಡುವುದಾಗಲಿ ರಾಜುಗೆ ಮುಜುಗರವಾಗುತ್ತಿತ್ತು.

ದಿನಾ ಶಾಲೆಯಲ್ಲೂ ಇದೇ ಸಮಸ್ಯೆಯಿಂದ ನೊಂದಿದ್ದ ರಾಜು ಇಂದು ಪಾರ್ಕ್ ಕಡೆ ಮುಖ ಮಾಡಿದ್ದ. ಆದರೆ ಇಲ್ಲೂ ಅದೇ ಬೇಸರ ಏಕಾಂತತೆ. ಅದೇ ದಿನ ರಾಜುನ ಕನ್ನಡ ಮೇಸ್ಟ್ರು ಅವರ ಸಂಸಾರದೊಂದಿಗೆ ಆ ಪಾರ್ಕಲ್ಲಿ ಒಂದು ಮರದನೆರಳಿರುವ ವಿಶಾಲ ಜಾಗದಲ್ಲಿ ಛಾದರ ಹಾಸಿ ಮನೆಯಿಂದ ತಂದ ಆಹಾರವನ್ನು ತಿನ್ನಲು ಸುರು ಹಚ್ಚಿಕೊಂಡಿದ್ದರು.

ಇವರ ಸ್ವಲ್ಪ ದೂರದಲ್ಲೇ ಕುಳಿತ ಹುಡುಗನನ್ನು ಗಮನಿಸಿದ ಮೇಸ್ಟ್ರು ದೂರದಿಂದಲೆ ಯಾರೆಂದು ನೋಡಿದಾಗ ರಾಜುನೇ ಇರಬೇಕೆಂದುಕೊಂಡು ಊಟ ಬದಿಗಿಟ್ಟು ಅವನ ಬಳಿ ಅನುಮಾನದಿಂದ ಹೆಜ್ಜೆ ಇಟ್ಟರು.

‘ಅರೇ… ರಾಜು ಏನು ಪಾರ್ಕಿಗೆ ಬಂದಿದ್ಯಾ? ನಿನ್ನನ್ನು ಈಗತಾನೆ ನೋಡಿದೆ. ನಾವು ಊಟಕ್ಕೆ ಕೂಂತಿದ್ವಿ ಬಾ.. ನಾವು ಮನೆಯಿಂದ ತಂದ ತಿಂಡಿಗಳನ್ನು ತಿಂತಾ ಇದ್ದೆವು ಬಾ… ನೀನೂ ಜತೆಯಲ್ಲಿ ಕೂತು ತಿನ್ನುವಿಯಂತೆ ಎಂದು ಎಬ್ಬಿಸಿದರು. ಬೇಡ ಸರ್, ನಾನು ಈಗ ತಾನೆ ಊಟ ಮುಗಿಸಿ ಬಂದೆ. ನೀವು ಹೋಗಿ ಸರ್’ ಎಂದು ಪಕ್ಕಕ್ಕೆ ಸರಿಯಲು ನೋಡಿದ. ರಾಮುಗೆ ಅವರ ಜತೆ ತಿನ್ನಲು ಸುತರಂ ಇಷ್ಟವಿರಲಿಲ್ಲ. ಮೇಸ್ಟ್ರು ಬಿಡಬೇಕಲ್ಲ, ಕರೆದುಕೊಂಡು ಊಟ ಮಾಡುತ್ತಿದ್ದ ಜಾಗಕ್ಕೆ ಬಂದರು. ‘ಬಾ ಕೂತ್ಕೊ… ಅವನಿಗೂ ಸ್ವಲ್ಪ ತಿಂಡಿಯನ್ನು ಕೊಟ್ಟರು .

ರಾಜು ಮಾತ್ರ ಮನಸ್ಸಿಲ್ಲದ ಮನಸ್ಸಿಂದ ಸರ್ರ ಒತ್ತಾಯಕ್ಕೆ ತಿನ್ನಲೇ ಬೇಕಾಯ್ತು.

‘ಏನೊ ರಾಮು, ನಾ ಆಗ್ಲಿಂದ ನಿನ್ನ ಗಮನಿಸುತ್ತಿದ್ದೇನೆ, ನಿನ್ನ ಮನದಲ್ಲಿ ಯಾವುದೋ ಬೇಡವಾದ ಯೋಚನೆಯೊಂದು ಹೊಕ್ಕು ಕಾಡುತ್ತಿದೆ ಅಲ್ವಾ?. ಚೆನ್ನಾಗಿ ಓದುವ ಹುಡುಗ ಈ ರೀತಿಯೆಲ್ಲ ಯೋಚಿಸಿದರೆ ಯಾವುದೂ ತಲೆಯೊಳಗೆ ತೂರಲ್ಲ ಕಣೊ, ನನ್ನ ಒಳ್ಳೆ ವಿದ್ಯಾರ್ಥಿ ಅಂತ ಹೇಳುತ್ತಿದ್ದೇನೆ. ನೋಡು…  ಈ ವಯಸ್ಸಲ್ಲಿ ಚೆನ್ನಾಗಿ ಓದಿಲ್ಲ ಅಂದರೆ ನಿನ್ನ ಮುಂದಿನ ಜೀವನ ಕಷ್ಟವಾಗಬಹುದು. ನಿನ್ನ ತಂಗಿ ಅಮ್ಮ ಎಲ್ಲ ನಿನ್ನನ್ನೇ ಮುಂದೆ ನಂಬಿರುವವರು. ಮನುಷ್ಯರು‌ ಅಂದಮೇಲೆ ಹಲವು ಸಮಸ್ಯೆಗಳು ಬರುತ್ತವೆ ಅದನ್ನೆಲ್ಲ ಹಿಂದೆ ತಳ್ಳಿ ನಾವು ಮುಂದೆ ಸಾಗಬೇಕು, ಧೈರ್ಯದಿಂದಿರಬೇಕು ಎಲ್ಲವನ್ನೂಎದುರಿಸುತ್ತೇನೆಂಬ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕು. ಅದೂ ಅಲ್ಲದೆ ನೀನೊಬ್ಬ ಒಳ್ಳೆ ಸ್ಟೂಡೆಂಟ್. ಪಠ್ಯಪುಸ್ತಕದಲ್ಲಿ ಹಲವಾರು ಮಹಾಪುರುಷರ ಕಥೆಯನ್ನು ಓದಿದ್ದೀಯ. ಆದರೂ ನೆನಪಿಸುತ್ತೇನೆ, ನಮ್ಮ ಮಿಸೈಲ್ ಮೇನ್ ಅಬ್ದುಲ್ ಕಲಾಂ ಅವರು ಕಡು ಬಡತನದಲ್ಲಿ ಬೆಳೆದವರು. ಬೆಳಗ್ಗೆ ಎದ್ದು ಮನೆಮನೆಗೆ ಪೇಪರ್ ಕಾಕಿ ಅದರಲ್ಲಿ ಬಂದ ಹಣದಿಂದ ಶಾಲೆ ಮುಂದುವರಿಸಿದವರು. ಹಾಗೆ ನಮ್ಮ ರತನ್ ಟಾಟಾ, ಬಿಲ್ಗೇಟ್ ಎಲ್ಲರ ಬಗ್ಗೆಯೂ ನಿನಗೆ ನಾನೆ ಕ್ಲಾಸಲ್ಲಿ ಹೇಳಿಕೊಟ್ಟಿದ್ದೆ. ಅವರೆಲ್ಲ ಉದಾಹರಣೆ ಮಾತ್ರ . ಅವರಂತೆ ಏನಾದರೂ ಸಾಧಿಸುವ ಛಲವಿರಬೇಕು. ಯಾರೂ ಹುಟ್ಟುವಾಗ ಶ್ರೀಮಂತರಲ್ಲ. ನೋಡು ನಮ್ಮ ಸಂವಿಧಾನ ಶಿಲ್ಪಿ ಡಾ ಅಂಬೆಡ್ಕರ್ ಅವರು ಸಣ್ಣವರಿದ್ದಾಗ ಗುಡಿಸಲಲ್ಲಿ ಬೆಳೆದವರು. ಮನೆಯಲ್ಲಿ ವಿದ್ಯುತ್ ದೀಪದ ಬೆಳಕಿರಲಿಲ್ಲ. ಆದರೂ ಅವರು ಆತ್ಮವಿಶ್ವಾಸ ಕಳೆದುಕೊಳ್ಳದೆ ಕರೆಂಟ್ಕಂಬದ ದೀಪದ ಬೆಳಕಲ್ಲಿ ಓದಿದರಂತೆ
ಅದಕ್ಕೆ ನಾನು ಪದೇ ಪದೇ ಹೇಳುವುದು ಆತ್ಮ ವಿಶ್ವಾಸ ಬೆಳೆಸಿಕೊ ಎಂದು.

ಮಳೆ ಬಂದಾಗ ಹರಿಯುವ ನೀರು ಚಿಕ್ಕ ಚಿಕ್ಕ ತೊರೆಯಾಗಿ ಕೊಳಕು ನೀರನ್ನೆಲ್ಲ ಸೇರಿಸಿ ಹರಿಯುತ್ತಾ ಹಳ್ಳ ದಿಣ್ಣೆಗಳನ್ನೆಲ್ಲ ದಾಟಿ ಸಾಗುವಾಗ, ಅದು ಕಡೆಗೆ ಎಲ್ಲಿ ಸೇರುತ್ತದೆ? ಏನಾಗುತ್ತೆ? ಎಂದು ಅದಕ್ಕೇ ಗೊತ್ತಿರುವುದಿಲ್ಲ. ತನ್ನಗುರಿಯಿಂದ ಹಿಂದೆ ಸರಿಯುವುದಿಲ್ಲ. ಅದೇ ತೊರೆ ಕೃಷ್ಣರಾಜ ಸಾಗರದಲ್ಲಿ ಸೇರಿದಾಗ ಅದಕ್ಕೆ ಕೊಳಚೆಯಿಂದ ಮುಕ್ತಿ ದೊರಕಿ ಬೃಹದಾಕಾರದ ನದಿಯಾಗಿ ಹರಿದು ಹಲವಾರು ರೈತರ ಜೀವನಾಡಿಯಾಗಿ ಮುಂದೆ ಹರಿಯುತ್ತಿರುತ್ತದೆ. ಅದು ಎಷ್ಟೋ ಎಕರೆ ಬಂಜರು ಭೂಮಿಯನ್ನು ಫಲವತ್ತಾಗಿಸಿ ಆ ಪ್ರದೇಶವನ್ನೇ ಸುಭಿಕ್ಷ ಗೊಳಿಸುತ್ತದೆ. ಅದೇ ನದಿ ಮುಂದಕ್ಕೆ ಹರಿದು ಕನ್ನಂಬಾಡಿ ಅಣೆಕಟ್ಟಿನಲ್ಲಿ ಬಣ್ಣಬಣ್ಣದ ಬೆಳಕಿನೊಂದಿಗೆ ಸರಸವಾಡಿ, ಎಷ್ಟೋ ಜನರು ಆ ನೀರ ಝರಿಯ ಸೌಂದರ್ಯವನ್ನು ಆಸ್ವಾಧಿಸುತ್ತ ತನ್ನನ್ನು ತಾನು ಮರೆಯುತ್ತಾರೆ. ಅದೇ ನೀರು ಪ್ರಪಾತಕ್ಕೆ ಧುಮ್ಮಿಕ್ಕಿ ಹರಿದು ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಸುವ ಸೌಂದರ್ಯ ಎಲ್ಲರನ್ನೂ ಉತ್ಸಾಹ ಗೊಳಿಸುತ್ತದೆ.

ನಾವೆಲ್ಲರೂ ಹಾಗೆ ಎಲ್ಲೋ ಹುಟ್ಟಿ ಎಲ್ಲೋ ಬೆಳೆಯುತ್ತೇವೆ. ದೇಶದ ಒಬ್ಬ ಉತ್ತಮ ವ್ಯಕ್ತಿಯಾಗಿ ಬದುಕುತ್ತೇವೆ. ಬಡವ ನಿಕೃಷ್ಟನೂ ಅಲ್ಲ ಶ್ರೀಮಂತ ಉತ್ಕೃಷ್ಟನೂ ಅಲ್ಲ, ಅವರವರ ಪ್ರಯತ್ನದ ಫಲ ಅವರವರ ಭವಿಷ್ಯವನ್ನು ನಿರ್ಧರಿಸುತ್ತದೆ.

ಅಧ್ಯಾಪಕರು ಕೃಷ್ಣನು ಅರ್ಜುನನಿಗೆ ಮಾಡಿದ ಕೃಷ್ಣೋಪದೇಶದಂತೆ ರಾಜುವಿನ ಮನದಲ್ಲಿದ್ದ ಎಲ್ಲ ಕೀಳರಿಮೆಯೆಂಬ ಕೊಳೆಯನ್ನು ತೊಡೆದು ಹಾಕಿ ಉತ್ಸಾಹವನ್ನು ತುಂಬಿದರು.
ಮೇಸ್ಟ್ರು ಇಷ್ಟು ಹೊತ್ತು ರಾಜುಗೆ ಮಾಡಿದ ಪಾಠ ಅವನ ಮನಸ್ಸನ್ನು ಸಂಪೂರ್ಣ ಬದಲಾಯಿಸಿತು. ಹೊಸ ಉತ್ಸಾಹದ ಚಿಲುಮೆಯಂತೆ ಮೇಸ್ಟ್ರನ್ನು ಬೀಳ್ಕೊಟ್ಟ. ಆತನ ಮನದ ತುಮುಲತೆಯೆಲ್ಲ ಕಳೆದು ನವ ವಸಂತಕ್ಕೆ ಚಿಗುರಿದ ಹಸಿರೆಲೆಯಂತೆ ನಳ ನಳಿಸುವ ಹೂಬನದಂತೆ ಮನಸ್ಸು ಪ್ರಫುಲ್ಲವಾಗಿ ಮನೆ ಕಡೆ ವೇಗವಾಗಿ ಹೆಜ್ಜೆ ಇಟ್ಟನು.


  • ಅಪ್ಪಯ್ಯ ಯು ಯಾದವ್ – ಕಾಸರಗೋಡು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading