ಮಾಲೂರಿನ ಯುವ ಸಾಹಿತಿ ನಾಗೊಂಡಹಳ್ಳಿ ಸುನಿಲ್

ನಾಗೊಂಡಹಳ್ಳಿ ಸುನಿಲ್ ರವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು, ನಾಗೊಂಡಹಳ್ಳಿ ಗ್ರಾಮದವರು. ಸುನಿಲ್ ಬರೆದಂತಹ “ಆರಿದ ಹಣತೆ” ಎಂಬ ಭಾವಗೀತೆಯು ಧ್ವನಿಸುರಳಿಯಾಗಿ ಬಿಡುಗಡೆಯಾಗಿದೆ.ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿರುವ ನಾಗೊಂಡಹಳ್ಳಿ ಸುನೀಲ್ ರವರ ಸಾಹಿತ್ಯ ಸೇವೆಯ ಕುರಿತು ನಾರಾಯಣಸ್ವಾಮಿ ಮಾಲೂರು ಅವರು ಬರೆದಿರುವ ಪರಿಚಯ ಲೇಖನವನ್ನು ತಪ್ಪದೆ ಮುಂದೆ ಓದಿ…

ಬಹುಜನ ಸಂಸ್ಕೃತಿಯ ನೆಲವಾದ ಕೋಲಾರ ಜಿಲ್ಲೆಯು ಸಾಂಸ್ಕೃತಿಕ ಮತ್ತು ಸಾಹಿತ್ಯದ ತವರೂರು ಕೂಡ. ಬಂಗಾರವನ್ನು ವಿಶ್ವಕ್ಕೆ ಕೊಟ್ಟು ಬಂಗಾರಕ್ಕಿಂತ ಹೆಚ್ಚಾಗಿ ಬೆಲೆಬಾಳುವ ಜ್ಞಾನ ಚೇತನಗಳಿಗೆ ಜನ್ಮವನ್ನು ಕೊಟ್ಟಿದೆ ಈ ಕೋಲಾರ ಜಿಲ್ಲೆ. ಇಂತಹ ನೆಲದಲ್ಲಿ ಬಂಡಾಯಗಾರರಿಗೂ, ಬಂಡಾಯ ಸಾಹಿತ್ಯಕ್ಕೂ ಕೊರತೆಯಿಲ್ಲಾ. ಹಲವಾರು ಬಂಡಾಯ ಹೋರಾಟಗಳು ಈ ಭೂಮಿಯಲ್ಲಿಯೇ ಜನ್ಮತಾಳಿವೆ. ಹೋರಾಟದ ಹಾಡುಗಳಿಗೂ, ಹಾಡುಗಾರರಿಗೂ ಪ್ರಸಿದ್ದಿಯನ್ನು ಪಡೆದಿರುವ ಕೋಲಾರ ಜಿಲ್ಲೆಯು ಹಲವಾರು ರಾಜಕೀಯ ಮುತ್ಸದಿಗಳು, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕನಾ೯ಟಕದ ಕೀತಿ೯ಯನ್ನು ಎತ್ತಿಹಿಡಿದ ಸಾಹಿತಿಗಳು ಕೂಡ ಈ ನೆಲದಲ್ಲಿ ಜನಿಸಿದ್ದಾರೆ. ನವ್ಯ ಕನ್ನಡ ಸಾಹಿತ್ಯಲೋಕದಲ್ಲಂತು ಈ ಕೋಲಾರ ಜಿಲ್ಲೆಯಲ್ಲಿ ಹಲವಾರು ಕವಿಗಳು, ಲೇಖಕರು, ಹಾಡುಗಾರರು, ಕಲಾವಿದರು ಬೆಳಕಿಗೆ ಬರುತ್ತಿದ್ದಾರೆ ಇಂತಹ ಉದಯೋನ್ಮುಖ ಪ್ರತಿಭೆಗಳಲ್ಲಿ ಯುವ ಲೇಖಕರಾಗಿ ಗುರುತಿಸಿಕೊಂಡಿರುವ ನಾಗೊಂಡಹಳ್ಳಿ ಸುನಿಲ್ ರವರು ಕೂಡ ಒಬ್ಬರು.

ನಾಗೊಂಡಹಳ್ಳಿ ಸುನಿಲ್ ರವರು ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕು, ನಾಗೊಂಡಹಳ್ಳಿ ಗ್ರಾಮದ ಶ್ರೀ ಚನ್ನಪ್ಪ ಮತ್ತು ಶ್ರೀಮತಿ ಶಾಂತಮ್ಮ ಅವರ ದಂಪತಿಗಳ ಮಗನಾಗಿ ಕೃಷಿಕ ಕುಟುಂಬದಲ್ಲಿ ೩೦/೦೭/೧೯೯೨ ರಂದು ಜನಿಸಿದರು.

ಇವರು ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ತನ್ನ ಹುಟ್ಟೂರಾದ ನಾಗೊಂಡಹಳ್ಳಿ ಗ್ರಾಮದ,ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿ, ಐದನೇ ತರಗತಿಯಿಂದ ಏಳನೇ ತರಗತಿಯವರೆಗೆ ಸಕಾ೯ರಿ ಮಾದರಿ ಹಿರಿಯ ಪಾಠ ಶಾಲೆ ಮಾಲೂರು ಪಟ್ಟಣದಲ್ಲಿ ಓದಿದರು, ನಂತರ ಎಂಟರಿಂದ ಹತ್ತನೇ ತರಗತಿಯವರೆಗೆ ಹೈಸ್ಕೂಲ್ ಶಿಕ್ಷಣವನ್ನು ಶ್ರೀ ರಾಮ ಕೃಷ್ಣ ವಿದ್ಯಾಪೀಠ ಮಾಲೂರಿನಲ್ಲಿ ಮುಗಿಸಿದರು.

ನಂತರ ಪದವಿಪೂರ್ವ ಶಿಕ್ಷಣವನ್ನು ವಿಜ್ಞಾನ ವಿಭಾಗದಲ್ಲಿ ಅಭ್ಯಾಸಿಸಲು ಸಕಾ೯ರಿ ಜೂನಿಯರ್ ಕಾಲೇಜು ಮಾಲೂರು ಇಲ್ಲಿ ಪ್ರಥಮ ಪಿ ಯು ಸಿ ಗೆ ಸೇರಿದರಾದರೂ ಆ ಸಮಯದಲ್ಲಿ ಇವರಿಗಿದ್ದ ಕನ್ನಡ ಭಾಷಾ ಪ್ರೇಮ ಮತ್ತು ಸಾಹಿತ್ಯದ ಸೆಳೆತವನ್ನು ಕಂಡು ಕನ್ನಡ ಭಾಷಾ ಉಪನ್ಯಾಸಕರಾಗಿದ್ದ ಡಾ. ಎನ್ ಸಿ ಚಂದ್ರಪ್ಪ ರವರ ಪ್ರಭಾವದಿಂದ ದ್ವಿತೀಯ ಪಿಯುಸಿಗೆ ಕಲಾ ವಿಭಾಗಕ್ಕೆ ವಿವೇಕಾನಂದ ಪದವಿಪೂರ್ವ ಕಾಲೇಜು, ಮಾಲೂರು ದಾಖಲಾತಿಯನ್ನು ಮಾಡಿದರು, ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದರು.

ಅಣ್ಣನಾದ ಡಾ. ಎನ್ ಸಿ ಚಂದ್ರಪ್ಪ ನವರ ಪ್ರೋತ್ಸಾಹ ಮತ್ತು ಓದುವ ಹಂಬಲದಿಂದ ಜ್ಞಾನಭಾರತಿ ಬೆಂಗಳೂರು ವಿಶ್ವವಿದ್ಯಾಲಯ ಇಲ್ಲಿ ಕನ್ನಡದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು ತದನಂತರ ಶಿಕ್ಷಕರ ತರಬೇತಿಯನ್ನು (ಬಿ.ಇಡಿ) ಕೆ.ಟಿ.ಎಸ್.ವಿ ಮಹಾವಿದ್ಯಾಲಯ ರಾಜಾಜಿನಗರ ಬೆಂಗಳೂರು ಪಡೆದರು.

ಎಂ.ಎ, ಡಿ.ಪಿ ಜಿ. ಬಿ.ಇಡಿ, ಪದವೀಧರರಾದ ಶ್ರೀ ನಾಗೊಂಡಹಳ್ಳಿ ಸುನಿಲ್ ರವರು ಪ್ರಸ್ತುತ ತುಮಕೂರು ಜಿಲ್ಲೆಯ ಶಿರಾ ನಗರದಲ್ಲಿರುವ ಪ್ರತಿಷ್ಠಿತ ಪ್ರೆಸಿಡೆನ್ಸಿ ಪದವಿ ಪೂವ೯ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿದ್ಯಾಭ್ಯಾಸದ ದಿನಗಳಿಂದ ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ಅಪಾರವಾದ ಒಲವಿದ್ದ ನಾಗೊಂಡಹಳ್ಳಿ ಸುನಿಲ್ ರವರು ಕನ್ನಡ ಸಾಹಿತ್ಯದ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡದ ಸಾಹಿತ್ಯದ ಬರವಣಿಗೆಯನ್ನು ಪ್ರವೃತ್ತಿಯಾಗಿಸಿಕೊಂಡು “ಒಡಲೊಳಗಿನ ಕಡಲು” ಯೆಂಬ ಕವನಸಂಕಲನವನ್ನು “ಕ್ರಷ್ ಕವಿತೆಗಳು” ಚುಟುಕು ಕವಿತೆಗಳ ಸಂಕಲನವನ್ನು
ಲೋಕಾರ್ಪಣೆ ಮಾಡುವುದರ ಮೂಲಕ ಕನ್ನಡ ಸಾಹಿತ್ಯಲೋಕದಲ್ಲಿ ಯುವ ಕವಿಗಳೆಂದು ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಜೊತೆಯಲ್ಲಿ ಕೀಬೋರ್ಡ್ ವಾದನ ಮಾಡುವುದು, ರಜಾ ದಿನಗಳಲ್ಲಿ ಚಾರಣ, ಸಾಹಿತ್ಯ ಕೃಷಿ ನಾಗೊಂಡಹಳ್ಳಿ ಸುನಿಲ್ ರವರ ಆಸಕ್ತಿ ಕ್ಷೇತ್ರಗಳಾಗಿವೆ.

ಕನಾ೯ಟಕ ಸಾಹಿತ್ಯ ಅಕಾಡೆಮಿ ಚಕೋರ ಕೋಲಾರ ಬಳಗದಲ್ಲಿ ನಾಗೊಂಡಹಳ್ಳಿ ಸುನಿಲ್ ಬರೆದಂತಹ “ಆರಿದ ಹಣತೆ” ಎಂಬ ಭಾವಗೀತೆಯು ಧ್ವನಿಸುರಳಿಯಾಗಿ ಬಿಡುಗಡೆಯಾಗಿದೆ. ಇವರು ಕನ್ನಡ ಸಾಹಿತ್ಯದ ಹಲವಾರು ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಹಲವಾರು ಗೌರವ ಪುರಸ್ಕಾರಗಳನ್ನು ಸಹ ಪಡೆದಿದ್ದಾರೆ ಮತ್ತು ರಾಜ್ಯಾದ್ಯಂತ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ವಿಚಾರ ಮಂಡನೆಯನ್ನು ಮಾಡಿರುತ್ತಾರೆ. ೨೦೨೩ನೇ ವರುಷದ ಮೈಸೂರು ದಸರಾ ಯುವ ಕವಿಗೋಷ್ಠಿಯಲ್ಲಿ ನಾಗೊಂಡಹಳ್ಳಿ ಸುನಿಲ್ ಭಾಗವಹಿಸಿದ್ದು ಖುಷಿಯ ವಿಚಾರವಾಗಿದೆ

ಇವರ ಕವಿತೆಗಳು ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಾಡುವ ಕಿ.ರಂ ಹೊಸ ಕಾವ್ಯ, ಹೂ ಬುಟ್ಟಿ, ಅನುದಿನ ಕಾವ್ಯ ಅಂಕಣದಲ್ಲಿ ಇವರ ಕವಿತೆಗಳು ವಿರ‍್ಶಿಸಲಾಗಿದೆ ಮತ್ತು ಸಾಹಿತ್ಯದ ಬಹುತ್ವದ ನೆಲೆಗಳು, ಸಾಹಿತ್ಯ ಅನುಸಂಧಾನ , ಸಾಹಿತ್ಯ ಸುರಭಿ, ಭೀಮ ಬೆಳಕು, ಗಜಪಡೆ ವಾಹಿನಿ, ಸಂಗಾತಿ, ಬುಕ್ ಬ್ರಹ್ಮ ವಿನಯವಾಣಿ ಪತ್ರಿಕೆ ಮುಂತಾದ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿರುತ್ತವೆ.

ಮಾಲೂರು ತಾಲ್ಲೂಕಿನ ಹಲವಾರು ಪ್ರಬುದ್ಧ ಸಾಹಿತಿಗಳ ಮಧ್ಯ ಎಲೆಮರೆಯ ಕಾಯಿಯಂತೆ ಕನ್ನಡ ಸಾಹಿತ್ಯ ಬರವಣಿಗೆಯಲ್ಲಿ ತೊಡಗಿರುವ ನಾಗೊಂಡಹಳ್ಳಿ ಸುನೀಲ್ ರವರು ಬರಹದಲ್ಲಿ ಗಟ್ಟಿತನವನ್ನು ಕಾಯ್ದುಕೊಂಡಿದ್ದಾರೆ. ಅವರ ಕವನಸಂಕಲನದಲ್ಲಿನ ಹಲವಾರು ಕವಿತೆಗಳು ಮಾನವೀಯ ಮೌಲ್ಯವನ್ನು ಸಾರುವ ಸಂದೇಶಗಳಾಗಿ ಮತ್ತು ಬಡವನದ ಜೀವನದ ಬಗ್ಗೆ ಸಾರುತ್ತಾ ಅಪ್ಪನ ಎದೆಯಾಳದ ನೋವುಗಳನ್ನು ಮನಮುಟ್ಟುವಂತೆ ಓದುಗರ ಮನಕ್ಕೆ ಮುಟ್ಟಿಸಲು “ಒಡಲೊಳಗಿನ ಕಡಲು” ಈ ಕವನ ಸಂಕಲನ ಯಶಸ್ವಿಯಾಗಿದೆ.

ಕ್ರಶ್ ಕವಿತೆಗಳು ಇದು ಇವರ ಮತ್ತೊಂದು ಚುಟುಕು ಕವನ ಕವನಗಳ ಸಂಕಲನವಾಗಿದ್ದು ಈ ಸಂಕಲನದಲ್ಲಿರುವ ಹನಿಗವನಗಳು ಪ್ರೇಮಿಯ ಎದೆಯಾಳದ ನೋವನ್ನು, ಪ್ರೇಮಿಗಳ ಹೃದಯದಲ್ಲಿ ಪ್ರೀತಿ ಮೊಳಕೆಯೊಡೆದು ಹಂದರವಾಗಿ ಹಬ್ಬುವ ಮಮತೆಯ ರಸ ಕಾವ್ಯವು ಓದುಗ ಪ್ರೇಮಿಗಳ ಎದೆಯಲಿ ನವಿರಾದ ಪುಳಕವನ್ನು ಉಂಟು ಮಾಡುತ್ತದೆ. ಹನಿಗವನಗಳನ್ನು ಓದುವಾಗ ಓದುಗನ ಎದೆಯೊಳಗೆ ಪ್ರೀತಿಯ ಘಮಲನ್ನು ಸೂಸಿ, ವಿರಹದ ಕಾವು ಮೈಮನವನ್ನು ಪುಳಕಿತವಾಗಿಸುತ್ತದೆ.

ಮುಂದಿನ ದಿನಗಳಲ್ಲಿ ಮತ್ತಷ್ಟು ಕೃತಿಗಳನ್ನು ಲೋಕಾರ್ಪಣೆ ಮಾಡಲು ತಯಾರಿಯಲ್ಲಿರುವ ಶ್ರೀ ನಾಗೊಂಡಹಳ್ಳಿ ಸುನಿಲ್ ರವನ್ನು. ಅಭಿನಂದಿಸುತ್ತಾ ಮುಂದೆ ಹಲವಾರು ಕೃತಿಯನ್ನು ಹೊರತಂದು ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಲಿ. ಆ ಕೃತಿಗಳು ಮನುಜನ ಬದುಕಿನ ತಲ್ಲಣಗಳಾಗಲಿ. ಬಡತನ ದೀನದಲಿತರ ಶೋಷಣೆಯನ್ನು ಖಂಡಿಸುವ ಕಾವ್ಯವಾಗಲಿ ತಮ್ಮ ಬರಹ ವೈಚಾರಿಕತೆಯ ಪ್ರಬುದ್ದತೆಯಡೆಗೆ ಸಾಗಿ ಸಮಾಜದಲ್ಲಿ ಗೌರವ ಪುರಸ್ಕಾರಗಳು ಸಿಗಲಿ ಎಂದು ಪತ್ರಿಕೆಯ ಪರವಾಗಿ ಮತ್ತು ವೈಯಕ್ತಿಕವಾಗಿ ಹಾರೈಸುತ್ತೇನೆ. ಶುಭವಾಗಲಿ.


  • ನಾರಾಯಣಸ್ವಾಮಿ ಮಾಲೂರು – ವಕೀಲರು ಮತ್ತು ಲೇಖಕರು, ಕೋಲಾರ ಜಿಲ್ಲೆ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW